ಶನಿವಾರ, ಜೂಲೈ 4, 2020
23 °C

ಕ್ರೈಸ್ತ ಧರ್ಮ ಪ್ರಚಾರಕನಿಗೆ ಮರಕ್ಕೆ ಕಟ್ಟಿ ಒದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೈಸ್ತ ಧರ್ಮ ಪ್ರಚಾರಕನಿಗೆ ಮರಕ್ಕೆ ಕಟ್ಟಿ ಒದೆ

ಮಡಿಕೇರಿ: ಕ್ರೈಸ್ತ ಧರ್ಮದ ಮತಾಂತರ ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇರೆಗೆ ನಾಲ್ವರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದಲ್ಲದೆ, ಒಬ್ಬನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಸ್ತೂರಿನಲ್ಲಿ  ಶನಿವಾರ ನಡೆದಿದೆ.

ಮಡಿಕೇರಿಯ ಮಂಗಳಾದೇವಿ ನಗರದ ಎ.ಜೆ. ದಿವಾಕರ್ ಎಂಬುವರೇ ಥಳಿತಕ್ಕೆ ಒಳಗಾದ ವ್ಯಕ್ತಿ. ಇವರ ಜೊತೆ ಮತಾಂತರಕ್ಕೆ ಸಂಬಂಧಿಸಿದ  ಕರಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇರೆಗೆ ಪತ್ನಿ ಪೆಲ್ಸಿ, ಇತರರಾದ ಸುನೀತಾ, ಎಗ್ನಿಸ್ ಅವರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದರು. ಆದರೆ,  ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಮಹಿಳೆಯರು ಪೆಟ್ಟು ತಿನ್ನದೆ ಬಚಾವಾದರು.

ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಪೆಲ್ಸಿ ಹಾಗೂ ಎ.ಜೆ. ದಿವಾಕರ್ ದಂಪತಿ ರಹಸ್ಯವಾಗಿ ಜನರಿಗೆ ಕರಪತ್ರಗಳನ್ನು ಹಂಚುತ್ತಿದ್ದರು ಎಂದು  ಸ್ಥಳೀಯರು ಆರೋಪಿಸಿದ್ದಾರೆ. ಜಪಾನ್‌ನಲ್ಲಿ ಭೂಕಂಪ ಹಾಗೂ ಸುನಾಮಿ ಸಂಭವಿಸಿದ ಅನಾಹುತವನ್ನು ಪ್ರಸ್ತಾಪಿಸುತ್ತಿದ್ದ ಇವರು, ಇದಕ್ಕಾಗಿ ಯೇಸು ಕ್ರಿಸ್ತನಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿದರೆ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಂದ ಪಾರಾಗಬಹುದು ಎಂದು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ದೇವಸ್ತೂರಿನಲ್ಲಿ ಶನಿವಾರ ‘ದೇವರ ಕಟ್ಟು’ ಹಬ್ಬ ಇತ್ತು. ಹಬ್ಬದ ಪ್ರಯುಕ್ತ ಗ್ರಾಮಸ್ಥರೆಲ್ಲಾ ಊರಿನೊಳಗೇ ಇದ್ದುದನ್ನು ಅರಿತ ಧರ್ಮ ಪ್ರಚಾರಕರು, ಬಹಿರಂಗವಾಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದಿವಾಕರ್ ಆಟೋ ಚಾಲಕನಾಗಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.