ಬುಧವಾರ, ಜನವರಿ 29, 2020
29 °C
ಕ್ರಿಕೆಟ್‌: ಹುಬ್ಬಳ್ಳಿಯಲ್ಲಿ ಇಂದಿನಿಂದ ಪಂಜಾಬ್‌ ವಿರುದ್ಧ ರಣಜಿ ಪಂದ್ಯ

ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ಕನಸು

ವಿಕ್ರಂ ಕಾಂತಿಕೆರೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮ್ಯಾಡಿ’ಯ ಪ್ರಭಾವಕ್ಕೆ ಸಿಲುಕಿರುವ ನಗರದಲ್ಲಿ ಈಗ ದಿನವಿಡೀ ಮೈ ಕೊರೆಯುವ ಚಳಿ. ನೃಪತುಂಗ ಬೆಟ್ಟದ ತಪ್ಪಲಿನಲ್ಲಂತೂ ಥಂಡಿಯ ಪ್ರಮಾಣ ಹೆಚ್ಚು. ಇಂಥ ವಾತಾವರಣದಲ್ಲೂ ಶುಕ್ರವಾರ ಬೆಳಿಗ್ಗೆ 8.30ರ ವೇಳೆಗೇ ನೆಟ್ಸ್‌ಗೆ ಬಂದ ಕರ್ನಾಟಕ ತಂಡದ ಆಟಗಾರರು ಅಭ್ಯಾಸ ಮಾಡಿದರು. ನಾಲ್ಕು ತಾಸು ಬೆವರು ಸುರಿಸಿದ ಅವರು ಹೋಟೆಲ್‌ ಕೊಠಡಿ ಸೇರಿಕೊಂಡಿದ್ದಾರೆ. ಶನಿವಾರ ದಿಂದ ಇಲ್ಲಿ ನಡೆಯುವ ಪಂಜಾಬ್‌ ವಿರುದ್ಧದ ಎ ಗುಂಪಿನ ರಣಜಿ ಪಂದ್ಯದಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುವ ಆತ್ಮವಿಶ್ವಾಸ ಅವರಲ್ಲಿ ಎದ್ದು ಕಾಣುತಿತ್ತು.ಹನಿಮೂನ್‌ ಮುಗಿಸಿ ಬಂದಿರುವ ವಿನಯ ಕುಮಾರ್ ಅವರ ಜೊತೆ ಎಲ್ಲ ಆಟಗಾರರೂ ಪಂದ್ಯಕ್ಕೆ ಫಿಟ್‌ ಆಗಿದ್ದು ನಾಯಕನಿಗೆ ಜಯದ ಉಡುಗೊರೆ ನೀಡುವುದರೊಂದಿಗೆ ಕ್ವಾರ್ಟರ್‌ ಫೈನಲ್‌ನ ಅಪಾಯದ ಹಾದಿಯನ್ನು ಈಗಲೇ ಸಡಿಲಗೊಳಿಸುವ ಇರಾದೆ ಅವರದು.

ಕರ್ನಾಟಕ ತಂಡಕ್ಕಿಂತ ಒಂದು ದಿನ ಮೊದಲೇ ನಗರಕ್ಕೆ ಬಂದು ಎರಡು ದಿನಗಳ ಅಭ್ಯಾಸ ನಡೆಸಿರುವ ಮನ್‌ದೀಪ್‌ ಸಿಂಗ್‌ ನೇತೃತ್ವದ ಪಂಜಾಬ್‌ ತಂಡ ಕೂಡ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು ಹಸಿರು ಎದ್ದು ಕಾಣುವ ಪಿಚ್‌  ಅವರ ಮಧ್ಯಮ ವೇಗಿಗಳಲ್ಲಿ ಆಸೆ ಚಿಗುರುವಂತೆ ಮಾಡಿದೆ. ಈ ಋತುವಿನ ಮೂರನೇ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲ್‌ ಹಾದಿಯನ್ನು ಸುಗಮಗೊಳಿಸುವುದು ‘ಮ್ಯಾಂಡಿ’ ಬಳಗದ ಅಭಿಲಾಷೆ.ಇದೆಲ್ಲದರ ಮಧ್ಯೆ ಎರಡು ತಿಂಗಳ ಒಳಗೆ ಎರಡನೇ ದೊಡ್ಡ ಪಂದ್ಯವೊಂದಕ್ಕೆ ಆತಿಥ್ಯ ವಹಿಸಲು ರಾಜನಗರದ ಕೆಎಸ್‌ಸಿಎ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಸಮಬಲದ ಹೋರಾಟದ ನಿರೀಕ್ಷೆ ಮೂಡಿಸಿರುವ ಪಂದ್ಯ ದ ಸವಿ ಅನುಭವಿಸಲು ಅವಳಿ ನಗರದ ಕ್ರಿಕೆಟ್ ಪ್ರಿಯರು ಕೂಡ ಸಿದ್ಧರಾಗಿದ್ದಾರೆ.ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಆಡಿದ ಎರಡು ಪಂದ್ಯಗಳು ಸೇರಿದಂತೆ ಮೊದಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡದವರು ನಂತರ ಒಡಿಶಾ ಮತ್ತು ಹರಿಯಾಣ ತಂಡಗಳನ್ನು ಅವರ ನೆಲದಲ್ಲೇ ಮಣಿಸಿ ‘ವಾಣಿಜ್ಯ ರಾಜಧಾನಿ’ಗೆ ಬಂದಿದ್ದಾರೆ. ಎ ಗುಂಪಿನಲ್ಲಿ ತಂಡ ಈಗ ಎರಡನೇ ಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಪ್ರಬಲ ಮುಂಬೈ ಮತ್ತು ದೆಹಲಿ ತಂಡಗಳನ್ನು ಎದುರಿಸಬೇಕಾಗಿರುವುದರಿಂದ ಈ ಪಂದ್ಯದಲ್ಲೇ ಪಾಯಿಂಟ್‌ ಪಟ್ಟಿಯ ಸೂಚ್ಯಂಕವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಸುವ ಪ್ರಯತ್ನವನ್ನು ತಂಡ ಮಾಡಲಿದೆ.ಉತ್ತಮ ಆರಂಭಕಾರರು, ಬಲಿಷ್ಠ ಮಧ್ಯಮ ಕ್ರಮಾಂಕ ಹಾಗೂ ಸ್ವತಃ ನಾಯಕನೇ ಬೆನ್ನೆಲುಬಾಗಿರುವ ಪ್ರತಿರೋಧವೊಡ್ಡಬಲ್ಲ ಬಾಲಂಗೋಚಿಗಳು ರಾಜ್ಯ ತಂಡದ ಬ್ಯಾಟಿಂಗ್‌ ಭರವಸೆ. ಬೌಲಿಂಗ್ ವಿಭಾಗಕ್ಕೆ ವಿನಯ್‌ ಕುಮಾರ್‌ ಅವರದ್ದೇ ನೇತೃತ್ವ. ಅಭಿಮನ್ಯು ಮಿಥುನ್‌, ಎಚ್‌.ಎಸ್‌.ಶರತ್‌ ಮತ್ತು ರೋನಿತ್‌ ಮೋರೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಿಥುನ್‌ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಆರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಶರತ್‌ ಮತ್ತು ಮೋರೆ ಕ್ರಮವಾಗಿ ಒಡಿಶಾ ಮತ್ತು ಹರಿಯಾಣ ವಿರುದ್ಧ ತಲಾ ಐದು ವಿಕೆಟ್‌ ಉರುಳಿಸಿದ್ದರು. ಎಡಗೈ ಸ್ಪಿನ್ನರ್‌ ಕೆ.ಪಿ.ಅಪ್ಪಣ್ಣ ಆಡಿದ ಮೂರು ಪಂದ್ಯಗಳಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದ್ದಾರೆ. ಅಬ್ರಾರ್‌ ಖಾಜಿ ಕೂಡ ‘ಎಡಗೈ’ ಚಳಕದಲ್ಲಿ ವಿಫಲರಾಗಿಲ್ಲ.ವೇಗಿಗಳ ಬಳಗ: ಮೂವರು ಅಂತರರಾಷ್ಟ್ರೀಯ ಆಟಗಾರರು ಮತ್ತು ಭಾರತ ‘ಎ’, ಐಪಿಎಲ್‌ ಪಂದ್ಯಗಳಲ್ಲಿ ಆಡಿದ ಅನುಭವ ಇರುವ ಆಟಗಾರರನ್ನು ಒಳಗೊಂಡ ಪಂಜಾಬ್‌ ತಂಡ ವೇಗಿಗಳ ದೊಡ್ಡ ಬಳಗವನ್ನು ಹೊಂದಿದೆ. ಆಲ್‌ರೌಂಡರ್‌ ಆಗಿರುವ ನಾಯಕ ಮನ್‌ದೀಪ್‌ ಸಿಂಗ್‌ ಜೊತೆ ಮನ್‌ಪ್ರೀತ್‌ ಗೋನಿ, ವಿ.ಆರ್‌.ವಿ. ಸಿಂಗ್‌, ಯುವ ವೇಗಿ ಸಂದೀಪ್‌ ಶರ್ಮಾ ಮುಂತಾದವರು ವೇಗದ ದಾಳಿಯ ಚುಕ್ಕಾಣಿ ಹಿಡಿದಿದ್ದಾರೆ. ವೇಗಿಗಳಿಗೆ ನೆರವು ನೀಡಬಲ್ಲ ಪಿಚ್‌ ನಲ್ಲಿ ಇವರ ವಿರುದ್ಧ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಯಾವ ತಂತ್ರ ದೊಂದಿಗೆ ಬ್ಯಾಟ್‌ ಬೀಸುತ್ತಾರೆ ಎಂಬುದು ಕುತೂಹಲದ ವಿಷಯ.ನಾಯಕ ಮನ್‌ದೀಪ್‌ ಸಿಂಗ್‌ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ತರುವಾರ್‌ ಕೊಹ್ಲಿ ಈ ಋತುವಿನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು ಸಹೋದರರಾದ ಉದಯ್‌ ಕೌಲ್‌ ಮತ್ತು ಸಿದ್ದಾರ್ಥ ಕೌಲ್‌ ಅವರನ್ನು ಒಳಗೊಂಡ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ.ಪಂಜಾಬ್‌ನ ಸ್ಪಿನ್‌ ವಿಭಾಗವೂ ಪ್ರಭಾವಶಾಲಿಯಾಗಿದೆ. ವಿಶಿಷ್ಟ ಶೈಲಿಯ ಲೆಗ್‌ಸ್ಪಿನ್ನರ್‌ ರಾಹುಲ್‌ ಶರ್ಮಾಗೆ ಆಫ್‌ಬ್ರೇಕ್‌ ಬೌಲರ್‌ ಗಳಾದ ಗುರುಕೀರತ್‌ ಮಾನ್‌ ಹಾಗೂ ರವಿ ಇಂದರ್‌ ಸಿಂಗ್‌ ಜೊತೆ ನೀಡಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ಗಳನ್ನೇ ಪ್ರಮುಖವಾಗಿ ಆಶ್ರಯಿಸಿರುವ ಕರ್ನಾಟಕ ತಂಡಕ್ಕೆ ಸಂಕಟ ಒಡ್ಡಲು ರಾಜ್‌ವಿಂದರ್‌ ಸಿಂಗ್‌ ರೂಪದಲ್ಲಿ ಎಡಗೈ ಸ್ಪಿನ್ನರನ್ನು ಇಳಿಸುವ ಸಾಧ್ಯತೆಯೂ ಇದೆ. ಕರುಣ್‌ ನಾಯರ್‌ಗೆ ಅವಕಾಶ?

ಕರ್ನಾಟಕದ ಪರ ಚೊಚ್ಚಲ ಪಂದ್ಯ ಆಡಲು ಕಾಯುತ್ತಿರುವ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಮತ್ತು ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಪೈಕಿ ಒಬ್ಬರಿಗೆ ಹುಬ್ಬಳ್ಳಿ ಅಂಗಣದಲ್ಲಿ ಅವಕಾಶ ಒದಗುವುದು ಖಚಿತವಾಗಿದೆ. ಕಳೆದ ಬಾರಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಈ ಅಂಗಳದಲ್ಲಿ ಶತಕ ಬಾರಿಸಿದ್ದ ಕುನಾಲ್‌ ಕಪೂರ್‌ ಈ ಬಾರಿ ತಂಡದಲ್ಲಿಲ್ಲ. ಅವರ ಬದಲಿಗೆ ನಾಯರ್‌ ಕಣಕ್ಕಿಳಿಯುವ ಸೂಚನೆಯನ್ನು ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ವಿನಯ್‌ ಕುಮಾರ್‌ ನೀಡಿದ್ದಾರೆ. ಬೆಳಗಾವಿಯ ಪ್ರತಿಭೆ ರೋನಿತ್‌ ಮೋರೆ ಅಥವಾ ಎಚ್‌.ಎಸ್‌.ಶರತ್‌ ಪೈಕಿ ಒಬ್ಬರು ವಿನಯ್‌ ಕುಮಾರ್‌ಗೆ ಜಾಗ ಮಾಡಿಕೊಡಬೇಕಾಗಬಹುದು.ತಂಡಗಳು ಇಂತಿವೆ

ಕರ್ನಾಟಕ: ಆರ್‌.ವಿನಯ್‌ ಕುಮಾರ್‌ (ನಾಯಕ), ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರವಾಲ್‌,  ಸಿ.ಎಂ. ಗೌತಮ್‌ (ವಿಕೆಟ್‌ ಕೀಪರ್‌), ಗಣೇಶ್‌ ಕೆ.ಸತೀಶ್‌, ಮನೀಶ್‌ ಕೆ.ಪಾಂಡೆ, ಸ್ಟುವರ್ಟ್‌ ಬಿನ್ನಿ, ಕರುಣ್‌ ನಾಯರ್‌, ಅಬ್ರಾರ್‌ ಖಾಜಿ, ಎ.ಮಿಥುನ್‌, ಆರ್‌.ಸಮರ್ಥ್‌, ಎಚ್‌.ಎಸ್‌.ಶರತ್‌, ಕೆ.ಪಿ.ಅಪ್ಪಣ್ಣ, ರೋನಿತ್‌ ಮೋರೆ, ಶ್ರೇಯಸ್‌ ಗೋಪಾಲ್‌ಪಂಜಾಬ್‌: ಮನ್‌ದೀಪ್‌ ಸಿಂಗ್‌ (ನಾಯಕ), ಉದಯ್‌ ಕೌಲ್‌ (ವಿಕೆಟ್‌ ಕೀಪರ್‌), ಗೀತಾಂಶು ಖೇರ, ಗುರುಕೀರತ್‌ ಸಿಂಗ್‌, ಜೆ.ಎಸ್‌.ಕೆ.ಚೌಹಾಣ್‌, ಮನನ್‌ ಎಸ್‌.ಒಹ್ರಾ, ಮನ್‌ ಪ್ರೀತ್‌ ಗೋನಿ, ರಾಹುಲ್‌ ಪಿ.ಶರ್ಮಾ, ರವಿ ಇಂದರ್‌ ಸಿಂಗ್‌, ರಾಜ್‌ವಿಂದರ್‌ ಸಿಂಗ್‌, ಸಂದೀಪ್‌ ಶರ್ಮಾ, ಸಿದ್ದಾರ್ಥ್‌ ಕೌಲ್‌, ತರುವಾರ್‌ ಕೊಹ್ಲಿ, ವಿ.ಆರ್‌.ವಿ ಸಿಂಗ್‌, ವಿನಯ್‌ ಚೌಧರಿ.

ಪಂದ್ಯದ ಆರಂಭ: ಬೆಳಿಗ್ಗೆ 9.30.

ಪ್ರತಿಕ್ರಿಯಿಸಿ (+)