ಸೋಮವಾರ, ಜೂನ್ 21, 2021
20 °C

ಎಟಿಎಂ ಮಾದರಿ ಗ್ರಂಥಾಲಯ

–ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಇಲ್ಲೊಂದು ಗ್ರಂಥಾಲಯವಿದೆ. ಆದರೆ, ಗ್ರಂಥಪಾಲಕರು ಇಲ್ಲ! ಹಾಗಂತ ಪುಸ್ತಕ ಎರವಲು ಪಡೆಯಲು ವಿದ್ಯಾರ್ಥಿಗಳು ಪರದಾಡಬೇಕಿಲ್ಲ. ನೇರವಾಗಿ ಗ್ರಂಥಾಲಯ ಪ್ರವೇಶಿಸಿ ತಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೋಗಬಹುದು. ಇನ್ನೂ ವಿಶೇಷವೆಂದರೆ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕವನ್ನು ಯಾರಾದರೂ ಎರವಲು ಪಡೆದಿದ್ದರೆ ಹಿಂದಿರುಗಿಸುವ ದಿನಾಂಕ ಖಚಿತಪಡಿಸಿಕೊಂಡು ‘ಮುಂಗಡ ಟಿಕೆಟ್ ಬುಕ್ಕಿಂಗ್’ ಮಾದರಿಯಲ್ಲಿ ಪುಸ್ತಕವನ್ನೂ ಕಾದಿರಸಬಹುದು!ಆಶ್ಚರ್ಯವಾದರೂ ಇದು ನಿಜ. ಗ್ರಂಥಪಾಲಕರಿಲ್ಲದ ಗ್ರಂಥಾಲಯ ಹೊಸ ಪರಿಕಲ್ಪನೆ ಏನಲ್ಲ. ಆದರೆ, ಕರ್ನಾಟಕದ ಮಟ್ಟಿಗೆ ಹೊಸತು ಎಂದೇ ಹೇಳಬಹುದು. ಗುಲ್ಬರ್ಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೇಂದ್ರೀಯ ಗ್ರಂಥಾಲಯ ಇಂತಹ ವ್ಯವಸ್ಥೆ ಅಳವಡಿಸಿಕೊಂಡಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗ್ರಂಥಪಾಲಕರಿಲ್ಲದೇ 24X7 ಸೇವೆ ನೀಡುವಲ್ಲಿ ನಿರತವಾಗಿದೆ. ವಿ.ವಿಯ ಗ್ರಂಥಾಲಯದಲ್ಲಿ ಆರ್‌ಎಫ್‌ಐಡಿ (Radio Frequency Identification) ತಂತ್ರಜ್ಞಾನ ಅಳವಡಿಸುವ ಮೂಲಕ ಇಡೀ ರಾಜ್ಯದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡ ಏಕೈಕ ವಿ.ವಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಏನಿದು ‘ಆರ್‌ಎಫ್‌ಐಡಿ’?

ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಗ್ರಂಥಾಲಯದಲ್ಲಿರುವ 30 ಸಾವಿರಕ್ಕೂ ಅಧಿಕ ಪುಸ್ತಕಗಳಿಗೆ ‘ಆರ್‌ಎಫ್‌ಐಡಿ’ ಟ್ಯಾಗ್ ಅಳವಡಿಸಲಾಗಿದೆ. ಅಲ್ಲದೇ, ಪುಸ್ತಕ ವಿತರಣಾ ಕೌಂಟರ್‌ನಲ್ಲಿ 1X1 ಉದ್ದಗಲದ ಸ್ಕ್ಯಾನರ್ ಮಾದರಿಯ ಕಬ್ಬಿಣದ ಫಲಕ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಯನ್ನು ಸ್ಕ್ಯಾನ್ ಮಾಡಿ, ಫಲಕದ ಮೇಲೆ ಪುಸ್ತಕ ಇಟ್ಟರೆ ಸಾಕು, ತಮಗೆ ಬೇಕಾದ ಪುಸ್ತಕ ಎರವಲು ಪಡೆಯಬಹುದು.  ಇಷ್ಟೇ ಅಲ್ಲ ಪುಸ್ತಕವನ್ನು ವಾಪಸು ಕೊಡಬಹುದು, ತೆಗೆದುಕೊಳ್ಳಬಹುದು. ಒಂದು ವೇಳೆ ಕಂಪ್ಯೂಟರ್‌ನಲ್ಲಿ ದಾಖಲು ಮಾಡದೇ, ಪುಸ್ತಕವನ್ನು ತೆಗೆದುಕೊಂಡು ಹೋದಲ್ಲಿ ‘ಅಲಾರಂ’ ಮೊಳಗುತ್ತದೆ. ವಿದ್ಯಾರ್ಥಿ ಸಿಕ್ಕಿ ಬೀಳುತ್ತಾನೆ! ಈ ತಂತ್ರಜ್ಞಾನದ ಮತ್ತೊಂದು ವಿಶೇಷವೆಂದರೆ ವಿದ್ಯಾರ್ಥಿಗಳು ತಾವು ಎರವಲು ಪಡೆದಿರುವ ಪುಸ್ತಕವನ್ನು ಯಾವುದೇ ರ್‍ಯಾಕ್‌ನಲ್ಲಿ ಇಟ್ಟರೂ ತಕ್ಷಣವೇ ಪತ್ತೆ ಹಚ್ಚಬಹುದಾಗಿದೆ. ಎಟಿಎಂ ಮಷಿನ್ ಮಾದರಿಯಲ್ಲಿ ಇದು ಕೆಲಸ ನಿರ್ವಹಿಸುತ್ತದೆ. ಇದಕ್ಕಾಗಿ ವಿ.ವಿ ₨ 12 ಲಕ್ಷ ವೆಚ್ಚ ಮಾಡಿದೆ.ಗ್ರಂಥಾಲಯದಲ್ಲಿ ಸಿ.ಸಿ ಟಿ.ವಿ ಕ್ಯಾಮರಾ, ಸ್ಕ್ಯಾನರ್, ಜೆರಾಕ್ಸ್ ಮಷಿನ್, ಅಂತರ್ಜಾಲ, ವೈ–ಫೈ ಸೌಲಭ್ಯ, ಆನ್‌ಲೈನ್ ರೀಡಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನಿರಾಳವಾಗಿ ಅಧ್ಯಯನದಲ್ಲಿ ತೊಡಗಬಹುದು.‘ಮುಂಗಡ ಬುಕ್ಕಿಂಗ್’ ಸೌಲಭ್ಯ!

ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಯಾರಾದರೂ ಎರವಲು ಪಡೆದಿದ್ದು, ಅದೇ ಪುಸ್ತಕ ಮತ್ತೊಬ್ಬ ವಿದ್ಯಾರ್ಥಿಗೆ ಬೇಕಾದಲ್ಲಿ ಮುಂಗಡವಾಗಿ ಆ ಪುಸ್ತಕ ಕಾಯ್ದಿರಿಸಬಹುದು. ಉದಾಹರಣೆಗೆ ಕಂಪ್ಯೂಟರ್ ವಿಜ್ಞಾನದ ಪುಸ್ತಕವನ್ನು ಒಬ್ಬ ವಿದ್ಯಾರ್ಥಿ ಪಡೆದಿರುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಆ ಪುಸ್ತಕವನ್ನು ಹುಡುಕಿದಲ್ಲಿ ಆ ಪುಸ್ತಕ ಯಾರ ಹೆಸರಿನಲ್ಲಿದೆ, ಯಾವಾಗ ಹಿಂದಿರಿಗಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಹಿಂದಿರುಗಿಸಿದ ತಕ್ಷಣವೇ ಆ ಪುಸ್ತಕವನ್ನು ತಮಗೆ ನೀಡುವಂತೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಪುಸ್ತಕ ಯಾವಾಗ ಕೈಸೇರುತ್ತದೋ ಎಂಬ ಆತಂಕದಿಂದ ಪಾರಾಗಬಹುದಾಗಿದೆ.ಏನೇನು ಲಭ್ಯ?: ವಿ.ವಿಯ ಕೇಂದ್ರೀಯ ಗ್ರಂಥಾಲಯದಲ್ಲಿ 22 ಸಾವಿರ ಪುಸ್ತಕ, 1,059 ಇ–ಪುಸ್ತಕ, 5,520 ಇ–ಜರ್ನಲ್ಸ್‌, 73 ಜರ್ನಲ್ಸ್, 520 ಆಕರ ಗ್ರಂಥಗಳು, 30 ಥೀಸಿಸ್ ಮತ್ತು ಡಿಸರ್ಟೇಷನ್, 9 ಸುದ್ದಿಪತ್ರಿಕೆಗಳು, 25 ಜನರಲ್ ಮ್ಯಾಗಜಿನ್ಸ್, 290 ಸಿ.ಡಿಗಳು, ಡಿಜಿಟಲ್ ಲೈಬ್ರರಿ ಲಭ್ಯವಿದೆ. ಡಿಜಿಟಲ್ ಗ್ರಂಥಾಲಯದಲ್ಲಿ ದೇಶ–ವಿದೇಶಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಬಿ–ಸ್ಕೂಲ್‌ಗಳ ಪುಸ್ತಕ, ಮಾಹಿತಿ, ಸಂಶೋಧನಾ ಗ್ರಂಥಗಳಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.