‘ಸುರಕುಲವಂ ಹಿಂಸಿಸಿ ನಿಷ್ಕರುಣ ತಾ..’ ಎಂದು ಆಂಜನೇಯ ಪಾತ್ರಧಾರಿ ಕಂಚಿನ ಕಂಠದಿಂದ ತಾರಕ ಸ್ವರದಲ್ಲಿ ಲಂಕಾ ವರ್ಣನೆಯಲ್ಲಿ ತೊಡಗಿದರೆ... ತೂಕಡಿಸುತ್ತಿದ್ದವರೂ ಬೆಚ್ಚಿ ದಿಗ್ಗನೆದ್ದು ಕೂತು ಭೇಷ್ ಎಂದು ತಲೆದೂಗಬೇಕು...

ಅಂತಹ ವಾಕ್ಝರಿ, ಸ್ವರಶುದ್ಧಿ, ಮನಮೋಹಕ ಅಭಿನಯ, ಸಾಕ್ಷಾತ್ ಆಂಜನೇಯನೇ ಧರೆಗಿಳಿದು ಬಂದನೋ ಎಂಬಂತಹ ಭಕ್ತಿ ಪರವಶತೆ, ತನ್ಮಯತೆಯ ಮೋಡಿ– ಇದು ಹುಲಿಕಲ್ ನಾಗರಾಜ್ ಅವರ ಅಭಿನಯ ಗಾರುಡಿ.

ತುರುವೇಕೆರೆ ತಾಲ್ಲೂಕಿನ ಹುಲಿಕಲ್ನ ರೈತ ಕುಟುಂಬದಲ್ಲಿ ಹುಟ್ಟಿದ ನಾಗರಾಜ್ ಹಳ್ಳಿಗಾಡಿನ ದೇಸಿ ಸೊಗಡು, ಜನಪದ ವೈವಿಧ್ಯ ಹಾಗೂ ರಂಗ ಲಾಲಿತ್ಯವನ್ನು ಮೈಗೂಡಿಸಿಕೊಂಡು ಬಂದವರು. ಅಜ್ಜ ಪಟೇಲ್ ನಂಜೇಗೌಡ ಹಾಡುತ್ತಿದ್ದ ಗದುಗಿನ ಭಾರತ, ಜೈಮಿನಿ ಭಾರತ, ಹರಿಭಕ್ತಸಾರ ವಾಚನಗಳಿಂದ ಪ್ರಭಾವಿತರಾಗಿದ್ದರು. 12 ವರ್ಷದವರಿದ್ದಾಗ ಶಿವರಾತ್ರಿ ಜಾಗರಣೆಯಂದು ಸ್ವಗ್ರಾಮದಲ್ಲಿ ತಾವೇ ಸ್ವಯಂ ಪ್ರೇರಣೆಯಿಂದ ಹರಿಕಥೆ ಮಾಡುವ ಮೂಲಕ ಗ್ರಾಮಸ್ಥರು ಬೆಕ್ಕಸ ಬೆರಗಾಗುವಂತೆ ಕೀರ್ತನೆ ಹಾಡಿ ಮೈಮರೆಸಿದ್ದರು. ಅದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದ ನಾಗರಾಜ್ ಅವರು ಗಂಗನಘಟ್ಟ ರಂಗದಾಸ್, ಕಲಾ ದಿಗ್ಗಜ ಬಿ.ಎಂ.ನಾರಾಯಣದಾಸ್ ಅವರಲ್ಲಿ ತರಬೇತಿ ಪಡೆದರು.

ನಲ್ಲತಂಗ, ಕಾಡು ಸಿದ್ಧಮ್ಮನ ಕಥೆ, ನಳ ದಮಯಂತಿ, ಲವಕುಶ– ಇವು ನಾಗರಾಜ್ ನಡೆಸಿಕೊಡುವ ಜನಪ್ರಿಯ ಹರಿಕಥೆಗಳು. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಕಳೆದ 35 ವರ್ಷಗಳಿಂದ ನಾಗರಾಜ್ ಹರಿಕಥೆ ನಡೆಸಿಕೊಟ್ಟಿದ್ದಾರೆ. ವರದಕ್ಷಿಣೆ, ಮದ್ಯಪಾನ ನಿಷೇಧ, ಪರಿಸರ ಸಂರಕ್ಷಣೆ, ಜೀತ ನಿರ್ಮೂಲನೆ, ಬಾಲ್ಯ ವಿವಾಹ ನಿಷೇಧ, ಸಾಕ್ಷರತೆ ಮೊದಲಾದ ವಿಷಯಗಳನ್ನು ಉಪಕತೆಗಳನ್ನಾಗಿ ಅಳವಡಿಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಇವರ ಹರಿಕಥೆಗಳ ವೈಶಿಷ್ಟ್ಯ. ಜೊತೆಗೆ ಹೊಸ ಚಿಗುರು, ಹಳೇ ಬೇರು ಕೂಡಿರಲು ಮರಸೊಬಗು ಎಂಬಂತೆ ದಾಸ ಪಂಥದ ಭಕ್ತಿರಸಕ್ಕೆ ಹಳೆಗನ್ನಡ ಕಾವ್ಯಗಳ ಕಂಪನ್ನು ಕಸಿ ಮಾಡಿದವರು ನಾಗರಾಜ್.

ಪಂಪನಿಂದ ಕುವೆಂಪುವರೆಗೆ, ಬೇಂದ್ರೆ, ಜಿಎಸ್ಎಸ್, ಪುತಿನ, ದೊಡ್ಡರಂಗೇಗೌಡ, ಬಿ.ಆರ್.ಲಕ್ಷ್ಮಣರಾವ್ ಮೊದಲಾದವರ ಹಲವು ಕವಿಗಳ ಸಾಲುಗಳನ್ನು ತಮ್ಮ ಕಥಾ ಕೀರ್ತನೆಯ ಪಲ್ಲವಿ, ಅನುಪಲ್ಲವಿಯಾಗಿಸಿಕೊಂಡಿರುವುದು ಅಗ್ಗಳಿಕೆ. ತಮ್ಮೊಂದಿಗೆ ಈ ಕಥಾಕೀರ್ತನೆಯ ಸೊಗಡು ಅಳಿದು ಹೋಗಬಾರದೆಂಬ ಉದ್ದೇಶದಿಂದ ಗ್ರಾಮಾಂತರ ಹರಿಕಥಾ ವಿದ್ವಾಂಸರಿಂದ 70ಕ್ಕೂ ಹೆಚ್ಚು ಹರಿಕಥೆಗಳನ್ನು ಸಂಗ್ರಹಿಸಿ ಪರಿಷ್ಕರಿಸಿ ಅವಕ್ಕೆ ಪೂರಕ ಸಂಗೀತ, ಶ್ಲೋಕ, ವಚನ, ಉಪಮೆಗಳನ್ನು ಅಳವಡಿಸಿ ಮುಂದಿನ ಪೀಳಿಗೆಗೆ ಉಪಯುಕ್ತವಾಗುವಂತೆ ಪುಸ್ತಕ ರೂಪದಲ್ಲಿ ಮುದ್ರಿಸಿದ್ದಾರೆ.

ಹರಿಕತೆಗಳ ಜೊತೆಜೊತೆಗೇ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವುದರಲ್ಲೂ ನಿಷ್ಣಾತರು. ವಿದುರ, ಅರ್ಜುನ, ಶಕುನಿ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಮೇರು ಸ್ತರದಲ್ಲಿ ರಂಗಗೀತೆಗಳನ್ನು ಹಾಡುವುದರಲ್ಲೂ ಸರಿಸಾಟಿಯಾಗಿ ನಿಲ್ಲುವವರು ಅಪರೂಪ.

ನಾಗರಾಜ್ ಅವರನ್ನು ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಕೀರ್ತನ ಕಲಾರತ್ನ, ಕೀರ್ತನ ಚತುರ ಹರಿಕಥಾ ಭೂಷಣ, ಪುರಾಣ ಚಿಂತಕ, ಕೀರ್ತನ ಚಿಂತಾಮಣಿ ಮೊದಲಾದ ಬಿರುದುಗಳನ್ನು ನೀಡಲಾಗಿದೆ. ಕೆಂಪೇಗೌಡ ಪ್ರಶಸ್ತಿ, ದಾಸ ಬಂಧು ಪ್ರಶಸ್ತಿ, ಸಮಾಜ ಸೇತು ಪ್ರಶಸ್ತಿ ದೊರೆತಿವೆ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಾಶ್ಚಾತ್ಯ ಸಂಗೀತದ ಅಬ್ಬರದ ನಡುೆ ಕ್ಷೀಣವಾಗುತ್ತಿರುವ ಕಥಾ ಕೀರ್ತನೆಗೆ ಧ್ವನಿ ಕೊಡುವ ಕಂಚಿನ ಕಂಠ ಹೊಂದಿರುವ ನಾಗರಾಜ್, ಜನಪದ ಹಾಗೂ ದಾಸಸಾಹಿತ್ಯದ ಕಾವಲು ಭಂಟರಾಗಿಯೂ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.