ಭಾನುವಾರ, ಮಾರ್ಚ್ 7, 2021
27 °C
ಕಲಾವಿದೆ ಪ್ರಮೀಳಾ ಗುಡೂರ ನಿಧನ

ಗಡಸುಧ್ವನಿಯ ಭಾವಪೂರ್ಣ ನಟಿ ಪ್ರಮೀಳಾ ಗುಡೂರ

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

ಗಡಸುಧ್ವನಿಯ ಭಾವಪೂರ್ಣ ನಟಿ ಪ್ರಮೀಳಾ ಗುಡೂರ

ಈ ಟಿವಿಯಲ್ಲಿ 2009 ರಲ್ಲಿ ಪ್ರಸಾರವಾದ ವೈಶಾಲಿ ಕಾಸರವಳ್ಳಿ ನಿರ್ದೇಶನದ ‘ಮುತ್ತಿನತೋರಣ’ ಧಾರಾವಾಹಿಯ ಬೊಚ್ಚು ಬಾಯಿಯ ಅಜ್ಜಿಯಾಗಿ ನಟಿಸಿ ಗಮನ ಸೆಳೆದವರು ವೃತ್ತಿರಂಗಭೂಮಿಯ ಹೆಸರಾಂತ ನಟಿ ಪ್ರಮೀಳಾ ಗುಡೂರ. ಆ ಪಾತ್ರ ಅವರ ಸಂಧ್ಯಾ ಕಾಲದಲ್ಲಿ ಒದಗಿಬಂದದ್ದು. ಅದರ ಹಿಂದಿನ ಶೇ 99ರಷ್ಟು ನಟನೆಯ ಜೀವನ ಕಳೆದದ್ದು ಕರ್ನಾಟಕದ ಹಲವು ಪ್ರತಿಷ್ಠಿತ ನಾಟಕ ಕಂಪನಿಗಳ ಪ್ರಮುಖ ಪಾತ್ರಧಾರಿಯಾಗಿ.‘ಏರಿದ ನಂಜು’ ನಾಟಕದ ಊರ್ಮಿಳಾ, ‘ಸತಿ ಪತಿ’ಯ ಸುಶೀಲಾ, ‘ದೇವರಿಲ್ಲದಗುಡಿ’ಯ ಸುಜಾತ, ‘ಗರೀಬಿ ಹಟಾವೊ’ದ ಸರೋಜ, ‘ಗೆದ್ದ ಸೊಸೆ, ಬಿದ್ದ ಮಾವ’ ನಾಟಕದ ಎಂಎಲ್‌ಎ ಪಾತ್ರದಲ್ಲಿ ಅವರ ಪಾತ್ರದ ವೈಖರಿ 1990ರವರೆಗಿನ ವೃತ್ತಿ ರಂಗಾಸಕ್ತರ ನೆನಪಿನಲ್ಲಿ ಈಗಲೂ ಅಚ್ಚೊತ್ತಿದ ಹಾಗಿದೆ. ತುಸು ಗಡಸು ಧ್ವನಿಯಲ್ಲೇ ಅಸ್ಖಲಿತ ಸಂಭಾಷಣೆ, ಭಾವಪೂರ್ಣ ನಟನೆ ಅವರ ಅಭಿನಯದ ಯಶಸ್ಸಿನ ಗುಟ್ಟು.‘ಜಾಗೀರದಾರರ ಜಗಳ’ ಎನ್ನುವ ನಾಟಕದಲ್ಲಿ ಕಾತ್ಯಾಯನಿ ದೇಸಾಯಿ ಎನ್ನುವ ಪಾತ್ರ ಪ್ರಮೀಳಾ ಗುಡೂರ ಅವರದ್ದೇ ಆದ ವಿಶೇಷ ಅಭಿನಯ ಶೈಲಿಗೆ ಹೆಸರಾಗಿತ್ತು. ಚಿತ್ರನಟಿ ಕಲ್ಪನಾ ಆ ಪಾತ್ರ ನೋಡಲೆಂದೇ ದಾವಣಗೆರೆಯ ಕ್ಯಾಂಪಿಗೆ ಒಮ್ಮೆ ಹೋಗಿದ್ದರು. ದೇಸಾಯಿ ಪಾತ್ರದ ಗತ್ತಿಗೆ ಮೆಚ್ಚಿ ತಲೆದೂಗಿ ರೇಷ್ಮೆ ಸೀರೆ ಹಾಗೂ ಒಡವೆಯನ್ನು ಪ್ರಮೀಳಾರಿಗೆ ಕಳಿಸಿಕೊಟ್ಟಿದ್ದರಂತೆ. ಅದೇ ಪಾತ್ರದಲ್ಲಿ ನಟಿಸುವಂತೆ ಮುಂದೊಂದು ದಿನ ಕಲ್ಪನಾಗೆ ಆಹ್ವಾನ ಬಂತು. ಆಗ ಕಲ್ಪನಾ ಒಲ್ಲೆ ಎಂದು ಬಿಟ್ಟರಂತೆ.ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ಗುಡೂರಿನ ಫಕ್ರುಸಾಬ್- ಇಮಾಂಬಿ ಎಂಬ ನೇಕಾರಿಕೆ ಕಸುಬಿನ ಬಡದಂಪತಿಗೆ 1940 ರ ದಶಕದಲ್ಲಿ ಜನಿಸಿದ ಫಾತಿಮಾಳನ್ನು ದಾದಿ ಶೇಕವ್ವ ಓದಲು ಬಾಗಲಕೋಟೆಗೆ ಹಾಕಿದರೆ, ಬಾಲಕಿಯ ಚಿತ್ತ ನೃತ್ಯದತ್ತ ಹರಿಯಿತು. ಅಲ್ಲಿ ಇಲ್ಲಿ ನೋಡಿ ಡ್ಯಾನ್ಸ್‌ ಕಲಿತ ಮಗಳನ್ನು ನಾಟಕ ಕಂಪನಿಗೆ ಕರೆದೊಯ್ದಳು ಶೇಕವ್ವ. ಕೇವಲ ಒಂದೇ ಮಾತಿನ ಪಾರ್ವತಿ ಪಾತ್ರಕ್ಕೆ ಹತ್ತ ಹನ್ನೆರಡು ವಯಸ್ಸಿನ ಫಾತಿಮಾ ಬಣ್ಣ ಹಚ್ಚಿದಳು.ಚುರುಕು ಸ್ವಭಾವದ ಅಂದಗಾತಿ ಫಾತಿಮಾಗೆ ಮುಂದೆ ನಾಟಕ ಕಂಪನಿಗಳೇ ರಂಗಶಾಲೆಗಳಾದವು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ನಾಟಕ ಕಂಪನಿಯೆಂಬ ಜಾತ್ಯತೀತ ಜಗತ್ತಿನ ಒಳಹೊಕ್ಕ ನಂತರ ಫಾತಿಮಾ- ಪ್ರಮೀಳಾ ಆದರು.ವಸಂತ ಸಾ. ನಾಕೋಡ, ಪಡೆಸೂರ, ಮೈಂದರಗಿ ನಾಟಕಕಂಪನಿಯ ನಂತರ ಭೀಮಣ್ಣ ಅರಿಷಿಣಗೋಡಿ ಅವರ ಕಮತಗಿ ಹುಚ್ಚೇಶ್ವರ ನಾಟ್ಯಸಂಘದಲ್ಲಿ ದೀರ್ಘ ಕಾಲ ಎಲ್ಲ ಬಗೆಯಪಾತ್ರಗಳಲ್ಲಿ ನಟಿಸಿದ ಪ್ರಮೀಳಾ ಅವರು- ನಂತರದ ಎರಡು ದಶಕಗಳ ಕಾಲ ಗ್ರಾಮೀಣ ಪೌರಾಣಿಕ, ಸಾಮಾಜಿಕ ನಾಟಕ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಫಣಕ್ಕಿಟ್ಟಂತೆ ನಟಿಸುತ್ತಲೇ ಹೋದರು.‘ರಕ್ತರಾತ್ರಿ’ ನಾಟಕದ ಅಶ್ವತ್ಥಾಮ, ದುರ್ಯೋಧನ, ‘ಗೌಡ್ರಗದ್ಲ’ದ ಗೌಡ ಮುಂತಾದ ಪುರುಷ ಪಾತ್ರಗಳಲ್ಲಿಯೂ ಸೈ ಎನಿಸುವಂತೆ ನಟಿಸಿದರು. ‘ರೇಣುಕಾಯಲ್ಲಮ್ಮ’ ನಾಟಕದ ಪರಶುರಾಮ ಪಾತ್ರದಲ್ಲಿ ನಟಿಸಿದ ಪ್ರಮೀಳಾರನ್ನು ಹರೆಯದ ಯುವತಿಯೊಬ್ಬಳು ಮೋಹಿಸಿ ಹುಚ್ಚು ಹತ್ತಿಸಿಕೊಂಡಿದ್ದಳಂತೆ.ಅಮೀನಾ, ಶಕೀನಾ ಎಂಬ ತಮ್ಮ ಇಬ್ಬರು ಹೆಣ್ಣುಮಕ್ಕಳು, ಅಳಿಯಂದರು, ಮೊಮ್ಮಕ್ಕಳು ಹಾಗೂ ವೃತ್ತಿರಂಗ ಭೂಮಿಯ ಮತ್ತೊಬ್ಬ ಖ್ಯಾತ

ನಟಿಯಾದ ತಂಗಿ ಮಮತಾ ಗುಡೂರ ಅವರೊಂದಿಗೆ ಕಳೆದ ದಶಕದಿಂದ ಪ್ರಮೀಳಾ ಅವರು, ಇಳಕಲ್ ಸಮೀಪದ ತಮ್ಮೂರು ಗುಡೂರಿನಲ್ಲೇ ನೆಲೆಸಿದ್ದರು.ಅವರ ಅಭಿನಯದ ವೈವಿಧ್ಯ ಹಾಗೂ ಸುದೀರ್ಘ ರಂಗಸೇವೆಯನ್ನು ಮನ್ನಿಸಿ ಕನ್ನಡ ರಂಗಭೂಮಿಯ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಸಂದಿವೆ.ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ‘ರಂಗಸಂಪನ್ನರು’ ಮಾಲಿಕೆಯ ‘ಪ್ರಮೀಳಾ ಗುಡೂರ’ (ರಚನೆ: ಡಾ. ಮುರ್ತುಜಾಒಂಟಿ) ಪುಸ್ತಕವನ್ನು ಇದೇ ಜುಲೈ 1 ರಂದು ಇಳಕಲ್‌ನಲ್ಲಿ ಸಂಸ್ಕೃತಿ ಸಚಿವೆ ಉಮಾಶ್ರೀ ಬಿಡುಗಡೆ ಮಾಡಿದ್ದರು. ಪ್ರಮೀಳಾ ಗುಡೂರ ಅವರಿಗೆ ಅದೇ ಕೊನೆಯ ಸಮಾರಂಭವಾಯಿತು.ಕಲಾವಿದೆ ಪ್ರಮೀಳಾ ಗುಡೂರ  ನಿಧನ

ಅಮೀನಗಡ (ಬಾಗಲಕೋಟೆ): ಹಿರಿಯ ರಂಗಭೂಮಿ ಕಲಾವಿದೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಪ್ರಮೀಳಮ್ಮ ಗುಡೂರ (74) ಗುರುವಾರ ರಾತ್ರಿ ಸ್ವಗ್ರಾಮ, ಹುನಗುಂದ ತಾಲ್ಲೂಕಿನ ಗುಡೂರಿನಲ್ಲಿ ನಿಧನರಾದರು.ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು. ಶುಕ್ರವಾರ ಅಂತ್ಯಕ್ರಿಯೆ ನಡೆಯಿತು. ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷ ಶೇಖ್‌ ಮಾಸ್ತರ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಅಂತಿಮ ದರ್ಶನ ಪಡೆದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.