ಬುಧವಾರ, ಮೇ 12, 2021
18 °C

ಕಿಮ್ಸನಲ್ಲಿ ರಿಯಾಯಿತಿ ದರದ ಔಷಧಿ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಡ ರೋಗಿಗಳಿಗೆ ಶೇಕಡಾ 50ರ ರಿಯಾಯಿತಿ ದರದಲ್ಲಿ ಔಷಧಿ ವಿತರಿಸುವ ಮಳಿಗೆಗಳನ್ನು ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ತೆರೆಯಲು ನಿರ್ಧರಿಸಲಾಗಿದ್ದು ಇದನ್ನು ನಗರದ ಕಿಮ್ಸನಲ್ಲಿ ಮೊದಲು ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.ಕಿಮ್ಸನಲ್ಲಿ ಮಂಗಳವಾರ ಸಂಜೆ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ರಿಯಾಯಿತಿ ದರದಲ್ಲಿ ಔಷಧಿ ವಿತರಿಸುವ ಯೋಜನೆ ಶೀಘ್ರದಲ್ಲೇ ರಾಜ್ಯದ ಇತರ ವೈದ್ಯ ವಿಜ್ಞಾನ ಸಂಸ್ಥೆಗಳಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದ ಅವರು, ಕಿಮ್ಸನಲ್ಲಿ ಇದಕ್ಕಾಗಿ ನಿರ್ಮಿಸಲಾಗುವ ಮಳಿಗೆಯ ಬಳಿಯಲ್ಲೇ ಆಹಾರ ಮಳಿಗೆಯನ್ನು ಕೂಡ ನಿರ್ಮಿಸಲಾಗುವುದು ಎಂದು ತಿಳಿಸಿದರು.ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ನಿರ್ಮಾಣ ಕಾಮಗಾರಿ ಹಾಗೂ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಇತರ ಕೆಲಸಗಳನ್ನು ನಿರ್ವಹಿಸಲು `ಹೆಲ್ತ್ ಎಂಜಿನಿಯರಿಂಗ್~ ಎಂಬ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.  ಇದಕ್ಕೂ ಕಿಮ್ಸನಲ್ಲಿ ಚಾಲನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.ತುರ್ತು ಚಿಕಿತ್ಸಾ ಘಟಕ ಹಾಗೂ ಹೊರರೋಗಿಗಳ ವಿಭಾಗಗಳನ್ನು ಒಂದೇ ಕಟ್ಟಡದಡಿಗೆ ತರಲು 6.5 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಹಾಗೂ ಆಸ್ಪತ್ರೆಯ ನವೀಕರಣಕ್ಕೆ 7.5 ಕೋಟಿ ರೂಪಾಯಿ ಯೋಜನೆಗೆ ಅನುಮತಿ ನೀಡಲಾಯಿತು. ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಹಾಗೂ ಇತರ ಸಿಬ್ಬಂದಿಗಾಗಿ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಕೊಠಡಿಗಳನ್ನು ನಿರ್ಮಿಸುವ ಯೋಜನೆಗೆ ಅನುಮತಿ ನೀಡಲಾಯಿತು ಎಂದು ಅವರು ತಿಳಿಸಿದರು.ಶುಶ್ರೂಷಕಿಯರ ನೇಮಕ:

ನೂರು ಮಂದಿ ಶುಶ್ರೂಷಕಿಯರ ಹಾಗೂ 24 ಮಂದಿ ತಂತ್ರಜ್ಞರ ನೇಮಕಕ್ಕೂ ಅನುಮತಿ ನೀಡಲಾಗಿದ್ದು ಈಗ ಇರುವ ಅರೆಕಾಲಿಕ ಸಿಬ್ಬಂದಿಗೆ ಇದರಲ್ಲಿ ಹೆಚ್ಚು ಅವಕಾಶ ಸಿಗಲಿದೆ. ಹತ್ತು ಮಂದಿ ಹಿರಿಯ ಸ್ಥಾನಿಕ ವೈದ್ಯರನ್ನು ಖಾಯಂಗೊಳಿಸಲು, ಒಟ್ಟು 28 ಮಂದಿಗೆ ಬಡ್ತಿ ನೀಡಲು ಹಾಗೂ ಬಡ್ತಿ ತಡೆಹಿಡಿಯಲಾಗಿದ್ದ 6 ಮಂದಿಗೆ ಬಡ್ತಿ ನೀಡಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.  ಕಿಮ್ಸಗೆ ಸಂಬಂಧಿಸಿದ ಪ್ರಕರಣಗಳಿಗೆ ಕಾನೂನು ಪರಿಹಾರ ಕಂಡುಕೊಳ್ಳಲು ಐದು ಮಂದಿ ವಕೀಲರ ತಂಡವನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವರು, ಸಂಸ್ಥೆಯ ಆಡಳಿತ ಮಂಡಳಿಯ ಪುನಾರಚನೆಯ ಬಗ್ಗೆ ಚಿಂತನೆ ನಡೆಯುತ್ತಿದೆ, ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ನಡೆದ ತನಿಖೆಯ ವರದಿ ಸರ್ಕಾರದ ಕೈಸೇರಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.