ಮಂಗಳವಾರ, ಮೇ 17, 2022
26 °C

ಕಿಡಿಗೇಡಿಗಳ ವಿಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಷೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಅತೃಪ್ತಿ, ಅಸಹನೆಗಳನ್ನು ಕೆಲವು ಕಿಡಿಗೇಡಿಗಳು ವಿಕೃತ ರೂಪದಲ್ಲಿ ಹೊರಹಾಕಿ ಸಮಾಜದ ನೆಮ್ಮದಿಯನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ.

 

ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ವಿಷಯದಲ್ಲಿ ಸರ್ಕಾರ ವಿಫಲವಾಗಿರುವುದರಿಂದ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಘಟನೆಗಳಿಂದ ಹೆಚ್ಚಿನ ಅನಾಹುತ ಆಗದಿದ್ದರೂ ಜನರ ಮನಸ್ಸಿನಲ್ಲಿ ದ್ವೇಷದ ಭಾವನೆ ಬೆಳೆಯುವ ಸಾಧ್ಯತೆ ಇದೆ.ಇತ್ತೀಚೆಗೆ ಬೆಳಗಾವಿಯ ಮಹಾನಗರ ಪಾಲಿಕೆಯ ಉಪ ಮೇಯರ್ ಚುನಾವಣೆಯಲ್ಲಿ ಸರ್ವಭಾಷಿಕ ಸಮವಿಚಾರ ವೇದಿಕೆ ಅಭ್ಯರ್ಥಿಯನ್ನು ಬೆಂಬಲಿಸಿದ ಪಾಲಿಕೆ ಸದಸ್ಯೆ ಜಯಶ್ರೀ ಪಿಸೆ ಅವರ ಮನೆಗೆ ಎಂಇಎಸ್ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ಅವರ ಪತಿಯ ಮುಖಕ್ಕೆ ಮಸಿ ಬಳಿದಿದ್ದಾರೆ.ಮಂಗಳೂರಿನ ಸೇಂಟ್ ಥೆರೇಸಾ ಶಾಲೆ ಮತ್ತು ಅದರ ಆವರಣದಲ್ಲಿದ್ದ ಥೆರೇಸಾ ಮೂರ್ತಿಯ ಮೇಲೆ ಕೆಲವರು ಕಲ್ಲು ತೂರಿದ ಘಟನೆಯೂ ವರದಿಯಾಗಿದೆ. ಈ ಎರಡೂ ಘಟನೆಗಳು ಹೇಡಿಗಳ ಕೃತ್ಯ ಮತ್ತು ಖಂಡನೀಯ. ಈ ಘಟನೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆಗೆ ಇಳಿಯುವುದು ಹೊಸದಲ್ಲ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಸ್ಥಳೀಯ ಮರಾಠಿ ಭಾಷಿಕರಲ್ಲಿ ಕನ್ನಡ ಹಾಗೂ ಕರ್ನಾಟಕ ವಿರೋಧಿ ಭಾವನೆಗಳನ್ನು ಉದ್ರೇಕಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂಇಎಸ್ ಮುಖಂಡರು ಪ್ರಯತ್ನಿಸುತ್ತಲೇ ಇದ್ದಾರೆ. ಮರಾಠಿ ಭಾಷಿಕರ ಬೆಂಬಲ ಕಳೆದುಕೊಂಡಿರುವ ಅವರಿಗೆ ಪುಂಡಾಟಿಕೆ ಬಿಟ್ಟು ಬೇರೆ ದಾರಿ ಇದ್ದಂತಿಲ್ಲ.ಕಾರ್ಯಕರ್ತರನ್ನು ಛೂ ಬಿಟ್ಟು ಜನರ ನೆಮ್ಮದಿ ಮತ್ತು ಸಾಮರಸ್ಯದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಕನ್ನಡ ಹಾಗೂ ಮರಾಠಿ ಭಾಷಿಕರು ಅದಕ್ಕೆ ಕಿವಿಗೊಡುತ್ತಿಲ್ಲ ಎನ್ನುವುದು ಸಮಾಧಾನದ ಸಂಗತಿ. ಎಂಇಎಸ್ ಮುಖಂಡರು ಇನ್ನಾದರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.

 

ಅದೇನೇ ಇರಲಿ, ಪಾಲಿಕೆ ಸದಸ್ಯೆಯ ಪತಿಯ ಮುಖಕ್ಕೆ ಮಸಿ ಬಳಿದ ಕಿಡಿಗೇಡಿಗಳನ್ನು ಪೊಲೀಸರು ಹಿಡಿದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.  ಇಂತಹ ಘಟನೆ ಮರುಕಳಿಸಲು ಅವಕಾಶ ಕೊಡಬಾರದು. ಮಂಗಳೂರಿನ ಶಾಲೆಯ ಮೇಲೆ ಕಲ್ಲು ತೂರಿದ ಘಟನೆ ಬೆಳಗಿನ ಜಾವ ನಡೆದಿದೆ.ಕತ್ತಲೆಯಲ್ಲಿ ಕಣ್ಮರೆಯಾದ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ ಸ್ಥಳೀಯ ಪೊಲೀಸರು ಅಲ್ಪಸಂಖ್ಯಾತರ ಶಾಲೆಗಳು ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

 

ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರ ರಥಯಾತ್ರೆ ಮುಂದಿನ ವಾರ ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಜನರ ನೆಮ್ಮದಿಯನ್ನು ಕೆಡಿಸುವಂತಹ ಕೃತ್ಯಗಳು ನಡೆಯುವ ಸಾಧ್ಯತೆಗಳಿವೆ. ಸರ್ಕಾರ ಮತ್ತು ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.