ಶುಕ್ರವಾರ, ಮಾರ್ಚ್ 5, 2021
16 °C

`ಕೃಷ್ಣಾ'ದಲ್ಲಿ ದೂರುಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೃಷ್ಣಾ'ದಲ್ಲಿ ದೂರುಗಳ ಮಹಾಪೂರ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎರಡನೇ ಅಧಿಕೃತ ಜನತಾ ದರ್ಶನಕ್ಕೆ ಮಂಗಳವಾರ ಜನಸಾಗರವೇ ಹರಿದು ಬಂದಿತ್ತು. ಗೃಹ ಕಚೇರಿ `ಕೃಷ್ಣಾ' ಮುಂದೆ ಬೆಳಗಿನ ಜಾವದಿಂದಲೇ ಜನಜಂಗುಳಿ ಸೇರಿತ್ತು. ವೈದ್ಯಕೀಯ ವೆಚ್ಚ, ಮಾಸಾಶನ, ಉದ್ಯೋಗ ಸೇರಿದಂತೆ ಹಲವು ರೀತಿಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಿಗ್ಗೆ 9.30ಕ್ಕೆ ಆರಂಭವಾದ ಜನತಾದರ್ಶನ ಮಧ್ಯಾಹ್ನ 1ಗಂಟೆವರೆಗೂ ನಡೆಯಿತು. ಕೆಲವು ಮನವಿಗಳನ್ನು ಅಧಿಕಾರಿಗಳೇ ಪಡೆದು ಜನರನ್ನು ವಾಪಸ್ ಕಳುಹಿಸಿದ ಪ್ರಸಂಗವೂ ನಡೆಯಿತು.ತಾಳ್ಮೆಯಿಂದ ಸಮಸ್ಯೆಗಳನ್ನು ಆಲಿಸಿದ ಸಿದ್ದರಾಮಯ್ಯ ಅವರು, ಮನವಿ ಪತ್ರದ ಮೇಲೆ ಟಿಪ್ಪಣಿ ಬರೆದು ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಸೂಚನೆ ನೀಡಿದರು. ಇನ್ನೂ ಕೆಲವು ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಕಳೆದ ಜನತಾದರ್ಶನಕ್ಕೆ ಬಂದಿದ್ದ ಕೆಲವರು ಸಮಸ್ಯೆ ಬಗೆಹರಿಯದೆ ಮತ್ತೊಮ್ಮೆ ಅಹವಾಲು ಸಲ್ಲಿಸಲು ಬಂದಿದ್ದರು.ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಾದೇವ್ ಎಂಬುವರು ತಮಗೆ ಕಿರುಕುಳ ನೀಡಿ ಹಲ್ಲೆ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಹಲಗಯ್ಯನಹುಂಡಿ ಗ್ರಾಮದ ಲಕ್ಷ್ಮಮ್ಮ ಅವರು ಮುಖ್ಯಮಂತ್ರಿ ಮುಂದೆ ಅಳಲು ತೋಡಿಕೊಂಡು ರಕ್ಷಣೆಗಾಗಿ ಕೋರಿದರು.ತಕ್ಷಣ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ, ಲಕ್ಷ್ಮಮ್ಮ ಅವರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿದ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯ ಯುವತಿ ಅನ್ನಪೂರ್ಣ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ50,000 ನೀಡುವುದಾಗಿ ಭರವಸೆ ನೀಡಿದರು.`15 ಎಕರೆ ಜಮೀನು ಇದ್ದರೂ ಬೆಳೆ ಬಂದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದೇವೆ. ದೊಡ್ಡ ರೈತರ ಸಾಲವನ್ನೂ ಸಹ ಮನ್ನಾ ಮಾಡಬೇಕು' ಎಂದು ಚನ್ನಪಟ್ಟಣ ತಾಲ್ಲೂಕಿನ ಚೆಕ್ಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ವಿ. ಜಯರಾಮು ಆಗ್ರಹಪಡಿಸಿದರು. ಮಳೆ ಇಲ್ಲದೆ ತೆಂಗಿನ ಮರಗಳು ಒಣಗಿರುವ ಛಾಯಾಚಿತ್ರಗಳನ್ನು ಅವರು ಮುಖ್ಯಮಂತ್ರಿ ಮುಂದೆ ಪ್ರದರ್ಶಿಸಿದರು.ವರ್ಗಾವಣೆ ಅವಧಿ ಅಂತ್ಯಗೊಳ್ಳುತ್ತಿರುವುದರಿಂದ ಕೆಲವು ಸರ್ಕಾರಿ ನೌಕರರು ಕೊನೆ ಕ್ಷಣದ ಬದಲಾವಣೆಗೆ ಪ್ರಯತ್ನಿಸಲು ಮುಖ್ಯಮಂತ್ರಿ ಬಳಿ ಅರ್ಜಿ ಸಲ್ಲಿಸಿದರು.ಮಂದಿರ ಉದ್ಘಾಟನೆಗೂ ಆಹ್ವಾನ: ರಾಮನಗರ ಜಿಲ್ಲೆಯ ಹಾರೋಹಳ್ಳಿಯ ರೈತರು ಗ್ರಾಮದಲ್ಲಿನ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿದರು. ಆಗಸ್ಟ್ 1ರ ನಂತರ ಬರುವಂತೆ ಮುಖ್ಯಮಂತ್ರಿ ರೈತರಿಗೆ ತಿಳಿಸಿದರು. ಒಂದು ಗಂಟೆ ನಂತರವೂ ಜನರ ದಂಡು `ಕೃಷ್ಣಾ'ದಲ್ಲಿ ಸೇರಿತ್ತು. ಉದ್ದನೆಯ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರ ಅರ್ಜಿಗಳನ್ನು ಅವಸರದಲ್ಲಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಮತ್ತೊಂದು ಸಭೆಗೆ ತೆರಳಿದರು.ಸರ್ಕಾರಿ ಆಸ್ಪತ್ರೆಗಳ ಸುಧಾರಣೆ- ಸಿ.ಎಂ: ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಜನತಾ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮದಲ್ಲಿ ವೈದ್ಯಕೀಯ ನೆರವಿಗಾಗಿ ಹೆಚ್ಚು ಅರ್ಜಿಗಳು ಬರುತ್ತಿವೆ. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ವ್ಯಾಪ್ತಿಗೆ ಒಳಪಡದೇ ಇರುವವರು ವೈದ್ಯಕೀಯ ವೆಚ್ಚ ಭರಿಸುವಂತೆ ನೆರವು ಕೋರುತ್ತಿದ್ದಾರೆ. ಪ್ರಕರಣಗಳ ತೀವ್ರತೆ ಆಧರಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಿಯಮಾನುಸಾರ ಆರ್ಥಿಕ ನೆರವು  ಕಲ್ಪಿಸಲಾಗುವುದು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಸೌಲಭ್ಯಗಳನ್ನು ಉತ್ತಮಪಡಿಸುವ ಅಗತ್ಯವಿದೆ ಎಂದರು.`ಅಧಿಕಾರಿಗಳನ್ನು ನೋಡುವುದಕ್ಕಿಂತಲೂ ಮುಖ್ಯಮಂತ್ರಿ ಅವರನ್ನು ಕಾಣುವುದು ಲೇಸು ಎನ್ನುವ ಅಭಿಪ್ರಾಯ ಮೂಡಿದ್ದರಿಂದ ಜನತಾದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಮುಂದಿನ ಬಾರಿ ಜನತಾ ದರ್ಶನ ಸ್ವರೂಪವನ್ನು ಬದಲಾಯಿಸಿ ಮತ್ತಷ್ಟು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಲು ಪ್ರಯತ್ನಿಸುತ್ತೇವೆ' ಎಂದರು.ಉದ್ಯೋಗಕ್ಕಾಗಿ ಅಳಲು

ಮೊರಾರ್ಜಿ ವಸತಿ ಶಾಲೆ ಶಿಕ್ಷಕರು ಸೇರಿದಂತೆ ಉದ್ಯೋಗಕ್ಕಾಗಿ ಹಲವರು ಮುಖ್ಯಮಂತ್ರಿ ಮುಂದೆ ಅಹವಾಲು ಸಲ್ಲಿಸಿದರು.

ಹೈಕೋರ್ಟ್ ನಿರ್ದೇಶನದಂತೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಮೊರಾರ್ಜಿ ವಸತಿ ಶಾಲೆ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮೊರಾರ್ಜಿ ವಸತಿ ಶಾಲೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಆಗ್ರಹಪಡಿಸಿದರು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದರು.`ಪಿಎಸ್‌ಐ ನೇಮಕಾತಿಗಾಗಿ 2009ರಿಂದ ಕಾಯುತ್ತಿದ್ದೇವೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ. ನಮ್ಮ ವಯಸ್ಸು ಮೀರುತ್ತಿದೆ' ಎಂದು ಬೆಂಗಳೂರಿನ ಯುವತಿ ಟಿ.ಎನ್. ಕುಸುಮಾ ಮುಖ್ಯಮಂತ್ರಿ ಮುಂದೆ ಕಣ್ಣೀರಿಟ್ಟರು.ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳಿಗೆ ಕೆಪಿಎಸ್‌ಸಿ ಪ್ರತಿ ವರ್ಷ ಅರ್ಜಿ ಆಹ್ವಾನಿಸಬೇಕು. ಆದರೆ, ಕಳೆದ ಒಂದು ವರ್ಷದಿಂದ ಅರ್ಜಿ ಆಹ್ವಾನಿಸಿಲ್ಲ. ಇದರಿಂದ ವಯಸ್ಸು ಮೀರುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಎಂದು ಬೆಂಗಳೂರಿನ ಅವಿನಾಶ್ ಅಭಿಪ್ರಾಯಪಟ್ಟರು.ಅಂಗವಿಕಲರ ದಂಡು

ಈ ಬಾರಿಯ ಜನತಾದರ್ಶನಕ್ಕೂ ಅಂಗವಿಕಲರ ದಂಡು ಬಂದಿತ್ತು.ಮೈಸೂರಿನಿಂದ ಬಂದಿದ್ದ ವಿಕಲಚೇತನರ ಅಭ್ಯುದಯ ವೇದಿಕೆ ಪದಾಧಿಕಾರಿಗಳು, `ಆಧಾರ ಯೋಜನೆ ಅಡಿಯಲ್ಲಿ ನೆರವು ಪಡೆದು ಬೀದಿ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳನ್ನಿಟ್ಟು ಬದುಕು ಸಾಗಿಸುತ್ತಿದ್ದೇವೆ. ಆದರೆ, ಬಂಡವಾಳಶಾಹಿಗಳ ಮಾತಿಗೆ ಮಣಿದು ನಗರ ಪಾಲಿಕೆ ಏಕಾಏಕಿ ಈ ಅಂಗಡಿಗಳನ್ನು ತೆರವುಗೊಳಿಸಿದೆ. ನಮಗೆ ಬದುಕಲು ಅವಕಾಶ ಮಾಡಿಕೊಡಿ' ಎಂದು ಅಳಲು ತೋಡಿಕೊಂಡರು.`ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ತಮ್ಮ ಮಗಳು ರಾಜಲಕ್ಷ್ಮಿ 2007ರಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಸೂಕ್ತ ಉದ್ಯೋಗ ಕೊಡಿ' ಎಂದು ರಾಜಲಕ್ಷ್ಮಿ ತಾಯಿ ಶೋಭಾ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.`ನನ್ನ ತಂದೆ ಕ್ಯಾನ್ಸರ್ ಪೀಡಿತರಾಗಿದ್ದಾರೆ. ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಹಣಕಾಸಿನ ನೆರವು ನೀಡಬೇಕು' ಎಂದು ಚಿಕ್ಕಮಗಳೂರಿನ ಅಂಗವಿಕಲ ಹೇಮಂತ ಕೋರಿದರು. ಈ ಬಗ್ಗೆ ಪರಿಶೀಲಿಸಿ ನೆರವು ನೀಡುವುದಾಗಿ ಭರವಸೆ ನೀಡಿದರು.ಪ್ರಮಾಣಪತ್ರಕ್ಕೆ ಲಂಚ: `ನಕಲಿ ಅಂಗವಿಕಲ ಪ್ರಮಾಣಪತ್ರ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಸಾವಿರ ರೂಪಾಯಿ ನೀಡಿದರೆ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಾರೆ. ಲಂಚ ನೀಡಿದರೆ ಮುಖ್ಯಮಂತ್ರಿಗೂ ಅಂಗವಿಕಲರ ಪ್ರಮಾಣ ಪತ್ರ ಕೊಡುತ್ತಾರೆ. ಹೀಗಾಗಿ ನಿಜವಾದ ಅಂಗವಿಕಲರಿಗೆ ಅನ್ಯಾಯವಾಗುತ್ತಿದೆ' ಎಂದು ಅಂಗವಿಕಲ ರಮೇಶ್ ದೂರಿದರು. ಅತಿಥಿ ಉಪನ್ಯಾಸಕರ ನೇಮಕ ಸಂದರ್ಭದಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.