ಸೋಮವಾರ, ಮೇ 17, 2021
22 °C

ಗುಂಡಿಗಳ ರಸ್ತೆಯಲ್ಲಿ ಚಾಲಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ನಗರದ ಹೃದಯ ಭಾಗದಲ್ಲಿ ಇರುವ ಪ್ರಮುಖ ರಸ್ತೆಯೊಂದು ಕಳೆದ ನಾಲ್ಕೈದು ವರ್ಷಗಳಿಂದ ದುರಸ್ತಿ ಭಾಗ್ಯವನ್ನೇ ಕಾಣದೇ ವಾಹನ ಚಾಲಕರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.ಇದು, ಎಸ್.ಡಿ.ಜಯರಾಂ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲು ರಸ್ತೆ. ಸಾಮಾನ್ಯ ರೈಲು ಸಂಚಾರದ ಸಂದರ್ಭದಲ್ಲಿ ಫ್ಯಾಕ್ಟರಿ ವೃತ್ತ ಮತ್ತು ಮಹಾವೀರ ವೃತ್ತದ ಬಳಿ ಗೇಟು ಮುಚ್ಚುವ ಕಾರಣ ಹೆಚ್ಚು ಬಳಕೆಯಾಗುವ ರಸ್ತೆಯೂ ಹೌದು.ರೈಲ್ವೆ ಮೇಲು ರಸ್ತೆಯಾದ್ದರಿಂದ ಗುಣಮಟ್ಟ ಉತ್ತಮವಾಗಿ ಇರಬೇಕು ಎಂದು ನಿರೀಕ್ಷಿಸುವುದು ಸಹಜ. ಆದರೆ, ರಸ್ತೆ ದುಃಸ್ಥಿತಿ ಹೇಳಲಾರದಷ್ಟು ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಆರಂಭದಿಂದ ಅಂತ್ಯದವರೆಗೂ ಗುಂಡಿಗಳೇ ಇವೆ. ರಸ್ತೆಯ ಬದಿಯಲ್ಲಿ ತಡೆಗೋಡೆಗಳು ಕೂಡಾ ವಾಲಿದ್ದು, ಚಾಲಕರು ಸ್ವಲ್ಪ ಆಯತಪ್ಪಿದರೂ ಅಪಾಯ.ಮೈಷುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ಎತ್ತಿನ ಗಾಡಿಗಳು, ನಾಗಮಂಗಲ ಕಡೆಗೆ ತೆರಳುವ ಖಾಸಗಿ ಬಸ್ಸುಗಳು, ಆಸ್ಪತ್ರೆ ರಸ್ತೆಯಿಂದ ಪೇಟೆ ಬೀದಿಗೆ ತಲುಪಬಯಸುವ ಅಸಂಖ್ಯ ವಾಹನಗಳಿಗೆ ಈ ಮೇಲು ರಸ್ತೆಯೇ ಏಕೈಕ ಮಾರ್ಗ.ಮೈಷುಗರ್ ಕಾರ್ಖಾನೆಗೆ ತೆರಳುವ ಜನಪ್ರತಿನಿಧಿಗಳು, ಮಂತ್ರಿಗಳು, ಅಧಿಕಾರಿಗಳು ಈ ರಸ್ತೆಯ ಮೂಲಕ ಹಾದು ಹೋದರೂ ಅವರು ಈ ರಸ್ತೆಗೆ ದುರಸ್ತಿ ಭಾಗ್ಯ ನೀಡುವತ್ತ ಗಮನವನ್ನೇ ಹರಿಸಿಲ್ಲ. ಅವರೂ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.ಈ ರಸ್ತೆಯೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಇಲಾಖೆಯು ಅದೇಕೋ ನಾಲ್ಕೈದು ವರ್ಷಗಳಿಂದ ಇತ್ತ ಗಮನಹರಿಸಿಲ್ಲ. ಈ ರಸ್ತೆಯು ನಮ್ಮ ವ್ಯಾಪ್ತಿಗೆ ಬರದ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು ಬರುವುದಿಲ್ಲ ಎಂದು ನಗರಸಭೆಯೂ ಕೈಚೆಲ್ಲಿದೆ.ರಸ್ತೆಯ ದುಃಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಆದರೆ, ಇದು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಆದಷ್ಟು ಬೇಗ ದುರಸ್ತಿ ಪಡಿಸುವಂತೆ ನಾವು ಗಮನ ಸೆಳೆದಿದ್ದೇವೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್.ಈ ಹಿಂದೆ ಲೋಕೋಪಯೋಗಿ ಇಲಾಖೆ ಎಇಇ ಆಗಿದ್ದ ದಯಾನಂದ್ ಅವರ ಗಮನಕ್ಕೆ ಮೂರು -ನಾಲ್ಕು ಬಾರಿ ತಂದಿದ್ದೆವು. ದುರಸ್ತಿ ಮಾಡುವ ಭರವಸೆ ನೀಡಿದ್ದರಾದರೂ, ವರ್ಗಾವಣೆ ಆದರು. ಅವರ ಜಾಗಕ್ಕೆಬಂದಿರುವ ಹೊಸ ಎಇಇ ಗಮನಕ್ಕೂ ತಂದಿದ್ದೇವೆ ಎಂದು ಪ್ರತಿಕ್ರಿಯಿಸಿದರು.ಮೊದಲೇ ಹಣಕಾಸು ಕೊರತೆ ಇರುವ ನಗರಸಭೆ ಈ ರಸ್ತೆ ದುರಸ್ತಿ ಕೈಗೆತ್ತಿಗೊಳ್ಳುವುದು ಕಷ್ಟ. ಅನುದಾನದ ಲಭ್ಯತೆ ಆಧರಿಸಿ ಸಾಧ್ಯತೆ  ಇದ್ದರೆ ಗಮನ ಹರಿಸಬಹುದೇನೋ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ವರ್ಷ ಗುಂಡಿಗಳಿಂದ ತುಂಬಿದ ರಸ್ತೆಯನ್ನು ಸಹಿಸಿಕೊಳ್ಳುವ ಅನಿವಾರ್ಯತೆ ವಾಹನ ಚಾಲಕರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.