ಬುಧವಾರ, ಜುಲೈ 15, 2020
27 °C

ಕಾಯ್ದೆ ವಿರೋಧಿಸಿ ವಕೀಲರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಯ್ದೆ ವಿರೋಧಿಸಿ ವಕೀಲರ ಮನವಿ

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಕಾನೂನು ವೃತ್ತಿಪರರ ಕಾಯ್ದೆ- 2010’ ಅನ್ನು ಮಂಡಿಸದಿರುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಗುರುವಾರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರು. ಉದ್ದೇಶಿತ ಕಾಯ್ದೆ ವಕೀಲರ ಸ್ವಾತಂತ್ರ್ಯಹರಣದ ಪ್ರಯತ್ನ ಆಗಿದ್ದು, ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮಾರಕವಾಗಿದೆ. ಈ ಕಾಯ್ದೆಯನ್ನು ಸಂಘ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಮನವಿಯಲ್ಲಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಕಾನೂನು ಸೇವಾಕರ್ತರ (ವೃತ್ತಿ ಘನತೆ ನಿಯಂತ್ರಣ, ಕಕ್ಷಿದಾರರ ಹಿತರಕ್ಷಣೆ ಮತ್ತು ಕಾನೂನು ಆಳ್ವಿಕೆಯ ಬಡ್ತಿ) ಎಂಬ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶದಿಂದ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಸದರಿ ಮಸೂದೆಯನ್ನು ಇಡೀ ವಕೀಲರ ಸಂಘಗಳು ಪರಿಶೀಲಿಸಿದ್ದು, ಇದರಲ್ಲಿ ವಕೀಲರ ಹಿತಕಾಯುವ ಯಾವ ಅಂಶಗಳೂ ಇಲ್ಲ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.ಈ ಕರಡು ಮಸೂದೆಯ ಪ್ರಕಾರ ವಕೀಲರ ವಿರುದ್ಧ ದೂರುಗಳು ಬಂದಲ್ಲಿ ವಕೀಲರನ್ನು ಶಿಕ್ಷಿಸುವ ಅಧಿಕಾರವನ್ನು ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಮಂಡಳಿಗೆ ನೀಡಲಾಗಿದೆ. ಇದು ಕಾನೂನುಬಾಹಿರವಾಗಿದೆ. ಅಲ್ಲದೇ, ವಕೀಲರನ್ನು ಭಯಭೀತ ವಾತಾವರಣದಲ್ಲಿಟ್ಟು ಅವರ ಮೂಲಹಕ್ಕನ್ನು ಕಿತ್ತುಕೊಳ್ಳುವ ಕ್ರಮವಾಗಿದೆ ಎಂದು ದೂರಿದರು.ಕಾನೂನು ವೃತ್ತಿಪರರ (ವೃತ್ತಿ ಘಟನೆ ನಿಯಂತ್ರಣ, ಕಕ್ಷಿದಾರರ ಹಿತರಕ್ಷಣೆ ಮತ್ತು ಕಾನೂನು ಆಳ್ವಿಕೆಯ ಬಡ್ತಿ) ಕಾಯ್ದೆ 2010ನ್ನು ಯಾವುದೇ ಕಾರಣಕ್ಕೆ ಜಾರಿಗೆ ತರಬಾರದು. ಅಲ್ಲದೇ, ಈ ಉದ್ದೇಶಿತ ಮಸೂದೆಯನ್ನು ಮಂಡಿಸದಿರುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪದಾಧಿಕಾರಿಗಳು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಮನವಿ ಮಾಡಿದರು.

ಸಂಘದ ಅಧ್ಯಕ್ಷ ಎಚ್.ಆರ್. ಸೋಮಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ. ದೇವೇಂದ್ರಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.ವಕೀಲರ ಪ್ರತಿಭಟನೆ

ಭದ್ರಾವತಿ: ಕಾಯ್ದೆ ವಿರೋಧಿಸಿ ವಕೀಲರು ಗುರುವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷಎ.ಬಿ. ನಂಜಪ್ಪ, ವೃತ್ತಿನಿರತ ಸಹಸ್ರಾರು ವಕೀಲರಿಗೆ ಮಾರಕವಾಗುವ ಇಂತಹ ಕಾಯ್ದೆಯನ್ನು ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸಿದ್ದು, ಅದರ ಕರೆಯ ಮೇರೆಗೆ ಕೆಂಪುಪಟ್ಟಿ ಧರಿಸಿ ಹೋರಾಟ ನಡೆದಿದೆ ಎಂದರು.ಈಗಾಗಲೇ, ವೃತ್ತಿ ಸಂಬಂಧವಾಗಿ ಅನೇಕ ಕಾಯ್ದೆಗಳಿದ್ದು ಅದನ್ನು ಜಾರಿ ಮಾಡುವ ನಿಟ್ಟಿನಲ್ಲಿ ಬಾರ್ ಕೌನ್ಸಿಲ್ ಕೆಲಸ ಮಾಡುತ್ತಿದೆ. ಆದರೆ, ಅದಕ್ಕೆ ಪರ್ಯಾಯವಾಗಿ ಮತ್ತೊಂದು ಕಾಯ್ದೆ ರೂಪಿಸಲು ಹೊರಟಿರುವುದು ವಿಪರ್ಯಾಸ ಎಂದು ಖಂಡಿಸಿದರು.ಈ ಕಾಯ್ದೆ ಜಾರಿಗೆ ರಾಜ್ಯದ ಸಂಸದರು, ಮಂತ್ರಿಗಳು ಸಹಕಾರ ನೀಡಬಾರದು. ಅದನ್ನು ಉಗ್ರವಾಗಿ ಖಂಡಿಸುವ ನಿಟ್ಟಿನಲ್ಲಿ ಅವರು ಸಂಸತ್ತಿನಲ್ಲಿ ವಿಷಯ ಮಂಡನೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿಒತ್ತಾಯ ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು.ಪ್ರತಿಭಟನೆ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ವಿ. ವೆಂಕಟೇಶ್, ಎಚ್.ಎಲ್. ವಿಶ್ವನಾಥ, ಅನಿಲ್‌ಕುಮಾರ್, ನಾಗಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಹಿಸಿದ್ದರು.    ಸಾಗರದಲ್ಲೂ ಧರಣಿ


ಸಾಗರ: ಕೇಂದ್ರ ಸರ್ಕಾರದ ಕಾನೂನು ಇಲಾಖೆ ವಕೀಲರ ಮಂಡಳಿಯನ್ನು ಸ್ಥಾಪಿಸಲು ಮುಂದಾಗಿರುವುದನ್ನು ಖಂಡಿಸಿ ಇಲ್ಲಿನ ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.ಕಾನೂನು ಕ್ಷೇತ್ರದಲ್ಲಿ ವಿದೇಶಿಯರಿಗೆ ವಕಾಲತ್ತು ನಡೆಸಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ವಕೀಲರ ಮಂಡಳಿಯನ್ನು ಸ್ಥಾಪಿಸಲು ಮುಂದಾಗಿರುವುದು ಖಂಡನಾರ್ಹ ಎಂದು ವಕೀಲರು ಅಭಿಪ್ರಾಯಪಟ್ಟರು.ನೋಂದಾಯಿಸಲ್ಪಡದ ವಕೀಲರಿಗೂ ವಕೀಲಿ ವೃತ್ತಿ ನಡೆಸಲು ಅವಕಾಶ ಕೊಡುವುದು ನ್ಯಾಯ ಸಮ್ಮತವಲ್ಲ. ವಕೀಲರ ಮೇಲೆ ದೂರು ಬಂದರೆ ಅದರ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸಲು ಈಗಾಗಲೇ ವಕೀಲರ ಪರಿಷತ್ ಅಸ್ತಿತ್ವದಲ್ಲಿದೆ. ಈ ಅಧಿಕಾರವನ್ನು ಸರ್ಕಾರ ನೇಮಿಸುವ ನ್ಯಾಯಾಧೀಶರಿಗೆ ನೀಡುವುದು ವಕೀಲರ ಪರಿಷತ್ತಿನ ಅಧಿಕಾರವನ್ನು ಕಿತ್ತುಕೊಂಡಂತೆ ಎಂದು ವಕೀಲರು ಪ್ರತಿಪಾದಿಸಿದರು.ಕೇಂದ್ರ ಸರ್ಕಾರ ನೂತನವಾಗಿ ಸ್ಥಾಪಿಸಲು ಹೊರಟಿರುವ ಮಂಡಳಿಯ ಖರ್ಚು ವೆಚ್ಚವನ್ನು ಪ್ರತಿಯೊಂದು ವಕಾಲತ್ತು ಫಾರಂಗೆ ್ಙ 25 ಶುಲ್ಕ ವಿಧಿಸುವ ಮೂಲಕ ವಸೂಲಿ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಇದರ ಹೊರೆ ಬಡ ಕಕ್ಷಿಗಾರರ ಮೇಲೆ ಹೊರಿಸಿದಂತೆ ಆಗುತ್ತದೆ ಎಂದು ವಕೀಲರು ದೂರಿದರು.ವಕೀಲರ ಮೇಲೆ ನಿಯಂತ್ರಣ ಹೇರುವ ಉದ್ದೇಶವಿದ್ದರೆ ಈಗಾಗಲೇ, ಅಸ್ತಿತ್ವದಲ್ಲಿರುವ ವಕೀಲರ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬಹುದು. ಅದನ್ನು ಬಿಟ್ಟು ನೂತನ ಮಂಡಳಿ ಸ್ಥಾಪಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಜನ ವಿರೋಧಿಯಾಗಿದೆ ಎಂದು ವಕೀಲರು ಆಪಾದಿಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಪುಟ್ಟಸ್ವಾಮಿ, ಕಾರ್ಯದರ್ಶಿ ಕೆ.ಎಲ್. ಭೋಜರಾಜ್, ಎಚ್.ಬಿ. ರಮೇಶ್, ಕೆ.ಎನ್. ಶ್ರೀಧರ್, ಧನಂಜಯ್, ಪುಟ್ಟರಾಜಗೌಡ, ಹೇಮಂತ್, ಮರಿದಾಸ್, ಗೌತಮ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.