ಶನಿವಾರ, ಏಪ್ರಿಲ್ 17, 2021
32 °C

ಎಫ್‌ಡಿಐ:ಶೀಘ್ರದಲ್ಲಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಫ್‌ಡಿಐ:ಶೀಘ್ರದಲ್ಲಿ ಸಭೆ

ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಸಚಿವಾಲಯ ಮುಂದಿನ ವಾರ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ 46 ಪ್ರಸ್ತಾವಗಳನ್ನು ಪರಿಶೀಲಿಸಲಿದೆ.

ಧನಲಕ್ಷ್ಮಿ ಬ್ಯಾಂಕ್ ಮತ್ತು ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಗಳ ಪ್ರಸ್ತಾವಗಳೂ ಇದರಲ್ಲಿ ಸೇರಿವೆ. ‘ಎಫ್‌ಡಿಐ’ ಅನುಮೋದನೆಗೆ  ಸಂಬಂಧಿಸಿದಂತೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್. ಗೋಪಾಲನ್ ಅಧ್ಯಕ್ಷತೆಯಲ್ಲಿನ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಏಪ್ರಿಲ್ 20ರಂದು ಸಭೆ ಸೇರಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆ ತಿಳಿಸಿದೆ.

 

ಈ 46 ‘ಎಫ್‌ಡಿಐ’ ಪ್ರಸ್ತಾವಗಳಲ್ಲಿ 25 ಹೊಸತು. ಉಳಿದ ಪ್ರಸ್ತಾವಗಳನ್ನು ಈ ಹಿಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ.ಸರ್ಕಾರ ಕಳೆದ ಮಾರ್ಚ್ 31ರಂದು ಪರಿಷ್ಕೃತ ‘ಎಫ್‌ಡಿಐ’ ನೀತಿಯನ್ನು ಪ್ರಕಟಿಸಿದ ನಂತರ ನಡೆಸುತ್ತಿರುವ ಮೊದಲನೆಯ ಸಭೆ ಇದಾಗಿದೆ. ಹೋಂಡಾ ಮೋಟಾರ್ಸ್ ಮತ್ತು ಧನಲಕ್ಷ್ಮಿ ಬ್ಯಾಂಕ್ ಅಲ್ಲದೆ, ಹೊಸ ಪ್ರಸ್ತಾವಗಳಲ್ಲಿ ಜಿ4ಎಸ್ ಸೆಕ್ಯುರಿಟಿ ಸರ್ವೀಸಸ್ ಇಂಡಿಯಾ ಮತ್ತು  ಬೆಂಗಳೂರು ಮೂಲದ ಪಾರ್ಕ್ ಕಂಟ್ರೋಲ್ ಆಂಡ್ ಕಮ್ಯುನಿಕೇಷನ್ಸ್  ಸಂಸ್ಥೆಗಳೂ ಸೇರಿವೆ.

 

ಕಳೆದ ಸಭೆಯಲ್ಲಿ ಸಚಿವಾಲಯ 14 ‘ಎಫ್‌ಡಿಐ’ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ. ಈ ಬಾರಿಯ ಸಭೆಯಲ್ಲಿ ಬಾಕಿ ಉಳಿದಿರುವ ಪೂಂಜ್ ಲಿಯೋಡ್, ಲೋಕ್‌ಮಾತಾ ಮೀಡಿಯಾ, ಆರ್ಷಿಯಾ ಇಂಟರ್‌ನ್ಯಾಷನಲ್, ಪ್ರಾಣ್ ಬಿವರೇಜಸ್ ಪ್ರಸ್ತಾವಗಳನ್ನು ಪರಿಶೀಲಿಸುವ ಸಾಧ್ಯತೆಗಳಿವೆ. ಕಳೆದ 11 ತಿಂಗಳ ಅವಧಿಯಲ್ಲಿ ‘ಎಫ್‌ಡಿಐ’ ಹೂಡಿಕೆ ಶೇ 25ರಷ್ಟು ಕುಸಿತ ಕಂಡಿದ್ದು, 18 ಶತಕೋಟಿ ಡಾಲರ್‌ಗಳಿಗೆ ಇಳಿದಿದೆ. ಹೊಸ ಹೂಡಿಕೆ  ಆಕರ್ಷಿಸಲು ಸರ್ಕಾರ, ಎಫ್‌ಡಿಐ ನೀತಿ ಸರಳೀಕರಣ ಸೇರಿದಂತೆ ಹಲವು ಸುಧಾರಣಾ ಕ್ರಮಗಳಿಗೆ ಮುಂದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.