ಗುರುವಾರ , ಮಾರ್ಚ್ 23, 2023
31 °C

ಗಂಗರ ಇತಿಹಾಸ ಹೇಳುವ ನರಸಮಂಗಲ

ಗೂಳೀಪುರ ನಾ. ಮಂಜು Updated:

ಅಕ್ಷರ ಗಾತ್ರ : | |

ಮರದ ಅಡಿಯಲ್ಲಿರುವ ಬೃಹತ್ ಶಿವಲಿಂಗ, ಕಿವಿ ಕಳೆದುಕೊಂಡ ಬಸವ, ವಿರೂಪಗೊಂಡ ಶಿಲಾ ಶಾಸನಗಳು, ಎತ್ತರದ ಜಗಲಿಯ ನಡುವೆ ಮೇಲೆ ರಾಮಲಿಂಗೇಶ್ವರ... ಇದು ಗಂಗರ ಇತಿಹಾಸ ಹೇಳುವ ನರಸಮಂಗಲದ ಸದ್ಯದ ಸ್ಥಿತಿ.ಚಾಮರಾಜನಗರಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ನರಸಸಿಂಹಮಂಗಲವೆಂಬ ಅಗ್ರಹಾರ ಕ್ರಿ.ಶ.  1500ನೇ ವರ್ಷದಲ್ಲಿ ನಿರ್ಮಾಣವಾಗಿರಬಹುದು ಎಂದು ಹೇಳಲಾಗಿದೆ. ಗಂಗ ಅರಸರು ಹಾಗೂ ಹೊಯ್ಸಳರ ಬಲ್ಲಾಳರಾಯನಿಂದ ನಿರ್ಮಾಣಗೊಂಡಿತೆಂದು ಹೇಳಲಾದ ಬೃಹತ್ ದೇವಾಲಯ ಇಲ್ಲಿದೆ. ಕರ್ನಾಟಕವನ್ನು ದೀರ್ಘ ಕಾಲ ಆಳಿದ ರಾಜಮನೆತನಗಳಲ್ಲಿ ಗಂಗರು ಮೊದಲಿಗರು. ಅವರ ಮೊದಲ ರಾಜಧಾನಿ ಕುವಲಾಲ(ಕೋಲಾರ). ಅಲ್ಲಿಂದ ಅವರು ದಕ್ಷಿಣದ ಮೈಸೂರು ಪ್ರಾಂತ್ಯದ ತಲಕಾಡಿಗೆ ತಮ್ಮ ರಾಜಧಾನಿಯನ್ನು ಬದಲಾಯಿಸಿದಾಗ ಸುತ್ತಮುತ್ತಲ ಅಗ್ರಹಾರಗಳಲ್ಲಿ ದೇವಸ್ಥಾನಗಳು ಹಾಗೂ ಜೈನ ಬಸದಿಗಳ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಿದರು. ಹೀಗಾಗಿ ನರಸಮಂಗಲದಲ್ಲಿ ಹಲವಾರು ದೇವಸ್ಥಾನಗಳು ನಿರ್ಮಾಣವಾದವು ಎನ್ನಲಾಗಿದೆ.ವಿಶಾಲ ಗರ್ಭಗೃಹ, ಕಿರಿದಾದ ಸುಕನಾಸಿ, ಒಂಬತ್ತು ನವರಂಗಗಳನ್ನೊಳಗೊಂಡ ಇಟ್ಟಿಗೆ ಗಾರೆಯ ಸಂಯೋಜನೆಯಿಂದ ನರಸಮಂಗಲದ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿನ ರಾಜಗೋಪುರ ಮಹಾಬಲಿಪುರದ  ಶೈಲಿಯನ್ನು ಹೋಲುತ್ತದೆ.ವೃತ್ತಾಕಾರದ ವೇದಿಕೆ ಮೇಲೆ ಈ ದೇವಸ್ಥಾನವಿದೆ. ಈ ವೇದಿಕೆ ಮೇಲೆ ವಿವಿಧ ಚಿತ್ತಾರದ ಕಲಾಕೃತಿಗಳು ಮೂಡಿವೆ. ಗೋಡೆಗಳ ಮೇಲೆ ರಾಮಾಯಣದ ದೃಶ್ಯಾವಳಿಗಳ ಆಕರ್ಷಕ ಕೆತ್ತನೆಗಳು, ಅಪ್ಸರೆ ಶಿಲ್ಪಗಳು, ದುರ್ಗಾದೇವಿ ಮೂರ್ತಿ, ಅಂಧಕಾಸುರ ಮರ್ಧನ, ತಾಂಡವೇಶ್ವರ, ದಕ್ಷಿಣಾಮೂರ್ತಿ, ಬ್ರಹ್ಮ, ವಿಷ್ಣು, ಉಗ್ರನರಸಿಂಹ ಮತ್ತಿತರ ವಿಗ್ರಹಗಳು ಇವೆ. ನವರಂಗದಲ್ಲಿನ ಭುವನೇಶ್ವರಿಯದು ಆಕರ್ಷಣೀಯ ಶಿಲ್ಪ.ದೇವಾಲಯದ ಆಗ್ನೇಯ ಭಾಗಕ್ಕೆ ಇರುವ ಮಂಟಪದಲ್ಲಿ ಸಪ್ತಮಾತೃಕೆಯರ ವಿಗ್ರಹಗಳು, ವೀರಭದ್ರ, ಗಣೇಶ, ಮಹಿಷಾಸುರ ಮರ್ಧಿನಿ, ಜನಾರ್ದನ, ಭೈರವ, ದಕ್ಷಬ್ರಹ್ಮ, ಕುಮಾರಸ್ವಾಮಿ ಮೊದಲಾದ ಸುಂದರ ಶಿಲ್ಪ ಕೃತಿಗಳು ಇಲ್ಲಿವೆ. ದೇವಾಲಯದ ದಕ್ಷಿಣಕ್ಕೆ ಇರುವ ಶಾಸನದಲ್ಲಿ ಹೊಯ್ಸಳರ ಅರಸ ವೀರಬಲ್ಲಾಳ ದತ್ತಿ ಬಿಟ್ಟಿರುವ  ಬಗ್ಗೆ ಉಲ್ಲೇಖವಿದೆ. ಇಲ್ಲಿ ತಮಿಳು ಶಾಸನಗಳಿವೆ.ರಾಮಲಿಂಗೇಶ್ವರ ದೇವಸ್ಥಾನ ಯಾವುದೋ ಕಾಲಘಟ್ಟದಲ್ಲಿ ಪರಕೀಯರ ದಾಳಿಯಿಂದ ಭಗ್ನಗೊಂಡಿದೆ. ಪಶ್ಚಿಮಕ್ಕೆ ಮುಖ ಮಾಡಿ ನಿಂತ ಬಸವನ ಮೂರ್ತಿಯ ಕಿವಿಯನ್ನು ನಿಧಿಗಳ್ಳರು ಒಡೆದು ಹಾಕಿದ್ದಾರೆ. ಶಿವಲಿಂಗವೂ ಭಗ್ನಗೊಂಡಿದೆ. ಹಲವು ಶಿಲ್ಪಗಳು ಮುಕ್ಕಾಗಿವೆ. ಹೊಲವೊಂದರಲ್ಲಿ ಮರದ ಕೆಳಗಿರುವ ಬೃಹತ್ ಲಿಂಗವಿರುವ ಸ್ಥಳ  ಮಕ್ಕಳ ಆಟದ ಅಂಗಳವಾಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ದೇವಸ್ಥಾನದ ಸುತ್ತ ಉತ್ಖನನ ನಡೆಸಿತು. ಆಸಂದರ್ಭದಲ್ಲಿ ಸಿಕ್ಕ ಶಿಲ್ಪಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.ಇದನ್ನು ರಾಷ್ಟ್ರೀಯ ಸ್ಮಾರಕ ಎಂದೂ ಇಲಾಖೆ ಘೋಷಿಸಲಾಗಿದೆ.  ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣವೂ ಆಗಿರುವ ನರಸಮಂಗಲವನ್ನು ಜಿಲ್ಲಾ ಆಡಳಿತ ಉಪೇಕ್ಷಿಸಿದೆ. ಪ್ರಚಾರದ ಕೊರತೆಯಿಂದಾಗಿ ಈ ಸ್ಮಾರಕದ ಬಗ್ಗೆ ಜಿಲ್ಲೆಯ ಜನರಿಗೇ ಕನಿಷ್ಠ ಮಾಹಿತಿಗಳು ಸಿಗುತ್ತಿಲ್ಲ. ರಾಜ್ಯದ ಇತರ ಜಿಲ್ಲೆಗಳ ಜನರಿಗೆ ನರಸಮಂಗಲ ಅಪರಿಚಿತ. ಈ ಸ್ಮಾರಕದ ಬಗ್ಗೆ ಪ್ರಚಾರದ ಅಗತ್ಯ ಇದೆ ಎಂದು ಇತಿಹಾಸ ಅಧ್ಯಾಪಕಿ ಉಮಾಮಹೇಶ್ವರಿ ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.