ಮಂಗಳವಾರ, ಮೇ 11, 2021
24 °C

ಕಂಚೀವರದನಿಗೆ ಕಾಂಚಾಣ ಹರಕೆ

ರಮೇಶ ಕೆ. Updated:

ಅಕ್ಷರ ಗಾತ್ರ : | |

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 28 ಕಿ.ಮೀ ದೂರದಲ್ಲಿರುವ ಕಂಚೀಪುರದಲ್ಲಿದೆ ಶ್ರೀ ಕಂಚೀವರದರಾಜ ಸ್ವಾಮಿ ದೇವಾಲಯ. ಇದು ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಪ್ರಸಿದ್ಧಿ ಪಡೆದ ವಿಶಿಷ್ಟ ದೇವಾಲಯ. ಕಾರಣ, ದೇವರ ಉತ್ಸವಮೂರ್ತಿ ಗುಡಿಯಿಂದ ಹೊರ ನಡೆದರೆ ಸಾಕು, ಕಾಂಚಾಣದ ಮಳೆಯೇ ಸುರಿಯುತ್ತದೆ! ಅಚ್ಚರಿ ಪಡಬೇಡಿ.

ಸೇವೆ ಉಚಿತ

ಈ ದೇವಸ್ಥಾನದಲ್ಲಿ ನಿರ್ದಿಷ್ಟ ಸೇವೆ, ನಿಗದಿತ ಸೇವಾ ಶುಲ್ಕ ಇಲ್ಲ. ಭಕ್ತರು ತಾವೇ ಸಾಮಗ್ರಿ ತಂದು ಪೂಜೆ ಮಾಡಿಸಿಕೊಂಡು ಶಕ್ತ್ಯಾನುಸಾರ ಕಾಣಿಕೆ ಹಾಕಬಹುದು. ಹೊಸದುರ್ಗದಿಂದ ಕಂಚೀಪುರಕ್ಕೆ 24 ಕಿ.ಮೀ. ಮಾಹಿತಿಗೆ: 89717 73403
ಏಪ್ರಿಲ್ 12 ರಥೋತ್ಸವ

ಗುರುವಾರ (ಏ.12) ಶ್ರೀ ಕಂಚೀವರದರಾಜ ಸ್ವಾಮಿ ರಥೋತ್ಸವ. ಬೆಳಗಿನ ಜಾವ ಐದು ಗಂಟೆಗೆ ಪಕ್ಕದ ಗ್ರಾಮವಾದ ಚಿಕ್ಕಬ್ಯಾಲದಕೆರೆಯ ಕರಿಯಮ್ಮ ದೇವಿ ಮತ್ತು ಕಂಚೀವರದರಾಜಸ್ವಾಮಿ ಭೇಟಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರುತ್ತದೆ. ನಂತರ ಸೂರ್ಯ ಉದಯಿಸುವುದಕ್ಕೂ ಮುನ್ನ ಗ್ರಾಮದ ಪಕ್ಕದಲ್ಲಿರುವ ಕೆರೆಯ ಅಂಗಳದಲ್ಲಿ ಸಿಂಗಾರಗೊಂಡ ರಥದ ಮೇಲೆ ದೇವರ ಪ್ರತಿಷ್ಠಾಪನೆ. ಬಳಿಕ ರಥ ಎಳೆಯಲಾಗುತ್ತದೆ.

ಕಂಚೀವರದರಾಜ ಸ್ವಾಮಿಗೆ ಭಕ್ತರು ಹರಕೆ ಮಾಡಿಕೊಂಡ ಹಣವನ್ನು ಚಿಲ್ಲರೆ ರೂಪದಲ್ಲಿ ತೂರುವುದು ಕಾಂಚಣದ ಮಳೆ ಸುರಿದಂತೆ ಭಾಸವಾಗುತ್ತದೆ! ಭಕ್ತರು ತಮ್ಮ ಶಕ್ತ್ಯಾನುಸಾರ ಐದು ನೂರು ರೂಪಾಯಿಯಿಂದ ಐವತ್ತು ಸಾವಿರ ರೂಪಾಯಿವರೆಗೂ ಚಿಲ್ಲರೆ ಹಣ ತೂರುತ್ತಾರೆ.

 

ಈ ಮೂಲಕ ತಾವು ಹೊತ್ತ ಹರಕೆ ಈಡೇರಿಸಿಕೊಳ್ಳುತ್ತಾರೆ. ಈ ದೇವರು ಹರಕೆಯನ್ನು `ನನ್ನ ಹುಂಡಿಗೆ ಹಾಕಬೇಡಿ; ನನ್ನ ಮೇಲೆಯೇ ಸುರಿಯಿರಿ ಎಂದು ಕೇಳುತ್ತದೆ. ಅದರಂತೆ ದೇವರಿಗೆ ಹಣ ತೂರುವ ಪದ್ಧತಿ ಬೆಳೆದು ಬಂದಿದೆ~ ಎನ್ನುತ್ತಾರೆ ಗ್ರಾಮದ ಎಂ. ಪ್ರಸನ್ನಕುಮಾರ್.ಪೌರಾಣಿಕ ಹಿನ್ನೆಲೆ: ಕಂಚೀವರದರಾಜ ಸ್ವಾಮಿ ಕುರಿತ ಐತಿಹ್ಯವೊಂದು ಜನಪದರಲ್ಲಿ ಹಾಸು ಹೊಕ್ಕಾಗಿದೆ. `ಕಂಚಿ ರಾಜನ ಮಗಳಿಗೆ ಆಟವಾಡಲೆಂದು ಒಬ್ಬ ಆಚಾರಿ, ಭೂತಾಳೆ ಮರದಿಂದ ಗೊಂಬೆಯೊಂದನ್ನು ಮಾಡಿಕೊಟ್ಟ. ಮುಂದೆ ಇದೇ ಈ ಕಂಚೀವರದರಾಜ ಸ್ವಾಮಿ ಆಯಿತು. ಹಗಲು ಹೊತ್ತಿನಲ್ಲಿ ಗೊಂಬೆಯಾಗಿರುತ್ತಿದ್ದ ಇದು ರಾತ್ರಿಯಾಗುತ್ತಲೇ ಹುಡುಗನಾಗಿ ರೂಪಾಂತರವಾಗುತ್ತಿತ್ತು.ಹೀಗೆ ಕೆಲದಿನ ಕಳೆದ ಮೇಲೆ ರಾಜನ ಮಗಳು ಗರ್ಭಿಣಿಯಾಗುತ್ತಾಳೆ. ಮದುವೆಗೂ ಮುನ್ನ ಮಗಳು ಗರ್ಭಿಣಿಯಾದ ಬಗ್ಗೆ ರಾಜನಿಗೆ ಚಿಂತೆಯಾಯಿತು. ಒಂದು ದಿನ ರಾತ್ರಿ ರಾಜ ಸ್ವತಃ ಪರೀಕ್ಷೆಗೆ ಮುಂದಾಗುತ್ತಾನೆ. ಮಗಳ ಕೊಠಡಿಗೆ ಯಾರು ಹೋಗುತ್ತಾರೆ ಎಂಬುದನ್ನು ಪರೀಕ್ಷಿಸಿದಾಗ, ಗೊಂಬೆ ಯುವಕನಾಗಿ ರಾಜಕುಮಾರಿಯೊಂದಿಗೆ ಚಕ್ಕಂದವಾಡುತ್ತಿದ್ದುದು ಕಾಣುತ್ತದೆ.

 

ಸಿಟ್ಟಿಗೆದ್ದ ರಾಜ ಆ ಗೊಂಬೆಯನ್ನು ಮುತ್ತು,  ರತ್ನ ಮಾರುವ ವ್ಯಾಪಾರಿಗಳಿಗೆ  ಕೊಟ್ಟು ದೂರದೂರಿಗೆ ಗಡಿಪಾರು ಮಾಡುವಂತೆ ಆಜ್ಞಾಪಿಸುತ್ತಾನೆ. ವ್ಯಾಪಾರಿಗಳು ಆ ಗೊಂಬೆಯನ್ನು ತಂದು ಈ ಗ್ರಾಮದಲ್ಲಿ (ಕಂಚೀಪುರ) ಹಾಕುತ್ತಾರೆ.ಆಗ ವರದರಾಜನು ವ್ಯಾಪಾರಿಗಳನ್ನು ಕಪಿಗಳನ್ನಾಗಿ ಮಾಡಿ ಅವರಿಂದ ಒಂದು ದೇವಸ್ಥಾನ ಕಟ್ಟಿಸಿಕೊಳ್ಳತ್ತಾನೆ. ಆಗ ವ್ಯಾಪಾರಿಗಳು ವರದರಾಜನನ್ನು ಕುರಿತು `ನೀನು ದೇವರೆಂದು ತಿಳಿಯಲಿಲ್ಲ, ಗೊಂಬೆ ಎಂದುಕೊಂಡಿದ್ದೆವು. ನಮ್ಮನ್ನು ಮೊದಲಿನಂತೆ ಮಾಡು, ನಿನಗೆ ಮುತ್ತುರತ್ನ ತೂರುತ್ತೇವೆ~ ಎಂದು ಬೇಡಿಕೊಂಡರು. ಅದಕ್ಕೆ ಒಪ್ಪಿ ವ್ಯಾಪಾರಿಗಳನ್ನು ಮನುಷ್ಯ ರೂಪಿಗಳನ್ನಾಗಿ ಮಾಡಿದ... ಎಂಬ ಪೌರಾಣಿಕ ಕಥೆಯೊಂದು ಈ ಭಾಗದ ಜನರಲ್ಲಿದೆ ಎನ್ನುತ್ತಾರೆ ಅರ್ಚಕ ದೊಡ್ಡಯ್ಯ.ಅಂದಿನಿಂದಲೂ ಭಕ್ತರು ಸ್ವಾಮಿಯ ಮೇಲೆ ಹಣ ತೂರಿ ಹರಕೆ ತೀರಿಸುವ ಪದ್ಧತಿ ರೂಢಿಗೆ ಬಂತು. ಸ್ವಾಮಿಯ ಮೇಲೆ ತೂರಿದ ಹಣವನ್ನು ಯಾರು ಬೇಕಾದರೂ ಆರಿಸಿಕೊಳ್ಳಬಹುದು.ದೇವಸ್ಥಾನದಲ್ಲಿ ನಿತ್ಯ ಎರಡು ಬಾರಿ ಪೂಜೆ ನಡೆಯುತ್ತದೆ. ವಿಜಯದಶಮಿಯ ಸಂದರ್ಭದಲ್ಲಿ ಉತ್ತರೆ ಮಳೆ ಅಂಬಿನೋತ್ಸವ, ಸಂಕ್ರಾಂತಿ ಉತ್ಸವ, ಏಪ್ರಿಲ್ ತಿಂಗಳಿನಲ್ಲಿ ನಡೆಯುವ ರಥೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.