ಶನಿವಾರ, ಜನವರಿ 18, 2020
20 °C
ಬೆಟ್ಟದ ಮೇಲೆ

ಕಾರ್ತಿಕ ವೈಭವ

ಡಾ.ಕೆ.ವಿ ಸಂತೋಷ/ಬಳಕೂರು ವಿ.ಎಸ್‌. ನಾಯಕ Updated:

ಅಕ್ಷರ ಗಾತ್ರ : | |

ಕೋಟೆ – ಕೊತ್ತಲಗಳ ಬೀಡೆಂದೇ ಪ್ರಸಿದ್ಧಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ‘ರಾಮಗಿರಿ’ಯಲ್ಲಿ ಇದೇ 16ರಂದು ವೈಭವದ ಕಾರ್ತಿಕೋತ್ಸವ ನಡೆಯಲಿದೆ.ನೆಲಮಟ್ಟದಿಂದ ಸುಮಾರು 200 ಅಡಿ ಎತ್ತರದ ಬೆಟ್ಟದ ತಪ್ಪಲಿನ ಮೇಲಿರುವ ಕರಿಸಿದ್ಧೇಶ್ವರ ಮಂದಿರದಲ್ಲಿ ನಡೆಯುವ ಈ ಉತ್ಸವವನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಚ್ಚ ಹಸಿರು ತೆಂಗು, ಅಡಿಕೆಗಳಿಂದ ಕಣ್ಮನ ಸೆಳೆಯುವ ಈ ಮಂದಿರಕ್ಕೆ ಸಾಗಬೇಕೆಂದರೆ 325 ಮೆಟ್ಟಿಲು ಹತ್ತಲೇಬೇಕು.ಸಂಪೂರ್ಣ ಬೆಟ್ಟಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಿ ಹತ್ತುವ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ದೀಪವನ್ನು ಹಚ್ಚಿ ಬೆಳಗಿಸುತ್ತಾರೆ. ಉತ್ಸವದ ಕೇಂದ್ರ ಬಿಂದು ಬಾಳೆ ಹಣ್ಣಿನ ರಾಶಿ. ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಹರಕೆ ಹೊತ್ತಿರುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ಕದಳಿ ಮಂಟಪ ನಿರ್ಮಿಸಿ ಅದರಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಅದರ ಮುಂದೆ ಬಾಳೆಹಣ್ಣಿನ ರಾಶಿ ಹಾಕುತ್ತಾರೆ. ಪೂಜೆಯ ನಂತರ ಇದನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚುವ ವಿಶೇಷ ಆಚರಣೆ ಇಲ್ಲಿದೆ.ರಾಮಗಿರಿಯ ಶ್ರೀ ಕರಿಸಿದ್ಧೇಶ್ವರ ಸ್ವಾಮಿ ಭಕ್ತರ ಪಾಲಿನ ಪವಾಡ ಪುರುಷ. ಈ ಬೆಟ್ಟದಲ್ಲಿ ಶ್ರೀರಾಮನು ತಂಗಿದ್ದ ಬಗ್ಗೆ ಐತಿಹ್ಯವಿದೆ. ರಾಮನು ಪ್ರತಿದಿನವೂ ಲಿಂಗ ಪೂಜೆ ಮಾಡಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇಲ್ಲಿಗೆ ಬಂದ ಋಷಿಯೊಬ್ಬರು ಶ್ರೀರಾಮನ ಮನದಾಸೆ ತಿಳಿದು ಲಿಂಗ ಉದ್ಭವವಾಗು­ವಂತೆ ಮಾಡಿ, ಪೂಜೆಗೆ ಬೇಕಾದ ನೀರಿಗೆಂದು ಬೆತ್ತದಿಂದ ಬೆಟ್ಟವನ್ನು ಮುಟ್ಟಿ ನೀರು ಚಿಮ್ಮುವಂತೆ ಮಾಡಿದರಂತೆ. ರಾಮನು ಇಲ್ಲಿ ಇದ್ದಿದ್ದರಿಂದ ‘ರಾಮಗಿರಿ’ ಎಂಬ ಹೆಸರು ಬಂದಿದ್ದು.ಹಾಗೆಯೇ ಇಲ್ಲಿಯ ಲಿಂಗಕ್ಕೆ ಕರಿಸಿದ್ಧೇಶ್ವರ ಎಂದು ಹೆಸರು ಬರಲೂ ಒಂದು ಕಥೆಯಿದೆ. ಹಿಂದೆ ಹೈದರಾಲಿ ಇಲ್ಲಿಗೆ ಸಮೀಪದ ಬಾಗೂರು ಪಟ್ಟಣದ ಮೇಲೆ ಯುದ್ಧ ಮಾಡಲು ಇದೇ ಮಾರ್ಗದಲ್ಲಿ ಹೋಗುವಾಗ ಆತನ ಪ್ರೀತಿಯ ಆನೆ ಸಾವನ್ನಪ್ಪಿತು. ಜನರ ಒತ್ತಾಯದ ಮೇಲೆ ಹೈದರಾಲಿ ಈ ಬೆಟ್ಟದ ಮೇಲಿನ ಲಿಂಗಕ್ಕೆ ಬೇಡಿದಾಗ ಸಾಧುವಿನ ವೇಷದಲ್ಲಿ ಬಂದ ಸ್ವಾಮಿಯು ಬೆತ್ತದಿಂದ ತಟ್ಟಿ ಆನೆಯನ್ನು ಎಬ್ಬಿಸಿದರಂತೆ. ಆನೆ (ಕರಿ)ಯನ್ನು ಬದುಕಿಸಿದ (ಸಿದ್ಧಿಸಿದ) ದೇವರಿಗೆ ಅಂದಿನಿಂದ ಕರಿ – ಸಿದ್ಧಿ – ಈಶ್ವರ. ಕರಿಸಿದ್ಧೇಶ್ವರ ಎಂಬ ಹೆಸರು ಬಂದಿದೆ.ಬೆಟ್ಟದ ಮೇಲಿನ ಕರಿಸಿದ್ಧೇಶ್ವರ ಮಂದಿರಕ್ಕೆ ಮೆಟ್ಟಿಲುಗಳ ಮೂಲಕ ಹೋಗುವಾಗ ಎಡಭಾಗ­ದಲ್ಲಿ ಗಣಪತಿ ಮಂದಿರ, ಮತ್ತಷ್ಟು ಮೇಲಕ್ಕೆ ಹೋದಾಗ ಬಲಭಾಗದಲ್ಲಿ ವಿರಕ್ತ ಮಠ, ಮರಿದೇವರ ಮಠ, ಚರಂತ ದೇವರ ಮಠಗಳಿವೆ. ಬೆಟ್ಟದ ಮೇಲ್ಭಾಗದಲ್ಲಿ ಕರಿಸಿದ್ಧೇಶ್ವರಸ್ವಾಮಿಯ ಉದ್ಭವಲಿಂಗವಿದೆ. ಮಂದಿರದೊಳಗೆ ಗಂಗಮ್ಮನ ಬಾವಿಯಿದ್ದು, ಬೇಸಿಗೆಯಲ್ಲಿ ನೀರು ಮೇಲ್ಭಾಗದಲ್ಲಿ, ಮಳೆಗಾಲದಲ್ಲಿ ಕೆಳಗೆ ಇಳಿಯುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವುದಾಗಿ ನಂಬಿಕೆಯಿದೆ. ಏಕೆಂದರೆ ನೆಲಮಟ್ಟದಿಂದ 200–250 ಅಡಿ ಮೇಲೆ, ಅದೂ ಕಲ್ಲು ಬಂಡೆಗಳ ನಡುವೆ ನೀರಿರುವುದು ವಿಜ್ಞಾನಕ್ಕೂ ಸವಾಲೆಸೆದಿರುವ ವಿಷಯ. ಈ ಬಾವಿಯ ನೀರು ಎಂದಿಗೂ ಬತ್ತಿಲ್ಲವಂತೆ.ಹೀಗೆ ಬನ್ನಿ

ರಾಮಗಿರಿಯು ಹುಬ್ಬಳ್ಳಿ – ಬೆಂಗಳೂರು ರೈಲು ಮಾರ್ಗದಲ್ಲಿದೆ. ಬೀರೂರು ಹಾಗೂ ದಾವಣಗೆರೆಯಿಂದ 60 ಕಿ.ಮೀ ದೂರವಿದೆ. ರಸ್ತೆಯ ಮೂಲಕ ತಲುಪಲು ಚಿತ್ರದುರ್ಗ – ಮಂಗಳೂರು – ರಾಷ್ಟ್ರೀಯ ಹೆದ್ದಾರಿ 13ರಿಂದ ಸಾಗಬೇಕು.ರಥೋತ್ಸವದ ಸಡಗರ

ನೈಸರ್ಗಿಕ ಸಂಪನ್ಮೂಲ, ಜಲಪಾತಗಳ ತವರೂರು, ದೇವಾಲಯಗಳ ಬೀಡು ಎಂದು ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲೀಗ ಜಾತ್ರೆ, ರಥೋತ್ಸವದ ವೈಭವ.

ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀ ಮಹಾಗಣಪತಿ ಮಹಾಮಾಯ ದೇಗುಲದಲ್ಲಿ ಇದೇ 11ರಂದು ನಡೆಯಲಿರುವ ಉತ್ಸವಕ್ಕೆ ಊರೆಲ್ಲ ಸಜ್ಜಾಗಿ ನಿಂತಿದೆ. ಬೀದಿ ಬೀದಿಗಳಲ್ಲಿ ತಳಿರು ತೋರಣಗಳ ಶೃಂಗಾರ, ಝಗಮಗಿಸುವ ವಿದ್ಯುತ್‌ದೀಪ ಅಲಂಕೃತವಾಗಿ ಇಡೀ ಊರಿಗೆ ಊರೇ ಕಂಗೊಳಿಸುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತಾದಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೇವಲ ಜಾತ್ರೆಯಾಗಿರದೇ ಭಕ್ತಿಲೋಕಕ್ಕೆ ಕೊಂಡೊಯ್ಯುವ ಕ್ಷಣಕ್ಕೆ ಸಾಕ್ಷಿಯಾಗಲಿರುವ ಈ ದಿನಕ್ಕಾಗಿ ಭರದಿಂದ ಸಿದ್ಧತೆ ನಡೆಯಲಿದೆ.ರಥೋತ್ಸವಕ್ಕೆ ಚಾಲನೆ

ರಥೋತ್ಸವದ ದಿನ ರಥವನ್ನು ಹೂವಿನಿಂದ ಸಿಂಗರಿಸಿ ದೇವರ ಮೂರ್ತಿ­ಯನ್ನು ಅದರಲ್ಲಿ ಪ್ರತಿಷ್ಠಾಪಿಸುತ್ತಾರೆ. ದೇವರಿಗೆ ಹಣ್ಣು ಕಾಯಿ ಸಮರ್ಪಣೆ ಮಾಡಿದ ನಂತರ ವಾದ್ಯ ಘೋಷದೊಂದಿಗೆ ರಥವನ್ನು ಎಳೆಯುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು. ಆ ಒಂದು ದಿನದ ಸೊಬಗನ್ನು ವೀಕ್ಷಿಸಲು  ಇಲ್ಲಿ ವಿವಿಧ ಊರುಗಳ ಭಕ್ತಸಾಗರವೇ ಹರಿದು ಬರುತ್ತದೆ.ಮರುದಿನ ಓಕುಳಿ ಕಾರ್ಯಕ್ರಮ.  ಎಲ್ಲರೂ ಓಕುಳಿ ಚೆಲ್ಲುತ್ತಾ ದೇವನಾಮ ಸ್ಮರಣೆ ಮಾಡುತ್ತಾ, ದೇವರ ಭಜನೆ ಹಾಡುತ್ತಾ ರಥೋತ್ಸವಕ್ಕೆ ಕೊನೆ ಹಾಡುತ್ತಾರೆ.ಹೀಗೆ ಬನ್ನಿ

ಬೆಂಗಳೂರಿನಿಂದ ಸುಮಾರು 450 ಕಿ.ಮೀ. ದೂರದಲ್ಲಿದೆ ಶಿರಾಲಿ. ರಾಜ್ಯ ರಸ್ತೆ ಸಾರಿಗೆ, ಖಾಸಗಿ ಬಸ್ಸು, ರೈಲ್ವೆ ಸೌಕರ್ಯವೂ ಇದೆ. ನಂತರ ಇಲ್ಲಿಯೇ ಸುತ್ತಮುತ್ತಲಿನ ಮುರುಡೇಶ್ವರ, ಇಡಗುಂಜಿ, ಕೊಲ್ಲೂರು ದೇವಾಲಯಗಳನ್ನೂ ನೋಡಬಹುದು.

 

ಪ್ರತಿಕ್ರಿಯಿಸಿ (+)