ಗುರುವಾರ , ಜೂನ್ 24, 2021
29 °C

ಉಡುಪಿ ಜಿ.ಪಂ.ಮಾನವ ಅಭಿವೃದ್ಧಿ ವರದಿ-ರಾಷ್ಟ್ರೀಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ ಜಿ.ಪಂ.ಮಾನವ ಅಭಿವೃದ್ಧಿ ವರದಿ-ರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಭಾರತದ ಯೋಜನಾ ಆಯೋಗ ಹಾಗೂ ಯುಎನ್‌ಡಿಪಿ ಸಹಯೋಗದೊಂದಿಗೆ ಪ್ರಥಮ ಬಾರಿಗೆ ನೀಡಲಾದ  `ಮಾನವ ವಿಕಾಸ್, ಭಾರತ ಮಾನವ ಅಭಿವೃದ್ಧಿ ಪ್ರಶಸ್ತಿ 2012~ ಉಡುಪಿ ಜಿಲ್ಲೆಯ ಪಾಲಾಗಿದೆ. ಮಾನವ ಅಭಿವೃದ್ಧಿ ನಿರ್ಧರಿಸಲು ನಡೆಸಿದ ಹೊಸ ಶೋಧದ ಕ್ರಮ  ಹಾಗೂ ಗುಣಮಟ್ಟದ ವರದಿಯ ಬಗ್ಗೆ ನೀಡಲಾದ ಪ್ರಥಮ ಪ್ರಶಸ್ತಿ ಹಾಗೂ ಟ್ರೋಫಿಯನ್ನು ನವದೆಹಲಿಯ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್‌ನಲ್ಲಿ  ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ನಾಗಾಲ್ಯಾಂಡ್, ರಾಜಸ್ಥಾನ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ  ಈ ಎಂಟು ರಾಜ್ಯಗಳ ಒಟ್ಟು 44 ಜಿಲ್ಲೆಗಳು ಮಾನವ ಅಭಿವೃದ್ಧಿ ವರದಿ ತಯಾರಿಸಿ ಸಲ್ಲಿಸಿದ್ದವು. ಈ ವರದಿಗಳನ್ನು ಪರಿಶೀಲಿಸಲು ಎರಡು ಹಂತಗಳಲ್ಲಿ ತಾಂತ್ರಿಕ ಪರಿಶೀಲನಾ ತಂಡವನ್ನು ರಚಿಸಲಾಗಿದ್ದು, ಇದರಲ್ಲಿ ದೇಶ ವಿದೇಶಗಳ 12 ಅತ್ಯುನ್ನತ ತಾಂತ್ರಿಕ ಪರಿಣತರ್ದ್ದಿದರು.ಪರಿಣಿತರು ಪರಿಶೀಲನೆ ನಡೆಸಿ ನಾಲ್ಕು ವಿಭಾಗಗಳಲ್ಲಿ ಉತ್ತಮ ವರದಿ ತಯಾರಿಸಿದ ತಲಾ 2 ಜಿಲ್ಲೆಗಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು.ಬಳಿಕ ಈ  8 ಜಿಲ್ಲೆಗಳ ವರದಿಯನ್ನು ಪರಿಶೀಲಿಸಲು ಎರಡನೇ ಹಂತದಲ್ಲಿ 5 ಜನ ತೀರ್ಪುಗಾರರ ಸಮಿತಿ ರಚಿಸಲಾಗಿತ್ತು. ಇದರಲ್ಲಿ ದೇಶದ  ಹೆಸರಾಂತ ವಿವಿಧ ವಲಯಗಳ ಐವರು  ಅತ್ಯುನ್ನತ ತಜ್ಞರಿದ್ದರು. ಅವರು ಅಂತಿಮವಾಗಿ ವಿವಿಧ ವಿಭಾಗದಲ್ಲಿ ಜಿಲ್ಲೆಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ರಾಜ್ಯದಿಂದ ವಿಜಾಪುರ ಹಾಗೂ ಉಡುಪಿ ಜಿಲ್ಲೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ವಿಜಾಪುರ ಜಿಲ್ಲೆ ವರದಿ ತಯಾರಿಕೆಯಲ್ಲಿ ಜನರ ಭಾಗವಹಿಸುವಿಕೆ ವಿಭಾಗದಲ್ಲಿ ಎರಡನೇ ಸ್ಥಾನ ಪಡೆಯಿತು.  ಉಡುಪಿ ಜಿಲ್ಲೆಯು ಮಾನವ ಅಭಿವೃದ್ಧಿ ನಿರ್ಧರಿಸಲು ನಡೆಸಿದ ಹೊಸ ಶೋಧದ ಕ್ರಮದ ಬಗ್ಗೆ ಹಾಗೂ ಗುಣಮಟ್ಟದ ವರದಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.ಉಡುಪಿ ಜಿಲ್ಲೆಯ ವರದಿ ತಯಾರಿಸಿದ ಅಂದಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಹೇಮಲತಾ (ಪ್ರಸ್ತುತ ತೋಟಗಾರಿಕಾ ಇಲಾಖೆ ನಿರ್ದೇಶಕಿ), ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿ.ವಿಜಯ ಕುಮಾರ್ ಶೆಟ್ಟಿ, ಮಣಿಪಾಲ ವಿಶ್ವವಿದ್ಯಾನಿಲಯದ ಗ್ರಾಮೀಣ ಅಧ್ಯಯನ ಕೇಂದ್ರದ ಅಂದಿನ ನಿರ್ದೇಶಕ ಹಾಗೂ ವರದಿಯ ನೋಡೆಲ್ ಏಜೆಂಟ್ ಡಾ.ಕೃಷ್ಣ ಕೊತಾಯ ಹಾಗೂ ಜಿಲ್ಲೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಶ್ರೀನಿವಾಸ ರಾವ್ ( ಪ್ರಸ್ತುತ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ) ಪ್ರಶಸ್ತಿ ಹಾಗೂ ಟ್ರೋಫಿಯನ್ನು ಪಡೆದರು. ಅಂದಿನ ಯುಎನ್‌ಡಿಪಿಯ ರಾಜ್ಯ ಮಟ್ಟದ ಪ್ರತಿನಿಧಿ ನಾರಾಯಣ ರಾಜ್ ಹಾಜರಿದ್ದರು.  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಪಾಧ್ಯಕ್ಷೆ  ಜ್ಯೋತಿ ಎಸ್. ಶೆಟ್ಟಿ, ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎ ಪ್ರಭಾಕರ ಶರ್ಮ ಅವರು ಈ  ಪ್ರಶಸ್ತಿ ಪಡೆದ ತಂಡವನ್ನು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.