ಶನಿವಾರ, ಮೇ 15, 2021
24 °C

ಉಡಲು ಬಟ್ಟೆ ಇಲ್ಲ, ಸರಿಯಾಗಿ ತಿಂಡಿ ಸಿಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು: ನಕ್ಸಲರೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಆರೋಪದಲ್ಲಿ ಬಂಧಿತನಾಗಿರುವ ಮಂಗಳೂರು ವಿ.ವಿ. ವಿದ್ಯಾರ್ಥಿ ವಿಠಲ ಮಲೆಕುಡಿಯ, ನ್ಯಾಯಾಲಯದ ಅನುಮತಿಯಿಂದ ಪೊಲೀಸ್ ಭದ್ರತೆಯಲ್ಲಿ ಆಂತರಿಕ ಪರೀಕ್ಷೆ ಬರೆದಿದ್ದು, ಶುಕ್ರವಾರ ಜೈಲಿಗೆ ವಾಪಸ್ಸಾಗಿದ್ದಾನೆ.ಕಳೆದ ಸೋಮವಾರ ಪರೀಕ್ಷೆ ಆರಂಭವಾಗಿದ್ದರೂ, ಪತ್ರಿಕೋದ್ಯಮ ವಿಭಾಗದ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್‌ನ ವಿದ್ಯಾರ್ಥಿ ವಿಠಲ ಮಲೆಕುಡಿಯನಿಗೆ ಮೊದಲ ದಿನ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಉಳಿದ ಎಲ್ಲಾ ಪರೀಕ್ಷೆಗಳನ್ನು ಬರೆದ ವಿಠಲನಿಗೆ ಓದಲು ಪುಸ್ತಕ ಸಿಗದಿದ್ದರೂ, ಸಹಪಾಠಿಗಳು ಬೆಂಬಲವಾಗಿ ನಿಂತು ನೋಟ್ಸ್‌ಗಳನ್ನು ಒದಗಿಸಿದರು.ಬಂಧನದ ಬಳಿಕ ಅನುಭವಿಸಿದ ಸಂಕಷ್ಟಗಳನ್ನು ವಿಠಲ ಸಹಪಾಠಿಗಳೊಂದಿಗೆ ತೋಡಿಕೊಂಡ. ಕೆಲವು ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಆತ, `ನಕ್ಸಲ್ ಎಂಬ ಆರೋಪವನ್ನು ನನ್ನ ಮೇಲೆ ಹೊರಿಸಿ ಬಂಧಿಸಿದ ನಂತರ ಜೈಲಿನಲ್ಲಿ ಚಹ, ತಿಂಡಿಯನ್ನೂ ಸರಿಯಾಗಿ ನೀಡುತ್ತಿಲ್ಲ.  ಮಾತ್ರವಲ್ಲ, ನನಗೆ ಉಡಲು ಕೊಟ್ಟಿರುವುದು ಕೇವಲ ಎರಡು ಜೊತೆ ಬಟ್ಟೆ. ಇದರಲ್ಲೇ  ನಾಲ್ಕು ದಿನ ಮಂಗಳೂರಿನಿಂದ ಕೊಣಾಜೆಗೆ ಬಂದು ನಾನು ಪರೀಕ್ಷೆ ಬರೆಯಬೇಕಿತ್ತು~ ಎಂದು ಹೇಳಿದ.`ಆದರೆ ತರಗತಿಯ ಸಹಪಾಠಿಗಳು ಸಹಕಾರ ನೀಡಿ ಪರೀಕ್ಷೆಗೆ ಪೂರಕವಾದ ನೋಟ್ಸ್‌ಗಳನ್ನು ಒದಗಿಸಿ ಕೊಟ್ಟಿದ್ದಾರೆ. ಇದರಿಂದಾಗಿ ಪರೀಕ್ಷೆ ಬರೆಯಲು ಅನುಕೂಲವಾಗಿದೆ. ಸೋಮವಾರ ಪರೀಕ್ಷೆ ಬರೆಯುವ ಅವಕಾಶ ತಪ್ಪಿದ್ದರಿಂದ ಮತ್ತೆ ಅವಕಾಶ ಕೋರಿದ್ದೇನೆ~ ಎಂದು ಈ ಸಂದರ್ಭದಲ್ಲಿ ತಿಳಿಸಿದ.ಪುಸ್ತಕ ಕೊಟ್ಟಿದ್ದೆವು: `ವಿಠಲ ತರಗತಿಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಈತ ಜೈಲಿಗೆ ಹೋದಾಗಲೂ ಈತನ ವಿದ್ಯಾರ್ಜನೆಗೆ  ತೊಂದರೆಯಾಗದಿರಲಿ ಎಂದು ನಾವು ಪರೀಕ್ಷೆಗೆ ಬೇಕಾಗುವ ಪುಸ್ತಕದ ಪ್ರತಿಗಳನ್ನು ಪೊಲೀಸರ ಮೂಲಕ ಕಳುಹಿಸಿಕೊಟ್ಟಿದ್ದೆವು. ಆದರೆ ಅದು ಆತನಿಗೆ ಸಿಕ್ಕಿದ್ದು ಮಾತ್ರ ಪರೀಕ್ಷೆಯ ಮೊದಲ ದಿನ. ಹಾಗೆಯೇ ಇನ್ನು ಮುಖ್ಯ ಪರೀಕ್ಷೆಗೆ ಬೇಕಾಗುವ ಪೂರಕ ನೋಟ್ಸ್‌ಗಳನ್ನು ತರಗತಿಯವರೆಲ್ಲರೂ ಆತನಿಗೆ ಕೊಡಲು ನಿರ್ಧರಿಸಿದ್ದೇವೆ. ಮಾತ್ರವಲ್ಲ, ಈತ ಆರೋಪಮುಕ್ತನಾಗಿ ಬೇಗ ಹೊರಗೆ ಬರಲಿ ಎಂಬುದು ನಮ್ಮ ಆಶಯ~ ಎಂದು ವಿಠಲನ ಸಹಪಾಠಿ ಭರತ್ `ಪ್ರಜಾವಾಣಿ~ಗೆ ತಿಳಿಸಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.