ಬುಧವಾರ, ಸೆಪ್ಟೆಂಬರ್ 23, 2020
26 °C

ಕಲ್ಲು ಹೃದಯಗಳಿಗೆಕರಗಿ ಹೋದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲು ಹೃದಯಗಳಿಗೆಕರಗಿ ಹೋದವರು

1999ರ ಏಪ್ರಿಲ್ 20. ಯುವಕನೊಬ್ಬನ ಪೈಶಾಚಿಕ ಕೃತ್ಯಕ್ಕೆ ಬೆಂಗಳೂರಿನ ಸ್ಫುರದ್ರೂಪಿ ಯುವತಿ ಹಸೀನಾ ಬಾಳು ಜರ್ಜರಿತವಾಯಿತು. ಕಣ್ಣು ಕಳೆದುಕೊಂಡಿದ್ದು ಮಾತ್ರವಲ್ಲದೇ, ಮುಖವೂ ಕುರೂಪಗೊಂಡಿತು. ಕೋಟಿ ರೂಪಾಯಿ ಖರ್ಚು ಮಾಡಿದರೂ ಆಕೆ ಈ ಜಗತ್ತನ್ನು ಪುನಃ ಕಾಣದಾದರು. ಯಾವ ಶಸ್ತ್ರಚಿಕಿತ್ಸೆಗೂ, ಅವರ ದೃಷ್ಟಿಯನ್ನು ವಾಪಸು ದೊರಕಿಸಿಕೊಡಲು ಆಗಲಿಲ್ಲ.`ಹೆಣ್ಣು ಮಗಳೊಬ್ಬಳ ಬಾಳನ್ನು ಇಂತಹ ಹೀನಾಯ ಸ್ಥಿತಿಗೆ ತಂದ ಅಪರಾಧಿಗೆ `ಕಣ್ಣಿಗೆ ಕಣ್ಣು~ ಎಂದು ಪುರಾತನ ಕಾಲದಲ್ಲಿ ನೀಡುತ್ತಿದ್ದ ಶಿಕ್ಷೆಯೇ ಯೋಗ್ಯವಾದುದು. ಆದರೆ ಅಂತಹ ಶಿಕ್ಷೆ ನಮ್ಮ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿಲ್ಲ. ಈ ಕಾರಣದಿಂದ ಜೀವಾವಧಿ ಶಿಕ್ಷೆಯೇ ಅಪರಾಧಿಗೆ ನೀಡುವ ಕನಿಷ್ಠ ಶಿಕ್ಷೆ~ ಎಂದಿದ್ದ ಹೈಕೋರ್ಟ್, ಅಪರಾಧಿ ಜೋಸೆಫ್ ರಾಡ್ರಗೀಸ್‌ಗೆ 2006ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಮೊತ್ತ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಜೀವಾವಧಿ ಶಿಕ್ಷೆಗೆ ಗುರಿಯಾದ ಘಟನೆ ಇದು. ಹಸೀನಾ ಅವರು ಪ್ರೀತಿ ನಿರಾಕರಿಸಿದ್ದಕ್ಕೆ ರಾಡ್ರಗೀಸ್ ಈ ಕುಕೃತ್ಯ ಎಸಗಿದ್ದ.ಬೆಂಗಳೂರಿನ ಜಯನಗರದ ನಿವಾಸಿ ರಾಜೇಶ್ ಅಲಿಯಾಸ್ ರಾಜ ಎಂಬಾತನಿಗೆ 2011ರ ಫೆಬ್ರುವರಿ 25ರಂದು ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ವಿವಾಹವಾಗಲು ನಿರಾಕರಿಸಿದ್ದ 16ರ ಬಾಲಕಿ ಶ್ರುತಿ ಎಂಬಾಕೆಯ ಮೇಲೆ 2002ರ ಆಗಸ್ಟ್ 12ರಂದು ಆ್ಯಸಿಡ್ ಎರಚಿ ಆಕೆಯನ್ನು ಕುರೂಪಗೊಳಿಸಿದ ಪ್ರಕರಣ ಇದು.ಈತನಿಗೆ ಸೆಷನ್ಸ್ ಕೋರ್ಟ್ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆ ಹೆಚ್ಚಳಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ಜೊತೆಗೆ ಶ್ರುತಿ ಅವರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ಆದೇಶಿಸಿತು.ತಮ್ಮ ಸಹೋದರಿಯನ್ನು ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ, ಕೆಜಿಎಫ್ ನಿವಾಸಿ ಸುದೇಶ್ ಕುಮಾರ್ ಎನ್ನುವವರ ಮೇಲೆ ಆ್ಯಸಿಡ್ ಎರಚಿ, ವಿಪರೀತ ಘಾಸಿಗೊಳಿಸಿದ್ದ ಅಲ್ಲಿಯವರೇ ಆದ ಅಮೀನ್ ಉಲ್ಲಾ ಹಾಗೂ ಮಯುದ್ದೀನ್ ಅಲಿಯಾಸ್ ಮಯನು ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಳೆದ ಮಾರ್ಚ್ 19ರಂದು ಹೈಕೋರ್ಟ್ ಆದೇಶಿಸಿದೆ.2002ರ ಮೇ 1ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಕೋಲಾರದ ಸೆಷನ್ಸ್ ಕೋರ್ಟ್ ಇಬ್ಬರನ್ನೂ ಖುಲಾಸೆಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ  ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ಪರ ವಕೀಲ ಎನ್.ಎಸ್.ಸಂಪಂಗಿ ರಾಮಯ್ಯ ಅವರು ಕಲೆ ಹಾಕಿದ ದಾಖಲೆ, ಅವರ ವಾದ ಎಲ್ಲದರ ಫಲವಾಗಿ ತಪ್ಪಿತಸ್ಥರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿತು.ಇದರ ಬೆನ್ನಲ್ಲೇ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಪೈಕಿ ಕೆಲವರು, ಅವರ ಕುಟುಂಬದವರು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಕೋರಿ ಇನ್ನೂ ಕಾನೂನು ಸಮರ ಮುಂದುವರಿಸಿದ್ದಾರೆ. ಮೈಸೂರಿನ ಹೀನಾ ಫಾತಿಮಾ, ಧನದಾಹಿ ಪತಿಯ ಕ್ರೂರತನಕ್ಕೆ ಬಲಿಯಾಗಿ ಕೊನೆಯುಸಿರೆಳೆದರು.ಪ್ರೀತಿ ನಿರಾಕರಿಸಿದರೆಂಬ ಕಾರಣಕ್ಕೆ, ಗಂಡಸರ ವಿಕೃತ ಮನಸ್ಸುಗಳಿಗೆ ಬಲಿಯಾಗಿರುವ ಬೆಂಗಳೂರಿನ ನೂರ್‌ಜಹಾನ್, ಮೈಸೂರಿನ ಡಾ. ಮಹಾಲಕ್ಷ್ಮಿ ಅವರಂತಹ ಅನೇಕ ಮಹಿಳೆಯರು ಅಸಾಧ್ಯವಾದ ನೋವಿನಿಂದ ಬೆಂದು ಹೋಗಿ ಜೀವನ ನಡೆಸುತ್ತಿದ್ದಾರೆ. ಕೆಲವು ತಪ್ಪಿತಸ್ಥರಿಗೆ ಕನಿಷ್ಠ ಶಿಕ್ಷೆಯಾದರೆ, ಇನ್ನು ಕೆಲವು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ.2002ರಲ್ಲಿ ಬಾಂಗ್ಲಾ ದೇಶದಲ್ಲಿ 485 ಮಹಿಳೆಯರು ಆ್ಯಸಿಡ್ ದಾಳಿಗೊಳಗಾದರು. ಇದರಿಂದ ಸಿಡಿದೆದ್ದ ಅಲ್ಲಿಯ ಮಹಿಳಾ ಸಂಘಟನೆಗಳು ತೀವ್ರ ಸ್ವರೂಪದ ಚಳವಳಿ ನಡೆಸಿ ಜೀವಾವಧಿ ಶಿಕ್ಷೆಯಂತಹ ಹೊಸ ಕಠಿಣ ಕಾನೂನಿನ ಜಾರಿಗೆ ನಾಂದಿ ಹಾಡಿದವು. ಇದೇ ರೀತಿಯ ಕಾನೂನನ್ನು ಭಾರತದಲ್ಲೂ ಜಾರಿಗೆ ತಂದು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗಬೇಕು ಎಂಬ ಕೂಗು ನಮ್ಮಲ್ಲೂ ಕೇಳಿ ಬಂದಿತ್ತು.ಅದರ ಫಲವಾಗಿ ಕರಡು ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದೆ. `ಆ್ಯಸಿಡ್ ದಾಳಿಯನ್ನು ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಪ್ರತ್ಯೇಕ ಅಪರಾಧ ಎಂದು ಪರಿಗಣಿಸಬೇಕು~ ಎಂಬುದೇ ಈ ವಿಧೇಯಕ.ಆ್ಯಸಿಡ್ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 320 (ತೀವ್ರ ಸ್ವರೂಪದ ನೋವು) 325 (ತೀವ್ರ ಸ್ವರೂಪದ ನೋವಿಗೆ ಶಿಕ್ಷೆ) 307ರ (ಕೊಲೆ ಪ್ರಯತ್ನ) ಅಡಿ ಪ್ರಕರಣ ದಾಖಲಾಗುತ್ತದೆ. ಆದರೆ ಈ ಕಲಮುಗಳ ಅಡಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸುವ ಅವಕಾಶ ಕಾನೂನಿನ ಅಡಿ ಇದೆ.ಆದರೆ, ಇಲ್ಲಿಯವರೆಗೆ ಬಹುತೇಕ ಪ್ರಕರಣಗಳಲ್ಲಿ ಇಂತಹ ಅಪರಾಧಿಗಳಿಗೆ ಕೇವಲ 2-5 ವರ್ಷಗಳ ಶಿಕ್ಷೆ ಆಗುತ್ತಿತ್ತು. ಈಗ ಕನಿಷ್ಠ 10 ವರ್ಷ ಶಿಕ್ಷೆ ನಿಗದಿ ಮಾಡಿರುವುದರಿಂದ ಇಂತಹ ಅಪರಾಧ ಎಸಗುವ ಮುನ್ನ ಅಪರಾಧಿಗಳು ಇನ್ನೊಮ್ಮೆ ಯೋಚನೆ ಮಾಡುವಂತಾಗಿದೆ.ಸುಲಭದಲ್ಲಿ ದೊರಕುವ ಆ್ಯಸಿಡ್


ಔಷಧ ಅಂಗಡಿಗಳಲ್ಲಿ, ಕ್ರಿಮಿನಾಶಕ ಮಾರಾಟ ಮಾಡುವ ಮಳಿಗೆಗಳಲ್ಲಿ ಆ್ಯಸಿಡ್ ಸುಲಭದಲ್ಲಿ ದೊರಕುವ ಕಾರಣ, ಮಹಿಳೆಯರ ವಿರುದ್ಧ ಇದನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಆ್ಯಸಿಡ್ ದಾಳಿಗೊಳಗಾದ ಮಹಿಳೆಯರ ಪರವಾಗಿ ಹೋರಾಡುತ್ತಿರುವ ಸಂಘಟನೆಗಳ ಆರೋಪ.

 

ತಡೆಗಟ್ಟುವಿಕೆಗಿಂತ (ದಾಳಿ ನಡೆದ ನಂತರ ತೆಗೆದುಕೊಳ್ಳುವ ಕ್ರಮಕ್ಕಿಂತ) ನಿರ್ಮೂಲನವೇ (ಆ್ಯಸಿಡ್ ಮಾರಾಟ ನಿಷೇಧ) ಒಳ್ಳೆಯದು ಎನ್ನುವುದು `ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗಾಗಿ ಚಳವಳಿ ಹಾಗೂ ಹೋರಾಟ~ (ಸಿಎಸ್‌ಎಎಡಬ್ಲ್ಯು) ಸಮಿತಿಯ ಅಭಿಮತ.`ಕಾನ್ಸಂಟ್ರೇಟೆಡ್ ಹೈಡ್ರೋಕ್ಲೋರಿಕ್ ಆ್ಯಸಿಡ್~ ಸುಲಭವಾಗಿ ಎಲ್ಲೆಡೆ ದೊರಕುತ್ತಿದೆ. `ಅಪಾಯಕಾರಿ ರಾಸಾಯನಿಕ- 1989~ ನಿಯಮದ ಅಡಿ ಈ ಆ್ಯಸಿಡ್ ತಯಾರಿಕೆ, ಮಾರಾಟ, ಸಂಗ್ರಹ ಹಾಗೂ ರಫ್ತಿಗೆ ನಿಷೇಧ ಹೇರಲಾಗಿದೆ. ಇದರ ಹೊರತಾಗಿಯೂ ಅದು ಮಾರಾಟ ಆಗುತ್ತಿದೆ.ಸ್ಫೋಟಕ ವಸ್ತುಗಳ ತಪಾಸಣೆ ನಡೆಯುವಂತೆ ಆ್ಯಸಿಡ್ ಮಾರಾಟ, ದಾಸ್ತಾನಿನ ಬಗ್ಗೆ ಯಾವುದೇ ರೀತಿಯ ತಪಾಸಣೆ ನಡೆಯುತ್ತಿಲ್ಲ. ಇದರ ತಪಾಸಣೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ~ ಎಂದು ಹೇಳುತ್ತಾರೆ ಸಮಿತಿಯ ವಕೀಲರಾಗಿರುವ ಶೀಲಾ ರಾಮನಾಥನ್.ನಿಷೇಧ ಸಾಧ್ಯವಿಲ್ಲ

~ಆ್ಯಸಿಡ್ ದೊರಕದೇ ಹೋದರೆ, ಇವುಗಳಿಂದ ದಾಳಿ ನಡೆಸುವವರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವುದು ಸತ್ಯ. ಆದರೆ ವಾಸ್ತವದಲ್ಲಿ ಇದು ಕಷ್ಟ~ ಎನ್ನುತ್ತಾರೆ ಕಾನೂನು ತಜ್ಞರು. ಇದರ ಮಾರಾಟಕ್ಕೆ ನಿಯಂತ್ರಣ ಹೇರಬಹುದೇ ವಿನಾ ಮಾರಾಟ ನಿಷೇಧ ಸಾಧ್ಯವಿಲ್ಲ~ ಎನ್ನುತ್ತಾರೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ.

`ಆ್ಯಸಿಡ್ ದುರ್ಬಳಕೆ ಆಗುತ್ತಿರುವುದು ನಿಜ.

 

ಆದರೆ ದಿನನಿತ್ಯದ ಉಪಯೋಗಕ್ಕೆ ಇದರ ಅಗತ್ಯ ಇದ್ದೇ ಇದೆ. ಕಂಪ್ಯೂಟರ್ ಸ್ವಚ್ಛಗೊಳಿಸಲು, ಬ್ಯಾಟರಿಗಳ ಬಳಕೆ, ತೋಟಗಳಲ್ಲಿ ಕೀಟಗಳ ಬಾಧೆ ತಪ್ಪಿಸಲು... ಹೀಗೆ ಆ್ಯಸಿಡ್ ಅಗತ್ಯ ಹೆಚ್ಚಾಗಿರುವುದರಿಂದ ಅದರ ಮಾರಾಟಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ~ ಎನ್ನುವುದು ಅವರ ಅಭಿಪ್ರಾಯ.`ಕತ್ತಿ, ಚಾಕುವಿನಿಂದ ಕೊಲೆ ನಡೆಯುತ್ತಿದೆ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಅಂದ ಮಾತ್ರಕ್ಕೆ ಅದರ ತಯಾರಿಕೆ ಹಾಗೂ ಮಾರಾಟಕ್ಕೆ ನಿರ್ಬಂಧ ಹೇರಿ ಎನ್ನಲು ಆದೀತೆ~ ಎನ್ನುವುದು ಅವರ ಪ್ರಶ್ನೆ.ಇದಕ್ಕೆ ದನಿಗೂಡಿಸುವ ಔಷಧ ನಿಯಂತ್ರಕ ಶ್ರೀಪತಿ ರಾವ್, `ವಿಷಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟ ಕಾಯ್ದೆ 1919 ಮೂಲಕ ಆ್ಯಸಿಡ್ ನಿಯಂತ್ರಣಕ್ಕೆ ತರುವ ಅಗತ್ಯ ಇದೆ. ಸಲ್‌ಫ್ಯೂರಿಕ್ ಆ್ಯಸಿಡ್ ಸೇರಿದಂತೆ ಇತರ ಆರು ಆ್ಯಸಿಡ್‌ಗಳನ್ನು ಪರವಾನಗಿ ಪಡೆದಿರುವ ಮಾರಾಟಗಾರರಿಗೆ ಮಾತ್ರ ಮಾರಲು ನೀಡಿದರೆ ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಬಹುದಾಗಿದೆ~ ಎಂದು ಅಭಿಪ್ರಾಯ ಪಡುತ್ತಾರೆ.~ಆ್ಯಸಿಡ್ ದಾಳಿ ನಡೆಸಿದವರಿಗೆ ಕೇವಲ ಶಿಕ್ಷೆಯಾದರೆ ಸಾಲದು, ಬದಲಿಗೆ ಅದನ್ನು ಪರವಾನಗಿ ರಹಿತವಾಗಿ ಮಾರಾಟ ಮಾಡುವವರಿಗೂ, ತಯಾರಕರಿಗೂ ಶಿಕ್ಷೆ ಆಗಬೇಕು. ಆಗ ಶಿಕ್ಷೆಯ ಭಯಕ್ಕೆ ಮಾರಾಟ ಮಾಡಲು ಅಂಜಿ ಹಿಂದೆ ಸರಿಯುತ್ತಾರೆ.ಅಷ್ಟೇ ಅಲ್ಲದೆ ಆ್ಯಸಿಡ್ ದಾಳಿಗೆ ಒಳಗಾದವರನ್ನು ಆಸ್ಪತ್ರೆಗಳಿಗೆ ಸೇರಿಸಿದಾಗ, ಕಿಂಚಿತ್ ವಿಳಂಬ ಮಾಡದೇ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತಹ ಕಾನೂನು ಆಗಬೇಕಾಗಿದೆ. ಎಷ್ಟೋ ಸಂದರ್ಭಗಳಲ್ಲಿ ದಾಖಲಾತಿ ವಿಳಂಬದಿಂದ ಮಹಿಳೆ ಸಾವನ್ನಪ್ಪುವ ಪ್ರಸಂಗ ನಡೆಯುತ್ತಿದೆ~ ಎನ್ನುವುದು ವಕೀಲೆ ಸುಮನಾ ಅವರ ಕಳಕಳಿ.

ನ್ಯಾಯಕ್ಕೂ ದೀರ್ಘ ಹೋರಾಟ

ವಾಸ್ತವದಲ್ಲಿ ಆ್ಯಸಿಡ್ ದಾಳಿ ಅಪರಾಧಿ ಶಿಕ್ಷೆಗೆ ಗುರಿಯಾಗುವಂತೆ ಮಾಡಲು ದಾಳಿಗೆ ಒಳಗಾದವರು ಅಥವಾ ಅವರ ಕುಟುಂಬ ವರ್ಗದವರು ಸುದೀರ್ಘ ಕಾನೂನು ಸಮರ ಸಾರಬೇಕಾಗಿದೆ ಎಂಬ ಅಂಶವನ್ನೂ ತಳ್ಳಿಹಾಕುವಂತಿಲ್ಲ.ಇಲ್ಲಿಯವರೆಗೆ ನಡೆದಿರುವ ಹಲವು ಘಟನೆಗಳೇ ಇದಕ್ಕೆ ಜ್ವಲಂತ ಸಾಕ್ಷಿ. ವರ್ಷಗಳೇ ಕಳೆದರೂ ವಿಚಾರಣೆ ಮುಗಿಯುವುದಿಲ್ಲ. ಸೆಷನ್ಸ್ ಕೋರ್ಟ್‌ನಲ್ಲಿ 5-6 ವರ್ಷ, ಅಲ್ಲಿಂದ ಅಪರಾಧಿಯೋ, ಸರ್ಕಾರವೋ ಹೈಕೋರ್ಟ್ ಮೆಟ್ಟಿಲೇರಿದರೆ ಅಲ್ಲಿ ಒಂದಿಷ್ಟು ವಿಳಂಬ, ಇನ್ನು ಇದು ಸುಪ್ರೀಂಕೋರ್ಟ್‌ಗೆ ಹೋದರೆ ಅಲ್ಲಿ ಇನ್ನೊಂದಿಷ್ಟು ಸಮಯ, ಹೀಗೆ ವಿಚಾರಣೆಯ ವಿಳಂಬ, ದಾಳಿಗೆ ಒಳಗಾದವರನ್ನು ಜರ್ಜರಿತರನ್ನಾಗಿ ಮಾಡುತ್ತಿದೆ.ಇದಕ್ಕೆ ಹಸೀನಾ ಪ್ರಕರಣವೇ ಬಹು ಮುಖ್ಯ ಉದಾಹರಣೆ.  ಸೆಷನ್ಸ್ ಕೋರ್ಟ್‌ನಲ್ಲಿ ಅವರ ಪ್ರಕರಣದ ವಿಚಾರಣೆ ಮುಗಿಯಲು ಐದು ವರ್ಷ ಬೇಕಾಯಿತು. ಅಲ್ಲಿಂದ ಅದು ಹೈಕೋರ್ಟ್ ಮೆಟ್ಟಿಲೇರಿ ಅಲ್ಲಿ ಕೆಲವು ಕಾಲ ವಿಚಾರಣೆ ನಡೆಯಿತು.ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಬಹಳ ವರ್ಷ ನಡೆದರೆ, ಸಾಕ್ಷಿಗಳೆಲ್ಲ ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸಿ ತಪ್ಪಿತಸ್ಥರು ಸುಲಭದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇವೆ.  ಹಸೀನಾ ಪ್ರಕರಣದಲ್ಲಿ ಸಾಕ್ಷಿ ಹೇಳಲು ಆರಂಭದಲ್ಲಿ ಮುಂದಾಗಿದ್ದ 90 ಮಂದಿಯ ಪೈಕಿ ಕೊನೆಗೆ ಉಳಿದವರು ಕೇವಲ 16 ಮಂದಿ.ಉಳಿದವರೆಲ್ಲ ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸಿದರು. ಇದು ಒಂದೆಡೆಯಾದರೆ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ದಾಳಿಗೆ ಒಳಗಾದವರ ಹಾಜರಾತಿ ಕೂಡ ಅಗತ್ಯ. ದಾಳಿಯಿಂದ ತತ್ತರಿಸಿರುವ ಆ ಜೀವ ಅಷ್ಟೊಂದು ಬಾರಿ ಕೋರ್ಟ್‌ಗೆ ಅಲೆಯುವುದೆಂದರೆ ಸುಲಭದ ಮಾತೇ?ನಗರ ಪ್ರದೇಶಗಳಲ್ಲಾದರೂ ಪರವಾಗಿಲ್ಲ. ಕೋರ್ಟ್‌ಗಳು ನಗರದ ಒಳಗೇ ಇರುತ್ತವೆ. ಗ್ರಾಮಾಂತರ ಪ್ರದೇಶಗಳ ಯುವತಿಯರ ಗತಿಯೇನು? ಜಿಲ್ಲಾ ಕೇಂದ್ರದಲ್ಲಿರುವ ಕೋರ್ಟ್‌ಗೆ ಅಲೆದೂ ಅಲೆದೂ ಅವರು ಜೀವ ಸವೆಸಬೇಕು.ಎಲ್ಲ ಆ್ಯಸಿಡ್ ಪ್ರಕರಣಗಳ ವಿಚಾರಣೆಗಳೂ ತ್ವರಿತ ನ್ಯಾಯಾಲಯದಲ್ಲೇ (ಸೆಷನ್ಸ್) ನಡೆಯಬೇಕು ಎಂದು ನಿಯಮ ಹೊರಡಿಸಿರುವುದರಿಂದ, ಇಂತಹ ಪ್ರಕರಣಗಳ ತ್ವರಿತ ನಿರ್ಣಯ ಕಷ್ಟವಾಗಿದೆ. ತ್ವರಿತ ನ್ಯಾಯಾಲಯಗಳಿಗೆ ಇನ್ನೂ ಅನೇಕ ಪ್ರಕರಣಗಳ ವಿಚಾರಣೆ ನಡೆಸಬೇಕಾದ ಅನಿವಾರ್ಯ ಇರುವ ಕಾರಣ, ಅವುಗಳ ಜೊತೆಗೆ ಈ ಪ್ರಕರಣಗಳನ್ನೂ ಇತ್ಯರ್ಥಗೊಳಿಸುವುದಕ್ಕೆ ವಿಳಂಬ ಆಗುತ್ತಿದೆ ಎನ್ನುವುದು ಕಾನೂನು ತಜ್ಞರ ವಿಶ್ಲೇಷಣೆ.

ಸುಲಭವಾಗಿ ಸಿಗುವ ಜಾಮೀನು

ಆ್ಯಸಿಡ್ ದಾಳಿಗೆ ಒಳಗಾದ ಸಪ್ನಾ, ಮಹಾಲಕ್ಷ್ಮಿ, ಗೀತಾ ಅವರೇ ಕಳೆದ ವರ್ಷ ನಡೆದ ಸಭೆಯೊಂದರಲ್ಲಿ ~ಆ್ಯಸಿಡ್ ದಾಳಿ ನಡೆಸುವ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತದೆ. ಇದರಿಂದ ಅವರು ಜಾಮೀನಿನ ಮೇಲೆ ಹೊರಕ್ಕೆ ಬಂದು ದೂರು ನೀಡಿದ ಯುವತಿ ಹಾಗೂ ಆಕೆಯ ಮನೆಯವರಿಗೆ ಬೆದರಿಕೆ ಒಡ್ಡುತ್ತಾರೆ.ದೂರನ್ನು ಹಿಂದಕ್ಕೆ ಪಡೆಯಲು ಸರ್ವ ರೀತಿಯ ಪ್ರಯತ್ನ ನಡೆಸುತ್ತಾರೆ. ಇದರಿಂದ ಆಕೆಯ ಮನೆಯವರ ಬದುಕೇ ದುಸ್ತರವಾಗುತ್ತದೆ. ವೈದ್ಯಕೀಯ ಚಿಕಿತ್ಸೆ ಪಡೆಯಲು ಸಹ ಹೊರಗೆ ಹೋಗಲು ನಮಗೆ ಭಯ ಆಗುತ್ತಿದೆ~ ಎಂದು ದುಃಖ ತೋಡಿಕೊಂಡಿದ್ದರು.ಸೆಷನ್ಸ್ ಕೋರ್ಟ್‌ನಲ್ಲಿ ಕೆಲವು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷ್ಯದಿಂದ ಕೂಡ ಎಷ್ಟೋ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕುವುದಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ಎಷ್ಟೋ ವೇಳೆ ಪ್ರಕರಣ ಯಾವಾಗ ಕೋರ್ಟ್ ಮುಂದೆ ಬರುತ್ತದೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ, ಪ್ರಕರಣದ ಬಗ್ಗೆ ಅಧ್ಯಯನ ನಡೆಸಿರುವುದಿಲ್ಲ ಎನ್ನುವುದು ಈ ಆರೋಪ.ಕೆಲ ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ದಾಳಿಗೆ ಒಳಗಾದ ಯುವತಿಯೊಬ್ಬಳ ಮನೆಯವರಿಂದ ಅಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಲಂಚ ಕೂಡ ಕೇಳಿದರು ಎಂಬ ಮಾಹಿತಿಯನ್ನು ಅಲ್ಲಿಯ ವಕೀಲರೊಬ್ಬರೇ ನೀಡಿದ್ದಾರೆ!

ಸರ್ಕಾರದ ಚಿಂತನೆ

ಹಸೀನಾ ಪ್ರಕರಣದ ವಿಚಾರಣೆ ನಂತರ ಆ್ಯಸಿಡ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿಗಳು, ದಾಳಿಗೆ ಒಳಗಾದವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಸರ್ಕಾರಕ್ಕೆ ತಿಳಿಸಿದ್ದರು. ಅಂತೆಯೇ, ಇಂತಹ ಅಮಾಯಕ ಹೆಣ್ಣು ಮಕ್ಕಳಿಗೆ ಸೌಲಭ್ಯ ದೊರಕಿಸಲು ಯೋಜನೆ ರೂಪಿಸುವಂತೆ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳಿಗೆ ಸೂಚಿಸಿದ್ದರು.ಈ ನಿಟ್ಟಿನಲ್ಲಿ ಸಮಿತಿ ರಚಿಸಿರುವ ಸರ್ಕಾರ, ಹಣದ ನೆರವು, ಸ್ವ ಉದ್ಯೋಗ ಕೈಗೊಳ್ಳಬಯಸುವವರಿಗೆ ಸಾಲ ಯೋಜನೆಯಂತಹ ಪರಿಹಾರ ನೀಡುವ ಉದ್ದೇಶ ಹೊಂದಿದೆ.

 

ಆದರೆ ಈ ಪ್ರಸ್ತಾವ ಒಂದು ವರ್ಷದ ಹಿಂದೆಯೇ ಸರ್ಕಾರದ ಮುಂದಿದ್ದರೂ ಈವರೆಗೆ ಇದರಲ್ಲಿ ಏನೇನು ಪ್ರಗತಿ ಆಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಇವೆಲ್ಲವೂ ತ್ವರಿತವಾಗಿ ಕಾರ್ಯರೂಪಕ್ಕೆ ಇಳಿದರೆ ಮಾತ್ರ, ಕ್ರೌರ್ಯಕ್ಕೆ ನಲುಗಿ ಮುರುಟಿಹೋದ ಜೀವಗಳು ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.