ಶುಕ್ರವಾರ, ಜನವರಿ 17, 2020
23 °C

ಎಂಇಎಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ರಾಜ್ಯ ಸರ್ಕಾರದ ವಿರುದ್ಧ ಖಂಡನಾರ್ಹ ಹೇಳಿಕೆ ನೀಡಿದ ಎಂಇಎಸ್‌ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮತ್ತು ಹೋಬಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಕ್ರವಾರ ತಹಶೀ­ಲ್ದಾರರಿಗೆ ಮನವಿ ಅರ್ಪಿಸಿ­ದರು.ತಾಲ್ಲೂಕು ಕಚೇರಿಯಲ್ಲಿ ಶುಕ್ರ­ವಾರ ಮನವಿ ಅರ್ಪಿಸಿದ ಕಸಾಪ ಪದಾಧಿ­ಕಾರಿಗಳು, ಹಲವು ಮಹನೀ­ಯರ ಹೋರಾಟ ಮತ್ತು ತ್ಯಾಗ, ಬಲಿದಾನಗಳಿಂದ ಕರ್ನಾಟಕ ರಾಜ್ಯದ ಉದಯವಾಗಿದೆ. ಶಾಸನಸಭೆ ನಡೆಯುವ ಮತ್ತು ಕನ್ನಡ ರಾಜ್ಯೋ­ತ್ಸವ­­ದಂತಹ ವಿಶೇಷ ಸಮಯ­ಗಳಲ್ಲಿ ಕನ್ನಡಿಗರ ಸಹನೆ­ಯನ್ನು ದೌರ್ಬಲ್ಯ ಎಂದು ಪರಿಗಣಿಸಿರುವ ಮರಾಠಿ ಭಾಷಿಕರು ಬೆಳಗಾವಿಯನ್ನು ಮಹಾ­ರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿ­ಸುತ್ತಾ ಬಂದಿದ್ದು ಬೆಳಗಾವಿ ಹೋರಾ­ಟದ ಮೂಲಕ ರಾಜಕೀಯ ಜೀವನ ನಡೆಸುತ್ತಿರುವ ಎಂಇಎಸ್‌ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ.

ಬೆಳಗಾವಿ­ಯಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ರಾಜ್ಯಸರ್ಕಾರವನ್ನು ಹೀನಾಯವಾಗಿ ಕಂಡು ಶವಕ್ಕೆ ಹೋಲಿ­ಸಿದ ಎಂಇಎಸ್‌ ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲರ ವಿರುದ್ಧ ರಾಜ್ಯಸರ್ಕಾರ ಸಾಧ್ಯವಿ­ರುವ ಕಠಿಣಕ್ರಮಗಳನ್ನು ಜರುಗಿಸ­ಬೇಕು. ಬೆಳಗಾವಿ ಕರ್ನಾ­ಟಕದ ಅವಿಭಾಜ್ಯ ಅಂಗವಾ­ಗಿದ್ದು ಏಕೀಕೃತ ಕರ್ನಾಟಕ ಇನ್ನೂ ಕನಸಾ­ಗಿಯೇ ಉಳಿದಿರುವ ಸಂದರ್ಭದಲ್ಲಿ ಪದೇಪದೇ ಕ್ಯಾತೆ ತೆಗೆಯುವ ಮೂಲಕ ರಾಜ್ಯದ್ರೋಹಿ ನಡವಳಿಕೆಯ ಶಾಸಕರಿಗೆ ಬುದ್ಧಿ ಕಲಿಸಬೇಕಿದೆ.

ಕನ್ನಡಿ­ಗರು ಎಷ್ಟು ಸಹನಶೀಲರು ಎಂಬುದಕ್ಕೆ ಸುಮಾರು 350 ವರ್ಷಗಳ ಹಿಂದೆ ನಿಧನರಾದ ಮರಾಠಾ ಛತ್ರಪತಿ ಶಿವಾಜಿಯ ತಂದೆ ಷಹಜಿಯ ಸಮಾಧಿ­­ಯನ್ನು ರಕ್ಷಿಸಿ ಇಟ್ಟಿರುವುದೇ ಸಾಕ್ಷಿಯಾಗಿದೆ. ಇದೇ ಸಮಯದಲ್ಲಿ ಕರ್ನಾಟಕ ವಿಭಜನೆಯ ಕೂಗು ಎತ್ತಿರುವ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಅನುಭವಿಸಿ ಕನ್ನಡ ಜನರಿಂದ ಆಯ್ಕೆಯಾಗಿ ಬಂದ ಶಾಸಕ ಉಮೇಶ್‌ ಕತ್ತಿಯ ಹೇಳಿಕೆ­ಯನ್ನೂ ಕಸಾಪ ಉಗ್ರವಾಗಿ ಖಂಡಿಸು­ತ್ತದೆ ಎಂದು ಹೇಳಿಕೆಯಲ್ಲಿ ತಿಳಿಸ­ಲಾಗಿದೆ.

ಪ್ರತಿಭಟನೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್‌, ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ವಿ.­ವಾಸು,  ಹೋಬಳಿ ಘಟಕದ ಕುಮಾರ­­­ಸ್ವಾಮಿ, ಸುಮಿತ್ರಮ್ಮ ನಾಗ­ರಾಜ್‌, ಶಿವ­ಲಿಂಗಪ್ಪ, ಎಂ.ಲೋಕೇಶ್‌, ­ಲಕ್ಕಪ್ಪ, ರೇಣುಕಾ­ರಾಧ್ಯ, ಎ.ಆರ್‌.­ಶ್ರೀನಿವಾ­ಸಯ್ಯ, ಕೃಷ್ಣ­ಮೂರ್ತಿ, ಅಜ್ಜಯ್ಯ ಒಡೆಯರ್‌ ಇನ್ನಿತರರು ಇದ್ದರು.

ಪ್ರತಿಕ್ರಿಯಿಸಿ (+)