ಕೆನರಾ ಜಿಲ್ಲೆಯ ರೈತ ಕ್ರಾಂತಿಯ ಕಥೆ

7

ಕೆನರಾ ಜಿಲ್ಲೆಯ ರೈತ ಕ್ರಾಂತಿಯ ಕಥೆ

Published:
Updated:

ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರ ‘ಕೆದಂಬಾಡಿ ರಾಮಗೌಡೆರ್‌’ ಒಂದು ವಿಶಿಷ್ಟ ತುಳು ಪುಸ್ತಕ. ಕೆನರಾ ಜಿಲ್ಲೆಯಲ್ಲಿ ನಡೆದ ರೈತರ ವಿಶಿಷ್ಟ ಕ್ರಾಂತಿಯ ಕಥೆಯನ್ನು ಪಾಲ್ತಾಡಿ ಅವರು ಆಸ್ಥೆಯಿಂದ ಸಂಗ್ರಹಿಸಿ, ಕೃತಿರೂಪದಲ್ಲಿ ದಾಖಲಿಸಿದ್ದಾರೆ. ಮೂಲತಃ ವಿದ್ವಾಂಸರಾದ ಪಾಲ್ತಾಡಿ ಅವರೊಳಗಿನ ಚರಿತ್ರಕಾರನ ಶಿಸ್ತು ಹಾಗೂ ಕಥನಕಾರನ ಕಸುಬುದಾರಿಕೆ ಈ ಕೃತಿಯಲ್ಲಿ ಒಡಮೂಡಿವೆ.ಕೃತಿಯ ಅವಲೋಕನ ಒಂದರರ್ಥದಲ್ಲಿ ಸ್ವಾತಂತ್ರ್ಯಪೂರ್ವ ಕರಾವಳಿಯ ಅವಲೋಕನವೂ ಹೌದು. ಮಂಗಳೂರಿನಲ್ಲಿ ಬಿಕರ್ಣ ಕಟ್ಟೆ ಎಂಬ ಊರಿದೆ. ಫ್ಲೈಓವರ್‌ಗಳ ಗಲಾಟೆ, ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿಗಳ ಕೂಡುವಿಕೆಯ ಭರಾಟೆಯಲ್ಲಿ ಬಿಕರ್ಣ ಕಟ್ಟೆ ಎಂಬ ಹೆಸರಿನ ಹಿನ್ನೆಲೆ ಇಂದು ಮರೆತೇ ಹೋಗಿದೆ. ಅದರ ಹೆಸರು ‘ಭೀಕರ ರಣಕಟ್ಟೆ’ ಎಂದಾಗಿತ್ತು. ಆ ಭೀಕರತೆಯ ಹಿಂದೆ ಸ್ವಾತಂತ್ರ್ಯ ಹೋರಾಟದ ರಕ್ತದ ಕಲೆಗಳಿವೆ. ಬ್ರಿಟಿಷರ ಅಮಾನವೀಯತೆಯ ಕಹಿನೆನಪುಗಳಿವೆ. ಕೆನರಾ ಜಿಲ್ಲೆಯ ರೈತರ ಕ್ರಾಂತಿಯ, ಅವರ ಮೊತ್ತ ಮೊದಲ ಸ್ವಾತಂತ್ರ್ಯ ಹೋರಾಟದ ಕುರುಹುಗಳಿವೆ. ಬ್ರಿಟಿಷರು ಹೇರುವ ತೆರಿಗೆಯ ಕಾಟ ತಡೆಯಲಾರದೆ ಕರಾವಳಿಯ ಕೃಷಿಕ ಕುಟುಂಬಗಳು ಒಟ್ಟಾಗಿ, ಬ್ರಿಟಿಷರನ್ನು ಓಡಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟವದು.1790ರ ಸುಮಾರಿಗೆ ಮಂಗಳೂರಿನ ಸಮುದ್ರದಂಡೆ ವಿದೇಶಿಯರಿಗೆ ಸುಲಭವಾಗಿ ಬಂದು ಹೋಗುವ ಹೆಬ್ಬಾಗಿಲು ಆಗಿತ್ತು. ಕೇರಳದ ತಲಚೇರಿಯಲ್ಲಿ ಬಲವಾದ ಸೇನೆ ಹೊಂದಿದ್ದ ಬ್ರಿಟಿಷರಿಗೆ ಮೈಸೂರಿನ ಟಿಪ್ಪುಸುಲ್ತಾನನ್ನು ಸೋಲಿಸಬೇಕಿತ್ತು. ಅದಕ್ಕಾಗಿ ಅವರು ಮಡಿಕೇರಿಯ ಮೂಲಕ ಪ್ರಯಾಣಿಸಬೇಕಾಗಿತ್ತು. ಆ ಕಾಲದಲ್ಲಿ ಇಕ್ಕೇರಿ ವಂಶದವರು ಕೊಡಗನ್ನು ಆಳುತ್ತಿದ್ದರು. ಕೊಡಗಿನ ಮೇಲೆ ಟಿಪ್ಪು ದಾಳಿ ಮಾಡಿದಾಗ ಕೊಡಗರು ಬ್ರಿಟಿಷರ ಪರ ನಿಂತು ಗೆದ್ದರು. ಈ ಮೂಲಕ 1799ರಲ್ಲಿ ಟಿಪ್ಪು ತೀರಿಕೊಂಡು ಸಾಮ್ರೋಜ್ಯವೆಲ್ಲ ಬ್ರಿಟಿಷ್ ವಶವಾಯಿತು ಎಂಬ ಹಿನ್ನೆಲೆಯೊಂದಿಗೆ ಡಾ. ಪಾಲ್ತಾಡಿಯವರು ರೈತ ಕ್ರಾಂತಿಯನ್ನು ಪ್ರಸ್ತುತ ಪಡಿಸುತ್ತಾರೆ.ಮೈಸೂರು ವಶವಾದ ಮೇಲೆ ಬ್ರಿಟಿಷರ ದಬ್ಬಾಳಿಕೆಗೆ ಕೊನೆಮೊದಲು ಎನ್ನುವುದು ಇರಲಿಲ್ಲ. ಉಪ್ಪಿಗೆ ಸುಂಕ ಹೇರಿದರು. ಹೊಗೆಸೊಪ್ಪು ಬೆಳೆಗೂ ಸುಂಕ ಜಡಿಯಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಗೇಣಿಯನ್ನು ಹಣದ ರೂಪದಲ್ಲಿಯೇ ನೀಡಬೇಕು ಎಂದು ಕೃಷಿಕರಿಗೆ ಆಜ್ಞಾಪಿಸಲಾಯಿತು. ಈ ಆದೇಶ ಎಲ್ಲದಕ್ಕಿಂತಲೂ ಭೀಕರವಾಗಿತ್ತು. ಪುತ್ತೂರು ಪೇಟೆಯಲ್ಲಿ ಅಗ್ಗದ ಬೆಲೆಗೆ ದಲ್ಲಾಳಿಗಳು ಬೆಳೆ ಖರೀದಿಸುತ್ತಿದ್ದರು. ಸಾಗಾಟ ದುಸ್ತರವಾಗಿದ್ದ ಕಾಲವದು. ಹಾಗಾಗಿ ಇಡೀ ಕೆನರಾ ಜಿಲ್ಲೆಯ ರೈತರು ಸರ್ಕಾರ ಮತ್ತು ದಲ್ಲಾಳಿಗಳ ನಡುವೆ ಸಿಲುಕು ಬಡತನಕ್ಕೆ ತುತ್ತಾದರು.ಘಟ್ಟದ ಮೇಲೆ ಬ್ರಿಟಿಷರ ವಿರುದ್ಧ ಪ್ರತಿಭಟನೆ–ಹೋರಾಟಗಳು ನಡೆಯುತ್ತಿದ್ದ ದಿನಗಳವು. ಈ ಘಟನೆಗಳ ಕತೆಗಳು ಆಗೊಮ್ಮೆ ಈಗೊಮ್ಮೆ ಕರಾವಳಿಯಲ್ಲೂ ಕೇಳಿಬರುತ್ತಿದ್ದವು. ಹುಲಿಕುಂದ ನಂಜಯ್ಯ ಎಂಬಾತ ಪ್ರಯಾಣ–ಸುತ್ತಾಟಗಳನ್ನು ಮಾಡುತ್ತಿದ್ದುದರಿಂದ ಇಂತಹ ಅನೇಕ ದಂಗೆಗಳನ್ನು ಆತ ನೋಡಿದ್ದ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸೆಣಸಿದ ಘಟನೆಯಂತೂ ಕೆನರಾ ಜಿಲ್ಲೆಯ ರೈತರಲ್ಲಿ ಹುಮ್ಮಸ್ಸು ಮೂಡಿಸಿತ್ತು. ಚೆನ್ನಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಬಂಧಿಸಿ ರಲ್ಲಿ ಮರಣ ದಂಡನೆ ವಿಧಿಸಿದ್ದು ಎಲ್ಲವೂ ಬ್ರಿಟಿಷರ ಮೇಲಿನ ಸಿಟ್ಟನ್ನು ಇಮ್ಮಡಿಗೊಳಿಸಿದವು.ಆದರೆ ಕೆನರಾ ಜಿಲ್ಲೆಯ ಜನತೆಯಲ್ಲಿ ಯಾವುದೇ ಸಂಘಟನೆ ಇರಲಿಲ್ಲ. ಪುತ್ತೂರು ಸುಳ್ಯ ಕಡೆ ಇದ್ದ ಗೌಡ ಸಮುದಾಯದವರು ಹೊರಗಿನಿಂದ ಬಂದವರಾದ್ದರಿಂದ ಅವರ ಕುಟುಂಬಗಳಿಗೆ ಐನಿಮನೆಗಳು ನೇತೃತ್ವ ವಹಿಸುತ್ತಿದ್ದವು. ಬಹುಶಃ ಆಗ ಒಟ್ಟು 9 ಐನಿಮನೆಗಳಿದ್ದವು. ಆ ಪೈಕಿ ಒಂದು ಐನಿಮನೆಗೆ ಕೆದಂಬಾಡಿ ರಾಮಗೌಡ ಎಂಬಾತ ಮುಖ್ಯಸ್ಥನಾಗಿದ್ದ. ನಂಜಯ್ಯ ಹೇಳಿದ ಕತೆಗಳನ್ನು ಕೇಳಿದ ರಾಮಪ್ಪನಿಗೆ ಅಂತಹ ದಂಗೆ ತಮ್ಮ ಪ್ರದೇಶದಲ್ಲೂ ಅನಿವಾರ್ಯ ಎನಿಸಿತ್ತು. ಆದರೇನು ಮಾಡುವುದು.. ಕಿತ್ತೂರು ರಾಣಿಯಂತಹ ಸಮರ್ಥ ನೇತೃತ್ವ ಬೇಕಲ್ಲ. ಕೆನರಾ ಜಿಲ್ಲೆಯ ನಂದಾವರದಲ್ಲಿ ಲಕ್ಷ್ಮಪ್ಪ ಬಂಗರಸ, ವಿಟ್ಲದಲ್ಲಿ ಡೊಂಬ ಹೆಗಡೆ, ಕುಂಬ್ಳೆಯಲ್ಲಿ ರಾಮಂತರಸರು ರಾಜ್ಯಭಾರ ಮಾಡುತ್ತಿದ್ದರೂ ಎಲ್ಲರೂ ಪುಟ್ಟ ಪುಟ್ಟ ತುಂಡರಸರು. ಒಬ್ಬರೊಡನೆ ಒಬ್ಬರು ಸೇರುವುದು, ಒಗ್ಗಟ್ಟಾಗುವುದು ಅಷ್ಟಕ್ಕಷ್ಟೆ. ಆದರೆ ವೈಯಕ್ತಿಕವಾಗಿ ಎಲ್ಲರೂ ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು.ಸಾಮಾನ್ಯವಾಗಿ ಒಂದು ಊರಿನಲ್ಲಿ ಪಕ್ಕದ ಮನೆಯವರಿಗಿಂತಲೂ ದೂರದ ಊರಿನಿಂದ ಬಂದ ಅನಾಮಿಕ ಅತಿಥಿಯೇ ಹೆಚ್ಚು ಮರ್ಯಾದೆ ಗಿಟ್ಟಿಸಿಕೊಳ್ಳುತ್ತಾನೆ. ಪರಸ್ಪರ ತಗಾದೆಗಳಿದ್ದಾಗ ಮೂರನೆಯವರ ನ್ಯಾಯವೇ ಮೇಲು ಅನಿಸುತ್ತದೆ. ಈ ಮನೋವೈಜ್ಞಾನಿಕ ಲೆಕ್ಕಾಚಾರ ಹಾಕಿದ ಕೆದಂಬಾಡಿ ರಾಮಪ್ಪ ಮತ್ತು ನಂಜಯ್ಯ ಒಂದು ಉಪಾಯ ಹೂಡಿದರು. ಅರಸರು ಮತ್ತು ಐನಿಮನೆ ಮುಖಂಡರು ಒಪ್ಪುವಂತಹ ಒಬ್ಬ ರಾಜನನ್ನು ಸೃಷ್ಟಿಸುವ ಉಪಾಯವದು.ಪರವೂರಿನ ರಾಜನಾದರೆ ಎಲ್ಲರೂ ಆತನ ಮಾತು ಕೇಳುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಅವರಿಗೆ ಹೊಳೆದುದು– ಪಕ್ಕದಲ್ಲೇ ಇರುವ ರಾಜ್ಯ ಕೊಡಗು. ಬಹುತೇಕ ಕೊಡವರು ಬ್ರಿಟಿಷ್ ಸೇನೆಯಲ್ಲಿ ಇರುವುದರಿಂದ, ಬ್ರಿಟಿಷ್ ಪರ ಇರುವುದರಿಂದ ಅವರ ಮೇಲಿನ ವಿಶ್ವಾಸ ಕಡಿಮೆ. ಆದರೆ ಕೊಡಗಿನ ರಾಜ್ಯಾಡಳಿತದ ಕತೆಗಳು ಗೊತ್ತಿರುವ, ಮನೆತನದ ಪುರುಪುಟ್ಟೆಗಳು ಗೊತ್ತಿರುವ ಒಬ್ಬ ವ್ಯಕ್ತಿಯನ್ನು ಕೆದಂಬಾಡಿ ರಾಮಪ್ಪ ಕೊಡಗಿನ ಶನಿವಾರಸಂತೆಯಲ್ಲಿ ಪತ್ತೆ ಮಾಡಿದ. ಆತನ ಹೆಸರು ಪುಟ್ಟ ಬಸಪ್ಪ ಅಂತ. ಕೊಡಗಿನಲ್ಲಿ ಸೇನೆಯಲ್ಲಿದ್ದ ಆತ ಮೂಲತಃ ವೀರಶೈವ ಹಾಗೂ ರೈತಾಪಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದವ. ಅವನಿಗೆ ಕಲ್ಯಾಣಸ್ವಾಮಿ ಎಂದು ನಾಮಕರಣ ಮಾಡಿ, ರಾಜ ಪೋಷಾಕು ಹಾಕಿಸಿದ ರಾಮಪ್ಪ, ಬ್ರಿಟಿಷರ ವಿರುದ್ಧ ದಂಡೆತ್ತಿ ಹೋಗುವ ಕಾರ್ಯತಂತ್ರ ಸಿದ್ಧಪಡಿಸಿದ.ಎಲ್ಲವೂ ಅಂದುಕೊಂಡಂತೆಯೇ ಆಯಿತು. ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ದಂಡು ಸಿದ್ಧವಾಯಿತು. ಉಬರಡ್ಕದ ಮಿತ್ತೂರು ಬಳಿಯ ಕೆದಂಬಾಡಿ ರಾಮಗೌಡರ ಮನೆಯಲ್ಲಿ ಮಾತುಕತೆ ನಡೆಯಿತು. ಮಂಗಳೂರಿಗೆ ತೆರಳಿ ಬ್ರಿಟಿಷರೊಂದಿಗೆ ಹೋರಾಡುವುದು ಎಂದು ನಿರ್ಧಾರ ಆಯಿತು. ಅಷ್ಟರಲ್ಲಿ ವಿಷಯ ಪುತ್ತೂರಿನ ತಹಸೀಲ್ದಾರ್‌ಗೆ ತಿಳಿಯಿತು. ಅವರು ವಿಷಯವನ್ನು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಲು ಮಂಗಳೂರಿಗೆ ಹೊರಟರು. ದಂಡಿನ ಜನರಿಗೆ ಆ ಅಧಿಕಾರಿಯನ್ನು ಕೊಲ್ಲದೆ ಬೇರೆ ದಾರಿ ಇರಲಿಲ್ಲ. ಕೊನೆಗೆ ಸುಳ್ಯದ ಬೆಳ್ಳಾರೆ ಎಂಬಲ್ಲಿ ರಾಜ ದರ್ಬಾರು ನಡೆಸಿ, ನಿಗದಿಯಾದ ದಿನಕ್ಕಿಂತಲೂ ಮೊದಲೇ ಕಲ್ಯಾಣಸ್ವಾಮಿ ನೇತೃತ್ವದಲ್ಲಿ ದಂಡು ಹೊರಟಿತು. ಡೊಂಬರಸ, ಲಕ್ಷ್ಮಪ್ಪ ಬಂಗರಸ, ರಾಮಂತರಸರು, ಕುಡುಮ ರಾಮಯ್ಯ ಹೆಗಡೆ, ಬಂಟರು ಮತ್ತು ಬಿಲ್ಲವ ಸಮುದಾಯದ ವೀರ ಸೈನಿಕರು ಜೊತೆಯಾದರು. ಒಂದು ತಂಡ ಸುಬ್ರಹ್ಮಣ್ಯದ ಕಡೆಯಿಂದ ಜನ ಸೇರಿಸಲು ಹೊರಟಿತು.ರಾಜ ಕಲ್ಯಾಣ ಸ್ವಾಮಿಯ ಈ ದಂಡಯಾತ್ರೆ ತುಳುನಾಡಿನಲ್ಲಿ ಹಲವಾರು ಐತಿಹ್ಯಗಳನ್ನೇ ಸೃಷ್ಟಿಸಿದೆ ಎನ್ನುವುದು ಪಾಲ್ತಾಡಿಯವರ ಅಭಿಮತ. ಸುಳ್ಯದ ಬೆಳ್ಳಾರೆಯಿಂದ ಮಂಗಳೂರು ತಲುಪುವಾಗ ಕಲ್ಯಾಣ ಸ್ವಾಮಿಯ ದಂಡಿನವರು ಸಂಪನ್ಮೂಲ ಸಂಗ್ರಹಿಸುತ್ತಿದ್ದರು. ದಾರಿಯಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದರು. ಬ್ರಿಟಿಷರ ಪರವಾಗಿದ್ದವರನ್ನು ಬಡಿದರು. ದೇವಸ್ಥಾನಗಳಲ್ಲಿ ಉಂಡರು. ಬಂಟ್ವಾಳದ ಕೈಂತಿಲ ಎಂಬಲ್ಲಿ ಹತ್ಯಾರುಗಳನ್ನು ಸಂಗ್ರಹಿಸಿದರು. ಹೋರಾಟ, ಸೇನೆ, ದಂಡಯಾತ್ರೆಯ ಪರಿಕಲ್ಪನೆಯ ಬಗ್ಗೆ ಹೆಚ್ಚಿನ ಅರಿವೇ ಇಲ್ಲದಿದ್ದರೂ ಬ್ರಿಟಿಷರ ಮೇಲಿನ ಕಿಚ್ಚಿನಿಂದ ಜನರು ದಂಡು ಸೇರಿದರು. 1837ರ ಏಪ್ರಿಲ್ 5ರಂದು ದಂಡು ಮಂಗಳೂರು ತಲುಪಿತು. ಬ್ರಿಟಿಷರನ್ನು ಸದೆಬಡಿದು ಓಡಿಸಿ, ಮೊತ್ತ ಮೊದಲ ಸ್ವತಂತ್ರ ತುಳು ರಾಜ್ಯವನ್ನು ಸ್ಥಾಪಿಸಿಯೂ ಆಯಿತು. ಕಲ್ಯಾಣ ಸ್ವಾಮಿಗೆ ಪಟ್ಟಾಭಿಷೇಕ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯ ಮುಂದಿದ್ದ ಯೂನಿಯನ್ ಜಾಕ್ ಸುಟ್ಟು  ತ್ರಿವರ್ಣ ಧ್ವಜ ಏರಿಸಿದರು. ಬಾವುಟ ಗುಡ್ಡೆಯವರೆಗೆ ಮೆರವಣಿಗೆ ಮಾಡಿ ಅಲ್ಲಿಯೂ ತ್ರಿವರ್ಣ ಧ್ವಜ ಹಾರಿಸಿದರು.‘ಎರಡು ವರ್ಷ ಯಾರೂ ಗೇಣಿಯೇ ಕೊಡಬೇಕಾಗಿಲ್ಲ, ಉಪ್ಪಿಗೆ, ಹೊಗೆಸೊಪ್ಪಿಗೆ ಸುಂಕ ಇಲ್ಲ. ವಸ್ತುರೂಪದಲ್ಲಿ ತೆರಿಗೆ ಕೊಡಬಹುದು’ ಎನ್ನುವ ಫರ್ಮಾನು ಹೊರಟಿತು. ಹದಿಮೂರು ದಿನಗಳ ಕಾಲ ಕಲ್ಯಾಣರಾಮನ ರಾಜ್ಯಭಾರ ನಡೆಯುವಷ್ಟರಲ್ಲಿ ಬ್ರಿಟಿಷರು ಮುಂಬಯಿಯಿಂದ ಸೈನ್ಯ ತಂದರು. ಭಾರೀ ಕಾಳಗದಲ್ಲಿ ಕೆದಂಬಾಡಿ ರಾಮಪ್ಪ, ಹುಲಿಕುಂದ ನಂಜಯ್ಯ ಮಡಿದರು.ನಂದಾವರ ಬಂಗರಸುಗಳನ್ನು 1837ರ ಮೇ 27ರಂದು, ರಾಜ ಕಲ್ಯಾಣ ಸ್ವಾಮಿ ಮತ್ತು ಉಪ್ಪಿನಂಗಡಿಯ ಮಂಜಪ್ಪ ಎಂಬಾತನನ್ನು ಜೂನ್ 19ರಂದು ಹಾಗೂ ಗುಡ್ಡೆಮನೆ ಅಪ್ಪಯ್ಯ ಎಂಬವರನ್ನು ಅಕ್ಟೋಬರ್ 31ರಂದು ಬಿಕರ್ಣಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಅವರ ಶವಗಳನ್ನು ಯಾರಿಗೂ ಮುಟ್ಟಲು ಬಿಡದೇ ದಿನಗಟ್ಟಲೇ ಕಾಗೆ ಹದ್ದುಗಳು ತಿಂದು ಮುಗಿಯುವಂತೆ ನೋಡಿಕೊಳ್ಳಲಾಯಿತು.ಅದಕ್ಕಿಂತಲೂ ಹೆಚ್ಚಾಗಿ ರೈತರ ಈ ಕ್ರಾಂತಿಯನ್ನು ಕಲ್ಯಾಣರಾಮ ಎಂಬ ಒಬ್ಬ ‘ಕಳ್ಳನ ದರೋಡೆ ಯಾತ್ರೆ’ ಎಂದು ಬಿಂಬಿಸಲಾಯಿತು. ದರೋಡೆಕೋರರಿಗೆ ಯೂನಿಯನ್ ಜಾಕ್ ಸುಡುವ ಕೆಚ್ಚು ಎಲ್ಲಿಂದ ಬಂತು ಎಂದು ಕೇಳುವ ಧೈರ್ಯವನ್ನು ಯಾರೂ ಪ್ರದರ್ಶಿಸಲಿಲ್ಲ. 

ಇತಿಹಾಸದಲ್ಲಿ ಹುದುಗಿದ ಈ ರೈತಕ್ರಾಂತಿಯ ಪ್ರಸಂಗವನ್ನು ಪಾಲ್ತಾಡಿ ರಾಮಕೃಷ್ಣ ಆಚಾರ್‌ ಸಾಕಷ್ಟು ಶ್ರದ್ಧೆಯಿಂದ ಸಂಗ್ರಹಿಸಿ ಕೃತಿರೂಪದಲ್ಲಿ ನಿರೂಪಿಸಿದ್ದಾರೆ. ಕಥನದಂತೆ, ಸ್ವಾತಂತ್ರ್ಯ ಚಳವಳಿಯ ದಾಖಲೆಯಂತೆ, ರೈತರ ಸ್ವಾಭಿಮಾನಗಾಥೆಯಂತೆ ಈ ಪುಸ್ತಕ ಓದಿಸಿಕೊಳ್ಳುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲೇ ಇಂಥ ರೈತ ಹೋರಾಟಗಳು ಸಾಕಷ್ಟಿಲ್ಲ ಎನ್ನುವುದು ಈ ಕಥನದ ಹಾಗೂ ಕೃತಿಯ ಹೆಚ್ಚುಗಾರಿಕೆ. ಇಷ್ಟು ಸೊಗಸಾದ ಕಥನವನ್ನು ತುಳು ಪ್ರಕಟಿಸಿರುವ ತುಳು ಸಾಹಿತ್ಯ ಅಕಾಡೆಮಿ, ಪುಸ್ತಕ ಮುದ್ರಣದ ಗುಣಮಟ್ಟದತ್ತ ನಿರಾಸಕ್ತಿ ವಹಿಸಿದಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry