ಸೋಮವಾರ, ಏಪ್ರಿಲ್ 12, 2021
22 °C

ಕೃಷಿಕರ ಮಕ್ಕಳ ಕಡೆಗಣನೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಂದೆ ತಾಯಿಗಳ ಹೆಸರಿನಲ್ಲಿ ಭೂ ದಾಖಲೆ ಇಲ್ಲವೆಂಬ ನೆಪ ಒಡ್ಡಿ ಕೃಷಿಕರ ಮಕ್ಕಳಿಗೆ ಪ್ರವೇಶ ನಿರಾಕರಿಸುತ್ತಿರುವ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕ್ರಮ ಖಂಡನೀಯ ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.ಸೋಮವಾರ ಬೆಂಗಳೂರಿನ ಜಕ್ಕೂರು ಬಳಿಯಲ್ಲಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಮುಂದೆ ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಾಂತ ರೈತ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.ಕೃಷಿಕರ ಕುಟುಂಬದ ಸೌಲಭ್ಯದ ಅಡಿಯಲ್ಲಿ 2012ನೇ ಸಾಲಿನ ಪ್ರವೇಶಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ 191 ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹಾಗೂ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.ಇವತ್ತು ಸಾಕಷ್ಟು ಒಟ್ಟು ಕುಟುಂಬಗಳಲ್ಲಿ ಕುಟುಂಬದ ಹಿರಿಯರ ಹೆಸರಿನಲ್ಲೇ ಭೂ ದಾಖಲೆಗಳು ಇರುತ್ತವೆ. ಆದ್ದರಿಂದ ಕುಟುಂಬದ ಹಿರಿಯರ ಹೆಸರಿನಲ್ಲಿ ಭೂ ದಾಖಲೆ ಇದ್ದರೂ ಪ್ರವೇಶ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.ರಾಜ್ಯದ ಕೌಟಂಬಿಕ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಅರಿತು ಕೃಷಿಕರ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಈ ದಿಸೆಯಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲ ಕೃಷಿ ವಿವಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರವೇಶ ನಿರಾಕರಿಸಿರುವ ವಿದ್ಯಾರ್ಥಿಗಳಿಗೆ ಈ ಕೂಡಲೆ ದಾಖಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಕೆವಿಕೆ ಉಪಕುಲಪತಿ ಡಾ.ನಾರಾಯಣ ಗೌಡ, ಇದು ಸರ್ಕಾರದ ನಿಯಮ. ಈ ಬಗ್ಗೆಗಿನ ಮನವಿಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಕೃಷಿ ಕುಟುಂಬದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.  ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್‌ರಾಜ್ಯ ಸಮಿತಿ ಸದಸ್ಯ ಆರ್.ಚಂದ್ರತೇಜಸ್ವಿ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ, ವಿಜಯಕುಮಾರ್, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ವೀರಣ್ಣ, ಆನೇಕಲ್ ತಾಲ್ಲೂಕು ಅಧ್ಯಕ್ಷ ಶಿವರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.