ಭಾನುವಾರ, ಏಪ್ರಿಲ್ 11, 2021
21 °C

ಕುವೆಂಪು ವಿವಿ ನಕಲು ಹಗರಣ: ದೋಷಾರೋಪ ಪಟ್ಟಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ (ಶಿವಮೊಗ್ಗ): ಕುವೆಂಪು ವಿಶ್ವವಿದ್ಯಾಲಯ ಉತ್ತರ ಪತ್ರಿಕೆ ಹಾಗೂ ನಕಲು ಜಾಲ ಭೇದಿಸಿದ ಸ್ಥಳೀಯ ಪೊಲೀಸರು, ಮೂರು ತಿಂಗಳ ಸತತ ಪರಿಶ್ರಮದ ಫಲವಾಗಿ ಸೋಮವಾರ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದರು.ಸುಮಾರು 200 ಪುಟಗಳ ಪ್ರಾಥಮಿಕ ದೋಷಾರೋಪಪಟ್ಟಿ ಸಲ್ಲಿಸಿರುವ ಪೊಲೀಸ್ ಇಲಾಖೆ, ಅದರಲ್ಲಿ ಸುಮಾರು 111 ಸಾಕ್ಷಿದಾರರು ಸೇರಿದಂತೆ 700ಕ್ಕೂ ಅಧಿಕ ದಾಖಲೆಗಳ ಮಾಹಿತಿಯನ್ನು ಸಲ್ಲಿಸಿದೆ. ಇದರಲ್ಲಿ ವಿವಿ ವಿವಿಧ ವಿಭಾಗದ ಸಿಬ್ಬಂದಿ, ಪರೀಕ್ಷಾಂಗ ಸೇರಿದಂತೆ ಇನ್ನಿತರ ಇಲಾಖೆ ಕುಲಸಚಿವರನ್ನು ಸಾಕ್ಷಿದಾರರನ್ನಾಗಿ ಹೆಸರಿಸಲಾಗಿದೆ. ಇದರೊಂದಿಗೆ ಕೆಲವು ಮಹತ್ವ ದಾಖಲೆಗಳನ್ನು ಹಾರ್ಡ್‌ಡಿಸ್ಕ್‌ನಲ್ಲಿ ಶೇಖರಿಸಿಡಲಾಗಿದೆ.ಪಟ್ಟಿಯಲ್ಲಿ ಇಲ್ಲಿಯ ತನಕ 27 ಆರೋಪಿಗಳ ಸಂಪೂರ್ಣ ವಿವರ ನೀಡಲಾಗಿದ್ದು, ಪ್ರತಿಯೊಬ್ಬರ ಮೇಲೆ ಹೊರಿಸಿರುವ ದೂಷಣೆಯನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ. ಈಗ ಸಲ್ಲಿಸಿರುವ ಪಟ್ಟಿ ಕೇವಲ ಉತ್ತರ ಪತ್ರಿಕೆ ಹಾಗೂ ಪ್ರಮಾಣಪತ್ರ ನಕಲು ಜಾಲಕ್ಕೆ ಸೇರಿದ್ದಾಗಿದ್ದು, ಪ್ರಕರಣ ಬೆಳಕಿಗೆ ಬರುವಲ್ಲಿ ಕಾರಣವಾದ ಹಾಲೇಶಪ್ಪ ವಿರುದ್ಧದ ದೂಷಣೆಗೆ ತನಿಖಾಧಿಕಾರಿಗಳು ಪಟ್ಟಿ ಸಲ್ಲಿಸಿಲ್ಲ.ಪ್ರಕರಣದ 25ನೇ ಆರೋಪಿ ಪಿ. ಉಮರ್‌ಪಾಷ, ನಕಲು ಪ್ರಮಾಣಪತ್ರ ಪಡೆದು ಹೊರದೇಶದಲ್ಲಿ ವೈದ್ಯ ವೃತ್ತಿ ನಡೆಸಿದ್ದು, ಈ ಕುರಿತು ವಿವಿ ಅಧಿಕಾರಿಗಳು ಪ್ರತ್ಯೇಕ ದೂರು ದಾಖಲಿಸಿದ್ದರು. ಆದರೆ, ತನಿಖಾಧಿಕಾರಿ ಟಿ. ಶ್ರೀಧರ್ ಅವರು ಆತನನ್ನು ಇದೇ ದೋಷಾರೋಪಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದಾಗಿ ನಮೂದಿಸಿದ್ದಾರೆ. ಈತನ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ ಎಂದು ವಿವರಿಸಿರುವ ತನಿಖಾಧಿಕಾರಿಗಳು, ಈ ದೋಷಾರೋಪ ಪಟ್ಟಿ ಜತೆಗೆ ಅಂತಿಮ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ನಿವೇದನೆ ಸಲ್ಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.