ಶನಿವಾರ, ಮೇ 15, 2021
24 °C

ಒಡಿಶಾ ಪ್ರವಾಹ: 17 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಒಡಿಶಾದ ಉತ್ತರ ಭಾಗದಲ್ಲಿ ಉಂಟಾಗಿರುವ ಪ್ರವಾಹ ಇನ್ನಷ್ಟು ಹಾನಿಯುಂಟು ಮಾಡಿದ್ದು, ಮೂವತ್ತು ಜಿಲ್ಲೆಗಳಲ್ಲಿ ಹತ್ತು ಜಿಲ್ಲೆಗಳ 21 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ.ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ನಡುಗಡ್ಡೆಯಾಗಿರುವ 3003 ಗ್ರಾಮಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಪೊಟ್ಟಣ ಹಂಚುವ ಪ್ರಕ್ರಿಯೆ ಇನ್ನಷ್ಟು ತೀವ್ರಗೊಳಿಸಲು ರಾಜ್ಯ ಸರ್ಕಾರ ಭಾನುವಾರ ನಿರ್ಧರಿಸಿದೆ.ಸಂಪರ್ಕ ಕಳೆದುಕೊಂಡ ಗ್ರಾಮಗಳ ಸಂಖ್ಯೆ 2,000ಕ್ಕೇರಿದೆ. ಐವರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರಿಂದ ಸತ್ತವರ ಸಂಖ್ಯೆ 17ಕ್ಕೆ ಏರಿದೆ ಎಂದು ಕಂದಾಯ ಮತ್ತು ವಿಕೋಪ ನಿರ್ವಹಣೆ ಸಚಿವ ಎಸ್. ಎನ್. ಪಾತ್ರೊ ಹೇಳಿದರು.ಭಾನುವಾರ ಸಂಜೆ ವೇಳೆಗೆ ಬ್ರಹ್ಮಣಿ ಸೇರಿ ಮೂರು ನದಿಗಳಲ್ಲಿ ಮಹಾಪೂರ ಉಂಟಾಗಿದ್ದು, ನೀರಿನ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ರಕ್ಷಣಾ ಕ್ರಮಗಳ ಮೇಲೆ ತೀವ್ರ ನಿಗಾ ಇಡುವಂತೆ ಅಧಿಕಾರಿಗಳ ಸೂಚಿಸಲಾಗಿದೆ ಎಂದು ಪಾತ್ರೊ ನುಡಿದರು. ಜಜಪುರ ಜಿಲ್ಲೆಯ ಬರಿ ಪ್ರದೇಶ, ಕೇಂದ್ರಪುರ ಜಿಲ್ಲೆಯ ರಾಜನಗರ, ರಾಜಕನಿಕಾ ಪ್ರದೇಶದ ಬಹುಪಾಲು ಪ್ರದೇಶಗಳು ಸಾರ್ವಜನಿಕ ಸಂಪರ್ಕ ಕಳೆದುಕೊಂಡಿವೆ.ಈಗಾಗಲೇ 1.31 ಲಕ್ಷ ಜನರನ್ನು ಪ್ರವಾಹಪೀಡಿತ ಪ್ರದೇಶಗಳಿಂದ ತೆರವುಗೊಳಿಸಿದ್ದು ಇವರು 258 ಪರಿಹಾರ ಶಿಬಿರಗಳಲ್ಲಿ ನೆಲೆಸಿದ್ದಾರೆ.ಪರಿಹಾರ ಕಾರ್ಯಾಚರಣೆಯ ಉಸ್ತುವಾರಿಗಾಗಿ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಹೆಚ್ಚಿನ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿದ್ದು, ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದರೆ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ಅಗತ್ಯವಾಗಲಿದೆ ಎಂದರು.ಹೊಸ ಪ್ರದೇಶಗಳಿಗೂ ನೀರು ನುಗ್ಗಿದ್ದು,  3 ಹೆಲಿಕಾಪ್ಟರ್ ಸಹಾಯದಿಂದ ಜನರಿಗೆ ಭಾನುವಾರ ಆಹಾರದ ಪೊಟ್ಟಣಗಳನ್ನು ಹಂಚಲಾಯಿತು. ರಕ್ಷಣಾ ಕಾರ್ಯಕ್ಕಾಗಿ ಶೀಘ್ರವೇ ಇನ್ನೂ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ಪರಿಹಾರ ಕಾರ್ಯಗಳ ಆಯುಕ್ತ ಪಿ.ಕೆ. ಮಹಾಪಾತ್ರ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.