ಸೋಮವಾರ, ಮೇ 17, 2021
25 °C

ಕೊಲೆ- 9 ಮಂದಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ ಪ್ರಕರಣವೊಂದರ ಅಪರಾಧಿಗಳಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಆಕ್ರೋಶಗೊಂಡ ಅಪರಾಧಿಗಳ ಸಂಬಂಧಿಕರು ನ್ಯಾಯಾಲಯ ಕೊಠಡಿಯಲ್ಲಿನ ಪೀಠೋಪಕರಣಗಳು ಮತ್ತು ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿರುವ ಘಟನೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ನಡೆದಿದೆ.ವಿಲ್ಸನ್ ಗಾರ್ಡನ್ ನಿವಾಸಿ ಕೆ.ಪಿ.ಜಡ್.ಹುಸೇನ್ (60) ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರು ಒಂಬತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಬೆಳಿಗ್ಗೆ ಆದೇಶ ನೀಡಿದರು.ಈ ವೇಳೆ ನ್ಯಾಯಾಲಯ ಕೊಠಡಿಯಲ್ಲಿದ್ದ ಅಪರಾಧಿಗಳ ಸಂಬಂಧಿಕರು ಮತ್ತು ಬೆಂಬಲಿಗರು, ನ್ಯಾಯಾಧೀಶರ ಆದೇಶದಿಂದ ವಿಚಲಿತರಾಗಿ ಪೀಠೋಪಕರಣಗಳನ್ನು ಜಖಂಗೊಳಿಸಿದರು. ಅಲ್ಲದೇ ಕಿಟಕಿಗಳ ಗಾಜನ್ನು ಕೈನಿಂದಲೇ ಒಡೆದು ಹಾಕಿದರು. ಮತ್ತೆ ಕೆಲವರು ಕೊಠಡಿ ಬಳಿ ಇದ್ದ ಸೂಚನಾಫಲಕಕ್ಕೆ ತಲೆಯಿಂದ ಗುದ್ದಿ ಆಕ್ರೋಶ ವ್ಯಕ್ತಪಡಿಸಿದರು.

 

ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಎಲ್ಲ ಗೊಂದಲಗಳ ನಡುವೆ ಪೊಲೀಸರು ಅಪರಾಧಿಗಳನ್ನು ವಶಕ್ಕೆ ತೆಗೆದುಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ಘಟನೆ ಸಂಬಂಧ ದಾಂಧಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಆರೋಪದ ಮೇಲೆ ಹಲಸೂರುಗೇಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಪ್ರಕರಣದ ಹಿನ್ನೆಲೆ: ಪ್ರಾರ್ಥನಾ ಮಂದಿರವೊಂದರ ಸಮಿತಿಯ ಸದಸ್ಯರ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಹುಸೇನ್ ಅವರು ರಾಜ್ಯ ವಕ್ಫ್ ಬೋರ್ಡ್‌ಗೆ ದೂರು ನೀಡಿದ್ದರು. ಅಲ್ಲದೇ ಆ ಪ್ರಾರ್ಥನಾ ಮಂದಿರದ ಕಟ್ಟಡ ನಿರ್ಮಾಣಕ್ಕೆ ಅವರು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಕೊಲೆ ನಡೆದಿತ್ತು.ಈ ಕೊಲೆ ಪ್ರಕರಣದ ಅಪರಾಧಿಗಳಾದ ಮುಜು, ಸಾದಿಕ್ ಅಲಿಯಾಸ್ ಗ್ಯಾಸ್ ಸಾದಿಕ್, ಅಪ್ಪು, ಚೌಧರಿ, ಅಬ್ದುಲ್ ಕರೀಂ, ಅಬ್ದುಲ್ ರಹೀಂ, ರಫೀಕ್, ರಿಜ್ವಾನ್ ಹಾಗೂ ಟಿಪ್ಪು ಅವರಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇದರ ಜೊತೆಗೆ, ಮೃತ ಹುಸೇನ್ ಅವರ ಪತ್ನಿ ಹಸೀನಾ ತಾಜ್ ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಪರಾಧಿಗಳಿಗೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.ಅಪರಾಧಿಗಳು ಹುಸೇನ್ ಅವರ ಮನೆಯ ಪಕ್ಕದಲ್ಲಿ ಪ್ರಾರ್ಥನಾ ಮಂದಿರ ಕಟ್ಟಲು ಮುಂದಾಗಿದ್ದರು. ಇದಕ್ಕೆ ಹುಸೇನ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಪರಾಧಿಗಳು ಕೋಪಗೊಂಡು ಅವರನ್ನು 2006ರ ಫೆಬ್ರುವರಿ 25ರಂದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಸಂಬಂಧ ಮೃತರ ಪುತ್ರಿ ತಮೀಮ್ ಅನ್ಸಾರಿ ಅವರು ಕೊಟ್ಟ ದೂರಿನ ಮೇರೆಗೆ ವಿಲ್ಸನ್‌ಗಾರ್ಡನ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಪಿ.ಗೋಪಾಲರೆಡ್ಡಿ ಮತ್ತು ಸಿಬ್ಬಂದಿ ಆ ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣ ಸಂಬಂಧ ಮಾ.30ರಂದು ಶಿಕ್ಷೆಯ ಪ್ರಮಾಣ ನಿಗದಿ ಮಾಡುತ್ತಿದ್ದಂತೆ ಮೊದಲ ನಾಲ್ವರು ಅಪರಾಧಿಗಳು ಪೊಲೀಸರ ಕೈಗೆ ಸಿಗದೆ ನ್ಯಾಯಾಲಯ ಆವರಣದಿಂದಲೇ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಸೋಮವಾರ ಹಾಜರುಪಡಿಸಿದರು. ಸರ್ಕಾರದ ಪರ ವಾದಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಣಪತಿ ಪ್ರಸನ್ನ ಅವರು ನೀಡಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದರು.ಅಪರಾಧಿಗಳ ಬೆಂಬಲಿಗರಿಂದ ತಮಗೆ ಮತ್ತು ನ್ಯಾಯಾಧೀಶರಿಗೆ ಬೆದರಿಕೆ ಇದೆ ಎಂದು ಗಣಪತಿ ಪ್ರಸನ್ನ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.