ಗುರುವಾರ , ಮೇ 19, 2022
20 °C

ಕಾವಲು ಪರಭಾರೆ ವಿರುದ್ಧ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಸಾವಿರಾರು ಜಾನುವಾರುಗಳಿಗೆ ಆಧಾರವಾಗಿ ಈ ಭಾಗದ ಜನರ ಬದುಕಿಗೆ ಜೀವನಾಡಿಯಾಗಿರುವ ಅಮೃತ ಮಹಲ್ ಕಾವಲು ಪರಭಾರೆ ಮಾಡಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಪಟ್ಟಣದ ರೋಟರಿ ಬಾಲ ಭವನದಲ್ಲಿ ಅಮೃತ್ ಮಹಲ್ ಕಾವಲು ಉಳುವಿಗಾಗಿ ಮುಂದಿನ ಹೋರಾಟದ ಬಗ್ಗೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತಪರ ಹೋರಾಟಗಾರರು, ಇತರ ಸಂಘಟನೆಗಳ ಮುಖಂಡರು ಮುಂದಿನ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಕಾವಲು ಹೋರಾಟ ಸಮಿತಿ ವಕೀಲರಾದ ಲಿಯೋ ಸಾಲಿಡನ್ ಮಾತನಾಡಿ, 2006ರಲ್ಲಿ  ಜಿಲ್ಲಾಧಿಕಾರಿಯಾಗಿದ್ದ ಕೆ.ಅಮರ ನಾರಾಯಣ ಅವರು ಆಗಿನ ಉಸ್ತುವಾರಿ ಮಂತ್ರಿ ಕರುಣಾಕರ ರೆಡ್ಡಿಯವರಿಗೆ ಪತ್ರ ಬರೆದು. ಕಾವಲು ಭೂಮಿ ಸಾವಿರಾರು ಬುಡಕಟ್ಟು ಸಮುದಾಯಗಳಿಗೆ ಬದುಕು ನೀಡಿದೆ. ಅದನ್ನು ಆಶ್ರಯಿಸಿ ಸಾವಿರಾರು ಜಾನುವಾರು ಜೀವಿಸುತ್ತಿವೆ. ಮುಂದಿನ ಜನಸಂಖ್ಯೆಗೆ ತಕ್ಕಂತೆ ಆ ಭಾಗದಲ್ಲಿ ಹಸಿರೀಕರಣವಾಗಬೇಕಿದೆ  ಎಂದು ಹೇಳಿದ್ದರು ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಮಹಾಲಿಂಗಪ್ಪ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕುಗಳಿಗೂ ಅಮೃತ್ ಮಹಲ್ ಕಾವಲಿನ ಜಾಗೃತಿ ಮೂಡಿಸಿ ದೊಡ್ಡ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಅಪಾಯದ ಕಂಪೆನಿಗಳನ್ನು ಗ್ರಾಮಗಳ ಮಧ್ಯೆ ಸ್ಥಾಪಿಸುವುದು ಎಷ್ಟು ಸರಿ? ಈ ಕ್ರಮದ ವಿರುದ್ಧ ಶೀಘ್ರವೇ ಜಾನುವಾರು ಸಮೇತ ನಾಯಕನಹಟ್ಟಿ ಮಾರ್ಗವಾಗಿ ಮತ್ತು ರೇಣುಕಾಪುರ ಗ್ರಾಮದಿಂದ  ತಾಲ್ಲೂಕು ಕೇಂದ್ರಕ್ಕೆ ಪಾದಯಾತ್ರೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಕಾವಲು ಹೋರಾಟ ಸಮಿತಿ ಸಂಚಾಲಕ ದೊಡ್ಡುಳ್ಳಾರ್ತಿ ಕರಿಯಣ್ಣ ಮಾತನಾಡಿ, ಮುಂಗಾರು ಬೆಳೆ ಬಿತ್ತನೆಯಾಗುವ ಮುಂಚಿತವಾಗಿ ಕಾವಲು ಭೂಮಿಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಈ ಭಾಗದ ಜನರ ಸ್ವತ್ತಾಗಿರುವ ಕಾವಲು ಪ್ರದೇಶವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಪತ್ರಕರ್ತ ಬಸವರಾಜು, ಜಿ.ಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ತಿಪಟೂರು ಮನೋಹರ, ರೈತರಾದ ಅಜ್ಜಪ್ಪ, ಹನುಮಂತರಾಯ, ಇತರೆ ಹೋರಾಟ ಸಮಿತಿಗಳ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.