ಮಂಗಳವಾರ, ಮೇ 18, 2021
24 °C
ಮಂಜಿನ ಹನಿಗಳ ಊರಲ್ಲಿ ಈಗ ಅಣಬೆಗಳದೇ ಸಾಮ್ರಾಜ್ಯ

ಕರೆಯದೇ ಬರುವ ಮಳೆಗಾಲದ ಅತಿಥಿಗಳು

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ನಾಪೋಕ್ಲು:ಮಂಜಿನ ಊರಿಗೆ ಮೋಡದ ಕರುಣೆ

ಕಾಫಿಯ ಕಡಲಿಗೆ ಗಿರಿಗಳ ಪೋಷಣೆ;

ಹಸಿರು ಮುಡಿದು ಕಾದಿಹ ಭೂ-ರತಿ

ತೆರೆದಿದೆ ಮನೆ ಓ ಬಾ ಅತಿಥಿ...

-ಹೀಗೊಂದು ಸಾಲು ಗೊಣಗುತ್ತ ನಾಲ್ಕು ಹೆಜ್ಜೆ ನಡೆದರೆ ಸಾಕು; ಕೊಡಗಿನ ಸ್ವಪ್ನ ಸೌಂದರ್ಯ ನಿಮ್ಮನ್ನು ಬಾಚಿ ತಬ್ಬಿಕೊಳ್ಳುತ್ತದೆ. ಮಳೆಗಾಲ ಆರಂಭ ವಾದರಂತೂ ಕೊಡಗಿಗೆ ಕೊಡಗೇ ಸಾಟಿ. ಹಸಿರು ಸಮುದ್ರದಂತೆ ಹರಡಿಕೊಂಡ ಕಾಫಿ ತೋಟ, ದಟ್ಟ ಹಸಿರು ಮೈಮಾಟ, ಸುಮ್ಮನೆ ಕೈಚಾಚಿದರೆ ಆಕಾಶವೇ ನಿಲುಕುವಂಥ ಗಿರಿ-ಶಿಖರಗಳು, ನೊರೆಹಾಲಿನಂತೆ ಭೋರ್ಗರೆವ ಜಲಪಾತಗಳು... ಹೇಳುತ್ತ ಹೋದರೆ ಪದಗಳು ಮುಗಿದು ಹೋಗಬಹುದು. ಆದರೆ, ಕೊಡಗಿನ ವೈಶಿಷ್ಟ್ಯ ಶಬ್ದಗಳಿಗೆ ನಿಲುಕುವುದಿಲ್ಲ.ಬರೀ ಗಿರಿ- ಗವ್ವರಗಳಿಂದ ಮಾತ್ರವಲ್ಲ; ಚಿಕ್ಕಪುಟ್ಟ ಸಸ್ಯರಾಶಿಗಳಿಂದಲೂ ಕೊಡವರ ನಾಡು ವಿಶಿಷ್ಟವಾದುದು. ಇದರಲ್ಲಿ ಅಣಬೆಗಳ ಸೊಗಸು ವರ್ಣನಾತೀತ.ಹೌದು. ಅಣಬೆಗಳು ಕೊಡಗು ಜಿಲ್ಲೆಯ ವಿಶೇಷ ಅತಿಥಿಗಳು. ಪ್ರತಿವಷ ಮುಂಗಾರು ಹನಿಗಳು ಬೀಳುತ್ತಿದ್ದಂತೆಯೇ ನೂರಾರು ಪ್ರಭೇದದ ಅಣಬೆಗಳು ಎಲ್ಲೆಂದರಲ್ಲಿ ತಲೆಎತ್ತುತ್ತವೆ. ಬಣ್ಣಬಣ್ಣದಲ್ಲಿ ಅರಳುವ ಅಣಬೆಗಳನ್ನು ಪುಟಾಣಿಗಳು `ಕೊಡೆಗಳು' ಎಂದೇ ಸಂಭೋದಿಸಿ ಆಟವಾಡುತ್ತಾರೆ.ಕಾಫಿ ತೋಟಗಳಲ್ಲಿ ಅಣಬೆ ನರ್ತನ

ಈಗ ಕಾಫಿ ತೋಟಗಳಲ್ಲಿ ಮುಂಗಾರು ಮಳೆಯಿಂದ ನೆಲ ತೇವಗೊಂಡಿದ್ದು, ವಿವಿಧ ಅತಿಥಿ ಅಭ್ಯಾಗತರ ನರ್ತನವಾಗಿದೆ. ಮುಂಗಾರು ಮಳೆ ಆರಂಭವಾಗುವುದರೊಂದಿಗೆ ಪ್ರಕೃತಿಗೆ ವಿಶಿಷ್ಟ ಸೌಂದರ್ಯವೂ ಮೇಳೈಸುತ್ತದೆ. ಕಾಫಿಯ ತೋಟಗಳಲ್ಲಿ ಮಳೆಗಾಲದಲ್ಲಿ ಅರಳುವ ನಾನಾ ನಮೂನೆಯ ಈ ಅಣಬೆಗಳು ಪ್ರಕೃತಿಯ ಅತಿಥಿಗಳು.ಮಳೆಗಾಲ ಆರಂಭವಾಗುವ ಮುನ್ನ ತೇವದ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಮತ್ತಷ್ಟು ಚಿತ್ರ-ವಿಚಿತ್ರ ಅಣಬೆಗಳು ಕಾಣಸಿಗುತ್ತವೆ.ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸತೊಡಗುತ್ತವೆ. ಕಾಡುಗಳಲ್ಲಿ ಕಾಣಸಿಗುವ ಅಣಬೆಗಳ ಚಿತ್ತಾರ ಲೋಕ ಕಣ್ಮನ ಸೆಳೆಯುವಂಥದ್ದು. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ, ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಳು ಕಾಣಸಿಗುತ್ತವೆ. ಕೆಲವು ತರಕಾರಿಯಾಗಿ ಬಳಕೆಯಾದರೆ ಮತ್ತೆ ಕೆಲವು ನೋಟಕ್ಕಷ್ಟೇ ಚೆನ್ನ.ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ. ಹಾಗೆಂದು ಎಲ್ಲ ತರದ ಅಣಬೆಗಳನ್ನು ತಿನ್ನಲಾಗುವುದಿಲ್ಲ.ಅಂದ-ಚೆಂದಕೆ ಅಣಬೆ ವಯ್ಯಾರ

ಬಹುತೇಕ ಅಣಬೆಗಳು ನೋಡಲಷ್ಟೇ ಸುಂದರ. ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆಯ ಆಕಾರ.ಗಾತ್ರ ಅಣಬೆಳು ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸೆಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ.ಅಣಬೆ ಹುಟ್ಟು- ಸಾವಿನ ಸುತ್ತ

ಇವು ಶಿಲೀಂದ್ರ ಸಸ್ಯಗಳು. ಆದರೆ ಕೊಂಬೆ, ರೆಂಬೆ. ಬೇರು ಎಲೆಗಳಿಂದ ವಂಚಿತವಾಗಿದೆ. ಪತ್ರ ಹರಿತ್ತಿಲ್ಲದ ಕಾರಣ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾರವು. ಒಂದರ್ಥದಲ್ಲಿ ಇವು ಜೀವಿ-ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ಕೊಂಡಿಗಳು ಅಣಬೆಯನ್ನು ಕಿತ್ತಾಗ ನೆಲದೊಳಗೆ ಹುದುಗಿ ಬೇರಿನಂತೆ ಕಾಣುವ ಬಿಳಿ ದಂಟುಗಳೇ ಈ ಸಸ್ಯದ ಮುಖ್ಯ ಅಂಗ. ಇದಕ್ಕೆ `ಹೈಫ್' ಎನ್ನುತ್ತಾರೆ. ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗ ಸಸ್ಯದ ಫಲಕಾಯಗಳು. ಕೊಡೆಯಾಕಾರದ ತಳಭಾಗದಲ್ಲಿ ಇರುವ  ಹಾಳೆ ಪದರಗಳಂಥ ರಚನೆಗಳೇ ಕಿವಿರುಗಳು. ಕೊಡೆಯ ಆಕಾರಗಳಲ್ಲಿ ವೈವಿಧ್ಯಗಳಿದ್ದು ಇವುಗಳ ಆಧಾರದಲ್ಲಿ ಅಣಬೆಗಳನ್ನು ವರ್ಗೀಕರಿಸಲಾಗಿದೆ.ಮಳೆಗಾಲದಲ್ಲಿ ಅಣಬೆಗಳು ಬೆಡಗು ಬಿನ್ನಾಣಕ್ಕೆ ಸಾಕ್ಷಿಯಾಗುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.