ಸೋಮವಾರ, ಮೇ 23, 2022
30 °C

ಕನ್ನಡದ ಐಶ್

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ಸಂಪಿಗೆ ಮೂಗು.. ದಾಳಿಂಬೆ ಎಸಳಿನಂಥ ಹಲ್ಲುಗಳು.. ಮಿಂಚಿನಂಥ ಕಣ್ಣೋಟ.. ಹಾಲಂಥ ಮೈಬಣ್ಣ.. ಇಂಥ ವರ್ಣನೆಗೆ ಪಕ್ಕಾಗುವಂತೆ ಕಾಣುವ ಸೌಂದರ್ಯವತಿ ಐಶ್ವರ್ಯಾ ನಾಗ್. ಮಂಗಳೂರಿನ ಈ ಚೆಲುವೆ ಮುಕ್ತವಾಗಿ ಮಾತಿಗೆ ಸಿಕ್ಕರು.ಓದಿದ್ದು ಮಸ್ಕತ್‌ನಲ್ಲಿ. ಚೆಂದ ಕನ್ನಡ ಮಾತನಾಡುತ್ತೀರಿ. ಹೇಗೆ?

ನನ್ನೂರು ದಕ್ಷಿಣ ಕನ್ನಡ. ಪ್ರಾಥಮಿಕ ಶಿಕ್ಷಣ ದುಬೈನ ಮಸ್ಕತ್‌ನಲ್ಲಿ. ಕಾಲೇಜಿಗೆಂದು ಬೆಂಗಳೂರಿಗೆ ಬಂದೆ. ಸದ್ಯ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ಇಲ್ಲಿಗೆ ಬಂದಮೇಲೆಯೇ ಕನ್ನಡ ಕಲಿತದ್ದು.‘ನಾಗ್’ ಎಂದರೆ?

ತಂದೆ ಹೆಸರು ನಾಗೇಂದ್ರ ಶೆಣೈ. ಅದಕ್ಕೇ ನನ್ನ ಹೆಸರ ಮುಂದೆ ನಾಗ್ ಇರುವುದು.ನಟನೆಯಲ್ಲಿ ಆಸಕ್ತಿ ಬೆಳೆದ ಬಗೆ?

ನೃತ್ಯ-ಸಂಗೀತದಲ್ಲಿ ಆಸಕ್ತಿ ಇತ್ತು. ಅಮ್ಮ ಪ್ರಶಾಂತಿ ನಾಯಕ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದವರು. ರಕ್ತಗತವಾಗಿಯೇ ನನಗೆ ನಟನೆ ಬಂದಿದೆ.‘ನೀನೇ ನೀನೇ’ ಚಿತ್ರಕ್ಕೆ ಆಯ್ಕೆಯಾದದ್ದು ಹೇಗೆ?

‘ನೀನೇ ನೀನೇ’ ನನ್ನ ಮೊದಲ ಚಿತ್ರ. ನಾನಾಗ ಪಿಯುಸಿ ಮುಗಿಸಿದ್ದೆ. ಅದಕ್ಕಿಂತ ಮುಂಚೆ ಅವಕಾಶಗಳು ಬಂದಿದ್ದರೂ, ಪಾತ್ರ ಇಷ್ಟವಾಗದೇ ಒಪ್ಪಿಕೊಂಡಿರಲಿಲ್ಲ. ‘ನೀನೇ ನೀನೇ’ ಚಿತ್ರದ ಪಾತ್ರದಲ್ಲಿ ನಟನೆಗೆ ಅವಕಾಶವಿತ್ತು. ಅದರ ನಟನೆಗೆ ಒಳ್ಳೆ ವಿಮರ್ಶೆಗಳೂ ಬಂದವು.‘ಜಾಲಿಡೇಸ್’ಗೆ ಹೇಗೆ ಜೊತೆಯಾದಿರಿ?

ಪಾತ್ರ ಚೆನ್ನಾಗಿತ್ತು, ಒಪ್ಪಿಕೊಂಡೆ. ಬಳಿಕ ಓದು ಮತ್ತು ನಟನೆಯನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅದಕ್ಕೆ ಸಾಕಷ್ಟು ಅವಕಾಶಗಳನ್ನು ನಿರಾಕರಿಸಿದೆ. ಸ್ವಲ್ಪ ದಿನ ಯಾವ ಅವಕಾಶವನ್ನೂ ಒಪ್ಪಿಕೊಳ್ಳಲಿಲ್ಲ. ‘ಪುಂಡ’, ‘ಚೆಲುವೆಯೇ ನಿನ್ನೇ ನೋಡಲು’ ಮುಂತಾದ ಚಿತ್ರಗಳ ಅವಕಾಶ ಕೈಬಿಟ್ಟೆ.ಅಂದರೆ ನಟನೆ ನಿಮಗೆ ಹವ್ಯಾಸವೇ?

ಇಲ್ಲ. ಒಂದು ವರ್ಷದ ಹಿಂದೆ ನಟನೆ ನನಗೆ ಹವ್ಯಾಸವೇ ಆಗಿತ್ತು. ಇದೀಗ ನಟನೆಯನ್ನು ಗಂಭೀರವಾಗಿ ಪರಿಗಣಿಸಿ ದೂರ ಶಿಕ್ಷಣದ ಮೂಲಕ ಓದು ಮುಂದುವರಿಸುತ್ತಿದ್ದೇನೆ. ನಾನು ಮುಂಚಿನಿಂದಲೂ ಓದಿನಲ್ಲಿ ಮುಂದು. ತಂದೆಗೆ ನಾನು ಎಂಬಿಎ ಪದವಿ ಪಡೆಯಬೇಕು ಎಂಬಾಸೆ.ಬೇರೆ ಭಾಷೆಯಲ್ಲಿ ಅವಕಾಶಗಳು ಬರುತ್ತಿವೆಯೇ?

ತೆಲುಗಿನ ಇವಿವಿ ಸತ್ಯನಾರಾಯಣ ನಿರ್ದೇಶನದ ‘ಬಿರಿಡಿ’ ಚಿತ್ರದಲ್ಲಿ ನಟಿಸಿದೆ. ಸದ್ಯ ಪ್ರಶಾಂತ್ ನಾಯಕನಾಗಿರುವ ತಮಿಳಿನ ‘ಪೊಲ್ಲಾರ್ ಶಂಕರ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ.ಕನ್ನಡದಲ್ಲಿ ಹೊಸ ಪ್ರಾಜೆಕ್ಟ್?

ಓಂ ಪ್ರಕಾಶ್ ರಾವ್ ಅವರ ಬಳಿ ಸಹಾಯಕರಾಗಿದ್ದ ಸುನೀಲ್ ನಿರ್ದೇಶನದ, ವಿಜಯ ರಾಘವೇಂದ್ರ ನಾಯಕರಾಗಿರುವ ‘ವಿಘ್ನೇಶ್ವರ’ ಚಿತ್ರೀಕರಣ ನಡೆಯುತ್ತಿದೆ.‘ಕಳ್‌ಮಂಜ’ ಒಪ್ಪಿಕೊಳ್ಳಲು ಕಾರಣ?

ಕೋಮಲ್ ಅನುಭವಿ ನಟ. ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಇಮೇಜ್ ಇದೆ. ಅಷ್ಟೇ ಅಲ್ಲ, ಪಾತ್ರವೂ ನನಗಿಷ್ಟವಾಯಿತು. ಗ್ಲಾಮರ್ ಬಗ್ಗೆ?

ಕಥೆಗೆ ಅಗತ್ಯ ಇದ್ದರೆ ಗ್ಲಾಮರ್ ಓಕೆ. ಆದರೆ ವಲ್ಗರ್ ಇಷ್ಟವಾಗಲ್ಲ. ಕನ್ನಡದಲ್ಲಿ ಡೀಸೆಂಟಾಗಿ ಮಾಡಿಸ್ತಾರೆ. ಅಷ್ಟು ವಲ್ಗಾರಿಟಿ ಇಲ್ಲ ಅನ್ಸುತ್ತೆ. ಇಲ್ಲಿ ಕೆಟ್ಟ ಅನುಭವಗಳೇ ನನಗಾಗಿಲ್ಲ.ಇಷ್ಟದ ಪಾತ್ರಗಳು?

‘ಜಬ್ ವಿ ಮೆಟ್’ನಲ್ಲಿ ಕರೀನಾ ಕಪೂರ್, ‘ಬ್ಲ್ಯಾಕ್’ನಲ್ಲಿ ರಾಣಿ ಮುಖರ್ಜಿ, ‘ಗೆಜ್ಜೆಪೂಜೆ’ಯಲ್ಲಿ ಕಲ್ಪನಾ ನಟಿಸಿದ ಪಾತ್ರಗಳು ಇಷ್ಟ.ಪಾತ್ರವೊಂದಕ್ಕೆ ಹೇಗೆ ಸಿದ್ಧವಾಗುವಿರಿ?

ಆ ಪಾತ್ರಕ್ಕೆ ನನ್ನ ದೇಹಭಾಷೆ ಹೊಂದಿಸಿಕೊಳ್ಳಲು ಆರಂಭಿಸುತ್ತೇನೆ. ಬೇರೆಯವರ ಅಭಿನಯವನ್ನು ಗಮನಿಸಿ ನನ್ನ ಅಭಿನಯದಲ್ಲಿ ಸುಧಾರಣೆ ಮಾಡಿಕೊಳ್ಳಲು ಪ್ರಯತ್ನಿಸುವೆ.ನೀವೇ ಡಬ್ಬಿಂಗ್ ಮಾಡುವಿರಾ?

ಇಲ್ಲ. ಆರಂಭದಲ್ಲಿ ನನ್ನ ಕನ್ನಡ ಅಷ್ಟು ಚೆನ್ನಾಗಿರಲಿಲ್ಲ. ಅಭಿನಯದಲ್ಲೂ ಮತ್ತು ಕನ್ನಡದಲ್ಲೂ ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದ್ದೇನೆ.ಟೀಕೆಗಳನ್ನು ಹೇಗೆ ಸ್ವೀಕರಿಸುವಿರಿ?

ನನಗೆ ಹೊಗಳಿದರೆ ಖುಷಿಯಾಗಲ್ಲ. ಟೀಕಿಸಿದರೆ ಖುಷಿಯಾಗುತ್ತದೆ. ಸುಧಾರಣೆ ಆಗೋದು ಟೀಕೆಯಿಂದಲೇ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.