ಶುಕ್ರವಾರ, ಮಾರ್ಚ್ 5, 2021
23 °C

ಎಲ್ಲೆಡೆ ಭರಣಿ ಮಳೆ; ತಂಪಾಯ್ತು ಇಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಡೆ ಭರಣಿ ಮಳೆ; ತಂಪಾಯ್ತು ಇಳೆ

ದಾವಣಗೆರೆ: ದಿನವಿಡೀ ಸುರಿದ ಮಳೆ, ಕಚೇರಿ, ದೂರದ ಊರಿಗೆ ತೆರಳಲು ಪ್ರಯಾಣಿಕರ ಪರದಾಟ, ಮಳೆ ನೀರಲ್ಲಿ ನೆನೆದು ಮನೆಗೆ ಸೇರುವ ಧಾವಂತ, ರಚ್ಚೆಹಿಡಿದಂತೆ ದಿನವಿಡೀ ಸುರಿದ ಮಳೆ... ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಮಳೆ ಸುರಿಯಿತು. ಕಾದು ಕೆಂಡದಂತೆ ಆಗಿದ್ದ ನೆಲ ತಂಪಾಯ್ತು.ಕೆಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಪಿ.ಬಿ.ರಸ್ತೆಯ ಗುಂಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಾಲಿಕೆ ಮುಂಭಾಗದ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರಿನಲ್ಲಿಯೇ ವಾಹನ ಸಂಚಾರ ಮಾಡುತ್ತಿದ್ದ ದೃಶ್ಯವೂ ಕಂಡುಬಂತು.

ರಸ್ತೆಬದಿಯ ವ್ಯಾಪಾರಿಗಳು ಮಳೆಗೆ ಪರದಾಡಿದರು. ಪ್ಲಾಸ್ಟಿಕ್‌ ಹೊದ್ದು ಕೆಲಕಾಲ ವ್ಯಾಪಾರ ನಡೆಸಿದರು. ಬಳಿಕ ಮಳೆ ಜೋರಾಯಿತು. ಆಗ ವಿಧಿಯಿಲ್ಲದೇ ಮನೆಕಡೆಗೆ ಹೆಜ್ಜೆಹಾಕಿದರು.ಚನ್ನಗಿರಿ: ನಿರಂತರ ಜಡಿಮಳೆ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಎಡೆಬಿಡದೆ ಬಿರುಸಿನ ಜಡಿ ಮಳೆ ಬಿದ್ದಿದೆ. ಇದರಿಂದ ರೈತರು ತುಂಬಾ ಸಂತಸಗೊಂಡಿದ್ದಾರೆ. ಬೆಳಿಗ್ಗೆ 11ಗಂಟೆಗೆ ಪ್ರಾರಂಭಗೊಂಡ ಜಡಿಮಳೆ ಮಧ್ಯಾಹ್ನ 4 ಗಂಟೆಯವರೆಗೆ ನಿರಂತರವಾಗಿ ಸುರಿಯಿತು. ಇದರಿಂದ ಜನಸಂಚಾರ ಅಸ್ತವ್ಯಸ್ತಗೊಂಡಿತು.ಉತ್ತಮ ಮಳೆ ಬಿದ್ದಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ಪಟ್ಟಣದಲ್ಲಿ ಎಲ್ಲಾ ಚರಂಡಿಗಳು ತುಂಬಿ ಹರಿದವು.ಜನ ಜೀವನ ಅಸ್ತವ್ಯಸ್ತ

ಸಂತೇಬೆನ್ನೂರು: ಹೋಬಳಿಯಾದ್ಯಂತ ಗುರುವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸ್ವಲ್ಪ ಹೊತ್ತು ಜಿಟಿ ಜಿಟಿ ಮಳೆಯಿಂದ ಪ್ರಾರಂಭವಾಗಿ ಮಧ್ಯಾಹ್ನದ ನಂತರ ಭಾರಿ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿತು.

ವಾರದ ಸಂತೆಯಲ್ಲಿ ತರಕಾರಿ, ದವಸ, ಧಾನ್ಯ, ತಿಂಡಿ, ತಿನಿಸು ಮಾರಾಟಗಾರರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು. ತರಕಾರಿ ಕೊಳ್ಳಲು ಸಂತೆಗೆ ಹೋಗಲು ಸಾಧ್ಯವಾಗದೆ ಸಾರ್ವಜನಿಕರು ಮನೆಯಲ್ಲಿಯೇ ಉಳಿಯಬೇಕಾಯಿತು. ಇದರಿಂದ ವ್ಯಾಪಾರಸ್ಥಾರಿಗೆ ಸಾಕಷ್ಟು ನಷ್ಟ ಸಂಭವಿಸಿದೆ.ಗುರುವಾರ ವ್ಯಾಪಾರ ವಹಿವಾಟು ಹೆಚ್ಚಿರುವುದು ವಾಡಿಕೆ. ಮಳೆಯಿಂದ ರಸ್ತೆಗಳಲ್ಲೇ ಜನ ಜಂಗುಳಿ ಇರಲಿಲ್ಲ. ಅಲ್ಲಲ್ಲಿ ವಾಹನಗಳು ಹೆಡ್‌ಲೈಟ್‌ ಹಾಕಿಕೊಂಡು ಸಾಗಿದವು. ಬಸ್‌ನಿಲ್ದಾಣದಲ್ಲಿ ಸೂಕ್ತ ರಕ್ಷಣೆ ಇಲ್ಲದೆ ಪ್ರಯಾಣಿಕರು ಪರದಾಡಿದರು.

ಉತ್ತಮ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಯುವ ಭರವಸೆಯಿಂದ ರೈತರು ಸಂತಸಗೊಂಡಿದ್ದಾರೆ.ಮಲೆನಾಡು ನೆನಪಿಸಿದ ಮಳೆ

ಹೊನ್ನಾಳಿ: ತಾಲ್ಲೂಕಿನಾದ್ಯಂತ ಗುರುವಾರ ಬೆಳಿಗ್ಗೆ 11ರಿಂದ ಪ್ರಾರಂಭವಾದ ಜಡಿ ಮಳೆ ರಾತ್ರಿ 8ರವರೆಗೂ ಎಡೆಬಿಡದೇ ಸುರಿಯಿತು. ಈ ಮೂಲಕ ಮಲೆನಾಡಿನ ತೀರ್ಥಹಳ್ಳಿ ಪಟ್ಟಣವನ್ನು ನೆನಪು ಮಾಡಿಕೊಳ್ಳುವಂತೆ ಮಾಡಿತು.

ವಿಪರೀತ ಮಳೆಯಿಂದ ಪಟ್ಟಣದಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಹೋಟೆಲ್‌ಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿರಳ ಸಂಖ್ಯೆಯ ಪ್ರಯಾಣಿಕರಿದ್ದರು.ಗೃಹ ಪ್ರವೇಶ, ವಿವಾಹ ಸಮಾರಂಭಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದ ದೃಶ್ಯ ಕಂಡು ಬಂತು.

ಪಟ್ಟಣದ ವಿವಿಧೆಡೆ ಪ್ರಗತಿಯಲ್ಲಿದ್ದ ಒಳಚರಂಡಿ, ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗಳು ಮಳೆಯಿಂದಾಗಿ ಸ್ಥಗಿತಗೊಂಡವು.

ಮಳೆಯಿಂದಾಗಿ ಕಟಾವಿಗೆ ಬಂದ ವಿವಿಧ ಬೆಳೆಗಳಿಗೆ ಹಾನಿ ಸಂಭವಿಸಿದೆ.ಅದರಲ್ಲೂ ತಾಲ್ಲೂಕಿನ ಕೆಲವೆಡೆ ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ, ಬತ್ತ, ರಾಗಿ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ಮುನ್ಸೂಚನೆ ನೀಡಿದ್ದು, ರೈತರ ಚಿಂತೆ ಇಮ್ಮಡಿಗೊಂಡಿದೆ. ಒಟ್ಟಿನಲ್ಲಿ, ಗುರುವಾರ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿತಾದರೂ, ಕಳೆದ ಎರಡು ತಿಂಗಳಿನಿಂದ ಬಿಸಿಲ ಬೇಗೆಯಲ್ಲಿ ಬೆಂದು ಬಸವಳಿದ ಅಸಂಖ್ಯ ಜೀವಿಗಳಿಗೆ ಹಿತಕರ ತಂಗಾಳಿ ನೆಮ್ಮದಿ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.