ಗುರುವಾರ , ಮೇ 13, 2021
17 °C
`ಭವನಿಕಾ' ಕಾಮಗಾರಿ ಆರಂಭ, `ಸಾಕೇತ' ಉದ್ಘಾಟನೆ

`ಗೋವಿಂದ ಪೈ ಸ್ಮಾರಕಕ್ಕೆ ಆಧುನಿಕ ಸ್ಪರ್ಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜೇಶ್ವರ (ಕಾಸರಗೋಡು): ಮುಂದಿನ ವರ್ಷದ ಒಳಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕವನ್ನು ಆಧುನಿಕ ಸವಲತ್ತುಗಳೊಂದಿಗೆ ವಸ್ತುಸಂಗ್ರಾಹಾಲಯವನ್ನಾಗಿ ರೂಪಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಇಲ್ಲಿ ಹೇಳಿದರು.ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ `ಗಿಳಿವಿಂಡು' ಯೋಜನೆಯ ರಂಗಮಂದಿರ `ಭವನಿಕಾ' ಕಟ್ಟಡದ ಕಾಮಗಾರಿ ಕಾರ್ಯಾರಂಭ, ಕಾಸರಗೋಡು ಲೋಕಸಭಾ ಸದಸ್ಯರ ನಿಧಿಯಿಂದ ನಿರ್ಮಿಸಿದ `ಸಾಕೇತ' ವಿಶ್ರಾಂತಿಧಾಮವನ್ನು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಮಂದಿರದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂಡಿಯನ್ ಆಯಿಲ್ ಕಂಪೆನಿ ಪ್ರತಿಷ್ಠಾನ ದೇಶದ ಪ್ರಮುಖ ಸ್ಮಾರಕಗಳಳ ಅಭಿವೃದ್ಧಿಗೆ ರೂ 26 ಕೋಟಿ ಮಂಜೂರು ಮಾಡಿದೆ. ಅದೇ ರೀತಿ ಗೋವಿಂದ ಪೈ ಸ್ಮಾರಕಕ್ಕೂ ನೆರವು ನೀಡಲು ತೀರ್ಮಾನಿಸಲಾಗಿದೆ. ಗೋವಿಂದ ಪೈ ವಸ್ತು ಸಂಗ್ರಹಾಲಯಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಯೋಜನೆ ಸಿದ್ಧ ಪಡಿಸಿದೆ. ಕುವೆಂಪು, ದ.ರಾ.ಬೇಂದ್ರೆ ಅವರ ನಿವಾಸವನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಗೋವಿಂದ ಪೈ ಅವರ ನಿವಾಸವನ್ನೂ ವಸ್ತು ಸಂಗ್ರಹಾಲಯವನ್ನಾಗಿ, ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲಾಗುವುದೆಂದರು.ಕೇಂದ್ರ ಸರ್ಕಾರ, ಕೇರಳ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ರೂಪಿಸಿರುವ ಗಿಳಿವಿಂಡು ಯೋಜನೆಯಂತೆ ನಿರ್ಮಾಣ ಆಗಬೇಕಿರುವ ಸಭಾಂಗಣಕ್ಕೆ ಇತರ ನಾಲ್ಕು ತೈಲ ಕಂಪೆನಿಗಳು ತಲಾ ರೂ 70 ಲಕ್ಷದಂತೆ ನೀಡಲಿವೆ ಎಂದರು.ಶೀಘ್ರದಲ್ಲೇ ಬಹುಭಾಷಾ ಕಾರ್ಯಾಗಾರ: ಗೋವಿಂದ ಪೈ ಸ್ಮಾರಕದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ 3 ತಿಂಗಳ ಒಳಗೆ ಬಹುಭಾಷಾ ಸಾಹಿತ್ಯ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಕೇರಳ, ಕರ್ನಾಟಕದ ಹಿರಿಯ ಸಾಹಿತಿ, ಕವಿಗಳನ್ನು ಕರೆಸಿ ಚರ್ಚೆ ನಡೆಸಬೇಕು. ಗೋವಿಂದ ಪೈ ಅವರ ಸಾಹಿತ್ಯ ಪರಂಪರೆ ಮುಂದುವರಿಯಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.ಪರಂಪರೆ ಹುಟ್ಟು ಹಾಕಿದ ಗೋವಿಂದ ಪೈ: ಗೋವಿಂದ ಪೈ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹಾಕಿದ ಮೈಲಿಗಲ್ಲನ್ನು ಸಂರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗೂ ದಾಟಿಸಬೇಕು. ಅವರು ಸಾಹಿತ್ಯದಲ್ಲಿ ಹೊಸ ಪರಂಪರೆಯನ್ನೇ ಹಾಕಿ ಕೊಟ್ಟಿದ್ದಾರೆ. ಅವರು ಒಬ್ಬ ಶ್ರೇಷ್ಠ ಸಂಶೋಧಕರೂ ಆಗಿದ್ದರು. 25 ಭಾಷೆಗಳಲ್ಲಿ ಸಾಹಿತ್ಯವನ್ನೂ ರಚಿಸಿದ್ದರು ಎಂದರು. ಭಾಷಾವಾರು ನಾಗರಿಕತೆಯಿಂದ ಭಾಷೆ ಉಳಿಯುತ್ತದೆ. ಭಾಷೆಯಿಂದ ಉತ್ತಮ ವ್ಯಕ್ತಿತ್ವವೂ ನಿರ್ಮಾಣ ಆಗುತ್ತದೆ. ಭಾಷೆಯ ಅಡಿಪಾಯ ಇಲ್ಲದೆ ವ್ಯಕ್ತಿತ್ವ ನಿರ್ಮಾಣ ಆಗದು ಎಂದರು.ಕಾಸರಗೋಡು ಸಂಸದ ಪಿ.ಕರುಣಾಕರನ್ ಮಾತನಾಡಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರನ್ನು ಮುಂದಿನ ಪೀಳಿಗೆಯೂ ಅರ್ಥಮಾಡಿಕೊಳ್ಳಬೇಕು. ಅವರಿಗೆ ಸಿಗಬೇಕಾದ ನ್ಯಾಯ ತಡವಾಗುತ್ತಿದೆ. ಆವರಣ ಗೋಡೆ ನಿರ್ಮಾಣಕ್ಕೆ ಹಣ ನೀಡುವುದಾಗಿ ಘೋಷಿಸಿದರು. ಗೋವಿಂದ ಪೈ ಸ್ಮಾರಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ.ಚೌಟ ಮಾತನಾಡಿ, ಗೋವಿಂದ ಪೈ ಅವರ ಜತೆಗೆ ರಾಷ್ಟ್ರಕವಿಯಾಗಿ ಮನ್ನಣೆ ಗಳಿಸಿದ ಕೇರಳದ ವಳ್ಳತ್ತೋಳ್ ಅವರ ಸ್ಮಾರಕವನ್ನು ಕೇರಳ ಸರ್ಕಾರ ಅದ್ಭುತವಾಗಿ ರೂಪಿಸಿದೆ. ಆದರೆ ನಿವಾಸ ಮೂಲೆಗುಂಪಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಚಳವಳಿಯೇ ನಡೆಯಬೇಕು ಎಂದರು.ಶಾಸಕರಾದ ಎನ್.ಎ.ನೆಲ್ಲಿಕುನ್ನು, ಪಿ.ಬಿ.ಅಬ್ದುಲ್ ರಜಾಕ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಶ್ರತ್ ಜಹಾನ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ.ಸುಬ್ಬಯ್ಯ ರೈ, ಕೆ.ಆರ್.ಜಯಾನಂದ, ತೇಜೋಮಯ, ರಾಮಕೃಷ್ಣ ಕಡಂಬಾರ್, ಕೇಶವ ಶೆಣೈ, ಸುಭಾಶ್ಚಂದ್ರ ಕಣ್ವತೀರ್ಥ ಇದ್ದರು.ಜಿಲ್ಲಾಧಿಕಾರಿ ಪಿ.ಎಸ್.ಮುಹಮ್ಮದ್ ಸಗೀರ್ ಸ್ವಾಗತಿಸಿದರು. ಸ್ಮಾರಕ ಪ್ರತಿಷ್ಠಾನದ ಜತೆ ಕಾರ್ಯದರ್ಶಿ ಎಂ.ಜೆ.ಕಿಣಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.