ಭಾನುವಾರ, ಮೇ 22, 2022
22 °C

ಕ್ಷಿಪ್ರ ಕಾರ್ಯಪಡೆ ಪಥಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಷಿಪ್ರ ಕಾರ್ಯಪಡೆ ಪಥಸಂಚಲನ

ಚಿತ್ರದುರ್ಗ: ಕ್ಷಿಪ್ರ ಕಾರ್ಯಪಡೆಯ ಯೋಧರು ನಗರದಲ್ಲಿ ಭಾನುವಾರ ಪಥಸಂಚಲನ ಮಾಡುವ ಮೂಲಕ ಸಾರ್ವಜನಿಕರಿಗೆ ತಮ್ಮ ಅಸ್ತಿತ್ವ, ಸಾಮರ್ಥ್ಯ ಪ್ರದರ್ಶಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯೂ ಈ ಪಥಸಂಚಲನದಲ್ಲಿ ಸಹಯೋಗ ನೀಡಿತು.ಒಂದು ವಾರದಿಂದ ಜಿಲ್ಲೆಯಲ್ಲಿ ಠಿಕಾಣಿ ಹೂಡಿರುವ ಕ್ಷಿಪ್ರ ಕಾರ್ಯಪಡೆಯ 30 ಯೋಧರು ಸಹಾಯಕ ಕಮಾಂಡರ್ ಆರ್.ಎನ್. ಸಿಂಗ್ ನೇತೃತ್ವದಲ್ಲಿ ಪಥಸಂಚಲನ ನಡೆಸಿದರು.‘ಕ್ಷಿಪ್ರ ಕಾರ್ಯಪಡೆಯ ಯೋಧರಿಗೆ ಈ ಪ್ರದೇಶವನ್ನು ಪರಿಚಯಿಸುವ ಉದ್ದೇಶದಿಂದ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳು ಕೊಯಿಮತ್ತೂರಿನಲ್ಲಿರುವ ಕೇಂದ್ರ ಕಚೇರಿಯ ವ್ಯಾಪ್ತಿಗೆ ಒಳಪಡುತ್ತವೆ’ ಎಂದು ಆರ್.ಎನ್. ಸಿಂಗ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.‘ಹಿಂಸಾಚಾರ ತಡೆಗಟ್ಟುವುದು ಕ್ಷಿಪ್ರ ಕಾರ್ಯಪಡೆಯ ಉದ್ದೇಶ. ಸಾಮಾನ್ಯವಾಗಿ ಎರಡು ವರ್ಷದಲ್ಲಿ ಒಂದು ಬಾರಿ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗತಿ ಹಾಗೂ ಸೂಕ್ಷ್ಮಪ್ರದೇಶಗಳ ಕುರಿತು ಸಮಗ್ರ ವಿವರಗಳನ್ನು ಸಂಗ್ರಹಿಸುತ್ತೇವೆ. ಇದರಿಂದ ಹಿಂಸಾಚಾರಗಳನ್ನು ಹತ್ತಿಕ್ಕಲು ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಕ್ಷಿಪ್ರ ಕಾರ್ಯಪಡೆ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಂಡು ನಿರೋಧಕ ಕವಚ ಸೇರಿದಂತೆ ವಿವಿಧ ರಕ್ಷಣಾ ಕವಚಗಳನ್ನು ಹೊಂದಿದೆ.ಸೂಕ್ಷ್ಮ ಸಂದರ್ಭಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಾನಿಯಾಗುವುದನ್ನು ತಪ್ಪಿಸುವ ಬಗ್ಗೆ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ’ ಎಂದು ವಿವರಿಸಿದರು.ಕಳೆದ ಒಂದು ವಾರದಲ್ಲಿ ಕ್ಷಿಪ್ರ ಕಾರ್ಯಪಡೆ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.