ಸೋಮವಾರ, ಮಾರ್ಚ್ 1, 2021
29 °C
ಸಮಿತಿ ರಚನೆಗೆ ತೀರ್ಮಾನ: ಇಂಧನ ಸಚಿವ ಡಿ.ಕೆ. ಶಿವಕುಮಾರ್‌

ಒಎಫ್‌ಸಿ ಅಳವಡಿಕೆಗೆ ಪ್ರತ್ಯೇಕ ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಎಫ್‌ಸಿ ಅಳವಡಿಕೆಗೆ ಪ್ರತ್ಯೇಕ ನೀತಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಟಿವಿ ಕೇಬಲ್‌, ಆಪ್ಟಿಕಲ್‌ ಫೈಬರ್‌ ಕೇಬಲ್ (ಒಎಫ್‌ಸಿ) ಅಳವಡಿಕೆಗೆ ಸಮಗ್ರ ನೀತಿಯನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸೋಮವಾರ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿವಿ ಕೇಬಲ್, ಒಎಫ್‌ಸಿಗಳನ್ನು ಅನಧಿಕೃತವಾಗಿ ಅಳವಡಿಸಿರುವುದನ್ನು ತೆರವುಗೊಳಿಸುವ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ.  ಕೇಬಲ್‌ಗಳ ಅಳವಡಿಕೆಯನ್ನು ಕಾನೂನು ವ್ಯಾಪ್ತಿಗೆ ತರಬೇಕು ಎಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡುವುದಾಗಿಯೂ ಟಿವಿ ಕೇಬಲ್‌ ಆಪರೇಟರ್‌ಗಳು ಹೇಳಿದ್ದಾರೆ’ ಎಂದರು.‘ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಬಲ್‌ ಆಪರೇಟರ್‌ಗಳು, ಬಿಬಿಎಂಪಿ ಅಧಿಕಾರಿಗಳು, ನಮ್ಮ ಇಲಾಖೆ ಮತ್ತು  ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಇದಕ್ಕೊಂದು ಸಮಗ್ರ ನೀತಿ ರೂಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದರು.‘ಕೇಬಲ್‌, ಒಎಫ್‌ಸಿ ಅಳವಡಿಕೆಗೆ ಪಾಲಿಸಬೇಕಾದ ನಿಯಮಗಳು, ಸಂಸ್ಥೆಗಳಿಗೆ ನಿಗದಿ ಪಡಿಸಬೇಕಾದ ಶುಲ್ಕ ಸೇರಿದಂತೆ  ಇತರೆ ಸಮಗ್ರ ನೀತಿಯ ರೂಪು ರೇಷೆಗಳನ್ನು  ಸಿದ್ಧಪಡಿಸಲು ಬಿಬಿಎಂಪಿ ವಿಶೇಷ ಆಯುಕ್ತರ (ಯೋಜನೆಗಳು) ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.‘ರಾಜ್ಯ ಕೇಬಲ್‌ ಟಿವಿ ಒಕ್ಕೂಟ, ಕೇಬಲ್‌ ಆಪರೇಟರ್‌ ಸಂಘ, ಒಎಫ್‌ಸಿ ಕಂಪೆನಿಗಳ, ವಿದ್ಯುತ್‌ ಸರಬರಾಜು ಕಂಪೆನಿಗಳ ಮತ್ತು ಬೇರೆ ನಗರ ಪಾಲಿಕೆಗಳ ಪ್ರತಿನಿಧಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ’ ಎಂದು  ಶಿವಕುಮಾರ್‌  ಅವರು ಮಾಹಿತಿ ನೀಡಿದರು.

*

ಸಮಿತಿಯ ಎಲ್ಲ ಸಭೆಗಳೂ ಬಿಬಿಎಂಪಿ ಕಚೇರಿಯಲ್ಲಿ ನಡೆಯಲಿವೆ. ಸಮಿತಿ 3 ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ

-ಡಿ.ಕೆ. ಶಿವಕುಮಾರ್‌, ಇಂಧನ ಸಚಿವ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.