ಬುಧವಾರ, ಏಪ್ರಿಲ್ 14, 2021
31 °C

ಗೆಳೆಯ ದಾರಾಸಿಂಗ್ ಹೋದರು, ನನ್ನ ಕಾಲವೂ ದೂರವಿಲ್ಲ: ಮಿಲ್ಖಾ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡಿಗಡ (ಪಿಟಿಐ): `ಎರಡು ಮೂರು ದಿನಗಳ ಹಿಂದೆ ಆತ್ಮೀಯ ಗೆಳೆಯ ದಾರಾಸಿಂಗ್ ತೀರಿ ಹೋದರು. ನನ್ನ ಸರತಿಯೇನೂ ದೂರವಿಲ್ಲ. ಆದ್ದರಿಂದ ಭಾರತದ ಅಥ್ಲೀಟ್‌ವೊಬ್ಬರು ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದನ್ನು ನೋಡಬೇಕೆನ್ನುವ ಆಸೆಯಿದೆ. ಇದು ನನ್ನ ಕೊನೆಯ ಬಯಕೆ...~-ಹೀಗೆ ಮನದ ಭಾವನೆಯನ್ನು ಹೊರಗೆಡವಿದ್ದು `ಹಾರುವ ಸಿಖ್~ ಹಾಗೂ ಭಾರತದ ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್.`1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಬೇಕೆನ್ನುವ ನನ್ನ ಕನಸು ಕೈಗೂಡಲಿಲ್ಲ.ಕೊಂಚದರಲ್ಲಿಯೇ ತಪ್ಪಿ ಹೋಯಿತು. ಆದ್ದರಿಂದ ಈ ಸಲದ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ನಿಂದ ಪದಕ ನಿರೀಕ್ಷೆ ಮಾಡುತ್ತಿದ್ದೇನೆ. ಎರಡು ಮೂರು ವರ್ಷಗಳಲ್ಲಿ ನಾನೂ ದಾರಾಸಿಂಗ್ ಹೋದ ಜಾಗಕ್ಕೆ ಹೋಗಬಹುದು. ಅದೆಲ್ಲಾ ದೇವರಿಗೆ ಬಿಟ್ಟಿದ್ದು. ಅಷ್ಟರೊಳಗೆ ಈಗಿನ ಅಥ್ಲೀಟ್‌ಗಳು ಪದಕ ಗೆಲ್ಲಬೇಕು~ ಎಂದು  ಮನದ ಇಂಗಿತವನ್ನು ಅವರು ವ್ಯಕ್ತಪಡಿಸಿದರು.ರೋಮ್ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ನಾಲ್ಕನೇ ಸ್ಥಾನ ಪಡೆದಿದ್ದರು. ಈ ಅಥ್ಲೀಟ್ 1958 ಮತ್ತು 1962ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಭಾರತದ ಐದು ಮಂದಿ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಗುರ್ಬಚನ್ ಸಿಂಗ್ ರಾಂಧವ (1964), ಶ್ರೀರಾಮ್ ಸಿಂಗ್ (1976), ಪಿ.ಟಿ. ಉಷಾ (1984), ಅಂಜು ಜಾರ್ಜ್ ಅವರು ಫೈನಲ್ ಪ್ರವೇಶಿಸಿದ್ದರು.`ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ  ಚಿನ್ನ ಜಯಿಸಿದ್ದ ಕೃಷ್ಣಾ ಪೂನಿಯಾ ಲಂಡನ್‌ನಲ್ಲಿ ಪದಕ ಗೆಲ್ಲುವ ಭರವಸೆಯದೆ. ಪೂನಿಯಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಾಡಿದ ಸಾಧನೆಯನ್ನು ಇಲ್ಲಿಯೂ ಪುನರಾವರ್ತಿಸಲಿ ಎಂದ ಮಿಲ್ಖಾ, ಈಗ ಅಥ್ಲೀಟ್‌ಗಳಿಗೆ ಉತ್ತಮ ಸೌಲಭ್ಯಗಳಿವೆ, ಹಣ ಸಿಗುತ್ತಿದೆ. ಅಷ್ಟೇ ಅಲ್ಲ ವಿದೇಶಿ ಕೋಚ್‌ಗಳ ನೆರವು ಸಹ ಲಭ್ಯವಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳು ಇರುವಾಗಿ ನಮ್ಮ ಅಥ್ಲೀಟ್‌ಗಳು ಉತ್ತಮ ಸಾಧನೆ ಮಾಡಬೇಕು~ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.`ನಾನು ಸರ್ಕಾರವನ್ನು ದೂರುತ್ತಿಲ್ಲ. ಸಾಕಷ್ಟು ಸೌಲಭ್ಯಗಳು ಇದ್ದ ಮೇಲೂ ಸಾಧನೆ ಮಾಡಲಾಗದಿದ್ದರೆ, ನಿಜಕ್ಕೂ ಬೇಸರವಾಗುತ್ತದೆ. ಭಾರತ ಒಲಿಂಪಿಕ್ಸ್ ಸಂಸ್ಥೆ ಸಭೆ ಕರೆದು, ಪ್ರತಿ ಅಥ್ಲೀಟ್‌ಗಳ ಗುರಿ, ಜವಾಬ್ದಾರಿಯ ಬಗ್ಗೆ ತಿಳಿಸಿಕೊಡಬೇಕು~ ಎಂದು ಸಲಹೆ ನೀಡಿದ್ದಾರೆ.`ಧ್ಯಾನ್‌ಚಂದ್ ಅವರನ್ನು ಭಾರತದ ಜನ ಇಂದಿಗೂ ಏಕೆ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅವರು ತೋರಿದ ಪ್ರದರ್ಶನದಿಂದಲೇ `ಹಾಕಿ ಮಾಂತ್ರಿಕ~ ಎನಿಸಿಕೊಂಡರು. ನಾನು ಸಭೆ-ಸಮಾರಂಭಗಳಿಗೆ ಹೋದಾಗ ಇದೇ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಆಟಗಾರರ ಅಗತ್ಯತೆಗಳಿಗೆ ಫೆಡರೇಷನ್‌ಗಳು ಸ್ಪಂದಿಸಬೇಕು. ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಬೇಕು~ ಎಂದು ಮಿಲ್ಖಾ ಸಂದರ್ಶನದಲ್ಲಿ ಹೇಳಿದ್ದಾರೆ.`ಭಾರತ ಹಾಕಿ ತಂಡ ಯಾವುದೇ ದೇಶದ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ, ಸಾಧಿಸಿ ತೋರಿಸಲು ಸಾಧ್ಯವಾಗುತ್ತಿಲ್ಲ. ಕಾರಣ, ಕ್ರೀಡೆಯಲ್ಲಿ ರಾಜಕೀಯ ಬೆರೆತಿದೆ~ ಎಂದು ವಿಷಾದಿಸಿದ ಅವರು, `ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆಯ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.