ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಉಪವಾಸ ಸತ್ಯಾಗ್ರಹಕ್ಕೆ ಇಂಡಿ ರೈತರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪವಾಸ ಸತ್ಯಾಗ್ರಹಕ್ಕೆ ಇಂಡಿ ರೈತರ ನಿರ್ಧಾರ

ಇಂಡಿ: ಬರಗಾಲ ಪೀಡಿತ ಇಂಡಿ ತಾಲ್ಲೂಕಿನ 33 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ   ತಾಲ್ಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರು ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ  ಸಭೆ ಸೇರಿ ಆಗಸ್ಟ್ 16 ರಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪ ಸಾಹುಕಾರ ಖೈನೂರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸುಧೀರ್ಘ ಚರ್ಚೆ ನಡೆಸಿದ ನಂತರ   ಮತ್ತೆ ಹೊರ್ತಿ ಗ್ರಾಮದ ಬಳಿ ಹೆದ್ದಾರಿ 13ರಲ್ಲಿ  ಮೂರನೇ ಹಂತದ ಉಪವಾಸ ಸತ್ಯಾಗ್ರಹ ಕೈಕೊಳ್ಳಲು ರೈತರು ಸರ್ವಾನುಮತದಿಂದ ನಿರ್ಣಯ ಕೈಕೊಂಡರು.ಇಂಡಿ ತಾಲ್ಲೂಕಿನಲ್ಲಿ 3 ಪ್ಯಾಕೇಜ್‌ಗಳಲ್ಲಿ  ಅಂದರೆ ಅಣಚಿ, ಸಂಖ ಮತ್ತು ಭುಯ್ಯಾರ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವಂತೆ ಸಭೆ  ಆಗ್ರಹಿಸಿತು.ಅಣಚಿ ನೀರಾವರಿ ಪ್ಯಾಕೇಜಿಗೆ ಸರ್ಕಾರ ಈಗಾಗಲೇ ಟೆಂಡರ್ ಕರೆದು 8 ತಿಂಗಳು ಕಳೆದಿವೆ. ಆದರೆ ಅದಕ್ಕೆ ಚಾಲನೆ ನೀಡಿಲ್ಲ  ಆಗಸ್ಟ್ 15ರೊಳಗಾಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡದಿದ್ದರೆ  16 ರಿಂದ ಉಪವಾಸ ಸತ್ಯಾಗ್ರಹ ಕೈಕೊಳ್ಳಲಾಗುವುದು ಎಂದು ಜಿ.ಪಂ. ಮಾಜಿ ಸದಸ್ಯ ಅಣ್ಣಪ್ಪ ಖೈನೂರ ತಿಳಿಸಿದರು.ಬೆಂಗಳೂರಿಗೆ ರೈತರ ನಿಯೋಗ  ಒಯ್ದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬರಗಾಲ ಪ್ರದೇಶವಾದ ಇಂಡಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಪರಿ ಪರಿಯಾಗಿ ಬೇಡಿಕೊಳ್ಳಲಾಗಿದೆ.  ಆದರೂ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಅನಿವಾರ್ಯವಾಗಿ  ಸತ್ಯಾಗ್ರಹದ ಮಾರ್ಗ ಹಿಡಿಯಬೇಕಾಗಿದೆ ಎಂದು ಹೇಳಿದರು.ತಾಲ್ಲೂಕಿನಲ್ಲಿರುವ 33 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ರೈತರು ಹೊರ್ತಿ ಗ್ರಾಮದಲ್ಲಿ ಈಗಾಗಲೇ ಎರಡು ಸಲ ಉಪವಾಸ ಸತ್ಯಾಗ್ರಹ ಕೈಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ರಾಜಕೀಯ ಧುರೀಣರು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ಕೊಟ್ಟು ಅವರು ನೀಡಿದ ಆಶ್ವಾಸನೆಯ ಮೇರೆಗೆ  ಸತ್ಯಾಗ್ರಹ ಹಿಂದೆ ಪಡೆದುಕೊಂಡಿದ್ದರು. ಇದಾಗಿ ಸುಮಾರು 5 ವರ್ಷಗಳು ಕಳೆದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ತಾಲ್ಲೂಕಿನ ರೈತರು ಹೊರ್ತಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪ   ಖೈನೂರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಮತ್ತೆ ಮೂರನೇ ಹಂತದ ಉಪವಾಸ ಸತ್ಯಾಗ್ರಹ ಕೈಕೊಳ್ಳಲು ಸರ್ವಾನುಮತದಿಂದ ನಿರ್ಣಯ ಕೈಕೊಂಡರು.2007ರಲ್ಲಿ 30 ದಿವಸ ಉಪವಾಸ ಸತ್ಯಾಗ್ರಹ ಕೈಕೊಂಡ್ದ್ದಿದರು. ಆ ಸಮಯದಲ್ಲಿ  ಕೆ.ಎಸ್ ಈಶ್ವರಪ್ಪ ಅವರು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು.ಇದಾದ ನಂತರ ಒಂದು ವರ್ಷ ಕಳೆದರೂ ಯೋಜನೆಯ ಕಾಮಗಾರಿ ಆರಂಭವಾಗದ ಕಾರಣ ರೈತರು ಬೇಸತ್ತು 2008 ರಲ್ಲಿ ಮತ್ತೆ ಅದೇ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹ ಕೈಕೊಂಡಿದ್ದರು. 10 ದಿವಸಗಳ ನಂತರ ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಆಶ್ವಾಸನೆ ನೀಡಿ ಸತ್ಯಾಗ್ರಹ ಹಿಂದೆ ಪಡೆದುಕೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರು ಅವರನ್ನು ನಂಬಿ ಉಪವಾಸ ಸತ್ಯಾಗ್ರಹ ಹಿಂದೆ ಪಡೆದುಕೊಂಡಿದ್ದರು.ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ 5 ವರ್ಷಗಳು ಕಳೆದರೂ  ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡಿಲ್ಲ. ಸರ್ಕಾರದ ಕಾರ್ಯವೈಖರಿಗೆ ಬೇಸತ್ತ ರೈತರು  ಈಗ ಮತ್ತೊಮ್ಮೆ ಮೂರನೇ ಹಂತದ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.ಅಪ್ಪಯ್ಯಸ್ವಾಮಿ ಹಿರೇಮಠ, ಬಸಪ್ಪ ಬೋಸಗಿ, ಶ್ರೆಮಂತ ಇಂಡಿ, ರೇವಪ್ಪ ಮೇತ್ರಿ, ಎಂ.ಆರ್. ಪಾಟೀಲ, ರಮೇಶಗೌಡ ಬಿರಾದಾರ ದೇಗಿನಾಳ, ರಾಮ ಸೊಡ್ಡಿ, ಅಣ್ಣಪ್ಪ ಪೂಜಾರಿ ಸೊನಕನಹಳ್ಳಿ, ನಿಂಗಪ್ಪ ಮೆಡೆಗಾರ ಕೊಳೂರಗಿ, ಮುರಳಿಗೌಡ ದೇಶಪಾಂಡೆ, ಮಲ್ಲಪ್ಪ ಡೊನಗಿ ಹಡಲಸಂಗ, ಭೀಮರಾಯಸಾಹುಕಾರ ಹಳಗುಣಕಿ, ಶಂಕ್ರೆಪ್ಪಗೌಡ ಹಳಗುಣಕಿ, ಬಂದಗಿಸಾಬ ಮುಲ್ಲಾ ನಿಂಬಾಳ, ಸ್ರೀಮಂತ ವಂದಾಲ ನಿಂಬಾಳ, ಅರವಿಂದ ಕೋಳಿ ಗುಂದವಾನ, ಮಲ್ಲು ಸಕ್ರಿ ಇಂಚಗೇರಿ,  ಭೀಮು ಗುಡ್ಡದ ಜಿಗಜಿಣಗಿ, ತಮಸಿದ್ಧ ಬಳಗಾನೂರ ಜಿಗಜಿಣಗಿ, ಮಾರುತಿ ಮೌರೆ ಸಾವಳಸಂಗ, ದುಂಡಪ್ಪ ಕೇಡ ಸಾವಳಸಂಗ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.