ಭಾನುವಾರ, ಜೂನ್ 13, 2021
23 °C

ಖಾಸಗಿಯವರ ನೀರಿನ ಮರ್ಜಿ: ಜನ ಆಕ್ರೋಶ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಗ್ರಾಮ ಪಂಚಾಯಿತಿಗೆ ಸೇರಿದ ಪೈಪ್‌ಗಳಲ್ಲಿ ಖಾಸಗಿ ವ್ಯಕ್ತಿಗಳು ಕುಡಿಯುವ ನೀರು ಸರಬರಾಜು ಮಾಡಿ, ಹಣ ವಸೂಲಿ ಮಾಡುತ್ತಿರುವ ಆತಂಕಕಾರಿ ಪ್ರಸಂಗ ದಾಸರಹೊಸಹಳ್ಳಿ ಬಳಿಯ ಕುವೆಂಪು ನಗರದಲ್ಲಿ ಬೆಳಕಿಗೆ ಬಂದಿದೆ.ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕುವೆಂಪು ನಗರದಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬಗಳು ವಾಸಿಸುತ್ತಿವೆ. ಇನ್ನೂರಕ್ಕೂ ಹೆಚ್ಚು ಮನೆಗಳಿದ್ದು, ಮೂಲಸೌಕರ್ಯ­ಗಳಿಲ್ಲದ ಬಡಾವಣೆ ಎಂಬ ಕುಖ್ಯಾತಿಗೆ ಒಳಗಾಗಿದೆ.ರಸ್ತೆ, ಚರಂಡಿ, ಬೀದಿ ದೀಪ ಇಲ್ಲ­ದಿದ್ದರೂ ಸ್ಥಳೀಯ ನಿವಾಸಿಗಳು ಸಹಿಸಿ­ಕೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿ­ತಿಗೆ ಸೇರಿದ ಪೈಪ್‌ ಲೈನ್‌ನಲ್ಲಿ ಕೆಲವರು ಕುಡಿಯುವ ನೀರು ಸರಬರಾಜು ಮಾಡಿ, ಅದಕ್ಕಾಗಿ ಪ್ರತಿ ತಿಂಗಳು ₨ 200 ವಸೂಲಿ ಮಾಡುತ್ತಿರುವುದು ನಾಗರಿಕರನ್ನು ಸಿಟ್ಟಿಗೆಬ್ಬಿಸಿದೆ.ಗ್ರಾಮ ಪಂಚಾಯಿತಿ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದ ಕಾರಣ, ಕೆಲವರು ಪಂಚಾಯತಿಯ ನೀರಿನ ಕೊಳವೆಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ₨ 10 ಸಾವಿರ ಠೇವಣಿ ಕಟ್ಟಬೇಕು. ವಿಧಿಯಿಲ್ಲದೆ ನೀರಿಗಾಗಿ ಹಣ ಕಟ್ಟಿದ ನಿವಾಸಿಗಳು, ಈಗ ಹದಿನೈದು ದಿನಗಳಿಗೊಮ್ಮೆ ನೀರನ್ನು ಪಡೆಯುತ್ತಿದ್ದಾರೆ. ವಾರಕ್ಕೆ ಎರಡು ದಿನಗಳಿಗೊಮ್ಮೆ ನೀರು ಕೊಡುತ್ತೇವೆ ಎಂದು ಠೇವಣಿ ಕಟ್ಟಿಸಿಕೊಂಡಿದ್ದರು. ಈಗ ಕೇಳಿದರೆ ದೌರ್ಜನ್ಯ ನಡೆಸುತ್ತಾರೆ ಎಂದು ನಿವಾಸಿಗಳು ದೂರುತ್ತಿದ್ದಾರೆ.ಜಿಲ್ಲಾ ಪಂಚಾಯಿತಿಯಿಂದ ಬಹಳ ಹಿಂದೆ ಕೊರೆಸಿದ್ದ ಕೊಳವೆ ಬಾವಿ ಸಹ ವಿವಾದಕ್ಕೆ ಈಡಾಗಿದೆ. ಅದು ತನಗೆ ಸೇರಿದ್ದು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೊಳವೆಬಾವಿಗೆ ನೀಡಿದ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸಲು ಗ್ರಾಮ ಪಂಚಾಯತಿ ಮುಂದಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ಅಧಿಕಾರಿಗಳನ್ನು ಕಾಡಿ, ಬೇಡಿ ಹೊಸ ಕೊಳವೆಬಾವಿ ಕೊರೆಸಲು ಅನುಮತಿ ಪಡೆದರೂ ರಾಜಕೀಯವಾಗಿ ಪ್ರಭಾವ ಇರುವ ವ್ಯಕ್ತಿಗಳು ಕೊಳವೆಬಾವಿ ಕೊರೆಯುವ ಯಂತ್ರಗಳು ಬಡಾವಣೆ ಪ್ರವೇಶಿಸದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.