ಗುರುವಾರ , ಏಪ್ರಿಲ್ 22, 2021
28 °C

ಕಾಮಗಾರಿ ನಡೆಸದೇ ಲಕ್ಷಾಂತರ ಲೂಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಹಿರೇಕೆರೂರು ತಾಲ್ಲೂಕಿನಲ್ಲಿ ಅಧಿಕಾರಿಗಳ ದರ್ಬಾರ್ ನಡೆದಿದ್ದು, ಸರ್ಕಾರದ ಯಾವುದೇ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿ ಕೈಗೊಳ್ಳದೇ ಅಧಿಕಾರಿಗಳು ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಲಕ್ಷಾಂತರ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ~ ಎಂದು ಹಿರೇಕೆರೂರು ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಪಾಲಾಕ್ಷಗೌಡ ಪಾಟೀಲ ಆರೋಪಿಸಿದರು.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಿರ್ಮಿತಿ ಕೇಂದ್ರ ಹಾಗೂ ಜಿ.ಪಂ. ಕೈಗೊಂಡು ಬಹುತೇಕ ಕಾಮಗಾರಿಗಳಲ್ಲಿ ಹಣದ ದುರುಪಯೋಗವಾಗಿರುವುದು ದಾಖಲೆಗಳಿಂದಲೇ ಗೋಚರವಾಗುತ್ತದೆ ಎಂದರು.2009-10ನೇ ಸಾಲಿನ ಎಸ್‌ಡಿಪಿ ಯೋಜನೆಯಡಿ ತಾಲ್ಲೂಕಿನ ಮೇದೂರು, ಹಿರೇಮೊರಬ, ಬುಳ್ಳಾಪುರ, ತಾವರಗಿ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದವು. ಪ್ರತಿಯೊಂದು ಅಂಗನವಾಡಿ ನಿರ್ಮಾಣಕ್ಕೆ 3.75 ಮತ್ತು 3.80 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಕಾಮಗಾರಿಯ ಗುತ್ತಿಗೆ ಪಡೆದ ನಿರ್ಮಿತಿ ಕೇಂದ್ರವು ಎರಡು ವರ್ಷದಲ್ಲಿ ಕೇವಲ ಐದು ಅಡಿ ಗೋಡೆ ನಿರ್ಮಿಸಿದರೂ ನಿರ್ಮಿತಿ ಕೇಂದ್ರಕ್ಕೆ ಪ್ರತಿ ಅಂಗನವಾಡಿ ಕೇಂದ್ರದ ಅನುದಾನದಿಂದ 3 ಲಕ್ಷ ರೂ. ಪಾವತಿಸಲಾಗಿದೆ ಎಂದು ಆಪಾದಿಸಿದರು.ಅದೇ  ರೀತಿ 2007-08 ಹಾಗೂ 2008-09ನೇ ಸಾಲಿನ 12ನೇ ಹಣಕಾಸು ಯೋಜನೆಯಡಿ ತಾಲ್ಲೂಕಿನ 9 ಗ್ರಾಮಗಳಲ್ಲಿ ಅಂಗನವಾಡಿಗಳಿಗೆ ಕಂಪೌಂಡ್ ನಿರ್ಮಿಸಲು ಹಾಗೂ ಹಿರೇಕೆರೂರ ತಾ.ಪಂ. ನವೀಕರಣಕ್ಕೆ ನೀಡಲಾದ 64.60 ಲಕ್ಷ ರೂಪಾಯಿ ಅನುದಾನವನ್ನು ಕಾಮಗಾರಿ ಮಾಡದೇ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ನುಂಗಿ ಹಾಕಲಾಗಿದೆ ಎಂದು ಹೇಳಿದರು.ಹಿರೇಕೆರೂರು ತಾ.ಪಂ.ಕಚೇರಿಯ ನವೀಕರಣಕ್ಕಾಗಿ ಸಂಶಯ ಮೂಡುವ ರೀತಿಯಲ್ಲಿ 19 ಪ್ರತ್ಯೇಕ ಅಂದಾಜು ವೆಚ್ಚ ತಯಾರಿಸಿರುವ ಅಧಿಕಾರಿಗಳು ಹಣ ಲಪಟಾಯಿಸುವ ಉದ್ದೆೀಶದಿಂದಲೇ ಈ ರೀತಿ ಮಾಡಿದ್ದಾರೆ. ಕಚೇರಿಯ ಕಿಟಗಿ, ಬಾಗಿಲು, ಎಡ ಹಾಗೂ ಬಲ ಗೋಡೆ, ಕಂಪೌಂಡ್ ಗೋಡೆ, ಸಭಾಭವನ ಹೀಗೆ ಪ್ರತಿಯೊಂದು ಭಾಗಕ್ಕೂ ಪ್ರತ್ಯೇಕ ಅಂದಾಜು ವೆಚ್ಚ ತಯಾರಿಸಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲು ಮೂರು ಜನ ಅಕಾರಿಗಳ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿ ವರದಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಅನುದಾನ ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿದೆ ಎಂದು ಹೇಳಿದರು.ಪ್ರಕರಣದಲ್ಲಿ ಭಾಗಿಯಾದ ತಾ.ಪಂ. ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಚನ್ನಪ್ಪ, ಜಿ.ಪಂ. ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಕೆ.ಟಿಕಾರಿ, ಪ್ರಭಾರಿ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್. ಎಸ್. ಪವಾರ, ತಾ.ಪಂ. ಕಿರಿಯ ಸಹಾಯಕ ಎಂಜಿನಿಯರ್‌ಗಳಾದ ಬಿ.ಬಸವಣ್ಣೆಪ್ಪ, ನಾಗರಾಜ, ಮನೋಹರ ಹಾದಿಮನಿ ಹಾಗೂ ಹನುಮಂತಪ್ಪ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಆರು ತಿಂಗಳಾಗಿವೆ. ಈವರೆಗೆ ಆ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ಕುಲಕರ್ಣಿ, ವಿ.ಕೆ.ವರ್ಣೇಕರ, ಪ್ರಕಾಶ ಬಡಿಗೇರ, ರಾಘವೇಂದ್ರ ಹರವಿಶೆಟ್ಟರ್, ಚಂದ್ರಶೇಖರ ಹಲಗೇರಿ, ಸಂಜೀವ ಬಣಕಾರ ಹಾಜರಿದ್ದರು. ಖರೀದಿಸಿದ ಫರ್ನಿಚರ್ಸ್‌: ಸ್ಪಷ್ಟನೆ

ಮುಖ್ಯಮಂತ್ರಿಗಳು ಮೈದೂರಿಗೆ ಬಂದಾಗ ಪಿಡಬ್ಲೂಡಿ ಇಲಾಖೆಯ ಯಾವುದೇ ಫರ್ನಿಚರ್‌ಗಳನ್ನು ತಮ್ಮ ಮನೆಗೆ ತಂದಿರಲಿಲ್ಲ. ಬದಲಾಗಿ ರಾಣೆಬೆನ್ನೂರಿನಲ್ಲಿ 3 ಲಕ್ಷ ರೂ. ನೀಡಿ ಹೊಸ ಫರ್ನಿಚರ್ ತಂದಿದ್ದೆ. ಆದರೆ ಕೆಲ ರಾಜಕಾರಣಿಗಳು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಪರೋಕ್ಷವಾಗಿ ತಮ್ಮ ವಿರುದ್ಧ ವರದಿಗಳು ಬರುವಂತೆ ಮಾಡಿದರು ಎಂದು ಪಾಲಾಕ್ಷಗೌಡ ಪಾಟೀಲ ಸ್ಪಷ್ಟಪಡಿಸಿದರು.ಮಾಧ್ಯಮಗಳಲ್ಲಿ ಬಂದ ವರದಿಯಲ್ಲಿ ನೇರವಾಗಿ ನನ್ನ ಹೆಸರು ಪ್ರಸ್ತಾಪ ಇಲ್ಲದ್ದರಿಂದ ಹಾಗೂ ಅಧಿಕಾರಿಗಳು ಸಹ ನಾನು ತೆಗೆದುಕೊಂಡಿರುವುದಾಗಿ ಎಲ್ಲಿಯೂ ಹೇಳದ ಕಾರಣ ನಾನು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ ಎಂದ ತಿಳಿಸಿದರು.

 

ಶೀಘ್ರವೇ ಲೋಕಾಯುಕ್ತರಿಗೆ ದೂರು

ಹಾವೇರಿ: ಹಿರೇಕೆರೂರ ತಾಲೂಕಿನಲ್ಲಿರುವ ನಡೆದಿರುವ ಹಣ ದುರುಪಯೋಗ ಪ್ರಕರಣಗಳನ್ನು ಶೀಘ್ರವೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಪಾಲಾಕ್ಷಗೌಡ ಪಾಟೀಲ ತಿಳಿಸಿದರು.

ತಾಲ್ಲೂಕಿನಲ್ಲಿ ಸ್ಥಳೀಯ ರಾಜಕಾರಣಿಯೊಬ್ಬರು ಜನಹಿತವನ್ನು ಮರೆತು ಅಧಿಕಾರಿಗಳ ರಕ್ಷಣೆಯಲ್ಲಿ ತೊಡಗಿರುವುದೇ ತಾಲ್ಲೂಕಿನಲ್ಲಿ ಇಷ್ಟೊಂದು ಅವ್ಯವಹಾರ, ಭ್ರಷ್ಟಾಚಾರ ಬೇರೂರಲು ಕಾರಣವಾಗಿದೆ ಎಂದು ದೂರಿದರು.ತಾಲ್ಲೂಕಿನ ವಿವಿಧ ಕಾಮಗಾರಿಗಳ ಅನುದಾನ ದುರ್ಬಳಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.