ಮಂಗಳವಾರ, ಮೇ 17, 2022
26 °C

`ಗುತ್ತಿಗೆ ಕಾರ್ಮಿಕರ ವೇತನ ಪಾವತಿಸಿ'

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನು ತುರ್ತಾಗಿ ಇತ್ಯರ್ಥಪಡಿಸಬೇಕು. ಅವರ ಖಾತೆಗೆ ಪಿ.ಎಫ್ ಹಣ ಜಮಾ ಮಾಡುವುದು, ಮೇ, ಜೂನ್ ತಿಂಗಳ ವೇತನ ಬಾಕಿ ಕೂಡಲೇ ಪಾವತಿ ಮಾಡುವುದು ಸೇರಿದಂತೆ ಸಾಧ್ಯವಾದ ಎಲ್ಲ ಬೇಡಿಕೆ ಈಡೇರಿಸಬೇಕು ಎಂದು ಕೊಪ್ಪಳ ಸಂಸದ ಶಿವರಾಮನಗೌಡ ಸೋಮವಾರ ಇಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ಹೈದರಾಬಾದ್ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಗೆ ಸೋಮವಾರ ದೂರಸಂಪರ್ಕ ಸಲಹಾ ಸಮಿತಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಕಳೆದ ಒಂದು ವಾರದಿಂದ ಕಚೇರಿ ಎದುರು ಧರಣಿ ನಡೆಸುತ್ತಿರುವ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರು ಮನವಿ ಸಲ್ಲಿಸಿ ತಮ್ಮ ಸಮಸ್ಯೆ ವಿವರಿಸಿದರು.ಬಳಿಕ ಕಚೇರಿಯ ಸಭಾಭವನದಲ್ಲಿ ಬಿಎಸ್‌ಎನ್‌ಎಲ್ ರಾಯಚೂರು ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಶಿವಶಂಕರರೆಡ್ಡಿ, ಸಹ ಪ್ರಧಾನ ವ್ಯವಸ್ಥಾಪಕ ಪ್ರಲ್ಹಾದ ಆಚಾರ್, ಮಾರುಕಟ್ಟೆ ವಿಭಾಗದ ಸಹ ಪ್ರಧಾನ ವ್ಯವಸ್ಥಾಪಕ ಸಿದ್ದಪ್ಪ ಸೇರಿದಂತೆ ಅಧಿಕಾರಿಗಳೊಂದಿಗೆ ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಿದರು.ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರು ತಮ್ಮ ಸಂಸ್ಥೆ ನೌಕರರೇ ಆಗಿದ್ದು, ವೇತನ ಇಲ್ಲದೇ, ಪಿ.ಎಫ್ ಹಣ ಇಲ್ಲದೇ ಕೆಲಸ ಮಾಡುವುದು ಕಷ್ಟ. ಪ್ರತಿ ತಿಂಗಳು ನಿರ್ದಿಷ್ಟ ದಿನ ವೇತನ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಗುತ್ತಿಗೆ ಸಂಸ್ಥೆಗಳಡಿಯೇ ಈ ನೌಕರರು ಕೆಲಸ ಮಾಡುತ್ತಿದ್ದರೂ ಅವರ ಸಮಸ್ಯೆ ಇತ್ಯರ್ಥ ಪಡಿಸುವ ಕಾಳಜಿ ತಮ್ಮದಾಗಿದೆ. ಬೇಗ ಪರಿಹರಿಸಿ ಎಂದು ಹೇಳಿದರು.ದಾವಣಗೆರೆಯ ಜಿಮಿನಿ ಸರ್ವಿಸಸ್, ಹುಬ್ಬಳ್ಳಿಯ ಶಂಕರ ಕನ್‌ಸ್ಟ್ರಕ್ಷನ್ಸ್, ಗಂಗಾವತಿ ಸ್ಮಾರ್ಟ್ ಸೊಲ್ಯೂಶನ್ ಈ ಮೂರು ಗುತ್ತಿಗೆ ಸಂಸ್ಥೆಗಳಿಂದ ರಾಯಚೂರು-ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ರಾಯಚೂರು ದೂರಸಂಪರ್ಕ ಜಿಲ್ಲಾ ವ್ಯಾಪ್ತಿಯಲ್ಲಿ ಗುತ್ತಿಗೆ ಕಾರ್ಮಿಕರ ಸೇವೆ ಪಡೆಯುತ್ತಿದೆ. ಹುಬ್ಬಳ್ಳಿ ಗುತ್ತಿಗೆ ಸಂಸ್ಥೆಯು ಕಾರ್ಮಿಕರಿಗೆ ವೇತನ ಪಾವತಿಸಿದೆ. ದಾವಣಗೆರೆ ಮತ್ತು ಗಂಗಾವತಿ ಗುತ್ತಿಗೆ ಸಂಸ್ಥೆಗಳು ವೇತನ ಪಾವತಿಸುವುದು ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಎಪ್ರಿಲ್, ಮೇ ತಿಂಗಳ ವೇತನ ಪಾವತಿ ಮಾಡಿದ್ದಾರೆ. ಜೂನ್ ತಿಂಗಳ ವೇತನ ಮಾಡಬೇಕು ಎಂದು ಎಜಿಎಂ ಪ್ರಲ್ಹಾದಾಚಾರ್ ವಿವರಿಸಿದರು.ಇದಕ್ಕೆ ಸಂಘದ ಮುಖಂಡರಾದ ಶೇಕ್ಷಾ ಖಾದ್ರಿ, ಮಲ್ಲೇಶ ಅವರು ಆಕ್ಷೇಪ ವ್ಯಕ್ತಪಡಿಸಿದರು. ಮೇ, ಜೂನ್ ತಿಂಗಳ ವೇತನ ಪಾವತಿ ಮಾಡಿಲ್ಲ. ಬೆಂಗಳೂರಿನ ಸ್ವಾಗತ ಅಸೋಸಿಯೇಟ್ಸ್ ಗುತ್ತಿಗೆ ಸಂಸ್ಥೆಗೆ ನೀಡಬೇಕಾದ 16 ಲಕ್ಷ ಪಿ.ಎಫ್ ಹಣ ಪಾವತಿ ಮಾಡಿಲ್ಲ. ಅದನ್ನು ಗುತ್ತಿಗೆ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದರು.ಇದಕ್ಕೆ ಉತ್ತರಿಸಿದ ಎಜಿಎಂ ಪ್ರಲ್ಹಾದ ಆಚಾರ್ ಅವರು  ಸ್ವಾಗತ್ ಗುತ್ತಿಗೆ ಸಂಸ್ಥೆಗೆ ಕೊಡಬೇಕಾದ ಎಲ್ಲ ಮೊತ್ತವನ್ನು ಸಂಸ್ಥೆ ಪಾವತಿಸಿದೆ. 7 ಲಕ್ಷ ಪಾವತಿ ಮಾಡಲಾಗಿದೆ. ಆ ಸಮಸ್ಯೆ ಬಗೆಹರಿದಿದೆ ಎಂದರು.ಮಧ್ಯ ಪ್ರವೇಶಿಸಿದ ಸಂಸದ ಶಿವರಾಮನಗೌಡ, ಏಜೆನ್ಸಿ ಮತ್ತು ಗುತ್ತಿಗೆ ಕಾರ್ಮಿಕರ ಮುಖಂಡರೊಂದಿಗೆ ಒಟ್ಟಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದಾಗ, ಬಿಎಸ್‌ಎನ್‌ಎಲ್ ಅಧಿಕಾರಿಗಳು ಮತ್ತು ಕಾರ್ಮಿಕರ ಮುಖಂಡರು ಒಪ್ಪಿದರು. ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ ಗುತ್ತಿಗೆ ಕಾರ್ಮಿಕರ ಸಮಸ್ಯೆ ವಿವರಿಸಿದರು.ಚರ್ಚೆ ವಿಫಲ: ಸಂಜೆ ಬಿಎಸ್‌ಎನ್‌ಎಲ್ ರಾಯಚೂರು ಸಹ ಪ್ರಧಾನ ವ್ಯವಸ್ಥಾಪಕ ಪ್ರಲ್ಹಾದ ಆಚಾರ್,  ಸಿಐಟಿಯು ನೇತೃತ್ವದ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಜಿಲ್ಲಾಧ್ಯಕ್ಷ ವಿಠಲ, ಸಹ ಕಾರ್ಯದರ್ಶಿ ಮಲ್ಲೇಶ ಸೇರಿದಂತೆ ಪದಾಧಿಕಾರಿಗಳು ಚರ್ಚೆ ನಡೆಸಿದರು.ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆ ಕಂಪೆನಿಯಿಂದ ದೊರಕಬೇಕಾದ ವೇತನ, ಪಿ.ಎಫ್ ಹಣ ಪಾವತಿ ಸಮಸ್ಯೆಯನ್ನು ಆ ಸಂಸ್ಥೆಗಳ ಜತೆ ಚರ್ಚೆ ನಡೆಸಿ ಶೀಘ್ರ ಪರಿಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.ಆದರೆ, ಇದಕ್ಕೆ ಕಾರ್ಮಿಕರ ಮುಖಂಡರು ಒಪ್ಪಲಿಲ್ಲ. ಬದಲಾಗಿ, ಕೂಡಲೇ ಪರಿಹರಿಸಿ ವೇತನ ದೊರಕಿಸುವ ವ್ಯವಸ್ಥೆ ಮಾಡಬೇಕು. ಇಲ್ಲದೇ ಇಲಾಖೆಯೇ ಜವಾಬ್ದಾರಿವಹಿಸಿಕೊಂಡು ಈ ಬಗ್ಗೆ ಲಿಖಿತ ಪತ್ರ ಕೊಡಬೇಕು ಎಂದು ಪಟ್ಟು ಹಿಡಿದರು.ಈ ಬೇಡಿಕೆ ಈಡೇರಿಸುವುದು ಅಸಾಧ್ಯ. ಆದರೆ, ಧರಣಿ ಸ್ಥಳಕ್ಕೆ ಬಂದು ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಮೌಖಿಕ ಭರವಸೆ ನೀಡುವುದಾಗಿ ಅಧಿಕಾರಿಗಳು ಹೇಳಿದರು. ಮೌಖಿಕ ಭರವಸೆಯಿಂದ ಸಮಸ್ಯೆ ಇತ್ಯರ್ಥ ಆಗುವುದಿಲ್ಲ ಎಂದು ಸಭೆಯಿಂದ ಹೊರ ನಡೆದರು.ಹೇಳಿಕೆ: ನಮ್ಮ ಬೇಡಿಕೆ ತಕ್ಷಣ ಈಡೇರಿಕೆ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬರೀ ಮೌಖಿಕ ಭರವಸೆ ನೀಡುತ್ತಿದ್ದಾರೆ. ಏಜೆನ್ಸಿ ಜತೆ ಚರ್ಚಿಸಿ  ಬೇಗ ಬೇಡಿಕೆ ಈಡೇರಿಸಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆ. ಹೀಗಾಗಿ ಸಭೆಯಿಂದ ಹೊರ ಬಂದಿದ್ದು, ಧರಣಿ ಮುಂದುವರಿಸುವ ಬಗ್ಗೆ ಕಾರ್ಮಿಕರ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಶೇಕ್ಷಾ ಖಾದ್ರಿ ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.