ಗುರುವಾರ , ಮೇ 6, 2021
27 °C

ಉದ್ಯಾನದಲ್ಲಿ ಅರಳಿದ `ಸ್ನೇಹ ಹಂದರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾರಾಂತ್ಯದ ದಿನಗಳಲ್ಲಿ ಸದಾ ಜನಜಾತ್ರೆ ಕಂಡುಬರುವ ಮೆಟ್ರೊ ಉದ್ಯಾನದ ಸ್ನೇಹ ಹಂದರದಲ್ಲಿ ಪ್ರೀತಿ, ಸ್ನೇಹ ಹಾಗೂ ಮಾನವೀಯ ಸಂಬಂಧಗಳು ಕಾವ್ಯವಾಗಿ ಅರಳಿದ್ದವು. ಯುವ ಹೃದಯಗಳ ಬತ್ತಳಿಕೆಯಿಂದ ಕಾವ್ಯ ಪಲ್ಲವಿಸುತ್ತಿದ್ದರೆ, ಹೊರಗೆ ತುಂತುರು ಮಳೆಯ ರಾಗ!

ರಂಗೋಲಿ- ಮೆಟ್ರೊ ಕಲಾಕೇಂದ್ರದ ಆಶ್ರಯದಲ್ಲಿ ಎಂ.ಜಿ.ರಸ್ತೆಯ ಮೆಟ್ರೊ ಉದ್ಯಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ `ಕಾವ್ಯ ಸಂಜೆ' ಕಾರ್ಯಕ್ರಮದ ನೋಟವಿದು.ಅಲ್ಲಿ ಉದಯೋನ್ಮುಖ ಕವಿಗಳು ಒಂದೆಡೆ ಕಲೆತಿದ್ದರು. ಕಾವ್ಯದಲ್ಲಿ ಪ್ರೀತಿ, ಪ್ರೇಮ, ಸ್ನೇಹ ಲೋಕ ಅನಾವರಣಗೊಂಡಿತು. ನಾಡಿನ ಹಿರಿಯ ಕವಿಗಳ ಕವನಗಳ ಮೆಲುಕು ಇತ್ತು. ಉದ್ಯಾನದಲ್ಲಿ ಅಡ್ಡಾಡುತ್ತಿದ್ದವರು ಹೊತ್ತೇರುತ್ತಿದ್ದಂತೆ `ಸ್ನೇಹ ಹಂದರ'ದೊಳಗೆ ಸೇರಿದರು.   ಕವಯಿತ್ರಿ ಮಮತಾ ಸಾಗರ್ ಮಾತನಾಡಿ, `ಕನ್ನಡ ಕಾವ್ಯಗಳು ಕ್ಲಿಷ್ಟ ಎಂಬ ಭಾವನೆ ಇದೆ. ಕನ್ನಡ ಕವಿಗಳು ಜನಸಾಮಾನ್ಯರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ಹಿನ್ನೆಲೆಯಲ್ಲಿ ಕಾವ್ಯವನ್ನೇ ಜನರ ಹತ್ತರ ತಲುಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಜನರು ಕನ್ನಡ ಕಾವ್ಯ ಪರಂಪರೆಯ ವಿಭಿನ್ನ ಆಯಾಮಗಳನ್ನು ಅರಿತುಕೊಳ್ಳಲು ಸುಲಭವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

ರಂಗೋಲಿ ಕಲಾಕೇಂದ್ರದ ಕ್ಯೂರೇಟರ್ ಸುರೇಖಾ ಮಾತನಾಡಿ, `ಇದು ಸ್ನೇಹ ಹಂದರ (ಫ್ರೆಂಡ್‌ಶಿಪ್ ಪಾಯಿಂಟ್)ನಲ್ಲಿ ಆಯೋಜಿಸುತ್ತಿರುವ ಮೊದಲ ಕಾರ್ಯಕ್ರಮ.ಉದ್ಯಾನನಗರಿ ಸ್ನೇಹ, ಪ್ರೀತಿಗೆ ಹೆಸರುವಾಸಿ. ನಗರದ ಜನರು ಸ್ನೇಹ ಅರಳಿಸುವ ಕಾರ್ಯಕ್ಕೆ ಸ್ನೇಹ ಹಂದರವನ್ನು ಬಳಸಿಕೊಳ್ಳಬಹುದು. ಇಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು' ಎಂದರು. ಉದಯೋನ್ಮುಖ ಕವಿಗಳಾದ ರಶ್ಮಿ ಕೆ.ಎಂ., ಬಸವರಾಜು ಕೆ.ಆರ್, ದೀಪಾ ವೈ, ದೀಪು ರಾವ್, ಕುಮಾರ ಇಂದ್ರಬೆಟ್ಟ, ಎಚ್.ಲಕ್ಷ್ಮಿನಾರಾಯಣಸ್ವಾಮಿ, ಚನ್ನಬಸಪ್ಪ ಸೇರಿದಂತೆ 25 ಕವಿಗಳು ಕವನಗಳನ್ನು ವಾಚಿಸಿದರು.  ನಾಡಿನ ಹಿರಿಯ ಕವಿಗಳ ಕವನಗಳನ್ನು ಓದಿದ ಬಳಿಕ ತಮ್ಮಕವನಗಳನ್ನು ವಾಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.