ಮಂಗಳವಾರ, ಜನವರಿ 28, 2020
21 °C
ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ

ಕಂದಾಯ ಅಧಿಕಾರಿಗಳಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂದಾಯ ವಸೂಲಾತಿ­ಯಲ್ಲಿ ನಿರ್ಲಕ್ಷ್ಯ ತೋರಿದ ಪೂರ್ವ ವಲಯದ ೧೨ ಜನ ಸಹ ಕಂದಾಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು. ಪೂರ್ವ ವಲಯದ ಕಚೆೇರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಕುರಿತು ಸೋಮ­ವಾರ ಪರಿಶೀಲನಾ ಸಭೆ ನಡೆಸಿದ ಸಚಿ­ವರು, ಕಡಿಮೆ ತೆರಿಗೆ ವಸೂಲಿ ಪ್ರಮಾಣ­ದಿಂದ ಅಸಮಾಧಾನಗೊಂಡು ಈ ಸೂಚನೆ ನೀಡಿದರು.ಪ್ರತಿ ವಿಭಾಗವಾರು ಇದುವರೆಗೆ ಸಂಗ್ರ­ಹಿಸಲಾದ ಮತ್ತು ಬಾಕಿ ಉಳಿದ ಆಸ್ತಿ ತೆರಿಗೆ ವಿವರಗಳನ್ನು ಪಡೆದರು. ಪೂರ್ವ ವಲಯದಲ್ಲಿ  ಇದು­ವರೆಗೆ ನಿಗದಿಪಡಿಸಿದ ಗುರಿಯಲ್ಲಿ ಶೇ ೪೦ರಷ್ಟು ಮಾತ್ರ ವಸೂಲಿ    ಮಾಡ­ಲಾಗಿದೆ. ಸಹ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೂರ್ವ ವಲಯದಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿ ₨ ೪೬೮ ಕೋಟಿ ಇದ್ದು, ಅದರಲ್ಲಿ ₨೨೮೭ ಕೋಟಿ ಮಾತ್ರ ಸಂಗ್ರಹವಾಗಿದೆ. ಬಾಕಿ ಮೊತ್ತ ಒಂದು ತಿಂಗಳಲ್ಲಿ ವಸೂಲಿ ಮಾಡ­ಬೇಕು ಎಂದು ವಲಯ ಜಂಟಿ ಆಯು­ಕ್ತರು, ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು. ಮೇಯರ್‌ ಬಿ.ಎಸ್. ಸತ್ಯನಾರಾ­ಯಣ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಪ್ರಯೋಜನ­ವಾಗಿಲ್ಲ.

ಪ್ರತಿದಿನ ಕನಿಷ್ಠ ೨೫ ಮನೆ­ಗಳಿಗೆ ಭೇಟಿ ನೀಡಿ, ಆಸ್ತಿ ತೆರಿಗೆ ಸಂಗ್ರಹ­ಣೆಗೆ ಪ್ರಯತ್ನಿಸಬೇಕು. ಆದರೆ, ಇದು­ವರೆಗೂ ಒಬ್ಬ ಅಧಿಕಾರಿಯೂ ಈ ನಿಟ್ಟಿ­ನಲ್ಲಿ ಕಾರ್ಯ ಪ್ರವೃತ್ತವಾಗಿಲ್ಲ.  ಇದ­ರಿಂದ ಅಭಿವೃದ್ಧಿ ಕೆಲಸಗಳು ಕುಂಠಿತ­ವಾಗು­ತ್ತಿವೆ. ತಿಂಗಳಲ್ಲಿ ಸಾಕಷ್ಟು ಪ್ರಗತಿ ತೋರಿ­ಸ­ಬೇಕು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಹಾಜರಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಎಂ.ಎಸ್. ಶಿವಪ್ರಸಾದ್, ಆಸ್ತಿ ತೆರಿಗೆ ಸಂಗ್ರಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಲು ಈಗಾಗಲೇ ವಲಯ­ವಾರು ವೇಳಾಪಟ್ಟಿಯನ್ನು ತಯಾರಿಸ­ಲಾಗಿದ್ದು, ಅದರಂತೆ ಕಟ್ಟುನಿಟ್ಟಾಗಿ ಸಭೆಗಳನ್ನು ನಡೆಸಿ, ಕಂದಾಯ ವಸೂ­ಲಾತಿಗೆ ಒತ್ತು ನೀಡಲಾಗುವುದು ಮತ್ತು ನಿರ್ಲಕ್ಷ್ಯ ತೋರಿಸಿದ ಅಧಿಕಾರಿ­ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ­ಲಾಗುವುದು ಎಂದು ತಿಳಿಸಿದರು. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಸೋಮ­ಶೇಖರ್, ಪಾಲಿಕೆಯ ಆಯುಕ್ತ ಎಂ. ಲಕ್ಷ್ಮೀನಾರಾಯಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)