ಕನ್ನಡ ಅನುಷ್ಠಾನಕ್ಕೆ ದುಃಸ್ಥಿತಿ
ಪ್ರಧಾನ ಅಂಚೆ ಕಚೇರಿಯಲ್ಲಿ ಮಾತಿನ ಚಕಮಕಿ, `ಮುಖ್ಯಮಂತ್ರಿ'ಗೆ ಧಮಕಿ ಪ್ರಸಂಗದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇನ್ನೂ ಸತ್ತಿಲ್ಲ ಎಂದು ನನಗೆ ಅನ್ನಿಸಿತು.
10-12 ವರ್ಷಗಳಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ನನಗೂ ನಂಟು. ಸರ್ಕಾರಿ ಕಚೇರಿಗಳಲ್ಲಿ ಇಂಗ್ಲಿಷ್ ಬಳಸಿದ್ದು ಕಂಡಾಗ ಪ್ರಾಧಿಕಾರಕ್ಕೆ ದೂರು ನೀಡುತ್ತಿದ್ದೆ. ಕೆಲವು ವರ್ಷಗಳ ನಂತರ ಗೊತ್ತಾಯಿತು- ನನ್ನ ದೂರು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುತ್ತಿತ್ತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅದು ತಳ ಸೇರುತ್ತಿತ್ತು.
ನಂತರ ಕನ್ನಡ ಪತ್ರಿಕೆಗಳಿಗೆ ಇಂಗ್ಲಿಷ್ ಜಾಹೀರಾತು ನೀಡುವ ಸರ್ಕಾರಿ ಕಚೇರಿಗಳ ವಿರುದ್ಧ ದಾಖಲೆ ಸಹಿತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ದೂರು ಸಲ್ಲಿಸುತ್ತಿದ್ದೆ. ಎಷ್ಟೇ ದೂರು ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಕಾಣಲಿಲ್ಲ.
ನಂತರ ಮಾಹಿತಿ ಹಕ್ಕಿನ ಅಡಿಯಲ್ಲಿ 7-8 ದೂರುಗಳ ಬಗ್ಗೆ ಮಾಹಿತಿ ಕೇಳಿದೆ. ಉತ್ತರ ದೊರೆಯಲಿಲ್ಲ. ರಾಜ್ಯ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದಾಗ ವಿಚಾರಣೆಯಲ್ಲಿ ರಾಜ್ಯ ಮಾಹಿತಿ ಆಯುಕ್ತರಾಗಿದ್ದ ಡಾ. ಎಚ್.ಎನ್. ಕೃಷ್ಣ ಅವರು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಾಗ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಶಾಖಾಧಿಕಾರಿಯವರು `ಅಧ್ಯಕ್ಷರಿಗೆ ಪತ್ರ ಬರೆದು ದೂರು ಸಲ್ಲಿಸಿದರೆ ಅವರ ಆಪ್ತ ಕಾರ್ಯದರ್ಶಿ ನನಗೆ ತಲುಪಿಸುವುದಿಲ್ಲ.
ನನಗೇ ದೂರು ನೀಡಿದರೆ ನಾನು ಕ್ರಮ ಕೈಗೊಳ್ಳುತ್ತೇನೆ' ಎಂದು ಅಸಹಾಯಕತೆ ತೋಡಿಕೊಂಡರು (19-2-2010).
ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೇಳಿದಾಗ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಶೇ 98ರಷ್ಟು ಬಳಕೆ ಆಗುತ್ತಿದೆ. ತುಮಕೂರಿನಲ್ಲಿ ಶೇ 100ರಷ್ಟು ಜಾರಿಯಲ್ಲಿದೆಎಂಬುದು ಗೊತ್ತಾಯಿತು.
4-5 ವರ್ಷಗಳಿಂದ ಯಾವ ಯಾವ ಜಿಲ್ಲೆಗಳಿಗೆ ಅಧ್ಯಕ್ಷರು ಅಥವಾ ಕಚೇರಿ ಸಿಬ್ಬಂದಿ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಸಭೆ ನಡೆಸಲಾಗಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. 4-5 ವರ್ಷಗಳಲ್ಲಿ ಕನ್ನಡ ಅನುಷ್ಠಾನ ಬಗ್ಗೆ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಪತ್ರ ಬರೆದಿದ್ದೀರಿ ಎಂದರೆ ಉತ್ತರವಿಲ್ಲ. ಜನರ ತೆರಿಗೆ ಹಣದಿಂದ ಬದುಕುತ್ತಿರುವ ಇಂತಹ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಮಗೆ ಬೇಕೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.