ಶುಕ್ರವಾರ, ಫೆಬ್ರವರಿ 26, 2021
23 °C
ಅಂಕುರ 107

ಗರ್ಭಕೋಶದ ಒಳಪೊರೆ ಗರ್ಭಕ್ಕೆ ಆಗುವುದೇ ಹೊರೆ?

ಡಾ. ಬೀನಾ ವಾಸನ್ Updated:

ಅಕ್ಷರ ಗಾತ್ರ : | |

ಗರ್ಭಕೋಶದ ಒಳಪೊರೆ ಗರ್ಭಕ್ಕೆ ಆಗುವುದೇ ಹೊರೆ?

ಎಂಡೋಮೀಟ್ರಿಯಾಸಿಸ್‌ ಎಂದರೇನು?

ಗರ್ಭಕೋಶದ ಒಳಪದಲ್ಲಿರುವ ಅಂಗಾಂಶಗಳು ಗರ್ಭಕೋಶವನ್ನು ಮೀರಿ ಬೆಳೆದಾಗ ಉಂಟಾಗುವ ತೊಂದರೆಯನ್ನು ಎಂಡೋಮಿಟ್ರಿಯಾಸಿಸ್‌ ಎನ್ನುತ್ತಾರೆ. ಗರ್ಭಕೋಶದ ಒಳಪದರವನ್ನು ಎಂಡೋಮೀಟ್ರಿಯಂ (ಗರ್ಭಕೋಶದ ಒಳಪೊರೆ) ಎನ್ನುತ್ತಾರೆ. ವಸ್ತಿಕುಹರ ಸುತ್ತಲೂ,  ಕರುಳು ಮತ್ತು ಅಂಡಾಶಯದ ಮೇಲೆ ಅಂಗಾಂಶಗಳು ಬೆಳೆದಾಗ ಎಂಡೋಮೀಟ್ರಿಯಾಸಿಸ್‌ ಉಂಟಾಗುತ್ತದೆ. ವಸ್ತಿಕುಹುರವನ್ನು ಮೀರಿ ಎಂಡೋಮೀಟ್ರಿಯಲ್‌ ಅಂಗಾಂಶಗಳು ಬೆಳೆಯುವುದು ಅಪರೂಪ; ಆದರೆ ಹಾಗೆ ಅದು ಬೆಳೆಯುವುದೇ ಇಲ್ಲ ಎನ್ನಲಾಗದು. ಎಂಡೋಮೀಟ್ರಿಯಲ್‌ ಅಂಗಾಂಶಗಳು ಗರ್ಭಕೋಶವನ್ನು ಮೀರಿ ಹೊರಗೆ ಬೆಳೆಯುವುದನ್ನೇ ಎಂಡೋಮೀಟ್ರಿಯಲ್‌ ಇಂಪ್ಲಾಂಟ್‌ ಎನ್ನುತ್ತಾರೆ.

ಋತುಚಕ್ರದ ಸಂದರ್ಭದಲ್ಲಿ ನಡೆಯುವ ಹಾರ್ಮೋನ್‌ಗಳ ಬದಲಾವಣೆಯ ಕಾರಣದಿಂದಾಗಿ ಎಂಡೋಮೀಟ್ರಿಯಲ್‌ ಅಂಗಾಂಶಗಳ ಪಲ್ಲಟ ನಡೆಯುತ್ತದೆ. ಎಂದರೆ ಅಂಗಾಂಶಗಳು ಬೆಳೆದು, ದಪ್ಪವಾಗಿ, ಕೊನೆಗೆ ಒಡೆದುಹೋಗುತ್ತವೆ. ಹೀಗೆ ಕತ್ತರಿಸಿ ಹೋದ ಅಂಗಾಂಶಗಳು ಬೇರೆಲ್ಲೂ ಹೋಗಲಾಗದೆ ವಸ್ತಿಕುಹುರದಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಹೀಗೆ ವಸ್ತಿಕುಹುರದಲ್ಲಿ ಸಿಕ್ಕಿಹಾಕಿಕೊಂಡ ಅಂಗಾಶಗಳು ಉಂಟುಮಾಡಬಹುದಾದ ತೊಂದರೆಗಳೆಂದರೆ:* ಉರಿ.

* ಕಲೆ ಉಂಟಾಗಬಹುದು.

* ವಸ್ತಿಕುಹರದ ಅಂಗಾಂಗಳು ಅಂಟಿಕೊಳ್ಳಬಹುದು.

* ಋತುಚಕ್ರದ ಸಮಯದಲ್ಲಿ ಅತಿಯಾದ ನೋವು.

* ಗರ್ಭಧಾರಣೆಯಲ್ಲಿ ಸಮಸ್ಯೆಗಳು.ಎಂಡೋಮೀಟ್ರಿಯಾಸಿಸ್‌ ಒಂದು ಸಾಮಾನ್ಯ ಸ್ತ್ರೀರೋಗವಷ್ಟೆ. ಈ ತೊಂದರೆಗೆ ಒಳಗಾಗಿರುವ ಮೊದಲ ಮತ್ತು ಏಕೈಕ ಮಹಿಳೆ ನೀವಷ್ಟೆ ಅಲ್ಲ ಎನ್ನುವುದನ್ನು ಮರೆಯದಿರಿ.ಎಂಡೋಮೀಟ್ರಿಯಾಸಿಸ್‌ನ ಲಕ್ಷಣಗಳು

ಎಂಡೋಮೀಟ್ರಿಯಾಸಿಸ್‌ನ ಲಕ್ಷಣಗಳು ಭಿನ್ನವಾಗಿರುತ್ತವೆ. ಕೆಲವು ಮಹಿಳೆಯರಲ್ಲಿ ಈ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಸಾಧಾರಣದಿಂದ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು. ನಿಮಗೆ ಕಾಣಿಸಿಕೊಳ್ಳುವ ನೋವಿನ ತೀವ್ರತೆಗೂ ನಿಮ್ಮ ಸಮಸ್ಯೆಯ ಪ್ರಮಾಣಕ್ಕೂ ನೇರ ಸಂಬಂಧ ಇರುತ್ತದೆ ಎನ್ನುವಂತಿಲ್ಲ. ನಿಮ್ಮ ಸಮಸ್ಯೆ ಅಲ್ಪ ಪ್ರಮಾಣದ್ದಾಗಿರಬಹುದು; ಆದರೆ ನೋವು ಮಾತ್ರ ತೀವ್ರವಾಗಿರಬಹುದು. ಹೀಗೆಯೇ ನಿಮ್ಮ ಸಮಸ್ಯೆ ತೀವ್ರ ಸ್ವರೂಪವನ್ನು ಮುಟ್ಟಿರಬಹುದು; ಆದರೆ ನೋವಿನ ಪ್ರಮಾಣ ಕಡಿಮೆ ಮಟ್ಟದಲ್ಲಿರಬಹುದು.ಎಂಡೋಮೀಟ್ರಿಯಾಸಿಸ್‌ನ ಪ್ರಧಾನ ಲಕ್ಷಣವೆಂದರೆ ವಸ್ತಿಕುಹುರದಲ್ಲಿ ಕಾಣಿಸಿಕೊಳ್ಳುವ ನೋವು. ಇದರ ಜೊತೆಯಲ್ಲಿ ಈ ಲಕ್ಷಣಗಳು ಇರಬಹುದು:* ಮಾಸಿಕ ಋತುಚಕ್ರದಲ್ಲಿ ನೋವು.

* ಋತುಚಕ್ರಕಾಲದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು.

* ಋತುಚಕ್ರದ ಒಂದೆರಡು ವಾರಗಳ ಮೊದಲು ಅಥವಾ ಅನಂತರದಲ್ಲಿ ಮಾಂಸಖಂಡಗಳ ಹಿಂಡಿಕೆ.

* ಋತುಚಕ್ರದ ಸಮಯದಲ್ಲಿ ಅತಿಯಾದ ರಕ್ತಸ್ರಾವ.

* ಗರ್ಭಧಾರಣೆಯಲ್ಲಿ ಸಮಸ್ಯೆ.

* ಸಂಭೋಗದ ಬಳಿಕ ಕಾಣಿಸಿಕೊಳ್ಳುವ ನೋವು.

* ಮಲವಿಸರ್ಜನೆಯಲ್ಲಿ ಅಸಹಜತೆ.

* ಬೆನ್ನಿನ ಕೆಳಭಾಗದಲ್ಲಿ ಋತುಚಕ್ರಕಾಲದಲ್ಲಿ ಕಾಣಿಸಿಕೊಳ್ಳುವ ನೋವು.ಈ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಇರಬಹುದು. ಪ್ರತಿ ವರ್ಷವೂ ನೀವು ಸ್ತ್ರೀರೋಗತಜ್ಞರನ್ನು ಭೇಟಿಯಾಗಿ ಅಗತ್ಯ ಪರೀಕ್ಷೆಗಳನ್ನು ಮಾಡಿಸುವುದು ಒಳಿತು. ಸಂತಾನೋತ್ಪತ್ತಿಗೆ ಒದಗಬಹುದಾದ ತೊಂದರೆಗಳಿದ್ದರೆ ಸೂಕ್ತ ತಜ್ಞರನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುತ್ತದೆ. ಮೇಲೆ ಕಾಣಿಸಿದ ಲಕ್ಷಣಗಳಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ತೊಂದರೆಗಳು ನಿಮ್ಮನ್ನು ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.ಎಂಡೋಮೀಟ್ರಿಯಾಸ್‌ಗೆ ಕಾರಣಗಳೇನು?

ನಿಯಮಿತವಾಗಿ ನಡೆಯುವ ಋತುಚಕ್ರದಲ್ಲಿ ನಿಮ್ಮ ಶರೀರವು ಗರ್ಭಕೋಶದ ಪೊರೆಯನ್ನು ಕಳಚುತ್ತದೆ. ಇದು ಋತುಚಕ್ರಕಾಲದಲ್ಲಿ ಪ್ರವಿಸುವ ರಕ್ತವು ಗರ್ಭಕೋಶದ ಮೂಲಕ ಹರಿದು ಗರ್ಭಕೋಶದ ಕಂಠದ ಮೂಲಕ ಸಾಗಿ ಯೋನಿಯ ಮೂಲಕ ಹೊರಗೆ ಹರಿಯುತ್ತದೆ. ಎಂಡೋಮೀಡ್ರಿಯಾಸಿಸ್‌ ಬಹುಪಾಲು ಸಂದರ್ಭಗಳಲ್ಲಿ ಹಿಮ್ಮುಖ ಋತುಚಕ್ರವೇ (retrograde menstruation) ಎಂಡೋಮೀಡ್ರಿಯಾಸಿಸ್‌ಗೆ ಕಾರಣವಾಗುತ್ತದೆ. ಎಂದರೆ ಋತುಸ್ರಾವದ ರಕ್ತವು ಫ್ಯಾಪೋಪಿಯನ್‌ ನಾಳಗಳ ಮೂಲಕ ಹಿಮ್ಮುಖವಾಗಿ ಹರಿದು ನಿಮ್ಮ ಶರೀರದ ಹೊರಗೆ ಹರಿಯುವುದಕ್ಕೆ ಬದಲಾಗಿ ಅದು ವಸ್ತಿಕುಹುರವನ್ನು ಸೇರುತ್ತದೆ. ಪಲ್ಲಟಗೊಂಡ ಎಂಡೋಮಿಟ್ರಿಕ್‌ ಜೀವಕೋಶಗಳು ವಸ್ತಿಕುಹುರಕ್ಕೆ ಅಂಟಿಕೊಂಡು, ಅದರ ಆಸುಪಾಸಿನಲ್ಲಿರುವ ಅಂಡಾಶಯ, ಪಿತ್ತಕೋಶ ಮತ್ತು ಗುದನಾಳಗಳಲ್ಲಿ ಸಂಗ್ರಹವಾಗುತ್ತವೆ. ಇದು ಬೆಳೆಯುತ್ತ, ದಪ್ಪವಾಗುತ್ತಿರುತ್ತದೆ.ಋತುಚಕ್ರದ ಸಮಯದಲ್ಲಿ ರಕ್ತಸ್ರಾವವೂ ಆಗುತ್ತದೆ. ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಮೂಡಿರಬಹುದಾದ ಕಲೆಯ ಕಾರಣದಿಂದಾಗಿ ಋತುಸ್ರಾವವು ವಸ್ತಿಕುಹುರದೊಳಗೆ ಜಿನುಗಬಹುದು. ಜಠರದ ಅಲ್ಪ ಭಾಗವು ಎಂಡೋಮಿಟ್ರಿಕಲ್‌ ಅಂಗಾಂಶಗಳಾಗಿ ಪರಿವರ್ತನೆಯಾಗುವ ಸಂಭವವೂ ಇರುವುದರಿಂದ ಇಂಥ ಸಮಸ್ಯೆ ಉದ್ಭವಿಸಬಹುದು. ಆದರೆ ಈ ಪರಿವರ್ತನೆಗೆ ನಿಖರವಾದ ಕಾರಣಗಳು ತಿಳಿದಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.