ಶುಕ್ರವಾರ, ಮೇ 20, 2022
21 °C

ಕೆಪಿಎಸ್‌ಸಿ: ಇಬ್ಬರು ನ್ಯಾಯಾಂಗ ಬಂಧನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಾಥ್ ಚಿಕ್ಕಮಠ ಮತ್ತು ಬೆಂಗಳೂರು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ಅವರನ್ನು ಶುಕ್ರವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಸಿಐಡಿ ಪೊಲಿಸರು ಬುಧವಾರ ಮಧ್ಯಾಹ್ನ ಆರೋಪಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರ ಎದುರು ಹಾಜರುಪಡಿಸಿದರು. ಇದೇ ವೇಳೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ತನಿಖಾ ಸಂಸ್ಥೆ ಹಾಗೂ ಆರೋಪಿಗಳ ಪರ ವಕೀಲರ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು. ಅಲ್ಲಿಯವರೆಗೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.`ಸೋಮನಾಥ್ ಚಿಕ್ಕಮಠ ಮತ್ತು ಸುಧೀರ್ ಅವರಿಗೂ ಕೆಪಿಎಸ್‌ಸಿ ಹಗರಣಕ್ಕೂ ಸಂಬಂಧ ಇಲ್ಲ. ಖಾಸಗಿ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಬೇರೆ ಯಾವುದೇ ರೀತಿಯ ಸಾಕ್ಷ್ಯಗಳೂ ತನಿಖಾ ತಂಡದ ಬಳಿ ಇಲ್ಲ. ಇಬ್ಬರ ವಿರುದ್ಧವೂ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು' ಎಂದು ಆರೋಪಿಗಳ ಪರ ವಕೀಲರು ಮನವಿ ಮಾಡಿದರು.ಆದರೆ, ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿಐಡಿ ಪರ ವಕೀಲರು, `ಈ ಪ್ರಕರಣದಲ್ಲಿ ಆರೋಪಿಗಳು ಪ್ರಮುಖ ಪಾತ್ರ ನಿರ್ವಹಿಸಿರುವ ಬಗ್ಗೆ ಸಾಕ್ಷ್ಯಗಳಿವೆ. ಇಬ್ಬರನ್ನೂ ಇನ್ನಷ್ಟು ಕಾಲ ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬಾರದು. ಜಾಮೀನು ದೊರೆತಲ್ಲಿ ಸಾಕ್ಷ್ಯನಾಶಕ್ಕೆ ಯತ್ನಿಸುವ ಸಾಧ್ಯತೆಯೂ ಇದೆ' ಎಂದು ವಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.