ಕಲಾವಿದ ಜಿ.ಎಸ್.ಶೆಣೈ (ಗೋಕುಲದಾಸ್ ಸದಾನಂದ ಶೆಣೈ, 1938-1994) ಅವರು ತೀರಿಕೊಂಡ ಹದಿನೇಳು ವರ್ಷದ ನಂತರ ಅವರನ್ನು, ಅವರ ಕಲಾಕೃತಿಗಳನ್ನು ಕುರಿತು ಯಾವುದೇ ಭಾಷೆಯಲ್ಲಿ ಪ್ರಕಟವಾಗುತ್ತಿರಬಹುದಾದ ಪ್ರಥಮ ಪ್ರಮುಖ ಪುಸ್ತಕ `ಜಿ.ಎಸ್. ಶೆಣೈ -

ಫುಟ್ಪ್ರಿಂಟ್'. ಐವತ್ತಾರನೇ ವಯಸ್ಸಿಗೆ ಅಕಾಲಿಕ ಮರಣವನ್ನಪ್ಪಿದ ಕರ್ನಾಟಕದ ಕಲಾವಿದರಿವರು. ಕಳೆದ ಎರಡು ದಶಕಗಳ ಕರ್ನಾಟಕ ಕಲಾ ಇತಿಹಾಸದ ಬರಹಗಳಲ್ಲಿ ಅವರನ್ನು ನೆನಪಿಸಿಕೊಂಡ ಸಂಸ್ಥೆಗಳು ವಿರಳ. ಬಾಯಿಮಾತಿನ ಚರ್ಚೆಯಲ್ಲಿ ಇನ್ನೂ ಉಳಿದುಕೊಂಡಿರುವ ಶೆಣೈ ಈ ನಿಟ್ಟಿನಲ್ಲಿ ಎಸ್.ಎಂ. ಪಂಡಿತರಂತೆ, ಆರ್.ಎಸ್. ನಾಯ್ಡು ಅವರಂತೆ ಮತ್ತು ಆರ್.ಎಂ. ಹಡಪದರಂತೆ ಮೌಖಿಕ ಸಂಪ್ರದಾಯದ ಚರಿತ್ರೆಯ ಭಾಗಗಳಾಗಿರುವವರು. ಆದ್ದರಿಂದಲೇ ಅವರು ದೃಶ್ಯಕಲೆಯ ಜ್ಞಾನಶಾಖೆಗಳಾದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಗ್ರಹಾಲಯಗಳಲ್ಲಿ ಸುಲಭಕ್ಕೆ ಸಲ್ಲದವರಾಗಿದ್ದಾರೆ. ಹೀಗೆ ವಿಮರ್ಶಾತ್ಮಕ ಗ್ರಹಿಕೆಯ ಪರಿಧಿಯ ಒಳಗೆ ಸಿಲುಕದೇ ಹೋದವರಲ್ಲಿ ಶೆಣೈಯೊಂದಿಗೆ ಸ್ವೆಟೊಸ್ಲಾವ್ ರೋರಿಕ್ ಮುಂತಾದ ಘಟಾನುಘಟಿಗಳೂ ಇದ್ದಾರೆ ಎನ್ನುವುದನ್ನು ನೆನೆದರೆ, ಈ ಸಂಗತಿ ನಮ್ಮ ಕಲಾ ಇತಿಹಾಸದ ಸಂಪ್ರದಾಯದ ಅಧೋಗತಿಗೊಂದು ಸಾಕ್ಷಿಯೂ ಆಗಿರಬಹುದು ಎನ್ನಿಸುತ್ತದೆ.

ಶೆಣೈ ತೀರಿಕೊಂಡ ಸಮಯದಲ್ಲಿ ಲಲಿತಕಲಾ ಅಕಾಡೆಮಿಯು ಛಾಯಾಚಿತ್ರಕಾರ ರವೀಶ್ ಕಾಸರವಳ್ಳಿ ಅವರಿಂದ ಸುದೀರ್ಘ ಲೇಖನಗಳ ದ್ವಿಭಾಷೀಯ (ಇಂಗ್ಲಿಷ್ ಹಾಗೂ ಕನ್ನಡ) ಪುಸ್ತಕವನ್ನು ಬರೆಸಿ, ಪ್ರಕಟಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಅವರ ಸಮಗ್ರ ಕೃತಿಗಳ ಪ್ರದರ್ಶನ ಏರ್ಪಡಿಸಿ, ಅದಕ್ಕೆ ಪೂರಕವಾಗಿ ದ್ವಿಭಾಷೀಯ ಕ್ಯಾಟಲಾಗ್ (ಸುಮಾರು ಹದಿನೈದು ಪುಟಗಳ ಇಂಗ್ಲಿಷ್ ಹಾಗೂ ಕನ್ನಡದ ಹೊತ್ತಿಗೆ) ಒಂದನ್ನು ಪ್ರಕಟಿಸಿತ್ತು. ಇವೆಲ್ಲವುಗಳ ನಡುವೆ ಒಂದು ಸಾಮ್ಯತೆ ಇದೆ. ಈ ಪುಸ್ತಕಗಳು ಶೆಣೈ ಅವರನ್ನು ಆಧುನಿಕರು ಮತ್ತು ಕಲಾವಿದರು ಎಂದು ಮಾತ್ರ ಗ್ರಹಿಸಲು ಒತ್ತಾಯಿಸುತ್ತವೆ. ಈ ಸಾಮ್ಯತೆ `ಜಿ.ಎಸ್. ಶೆಣೈ - ಫುಟ್ಪ್ರಿಂಟ್' ಕೃತಿಯಲ್ಲೂ ಕಾಣಿಸುತ್ತದೆ. ಕಲಾಸಂಘಟಕರಾಗಿ ಕಲಾಮೇಳ ಮುಂತಾದ ಕಲಾಸಂಘಟನೆಗಳನ್ನು ಅವರು ಯೋಜಿಸಿದ ಬಗೆ, ಬೆಂಗಳೂರಿನಲ್ಲಿ ಗ್ಯಾಲರಿಗಳಿಲ್ಲದ ಕಾರಣ ಅವರು ಬೈಬಲ್ ಸೊಸೈಟಿಯ ಮುಂದೆ ಫುಟ್ಪಾತಿನ ಮೇಲೆ ಕಲಾಪ್ರದರ್ಶನವನ್ನು ಏರ್ಪಡಿಸಿದ್ದು (1971ರಲ್ಲಿ), ಕಲಾ ಪ್ರೋತ್ಸಾಹಕರಾಗಿ ಬೆಂಗಳೂರಿನಲ್ಲಿ ತಮ್ಮದೇ ಶೃಂಗಾರ್ ಕಲಾಗ್ಯಾಲರಿಯನ್ನು ಆರಂಭಿಸುವ ಮೂಲಕ ಕಲಾ ವ್ಯಾಪಾರದ ಸಂಪ್ರದಾಯದ ರೂವಾರಿಯಾಗಿದ್ದು, ಅದಕ್ಕೂ ಮುನ್ನ ಸೌತ್ ಕೆನರಾ ಆರ್ಟ್ ಕೌನ್ಸಿಲ್ (ಸ್ಕಾಕ್) ಕಲಾಗುಂಪನ್ನು ಆರಂಭಿಸಿದ್ದು, ಅಂತಿಮವಾಗಿ ಕಲಾಶಿಕ್ಷಣತಜ್ಞರಾಗಿ ಮೈಸೂರು `ಕಾವಾ' ಕಲಾಶಾಲೆಯ ಡೀನ್ ಆಗಿ ತಮ್ಮ ವ್ಯಕ್ತಿತ್ವವನ್ನೇ ಕಲಾವಿದರಿಂದ ಕಲಾಶಿಕ್ಷಕರಾಗಿ ರೂಪಾಂತರದ ಕ್ರಿಯೆಗೆ ಒಡ್ಡಿಕೊಂಡದ್ದು- ಇವೆಲ್ಲಕ್ಕೂ ಬದಲಾಗಿ ಅವರ ಕೃತಿಗಳನ್ನೇ `ಜಿ.ಎಸ್. ಶೆಣೈ - ಫುಟ್ಪ್ರಿಂಟ್' ಪುಸ್ತಕದಲ್ಲಿ ಮುಖ್ಯವಾಗಿಸಿರುವುದು ಈ ಪುಸ್ತಕದ ಅಪರೂಪದ ಸಂಪಾದಕೀಯ ನಿರ್ಧಾರವಾಗಿದೆ. ಇದೊಂದು ಆಯ್ಕೆಯ ಪ್ರಶ್ನೆ. ಸ್ವತಃ ಶೆಣೈಯವರ ಪುತ್ರ, ಕಲಾವಿದ ಗುರುದಾಸ್ ಶೆಣೈ ಅವರೊಂದಿಗೆ ವಿಮರ್ಶಕ ಗಿರಿಧರ್ ಖಾಸನೀಸ್, ಕಲಾವಿದರಾದ ಸಂತೋಷ್ ಅಂದಾನಿ ಮತು ಸುಧೀಂದ್ರ ಭಟ್ಟರು ಸೇರಿ ವಿನ್ಯಾಸಗೊಳಿಸಿರುವ ಪುಸ್ತಕವಿದು.

ಶೆಣೈ ಹೇಗಿದ್ದರೋ ಹಾಗೆ ಈ ಪುಸ್ತಕದಲ್ಲಿಲ್ಲ, ಪ್ರಸ್ತುತ ಸಂದರ್ಭಕ್ಕೆ ಹೇಗೆ ಬೇಕೊ ಹಾಗೆ ರೂಪುಗೊಂಡಿದ್ದಾರೆ. ದೃಶ್ಯರೂಪಿ - ಆತ್ಮಚರಿತ್ರೆಗಳ ಮೂಲಗುಣವೇ ಇಂತಹದ್ದು, ಅವರವರ ಭಾವಕ್ಕೆ ಮಾತ್ರ ದಕ್ಕುವಂತಹದ್ದು. ಸ್ವತಃ ಶೆಣೈಯವರ ಪುತ್ರ ಕಲಾವಿದ ಗುರುದಾಸ್ ಶೆಣೈ ಈ ಪುಸ್ತಕವನ್ನು ರೂಪಿಸಿರುವುದರಿಂದ ಇದೊಂದು ತೆರನಾದ `ಅಣ್ಣನ ಆತ್ಮಚರಿತ್ರೆ' ಇದ್ದಂತೆಯೂ ಹೌದು.

ಪ್ರಸ್ತುತ ಪುಸ್ತಕ ಸುಮಾರು 300 ಪುಟದಷ್ಟಿದ್ದು, ಏಕವ್ಯಕ್ತಿ (ಮೊನೊಗ್ರಾಫ್) ಪುಸ್ತಕವಾಗಿದೆ. ಗುರುದಾಸ್ ಶೆಣೈ, ಮುಂಬೈ ಕಲಾವಿದ ಅಡಿವ್ರೇಕರ್, ಬೆಂಗಳೂರಿನಲ್ಲಿ ನೆಲೆಸಿರುವ ಕಲಾವಿದ ಮಿಲಿಂದ್ ನಾಯಕ್ ಮತ್ತು ಗಿರಿಧರ ಖಾಸನೀಸ್ ಅವರುಗಳ ಲೇಖನಗಳು ಇಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿವೆ. ಕಲಾ ವಲಯದಲ್ಲಿ ಇರುವವರಿಗೆ ಗೊತ್ತಿಲ್ಲದ ಯಾವ ವಿಷಯವೂ ಇಲ್ಲಿಲ್ಲದಿರುವುದರಿಂದ ಹಾಗೂ ಈ ಕಲಾವಿದ ಜೀವಂತವಾಗಿರುವಾಗ ಬಂದ ಅವರ, ಅವರ ಕೃತಿಗಳ ಬಗೆಗಿನ ಪತ್ರಿಕಾ ಪ್ರಕಟಣೆಗಳನ್ನು ಚುಟುಕಾಗಿ ಅಲ್ಲಲ್ಲೇ ಮುದ್ರಿಸಿರುವುದರಿಂದ, ಶೆಣೈ ಜೀವನಚರಿತ್ರೆಯನ್ನು ಅವರು ಜೀವಂತವಾಗಿದ್ದಾಗ ಹೇಗೆ ಪ್ರಚುರವಾಗಿತ್ತೋ ಹಾಗೆಯೇ ಉಳಿಸಿಕೊಳ್ಳುವ ನಿರ್ಧಾರ ಈ ಪುಸ್ತಕದ ಬರವಣಿಗೆಗಳಲ್ಲಿ, ಅದರ ಹಿಂದಿನ ಗ್ರಹಿಕೆಯಲ್ಲಿ ಸ್ಪಷ್ಟ.

ಮುನ್ನೂರು ಪುಟಗಳ ಈ ಪುಸ್ತಕದ ಹತ್ತಾರು ಪುಟಗಳಲ್ಲೇ ಎಲ್ಲರ ಲೇಖನಗಳೂ ಕೊನೆಗೊಳ್ಳುತ್ತವೆ. ಉಳಿದ ಸುಮಾರು ಇನ್ನೂರ ಎಪ್ಪತ್ತು ಪುಟಗಳು ಶೆಣೈ ಕೃತಿಗಳ, ಈ ಕಲಾವಿದರ ಕುಟುಂಬದ ಚಿತ್ರಗಳು ಮತ್ತು ಇತರೆ ಕಲಾವಿದರೊಂದಿಗಿನ ಅವರು ಇರುವ ಹಾಗೂ ಅವರು ಪಡೆದ ಪ್ರಶಸ್ತಿಯ ಸಂದರ್ಭಗಳ ಛಾಯಾಚಿತ್ರಗಳಿವೆ. ಕಲಾವಿದರ ಕೃತಿಗಳ ಪ್ರತಿಕೃತಿಗಳೇ ಮಾತನಾಡಬೇಕೆಂಬುದು ಸಂಪಾದಕರುಗಳ ಉದ್ದೇಶವಿರುವಂತಿದೆ. ಆದರೂ ಇಲ್ಲಿನ ಲೇಖನಗಳು ವಿಷಯಗಳನ್ನು ಪುನರಾವರ್ತಿಸುವುದಿಲ್ಲ. ಒಬ್ಬರು ಬರೆದುದನ್ನು ಮತ್ತೊಬ್ಬರು ಉವಾಚಿಸುವುದಿಲ್ಲ. ಹೀಗಿದ್ದಾಗ್ಯೂ ಕೆಲವು ಮಹತ್ವದ ವಿಷಯಗಳು ಹಾಗೆಯೇ ಅಳಿಸಿಹೋಗಿವೆ. ಉದಾಹರಣೆಗೆ: ಶೆಣೈ ಅವರ ಕೃತಿಗಳ ಬಗ್ಗೆ ಅಂದಿನ, ಇಂದಿನ ಮತ್ತು ಅಂದಿನಿಂದ-ಇಂದಿನವರೆಗಿನ ವಿಮರ್ಶಾತ್ಮಕ ನಿಲುವುಗಳಲ್ಲಿನ ವ್ಯತ್ಯಾಸಗಳೇನು? ಕರ್ನಾಟಕದ ಆಧುನಿಕ ಕಲಾ ಇತಿಹಾಸದಲ್ಲಿ ಅವರ ಸ್ಥಾನ ಯಾವುದು? ನಗರೀಕರಣಗೊಳ್ಳುತ್ತಿದ್ದ ಬೆಂಗಳೂರಿನ ಕಲಾರಂಗಕ್ಕೆ ಉಡುಪಿಯ ಈ ಕಲಾವಿದರು 90ರ ದಶಕದಲ್ಲಿ ನೀಡಿದ ಕೊಡುಗೆಯ ಮಹತ್ವವೇನು? ಇತ್ಯಾದಿ ಪ್ರಶ್ನೆಗಳು, ಇನ್ನಿತರೆ ಕುತೂಹಲದೊಂದಿಗೆ ಹಾಗೆಯೇ ಉಳಿದುಕೊಂಡಿವೆ.

2010ರಲ್ಲಿ ಪ್ರಕಟಗೊಂಡು 2013ರಲ್ಲಿ ಬಿಡುಗಡೆಯಾದ ಈ ಪುಸ್ತಕಗಳಲ್ಲಿ ಕೆಲವು ಮಹತ್ವದ ಅಂಶಗಳಿವೆ. ಶೆಣೈ ಮಾಮಾರನ್ನು ಕುರಿತಾದ ಕಲಾವಿದ ಮಿಲಿಂದ್ ನಾಯಕರ ಲೇಖನ (ಇಬ್ಬರಿಗೂ ಹದಿನೇಳು ವರ್ಷ ವ್ಯತ್ಯಾಸ) ಅತ್ಯಂತ ಆತ್ಮೀಯವಾದುದು. ಕಲಾವಿದ ಎಸ್.ಜಿ. ವಾಸುದೇವ್ ಸಹ ಸದಸ್ಯರಾಗಿದ್ದ `ಕರ್ನಾಟಕ ಪೈಂಟರ್ಸ್' ಕಲಾತಂಡದ ನಮೂದು ಇಲ್ಲಿದೆ. ಶೆಣೈ ಅವರ ನಿಸರ್ಗಕೃತಿ ಸರಣಿಯಲ್ಲಿ ಹಂಪಿಯ ಮಹತ್ವವನ್ನು ಗಿರಿಧರ್ ಖಾಸನೀಸರು ಒತ್ತಿಹೇಳಿದ್ದಾರೆ. ನಾಸಿಕ್ ಮುಂತಾದೆಡೆ ಬಡಜನರ ಕಾಲೊನಿಗಳನ್ನು ಯಥಾವತ್ ಹಿಡಿದಿರಿಸುತ್ತ, ಕ್ರಮೇಣ ಅಂತಹ ದೃಶ್ಯಗಳು ಅಮೂರ್ತವಾಗುತ್ತ, ಹಂಪಿಯಂತಹ ಐತಿಹಾಸಿಕ ಪ್ರದೇಶದ ಸೊಬಗಿನ ದೃಶ್ಯವಾಗಿ, ಪೂರ್ಣವಾಗಿ ಶೈಲೀಕೃತ ಅಮೂರ್ತ ಕೃತಿಯಾಗುವ ಸೂಚನೆಗಳನ್ನು ಖಾಸನೀಸರು ವಿವರಿಸದಿದ್ದರೂ ಅವುಗಳ ಸೂಚನೆಯನ್ನಂತೂ ತಮ್ಮ ಬರವಣಿಗೆಯಲ್ಲಿ ನೀಡಿದ್ದಾರೆ.

ಕಲೆ, ಕಲಾಕೃತಿಗಳು ಮಾತನಾಡಬೇಕು ಎಂಬ ಆಧುನಿಕ ಭಾರತೀಯ ಕಲಾವಿದರ ನಂಬಿಕೆ ಈ ಪುಸ್ತಕದಾದ್ಯಂತ ಪದಗಳಲ್ಲಿ, ವಿನ್ಯಾಸದಲ್ಲಿ, ಅನುಕ್ರಮಣಿಕೆಯಲ್ಲಿ ವಿದಿತ. ಇದೇ ಕಾರಣದಿಂದಾಗಿ ಈ ಪುಸ್ತಕವು ಕಲಾವಿದನೊಬ್ಬನನ್ನು ಕುರಿತಾದ ಕ್ಯಾಟಲಾಗ್ ವಿನ್ಯಾಸವನ್ನು ಗಾಢವಾಗಿ ನೆನಪಿಸುವುದಲ್ಲದೆ ಹೋಲುತ್ತದೆ ಕೂಡ. ಪುಸ್ತಕದಲ್ಲಿ ಶೆಣೈಯವರ ಸಹವರ್ತಿಗಳ ಪಟ್ಟಿಯನ್ನು ನೋಡಿದರೆ ಕರಾವಳಿ ಕರ್ನಾಟಕದಿಂದ ಮೂಡಿಬಂದ ಕಲಾವಿದರ ಛಾಯೆಗಳು ಕಪ್ಪುಬಿಳುಪಿನಲ್ಲಿ 60ರಿಂದ 90ರ ದಶಕದ ದೃಶ್ಯಸಾಂಸ್ಕೃತಿಕ ಕಥೆ ಹೇಳುತ್ತವೆ. ಕೆ.ಕೆ. ಹೆಬ್ಬಾರ್, ಪೀಟರ್ ಲೂಯಿಸ್, ರಮೇಶ್ ರಾವ್, ಭಾಸ್ಕರ್ ರಾವ್ ಅಂತವರೊಂದಿಗೆ ಎಂ.ಎಫ್. ಹುಸೇನ್, ಎನ್. ಪುಷ್ಪಮಾಲ ಅಂತಹ ಅಂತರರಾಷ್ಟ್ರೀಯ ಕಲಾವಿದರ ಅಂದಿನ ಇರುವಿಕೆಯನ್ನೂ ಸಾರಿ ಹೇಳುತ್ತವೆ. ಆದರೆ ಇದನ್ನು ಕೇರಳದ ಕಲಾವಿದರು `ಕೊಚ್ಚಿ ಬಿನಾಲೆ' ಎಂಬ, 2013ರಲ್ಲಿ ನಡೆದ ಮೂರು ತಿಂಗಳ ಕಾಲದ ಅಂತರರಾಷ್ಟ್ರೀಯ ಕಲಾವಿದರ ಪ್ರದರ್ಶನವನ್ನು ಏರ್ಪಡಿಸಿದ ಮಲಯಾಳಿ-ಐಡೆಂಟಿಟಿಯಂತೆ ಒಂದು ಸಮೂಹ-ಕುಲ-ಭೂಗೋಳದ ಪ್ರಾದೇಶಿಕತೆಯನ್ನು ಒಪ್ಪಿಕೊಳ್ಳಲು ಸಂಪಾದಕೀಯದ ಹಿಂಜರಿಕೆಯೂ ಇಲ್ಲಿ ಕಂಡುಬರುತ್ತದೆ. ಸ್ವತಃ `ಸ್ಕ್ಯಾಕ್' (ಸೌತ್ ಕೆನರಾ ಆರ್ಟ್ ಕೌನ್ಸಿಲ್) ಎಂಬ ಕಲಾತಂಡವನ್ನು ರೂಪಿಸಿದ್ದ ಜಿ.ಎಸ್. ಶೆಣೈ ಅವರ ಸಾಹಸವನ್ನು ಈ ಗುಂಪಿನವರು ಮುಂದುವರಿಸಿದ್ದಲ್ಲಿ ಟ್ಯಾಗೂರರ `ಶಾಂತಿನಿಕೇತನ', ಫಣಿಕ್ಕರ್ ಅವರ `ಚೋಳಮಂಡಲ' ಮತ್ತು ಮರಿಶಾಮಾಚಾರರ `ಸಂಯೋಜಿತ' ಮುಂತಾದ ಸಾಮೂಹಿಕ ಕಲಾಚಳವಳಿಯಂತಹದ್ದನ್ನು ಹುಟ್ಟಿಹಾಕಿಬಿಡಬಹುದಿತ್ತು.

ಈ ಪುಸ್ತಕದ ಪ್ರತಿಕೃತಿಗಳಲ್ಲಿ ಬಹುವಾಗಿ ಮುಂಬೈನ ಜೆ.ಜೆ.ಕಲಾಶಾಲೆ ಪ್ರಣೀತ ನಿಸರ್ಗಚಿತ್ರಗಳೇ ಇವೆ ಮತ್ತು ಕೆಲವೇ ಭಾವಚಿತ್ರ ಮತ್ತು ನಗ್ನ ರೇಖಾಚಿತ್ರಗಳಿವೆ. ಪಶ್ಚಿಮ ಕರ್ನಾಟಕದ ಕಲಾವಿದರೊಂದಿಗೆ ಮುಂಬಯಿ ಕಲಾವಾತಾವರಣದ ಒಡನಾಟದ ಸಾಕ್ಷಿಯಾಗಿಯೂ ಈ ಪುಸ್ತಕ ಒದಗಿಬರುತ್ತದೆ. ಅನೇಕ ಪ್ರಸಿದ್ಧ ಕಲಾವಿದರೊಂದಿಗೆ ಶೆಣೈ ಇರುವ ಛಾಯಾಚಿತ್ರಗಳಲ್ಲಿ ಆಯಾ ಕಲಾವಿದರ ಹೆಸರು ನಮೂದಿಸಿದ್ದಲ್ಲಿ ಈ ಪುಸ್ತಕಕ್ಕೆ ಹೆಚ್ಚು ಸಂಗ್ರಾಹ್ಯ ಗುಣ ದಕ್ಕುತ್ತಿತ್ತು.

ಪುಸ್ತಕವನ್ನು ತಿರುವಿ ಹಾಕುತ್ತಿದ್ದರೆ ನೂರಾರು ನಿಸರ್ಗಚಿತ್ರಗಳಲ್ಲಿ ಎಲ್ಲವೂ ನಗರಕೇಂದ್ರಿತ ನಿಸರ್ಗಚಿತ್ರಗಳೇ ಅನ್ನಿಸತೊಡಗುತ್ತವೆ! ಶೆಣೈ ಶೈಲಿ ಎನ್ನುವುದು ಅವರು ಜೀವಂತವಿದ್ದ ಕಾಲಕ್ಕೆ ಪ್ರಸಿದ್ಧವಾಗಿದ್ದು, ಅನೇಕರು ಆ ಶೈಲಿಗಳನ್ನು ಅನುಕರಿಸುತ್ತಿದ್ದರು, ಈಗಲೂ ಅದು ವಿವಿಧ ರೂಪಗಳಲ್ಲಿ ಜೀವಂತವಿವೆ.

ಪುಸ್ತಕದ ನಿಸರ್ಗಚಿತ್ರಗಳಂತಹ ದೃಶ್ಯಗಳು ಚೌಕಾಕಾರವಾಗಿ ಚಕಚಕನೆ ದೃಷ್ಟಿಗೆ ಗೋಚರವಾಗುತ್ತಲೇ ತಮ್ಮ ವಿಶೇಷವನ್ನು ನಿರೂಪಿಸಿಕೊಳ್ಳುತ್ತವೆ. ಸಂಪಾದಕೀಯವೇ ಕ್ಷೀಣವಾಗಿರುವಲ್ಲಿ, ವಿನ್ಯಾಸದ ಪ್ರಬುದ್ಧತೆಯೇ ಸಂಪಾದಕೀಯವಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಉಡುಪಿ ಮೂಲದ, ಮೈಸೂರು, ಮುಂಬಯಿಯಲ್ಲಿ ಕಲಿತ ಕಲಾವಿದ ಶೇಣೈ. ನಗರಗಳು ಭೌತಿಕವಾಗಿ ಬೆಳೆಯುತ್ತಲೇ ಸಾಂಕೇತಿಕವಾಗಿ ಕ್ಷೀಣಗೊಳ್ಳುವುದನ್ನು ಅವರ ಕೃತಿಗಳ ಆಕಾರವು ಪುಟ್ಟದಾಗಿರುವುದರಿಂದ ಸೂಕ್ತವಾಗಿ ಹಿಡಿದಿರಿಸುತ್ತವೆ. ಇಲ್ಲಿರುವ ನಿಸರ್ಗಚಿತ್ರಗಳು ಕರ್ನಾಟಕ ಚಿತ್ರಕಲಾ ಸಂಪ್ರದಾಯದಂತೆ ಸೊಬಗುಗಳನ್ನು ಮಾತ್ರ ಒಳಗೊಂಡಿದ್ದ ಕಾಲದವು. ನಿಸರ್ಗಚಿತ್ರವೆಂದರೆ ಸೌಂದರ್ಯೋಪಾಸನೆ ಎಂಬ ಮಾತು ಚಾಲ್ತಿಯಲ್ಲಿದ್ದ ಕಾಲಕ್ಕೆ, ಅಕ್ಷರಶಃ ಸಿಮೆಂಟು, ಉಸುಕಿನಂತಹ ವಸ್ತುಗಳನ್ನು ಕ್ಯಾನ್ವಾಸಿನ ಮೇಲೆ ಬಳಸಿಕೊಂಡು, ಕಾಂಕ್ರೀಟ್-ನಿಸರ್ಗವೊಂದನ್ನು ದೃಶ್ಯರೂಪಕವಾಗಿ ನಿರ್ಮಿಸಿದ ಕ್ರಿಯಾಶೀಲತೆ ಶೆಣೈ ಅವರದ್ದು.

ಇವರ ಕಲಾಜೀವನದ ಆರಂಭಿಕ ಕಲಾಕೃತಿಗಳನ್ನು ಐವತ್ತು ಪುಟಗಳಷ್ಟು ಹರಡಲಾಗಿದೆ. ಎಂಬತ್ತು ಪುಟಗಳ ನಿಸರ್ಗ ಚಿತ್ರಗಳನ್ನೂ, ವರ್ಣಮುದ್ರಣಗಳೂ ನೂರೈವತ್ತು ಪುಟಗಳಲ್ಲಿ ಇವರ ಪ್ರೌಢಕೃತಿಗಳು ಹಾಗೂ ಹಿನ್ನೆನಪಿನ ಛಾಯಾಚಿತ್ರಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ಶೆಣೈ ಯಾವುದೇ ಕಲಾ ಇತಿಹಾಸಕಾರನ ಸಾತತ್ಯತೆ ಇಲ್ಲದೆ ತಮ್ಮ ಕೃತಿಗಳ ಮೂಲಕವೇ ಅನಾವರಣಗೊಳ್ಳುತ್ತಾರೆ. ನಗರೀಕರಣಕ್ಕೆ, ಐತಿಹಾಸಿಕ ತಾಣಗಳಿಗೆ ನಮನ ಸಲ್ಲಿಸಲಿಕ್ಕೆ, ಅಮೂರ್ತ-ಭಿತ್ತಿಚಿತ್ರ ರಚನೆಗೆ ಎಲ್ಲಕ್ಕೂ ನಿಸರ್ಗಚಿತ್ರಣ ಅವರ ಸಾಧನವಾಗಿತ್ತು. ಕರಡುರೇಖಾಚಿತ್ರವನ್ನು ಗೀಚಿದಷ್ಟೇ ಸರಳವಾಗಿ ನಿಸರ್ಗಚಿತ್ರಣ ಮಾಡುತ್ತಿದ್ದ ಶೆಣೈ ಅವರಿಗೆ ಅದೇ ನಿಸರ್ಗವು ಇಡಿಯ ಭೂಗೋಳದ ಪ್ರತಿಬಿಂಬವಾಗಿಬಿಟ್ಟಿತ್ತು.

ವೈರುಧ್ಯವೆಂದರೆ, ತಮ್ಮ ಕೊನೆಗಾಲದಲ್ಲಿ ಶೆಣೈ ಮೈಸೂರಿನ `ಕಾವಾ' ಕಲಾಶಾಲೆಯ ಡೀನ್ ಆಗಿದ್ದರು. ನಿಸರ್ಗಚಿತ್ರಣವನ್ನು ಬಿಡದೆ ಸೃಷ್ಟಿಸುತ್ತಿದ್ದರು. ಕಲಾಶಾಲೆಗಳಲ್ಲಿ ಭಾವಚಿತ್ರ, ವಸ್ತುಚಿತ್ರಗಳನ್ನು ವಿಶೇಷ ವಿಷಯಗಳನ್ನಾಗಿ ಕಲಿಸುವಂತೆ ನಿಸರ್ಗಚಿತ್ರಗಳನ್ನು ಕಲಿಸುವುದಿಲ್ಲ! ಇಂತಹ ರೂಪಾಂತರದ ಘಟ್ಟದಲ್ಲಿ, ನಗರೀಕರಣ, ಐತಿಹಾಸಿಕೀಕರಣ, ಶಿಕ್ಷಣೀಕರಣಗಳಿಗೆ ಪರ್ಯಾಯವಾಗಿ ಏಕಪ್ರಕಾರವಾದ `ಜಾನ್ರಾ'ವೊಂದನ್ನು (ಕಲಾಪ್ರಕಾರ) ಸೃಷ್ಟಿಸಿದ ಜಿ.ಎಸ್. ಶೆಣೈ ತಮ್ಮ ಯೋಜನೆಯನ್ನು ಅರ್ಧಕ್ಕೇ ತೊರೆದು ಹೋದರು. ಇಂತಹ ಒಳತೋಟಿಗಳಿಗೆ ಕ್ರಿಯಾತ್ಮಕವಾಗಿ, ವೈರುಧ್ಯಮಯವಾಗಿಯೂ ತುಡಿವ ವ್ಯಕ್ತಿತ್ವದ ದ್ವಂದ್ವಗಳನ್ನು ಪ್ರತಿಫಲಿಸುವ ಬದಲಿಗೆ ಪ್ರಸ್ತುತ ಪುಸ್ತಕವು ಅವುಗಳನ್ನು, ಯಥಾವತ್ ಹಿಡಿದಿರಿಸಿರುವುದು ಆಯ್ಕೆಯ, ನಿಲುವಿನ ತೀರ್ಮಾನ. ಅಂದರೆ ಈ ಪುಸ್ತಕವು ಶೆಣೈ ಇದ್ದಂತಹ ಸಂಕೀರ್ಣಾವಸ್ಥೆಯನ್ನು ಹಿಡಿದಿರಿಸುವ ಬದಲು ನಮಗೆ ಸೂಕ್ತವಾಗುವಂತೆ ಹಿಡಿದಿರಿಸಿದೆ.

ಜಿ.ಎಸ್. ಶೆಣೈ - ಫುಟ್ಪ್ರಿಂಟ್
ಪು: 298; ಬೆ: ರೂ. 3000
ಪ್ರ: ಶೆಣೈ ಆರ್ಟ್ ಫೌಂಡೇಷನ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.