ಭಾನುವಾರ, ಜೂನ್ 13, 2021
22 °C

ಕರಾವಳಿಯಲ್ಲೂ ಬಲಪಡೆದ ಬಲಪಂಥೀಯ ವಿಚಾರಧಾರೆ

ಪ್ರವೀಣ್‌ಕುಮಾರ್‌ ಪಿ.ವಿ./ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:  ಕರಾವಳಿಯ ರಾಜಕೀಯ ಇತಿಹಾಸದ ದೃಷ್ಟಿಯಿಂದ ನೋಡಿದಾಗ 1980ರ ಮಹಾಚುನಾವಣೆ ತೀರಾ ಮಹತ್ವದ್ದು. ಪ್ರಸ್ತುತ ಜಿಲ್ಲೆಯಲ್ಲಿ ನೇರ ಪೈಪೋಟಿ ಇರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ. ಬಿಜೆಪಿ ಸ್ವತಂತ್ರ ಪಕ್ಷವಾಗಿ ಗಟ್ಟಿಗೊಳ್ಳುವುದಕ್ಕೆ ಮೊಳಕೆ ಬಿತ್ತಿದ್ದು ಈ ಚುನಾವಣೆ...ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ಸೋಲಿಸುವ ಉದ್ದೇಶದಿಂದ ಒಂದಾಗಿದ್ದ ಜಾತ್ಯತೀತ ತತ್ವ ಹಾಗೂ ಬಲಪಂಥೀಯ ವಿಚಾರಧಾರೆಗಳು ಹೆಚ್ಚು ಸಮಯ ಒಟ್ಟಿಗೆ ಬಾಳಲಿಲ್ಲ. 1980ರಲ್ಲಿ ಜನತಾ ಪಕ್ಷವು ಜನತಾ ಪಕ್ಷ ಹಾಗೂ ಜನತಾ ಪಕ್ಷ (ಸೆಕ್ಯುಲರ್‌) ಆಗಿ ಇಬ್ಭಾಗವಾಯಿತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಬೆಳವಣಿಗೆಗೆ ನಾಂದಿ ಹಾಡಿದ್ದು ಈ ಚುನಾವಣೆ. ಈ ಚುನಾವಣೆಯಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ ಜನತಾ ಪಕ್ಷದ ಅಭ್ಯರ್ಥಿ. ಒಂದರ್ಥದಲ್ಲಿ ಜಿಲ್ಲೆಯ ಬಿಜೆಪಿಯ ಪ್ರಥಮ ಲೋಕಸಭಾ ಅಭ್ಯರ್ಥಿ.‘1980ರಲ್ಲಿ ಪಕ್ಷ ಇಬ್ಭಾಗವಾದಾಗ ಆರ್‌ಎಸ್‌ಎಸ್‌ ವಿಚಾರ­ವನ್ನು ಬೆಂಬಲಿಸುವವರು ಜನತಾಪಕ್ಷದಲ್ಲಿ ಉಳಿದರು. ಇದೇ ಮುಂದೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಆಯಿತು. 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದು ಕೇವಲ ಇಬ್ಬರು. ಅದರಲ್ಲಿ ನಾನೂ ಒಬ್ಬ. ಸುಳ್ಯದಲ್ಲಿ ಗೆದ್ದ ಇನ್ನೊಬ್ಬ ಅಭ್ಯರ್ಥಿ ಕಾಂಗ್ರೆಸ್‌ನಿಂದ ಹೊರ­ಬಂದವರು.ಭೂಸುಧಾರಣೆಯಂತಹ ಯೋಜನೆಗಳಿಂದಾಗಿ ಜನರಲ್ಲಿ ಕಾಂಗ್ರೆಸ್‌ ಬಡವರ ಪಕ್ಷ ಎಂಬ ಭಾವನೆ ಇತ್ತು. ಆರ್‌ಎಸ್‌ಎಸ್‌ಗೆ ಕರಾವಳಿಯಲ್ಲಿ ಹಿಂದಿನಿಂದಲೂ ನೆಲೆ ಇತ್ತು. ಆದರೆ, ಜನತಾ ಪಕ್ಷವು ಬಹುತೇಕ ಬ್ರಾಹ್ಮಣರ ಮತ್ತು ಕೊಂಕಣಿಗರ ಪಕ್ಷ ಎಂಬ ಭಾವನೆ ಜನರಲ್ಲಿತ್ತು. ಅದನ್ನು ಹೋಗಲಾಡಿಸಿ ಜನರಲ್ಲಿ ರಾಷ್ಟ್ರೀಯತೆಯನ್ನು  ಬೆಳೆಸಲು ಕಾರ್ಯಯೋಜನೆ ರೂಪಿಸಿದೆವು. ಆಗಿನ ಆರ್‌ಎಸ್‌ಎಸ್‌ ಕಾರ್ಯಕರ್ತರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಸಿಗುವಂತಾಯಿತು’ ಎಂದು ಮೆಲುಕು ಹಾಕುತ್ತಾರೆ ವೃತ್ತಿಯಲ್ಲಿ ವಕೀಲರಾದ ಮಾಜಿ ಶಾಸಕ ಉರಿಮಜಲು ರಾಮ ಭಟ್‌.‘ಕಾಂಗ್ರೆಸ್‌ನಿಂದ ಜನಾರ್ದನ ಪೂಜಾರಿ ಅವರೇ ಅಭ್ಯರ್ಥಿ. ಜನತಾ ಪಕ್ಷವು ಆರ್‌ಎಸ್‌ಎಸ್‌ ಹಿನ್ನೆಲೆಯ ಕರಂಬಳ್ಳಿ ಸಂಜೀವ ಶೆಟ್ಟಿ ಅವರನ್ನು ಕಣಕ್ಕಿಳಿಸಿತು. ಉಪನ್ಯಾಸಕರಾಗಿದ್ದ ಅವರು ಆರ್‌ಎಸ್‌ಎಸ್‌ ಸಂಘಟನೆಗೆ ಕೆಲಸ ಮಾಡಿದವರು. ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯಲ್ಲಿದ್ದು, ಸಹಕಾರಿ ರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ಆಗ ಕಾಂಗ್ರೆಸ್‌ ಪರ ಇದ್ದ ಒಲವಿನ ಹೊರತಾಗಿಯೂ ಅವರು ಲಕ್ಷಕ್ಕೂ ಅಧಿಕ ವೋಟು ಗಳಿಸಿದ್ದರು’ ಎಂದು ರಾಮ ಭಟ್‌ ಮೆಲುಕು ಹಾಕಿದರು.    ಇಂದಿರಾ ಗಾಂಧಿ ಜತೆಗಿನ ವೈಮನಸ್ಸಿನಿಂದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದರು. ಹಿಂದಿನ ಚುನಾವಣೆಗಳಲ್ಲಿ ಸ್ವತಂತ್ರ ಪಾರ್ಟಿ ಹಾಗೂ ಕಾಂಗ್ರೆಸ್‌ (ಒ)ನಿಂದ ಪೈಪೋಟಿ ಎದುರಿಸಿದ್ದ ಕಾಂಗ್ರೆಸ್‌ 1980ರಲ್ಲಿ ಅರಸು ಕಾಂಗ್ರೆಸ್‌ ಸವಾಲನ್ನು ಎದುರಿಸಬೇಕಾಯಿತು. ಕಾಂಗ್ರೆಸ್‌ (ಐ) ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ ಅರಸು ಕಾಂಗ್ರೆಸ್‌ನಿಂದ ಬಿ.ಎ.ಮೊಯ್ದಿನ್‌ ಸ್ಪರ್ಧಿಸಿದ್ದರು. ‘ಭೂಮಸೂದೆ ಜಾರಿಗೆ ಅರಸು ಕಾರಣ’ ಎಂಬುದು ಜಿಲ್ಲೆಯ ಜನತೆಗೆ ಅರಿವಿದ್ದುದರಿಂದ ಪೂಜಾರಿ ಅವರಿಗೆ ಬಿ.ಎ.ಮೊಯ್ದಿನ್‌ ಪ್ರಬಲ ಪೈಪೋಟಿ ನೀಡಬಹುದೆಂಬ ನಿರೀಕ್ಷೆ ಸೃಷ್ಟಿಯಾಗಿತ್ತು. ಹಿಂದಿನ ಎರಡು ಮಹಾ ಚುನಾವಣೆಗಳಲ್ಲಿ ಸ್ಪರ್ಧಿಸದ ಸಿಪಿಎಂ ಕೂಡಾ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.‘ಅಮೆರಿಕದಲ್ಲಿ ಕಲಿತು ಬಂದು, ಇಲ್ಲಿ ಕಮ್ಯುನಿಸ್‌್ಟ್‌ ಚಳವಳಿಯಲ್ಲಿ ಸಕ್ರಿಯವಾಗಿದ್ದ ಮಹಾಬಲೇಶ್ವರ ಭಟ್‌ ಸಿಪಿಎಂ ಅಭ್ಯರ್ಥಿ. ಸಿಪಿಎಂಗೆ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ನೆಲೆ ಇದ್ದುದರಿಂದ ಅವರೂ ಸಾಕಷ್ಟು ಮತ ಗಳಿಸುವ ಹುಮ್ಮಸ್ಸಿನಲ್ಲಿದ್ದರು’ ಎಂದು ಸ್ಮರಿಸುತ್ತಾರೆ ಸಿಪಿಎಂ ಹಿರಿಯ ಮುಖಂಡ ಕೆ.ಆರ್‌.ಶ್ರಿಯಾನ್‌.ನಾಲ್ಕು ಪ್ರಮುಖ ಪಕ್ಷಗಳಲ್ಲದೇ, ಜನತಾ ಪಕ್ಷ (ಜಾತ್ಯತೀತ)ದಿಂದ ಐ.ಎಂ.ಕಾರ್ಯಪ್ಪ ಸ್ಪರ್ಧಿಸಿದ್ದರು. ದಳವಾಯಿ ಹನುಮರಾಜೇ ಅರಸ್‌, ಕೊಕ್ಕಂಡ ಬೆಳ್ಳಿಯಪ್ಪ ಚೆಂಗಪ್ಪ, ಎಸ್‌.ಎನ್‌.ವಾಸುದೇವ ರಾವ್‌, ಶಂಕರ ನಾರಾಯಣ ಭಟ್‌ ನೆಟ್ಟಾರ್‌ ಸ್ವತಂತ್ರ ಅಭ್ಯರ್ಥಿಗಳಾಗಿದ್ದರು. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ 9 ಮಂದಿ ಸ್ಪರ್ಧಿಸಿದ್ದರಿಂದ ಈ ಚುನಾವಣೆಗೆ ಹೊಸ ರಂಗು ಬಂದಿತ್ತು. ಜನಾರ್ದನ ಪೂಜಾರಿ ಅವರು ಆಗಿನ್ನೂ ಕೇಂದ್ರದಲ್ಲಿ ಸಚಿವರಾಗಿರಲಿಲ್ಲ. ಸಾಲ ಮೇಳದ ಜನಪ್ರಿಯತೆಯ ಬಲವೂ ಅವರಿಗಿರಲಿಲ್ಲ. ಆ ಬಾರಿಯೂ ಬಿರುಸಿನ ಮತದಾನ ನಡೆದಿತ್ತು. 6,39,192 ಮತದಾರರರ ಪೈಕಿ 4,55,328 ಮಂದಿ ಮತ ಚಲಾಯಿಸಿದ್ದರು. 9,647 ಮತಗಳು ತಿರಸ್ಕೃತಗೊಂಡಿದ್ದವು. 2,49,283 ಮತ ಪಡೆದ ಜನಾರ್ದನ ಪೂಜಾರಿ ಕರಂಬಳ್ಳಿ ಸಂಜೀವ ಶೆಟ್ಟಿ ಅವರನ್ನು 1,28,897 ಮತಗಳಿಂದ ಸೋಲಿಸಿದ್ದರು. ಅರಸು ಕಾಂಗ್ರೆಸ್‌ನ ಬಿ.ಎ.ಮೊಯ್ದಿನ್‌ 36,628 ಮತ ಗಳಿಸಿದ್ದರು. ಪೂಜಾರಿ ಮತ್ತು ಸಂಜೀವ ಶೆಟ್ಟಿ ಅವರನ್ನು ಹೊರತುಪಡಿಸಿದರೆ ಉಳಿದ ಏಳೂ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.ಈ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಗೆ ಸೋಲಾಗಿರ­ಬಹುದು. ಆದರೆ, ಆರ್‌ಎಸ್‌ಎಸ್‌ ವಿಚಾರಧಾರೆಗೆ ಕರಾವಳಿಯಲ್ಲಿ ಇಷ್ಟೊಂದು ಮತಗಳು ಸಿಕ್ಕಿದ್ದು, ಭವಿಷ್ಯದಲ್ಲಿ ಜನತಾ ಪಕ್ಷವು ಯಾವ ಹಂತಕ್ಕೆ ಬೆಳೆಯಬಹುದು ಎಂಬುದರ ಸೂಚನೆ ಆಗಿತ್ತು.‘ಜಿಲ್ಲೆಯ ಸಾಂಪ್ರದಾಯಿಕ ಕೈಗಾರಿಕೆಗಳಾದ ಹೆಂಚಿನ ಕಾರ್ಖಾನೆ ಹಾಗೂ ದೊಡ್ಡ ಪ್ರಮಾಣದ ಗೋಡಂಬಿ ಕಾರ್ಖಾನೆಗಳೂ ಒಂದೊಂದಾಗಿ ಮುಚ್ಚಿದ್ದು ಕಮ್ಯುನಿಸ್ಟ್‌  ಚಳವಳಿಗೆ ಹೊಡೆತ ನೀಡಿತು. ಜನರು ನಾವು ಸಂಘಟಿಸುತ್ತಿದ್ದ ಹೋರಾಟಗಳಿಗೆ ಬೆಂಬಲ ನೀಡುತ್ತಿದ್ದರೇ ಹೊರತು, ಮತ ನೀಡಲಿಲ್ಲ. ಪಕ್ಷವನ್ನು ಕಟ್ಟುವುದಕ್ಕಾಗಿ  ನಾವು ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಮಗೆ ವ್ಯತಿರಿಕ್ತವಾಗಿ ಜನತಾ ಪಕ್ಷ ಬಿಜೆಪಿಯಾದ ಬಳಿಕ ಅವರು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಿದರು. ಯುವ ಪೀಳಿಗೆ ಅದನ್ನು ಇಷ್ಟಪಟ್ಟಿತು. ಈಗಲೂ ನಮ್ಮ ಕಾರ್ಮಿಕ ಸಂಘಟನೆಗಳಿಗೆ ಜಿಲ್ಲೆಯಲ್ಲಿ 52 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಅದರ ಅರ್ಧದಷ್ಟೂ ಮತಗಳು ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಗುತ್ತಿಲ್ಲ’ ಎಂದು ವಿಶ್ಲೇಷಿಸುತ್ತಾರೆ ಕೆ.ಆರ್‌.ಶ್ರೀಯಾನ್‌.ಜಿಲ್ಲೆಯಲ್ಲಿ ಬಿಜೆಪಿಯ ಬಲವರ್ಧನೆಗೆ ಕಾರಣವಾದ ಉರಿಮಜಲು ರಾಮಭಟ್‌ ಅವರೂ ಪಕ್ಷದ ಈಗಿನ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ‘ರಾಜಕಾರಣದಲ್ಲಿ ಮೂಗುತೂರಿಸಬಾರದು ಎಂಬುದು ಆರ್‌ಎಸ್‌ಎಸ್‌ ಸಿದ್ಧಾಂತ. ಆದರೆ, ಜಿಲ್ಲೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು ಆರ್‌ಎಸ್‌ಎಸ್‌ ಮುಖಂಡರೇ ನಿರ್ಧರಿಸುವ ದುಃಸ್ಥಿತಿ ಈಗ ಇಲ್ಲಿದೆ. ನಳಿನ್‌ ಕುಮಾರ್‌ ಕೂಡಾ ಬಿಜೆಪಿಯ ಆಯ್ಕೆ ಅಲ್ಲ. ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಲು ಒಲ್ಲದ ಮನಸ್ಸಿನಿಂದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ’ ಎನ್ನುತ್ತಾರೆ ರಾಮಭಟ್‌.‘ಅರಸು ಕಾಂಗ್ರೆಸ್‌ ವಿಭಜನೆ ಬಳಿಕ, ಮೂಲ ಕಾಂಗ್ರೆಸ್‌ ಪಕ್ಷದಲ್ಲೂ ವಲಸಿಗರು ತುಂಬಿಕೊಂಡರು. ಬಡವರ ಪರ ಕಾಳಜಿ ಕಡಿಮೆ­ಯಾ­ಯಿತು’ ಎನ್ನುತ್ತಾರೆ ಮೂಲತಃ ಕಾಂಗ್ರೆಸ್ಸಿಗರಾದ ಬಿ.ಎ.ಮೊಯ್ದಿನ್‌.ಈ ಮೂವರು ಹಿರಿಯರ ಅಂತರಾಳದ ಮಾತುಗಳು ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಪಕ್ಷಗಳು ಯಾವ ಹಾದಿ ಹಿಡಿದಿವೆ ಎಂಬುದಕ್ಕೂ ಕನ್ನಡಿ.ಲೋಕಸಭಾ ಚುನಾವಣೆ 1980; ಮತದಾರರು: 6,39,192ಮತ ಚಲಾವಣೆ: 4,55,328 (ಶೇ 71.23); ತಿರಸ್ಕೃತ ಮತ: 9,647
1) ಜನಾರ್ದನ ಪೂಜಾರಿ (ಕಾಂಗ್ರೆಸ್‌ ಐ)    249283 (ಶೇ 55.93)

2) ಕೆ.ಸಂಜೀವ ಶೆಟ್ಟಿ (ಜೆಎನ್‌ಪಿ)   120386 (ಶೇ 27.01)

3) ಬಿ.ಎ.ಮೊಯ್ದಿನ್‌ (ಅರಸು ಕಾಂಗ್ರೆಸ್‌)   36628 (ಶೇ 8.22)

4) ಮಹಾಬಲೇಶ್ವರ ಭಟ್‌ (ಸಿಪಿಎಂ)   23619 (ಶೇ 5.30)

5) ಐ.ಎಂ.ಕಾರ್ಯಪ್ಪ (ಜೆಎನ್‌ಪಿ ಜಾತ್ಯತೀತ)  8695 (ಶೇ1.95)

6) ಡಿ. ಎಚ್‌. ಅರಸ್‌ (ಸ್ವ್ರ)  3651 (ಶೇ 0.82)

7) ಕೆ.ಬಿ.ಚೆಂಗಪ್ಪ     (ಸ್ವ) 1160 (ಶೇ 0.37)

8) ಎಸ್‌.ಎನ್‌.ವಾಸುದೇವ ರಾವ್‌ (ಸ್ವ)   1179 (ಶೇ 0.26)

9) ಶಂಕರನಾರಾಯಣ ಭಟ್ ನೆಟ್ಟಾರ್‌ (ಸ್ವ)  580 (ಶೇ 0.13)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.