ಶುಕ್ರವಾರ, ಮಾರ್ಚ್ 5, 2021
16 °C
ಬಿಜೆಪಿ ಕಾರ್ಯಕಾರಿಣಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪ

ಗೂಂಡಾಗಿರಿ: ಸರ್ಕಾರಕ್ಕೆ ದೇಶದಲ್ಲೇ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೂಂಡಾಗಿರಿ: ಸರ್ಕಾರಕ್ಕೆ ದೇಶದಲ್ಲೇ ಮೊದಲ ಸ್ಥಾನ

ಶಿವಮೊಗ್ಗ:  ‘ರಾಜ್ಯ ಸರ್ಕಾರದ ಗೂಂಡಾ ಆಡಳಿತದ ಪರಿಣಾಮ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಗೂಂಡಾ ಸರ್ಕಾರ ದೇಶದ ಯಾವ ರಾಜ್ಯದಲ್ಲೂ ಇಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ತಾಲ್ಲೂಕು ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.‘ಅಧಿಕಾರಿಗಳು ನಿತ್ಯವೂ ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಹಾಕಿದ್ದ ಮರಿಗೌಡ ಅವರನ್ನು ರಕ್ಷಿಸಲು ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ಶಿಖಾ ಅವರನ್ನೇ ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದರು.‘ಮತದಾರರು ಕಾಂಗ್ರೆಸ್‌ ತಿರಸ್ಕರಿಸಿದ್ದರೂ ಜಿಲ್ಲಾ ಪಂಚಾಯ್ತಿ ಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಕುತಂತ್ರದ ರಾಜಕಾರಣ ನಡೆಸುತ್ತಿವೆ. ಇಂತಹ ಕುಂತ್ರಗಳಿಗೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಕುಟುಕಿದರು.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷ ಜಯ ಪಡೆಯಬೇಕು. ಅದಕ್ಕಾಗಿ ಈಗಿನಿಂದಲೇ ಪಕ್ಷದ ಸಂಘಟನೆ ಬಲಪಡಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ದೇಶ ದ್ರೋಹದ ಚಟುವಟಿಕೆಗಳು ಈಚೆಗೆ ಹೆಚ್ಚುತ್ತಿವೆ. ಜನರು ಭಯಭೀತರಾಗಿದ್ದಾರೆ. ಯುವಕರಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸಬೇಕು. ದೇಶದ್ರೋಹದ ಚಟುವಟಿಕೆ ಹತ್ತಿಕ್ಕಬೇಕು ಎಂದು ಸಲಹೆ ನೀಡಿದರು.‘ಈ ಹಿಂದೆ ಬಿಜೆಪಿ ಸಂಘಟನೆ ಬಲಗೊಂಡಿರಲಿಲ್ಲ. ಈಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಬಲ ಪಕ್ಷವಾಗಿ ಬೆಳೆದಿದೆ. ಮೊದಲು ಈ ಪಕ್ಷ ಉತ್ತರ ಭಾರತಕ್ಕೆ ಮಾತ್ರ ಸೀಮಿತ ಎಂದು ಹೇಳಲಾಗುತ್ತಿತ್ತು.ಈಗ ದಕ್ಷಿಣದಲ್ಲೂ ಬಲಗೊಳ್ಳುತ್ತಿದೆ. ಕಾಶ್ಮೀರದಲ್ಲಿಯೂ ನಮ್ಮ ಪಕ್ಷದ ಮುಖಂಡ ಉಪ ಮುಖ್ಯಮಂತ್ರಿಯಾಗಿದ್ದಾರೆ.  ಎಲ್ಲಾ ವರ್ಗದ ಜನರೂ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ’ ಎಂದರು. ‘ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಪರಿಣಾಮ ಮತಗಳು ಹಂಚಿಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೂರು ವರ್ಷದಲ್ಲಿ ಅಭಿವೃದ್ಧಿ ಶೂನ್ಯ. ಅಕ್ರಮ ಮರಳು ದಂಧೆ, ಗೂಂಡಾಗಿರಿಯಂತಹ ಹಲವು ಕಾರಣಗಳಿಂದ ರಾಜ್ಯದ ಜನ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದು ದೂರಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ ಮಾತನಾಡಿ, ‘ಬಿಜೆಪಿ  ಈಗಾಗಲೇ ರಾಜ್ಯದಲ್ಲಿ ಒಂದು ಕೋಟಿ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಸಹಕಾರಿಯಾಗಲಿದೆ’ ಎಂದರು.ಪಕ್ಷದ ಮುಖಂಡರಾದ ಎಸ್. ದತ್ತಾತ್ರಿ, ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಇ.ಕಾಂತೇಶ್, ಕುಮಾರಸ್ವಾಮಿ, ಬಸವರಾಜಪ್ಪ, ಎಸ್.ಎನ್.ಚನ್ನಬಸಪ್ಪ, ಪವಿತ್ರಾ ರಾಮಯ್ಯ, ಪದ್ಮಿನಿ, ನಾಗರಾಜ್, ರೇಖಾ, ಶಿವಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.