ಶನಿವಾರ, ಮೇ 8, 2021
19 °C

ಗ್ರಾಮಸಭೆಗೆ ‘ಸಂಪೂರ್ಣ’ ಬಲ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

‘ಹಳ್ಳಿಯ ವಿಧಾನಸಭೆ’ಯಲ್ಲಿ ಚುನಾಯಿತ ‘ಪತ್ನಿ’ಯರ ಬೆನ್ನ ಹಿಂದೆ ನಿಂತು ರಾಜಕಾರಣ ಮಾಡುವ ‘ಪತಿ’ ದೇವರುಗಳಿಗೆ ಕೊರತೆ ಇಲ್ಲ! ಇದನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಕೇಂದ್ರ ಪಂಚಾಯಿತ್ ರಾಜ್ ಸಚಿವಾಲಯ ವಿನೂತನ ಕಾರ್ಯಕ್ರಮವೊಂದನ್ನು ಸದ್ದಿಲ್ಲದೆ ಅನುಷ್ಠಾನಕ್ಕೆ ತಂದಿದೆ.ಗ್ರಾಮ ಪಂಚಾಯಿತಿಗಳ ಚುನಾಯಿತ ಮಹಿಳಾ ಜನಪ್ರತಿನಿಧಿಗಳಿಗೆ ‘ರಾಜಕೀಯದಲ್ಲಿ ಮಹಿಳಾ ನಾಯಕತ್ವ ಉತ್ತೇಜನ ಹಾಗೂ ಲಿಂಗತ್ವ ಸ್ಪಂದನಶೀಲ ಆಡಳಿತ’ ಎಂಬ ಈ ಕಾರ್ಯಕ್ರಮದ ‘ಫಲ’ವಾಗಿ ಮಹಿಳೆಯರು 2015ರ ಅಂತ್ಯದ ವೇಳೆಗೆ ಅಭಿವೃದ್ಧಿ ಯೋಜನೆಗಳನ್ನು ಸ್ವಯಂ ರೂಪಿಸಿ ಅನುಷ್ಠಾನಗೊಳಿಸಲು ಅವಶ್ಯವಿರುವ ಸಂಪನ್ಮೂಲವನ್ನು ನಿಗದಿಪಡಿಸುವಷ್ಟು ಜ್ಞಾನ ಮತ್ತು ಸಾಮರ್ಥ್ಯ ಹೊಂದಬೇಕು ಎನ್ನುವುದು ಈ ಕಾರ್ಯಕ್ರಮದ ಗುರಿ.ಮೊದಲ ಹಂತದಲ್ಲಿ ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ ರಾಜ್ಯಗಳ ಒಟ್ಟು 34 ಜಿಲ್ಲೆಗಳಲ್ಲಿ, ಪ್ರತಿ ಜಿಲ್ಲೆಗಳ ಆಯ್ದ ತಲಾ 100 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆ ಮೂಲಕ ಪ್ರತಿ ಜಿಲ್ಲೆಯಲ್ಲಿ 10 ಗ್ರಾಮ ಪಂಚಾಯಿತಿಗಳನ್ನು ‘ಮಾದರಿ ಗ್ರಾಮ ಪಂಚಾಯಿತಿ’ಗಳಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ರಾಯಲ್ ನಾರ್ವೇಜಿಯನ್ ಎಂಬೆಸಿ (ಆರ್‌ಎನ್‌ಸಿ) ಈ ಯೋಜನೆಗೆ ಹಣಕಾಸು ಒದಗಿಸುತ್ತಿದ್ದು, ಕೇಂದ್ರ ಪಂಚಾಯಿತಿ ರಾಜ್ ಸಚಿವಾಲಯ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಾರ್ಯಕ್ರಮದ ಸಮನ್ವಯ ಘಟಕವಾದ ನವದೆಹಲಿಯ ‘ವಿಶ್ವ ಸಂಸ್ಥೆ ವಿಮೆನ್‌’ (UN WOMEN) ಜೊತೆ 2011ರ ಸೆ. 14ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಈ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ‘ಸಂಪೂರ್ಣ’ ಎಂದು ಹೆಸರಿಡಲಾಗಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ‘ಸಮಭಾಗಂ’ ಎಂದು ಹೆಸರಿಟ್ಟಿದೆ.ರಾಜ್ಯದಲ್ಲಿ ಮೈಸೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಯ್ದ 100 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಆರಂಭಿಸಲಾಗಿದೆ. ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ 2012ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಳಂಬವಾಗಿ ಆರಂಭಗೊಂಡಿದೆ. ವಿಶೇಷವೆಂದರೆ, ತಳಮಟ್ಟದಲ್ಲಿ ಸದ್ದಿಲ್ಲದೆ ಆರಂಭಗೊಂಡ ಈ ಅಭಿಯಾನದ ಮಹತ್ವ ಮತ್ತು ಪರಿಣಾಮ ಬಹುಶಃ ಯಾರ ಗಮನಕ್ಕೂ ಬಂದಿರಲಿಕ್ಕಿಲ್ಲ.ತರಬೇತುಗೊಂಡ ಪ್ರೇರಕರು, ಚುನಾಯಿತ ಮಹಿಳಾ ಜನಪ್ರತಿನಿಧಿಗಳನ್ನು ಸಜ್ಜುಗೊಳಿಸಿ ವಾರ್ಡ್ ಸಭೆ, ಗ್ರಾಮ ಸಭೆ, ಮಹಿಳಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಜೊತೆಗೆ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಮೂಡಿಸುವಂತೆ ಸಿದ್ಧಗೊಳಿಸುವುದು ಕಾರ್ಯಕ್ರಮದ ಉದ್ದೇಶ. ಈಗಾಗಲೇ ಮೊದಲ ಹಂತ ಸಂಪೂರ್ಣಗೊಂಡಿದ್ದು, ಎರಡನೇ ಹಂತ ಇದೇ ನವೆಂಬರ್‌ ತಿಂಗಳಿನಿಂದ ಆರಂಭಗೊಳ್ಳಲಿದೆ’ ಎನ್ನುತ್ತಾರೆ ‘ಯುಎನ್‌ ವಿಮೆನ್‌’ ಸಂಸ್ಥೆಯ, ಈ ಕಾರ್ಯಕ್ರಮದ ಧಾರವಾಡ ಜಿಲ್ಲಾ ಯೋಜನಾಧಿಕಾರಿ ರವೀಂದ್ರ.

‘ಧಾರವಾಡ ಜಿಲ್ಲೆಯಲ್ಲಿ 18 ತಿಂಗಳು ವಿವಿಧ ಮಜಲುಗಳಲ್ಲಿ ನಡೆದ ಮೊದಲ ಹಂತದ ಕಾರ್ಯಕ್ರಮ 40,060 ಫಲಾನುಭವಿಗಳಿಗೆ (ಮಹಿಳೆಯರಿಗೆ) ನೇರವಾಗಿ ತಲುಪಿದೆ. ಅಲ್ಲದೆ, 5,916ಕ್ಕೂ ಹೆಚ್ಚು ಮಂದಿ ಪುರುಷರು ಪರೋಕ್ಷ ಫಲಾನುಭವಿಗಳಾಗಿದ್ದಾರೆ’ ಎನ್ನುತ್ತಾರೆ ಅವರು.ಈ ಕಾರ್ಯಕ್ರಮದಡಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ, ವಾರ್ಡ್‌ ಮತ್ತು ಮಹಿಳಾ ಸಭೆಗಳನ್ನು ಆಯೋಜಿಸಲಾಯಿತು. ಪಂಚಾಯಿತಿಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳು ಮತ್ತು ಲಿಂಗ ಸಂಬಂಧಿ ವಿಷಯಗಳ ಕುರಿತು ಮಹಿಳೆಯರು ಮತ್ತು ಪುರುಷರಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡುವಂತೆ ಚುನಾಯಿತ ಮಹಿಳಾ ಜನಪ್ರತಿನಿಧಿಗಳಿಗೆ ತಿಳಿಸಲಾಯಿತು. ಪಂಚಾಯಿತಿಗಳಿಗೆ ನಿರಂತರ ಭೇಟಿ ನೀಡುವುದರಿಂದ ನೈರ್ಮಲ್ಯದ ಮಹತ್ವ, ಪ್ರತಿ ಮನೆಯಲ್ಲಿ ಶೌಚಾಲಯದ ಅಗತ್ಯದ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಯಿತು. ಚುನಾಯಿತ ಮಹಿಳಾ ಪ್ರತಿನಿಧಿಗಳು ಮತ್ತು ಪಂಚಾಯತ್‌ರಾಜ್‌ ಸಂಸ್ಥೆಗಳ ಚಟುವಟಿಕೆಯಲ್ಲಿ ನಿರತ ಇತರ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಗ್ರಾಮಸಭೆ ನಡೆಯುವುದಕ್ಕೂ ಮೊದಲು ಮಹಿಳಾ ಸಭೆಗಳನ್ನು ನಡೆಸಲಾಯಿತು.ಗ್ರಾಮಸಭೆಯ ಅಗತ್ಯದ ಕುರಿತು ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಯಿತು. ಅದರಿಂದಾಗಿ 111 ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ನೀರಿನ ಸೌಲಭ್ಯ, ಒಳಚರಂಡಿ, ಬಾಲ್ಯವಿವಾಹ, ಪರಿಸರ ಕಾಳಜಿ ಮತ್ತಿತರ ವಿಷಯಗಳ ಬಗ್ಗೆ ಸಂಘಟಿತರಾಗಿ ವಿಷಯ ಪ್ರಸ್ತಾಪಿಸಲು ಸಾಧ್ಯವಾಯಿತು. ಪರಿಣಾಮ, ಸಭೆಗಳಲ್ಲಿ ಭಾಗವಹಿಸುವ ಪುರುಷರ ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಿತು. ಪಂಚಾಯಿತಿ ಮಟ್ಟದ ಸಭೆಗಳಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳು ನಿರಂತರ ಭಾಗವಹಿಸುವಂತಾಯಿತು. ಸಮುದಾಯದ ಮಹಿಳೆಯರು ಗ್ರಾಮಸಭೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಗುರುತಿಸುವ ಕೆಲಸ ಗ್ರಾಮಸಭೆಗಳಲ್ಲಿ ನಡೆಯಿತು ಎನ್ನುತ್ತಾರೆ ರವೀಂದ್ರ.ಮದ್ಯದಂಗಡಿಗಳ ಸ್ಥಳಾಂತರ, ಹೆಣ್ಣುಮಕ್ಕಳ ಶಿಕ್ಷಣ, ಮಹಿಳೆಯ ವಿರುದ್ಧದ ಹಿಂಸೆ, ವಿಶೇಷವಾಗಿ ಕೌಟುಂಬಿಕ ದೌರ್ಜನ್ಯ, ಮಹಿಳೆಗೆ ಉದ್ಯೋಗ ಅವಕಾಶ, ಬಾಲ್ಯ ವಿವಾಹ, ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಿಸಿ ವಿಷಯಗಳು, ನೀರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಆಸ್ಪತ್ರೆ, ಶಾಲೆ, ಗ್ರಾಮ ಪ್ರದೇಶಗಳಿಗೆ ಬಸ್‌ ಸೌಲಭ್ಯ, ಕುಸಿಯುತ್ತಿರುವ ಲಿಂಗ ಅನುಪಾತ, ಶೌಚಾಲಯ ಮತ್ತಿತರ ವಿಷಯಗಳ ಕುರಿತು ವಾರ್ಡ್ ಸಭೆ, ಗ್ರಾಮ ಸಭೆ, ಮಹಿಳಾಸಭೆಯಲ್ಲಿ ಚರ್ಚೆ ನಡೆಯಿತು.ಕಾರ್ಯಕ್ರಮದ ಪರಿಕಲ್ಪನೆಯ ಕುರಿತು ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ಸ್ಟೇಟ್‌ ಇನ್‌ಸ್ಟಿಟ್ಯೂಟ್‌ ಫಾರ್‌ ರೂರಲ್‌ ಡೆವಲಪ್‌ಮೆಂಟ್‌ (ಎಎನ್‌ಎಸ್‌ಎಸ್‌ಐಆರ್‌ಡಿ) ವತಿಯಿಂದ ಎರಡು ಹಂತಗಳಲ್ಲಿ ಪ್ರೇರಕರಿಗೆ ತರಬೇತಿ ನೀಡಲಾಯಿತು. ಮಹಿಳಾ ಸಭೆ, ವಾರ್ಡ್‌ ಸಭೆ ಹಾಗೂ ಗ್ರಾಮಸಭೆಗಳನ್ನು ಹಮ್ಮಿಕೊಳ್ಳುವುದು ಹೇಗೆ? ನೈರ್ಮಲ್ಯ, ಮಹಿಳಾ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಕೌಟುಂಬಿಕ ದೌರ್ಜನ್ಯ, ಜೀವನೋಪಾಯ ಮತ್ತಿತರ ವಿಷಯಗಳ ಬಗ್ಗೆ ಒತ್ತು ನೀಡಿ ಗ್ರಾಮ ಪಂಚಾಯಿತಿಗಳಲ್ಲಿ ಚಟುವಟಿಕೆ ನಿರತರಾಗುವ ಬಗೆಯನ್ನು ತಿಳಿಸಿ ಕೊಡಲಾಯಿತು.ಐದು ತಾಲ್ಲೂಕುಗಳ 38 ಪ್ರೇರಕರಿಗೆ ಎಎನ್‌ಎಸ್‌ಎಸ್‌ಐಆರ್‌ಡಿ ಮೂವರು ಮುಖ್ಯ ತರಬೇತುದಾರರ (ಮಾಸ್ಟರ್‌ ಟ್ರೈನರ್‌) ಸಹಾಯದಿಂದ ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಂಚಾಲಕ ಸಮಿತಿ ರಚಿಸಲಾಯಿತು. 100 ಗ್ರಾಮ ಪಂಚಾಯಿತಿಗಳ 689 ಚುನಾಯಿತ ಮಹಿಳಾ ಜನಪ್ರತಿನಿಧಿಗಳನ್ನು ತಲಾ 40 ಮಂದಿಯ 18 ತಂಡಗಳಾಗಿ ವಿಂಗಡಿಸಿ ಮೂರು ವಿವಿಧ ತರಬೇತಿ ಕೇಂದ್ರಗಳಲ್ಲಿ ಎಎನ್‌ಎಸ್‌ಎಸ್‌ಐಆರ್‌ಡಿ ವತಿಯಿಂದ ತರಬೇತಿ ನೀಡಲಾಯಿತು.ಕಾರ್ಯಕ್ರಮದ ‘ಫಲ’: ಈ ಕಾರ್ಯಕ್ರಮದ ಪರಿಣಾಮ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸುವಂತೆ ಮಾಡಲು ಸಾಧ್ಯವಾಗಿದೆ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ, ಬಿಪಿಎಲ್‌ ಕಾರ್ಡ್ ವಿತರಣೆಯಲ್ಲಿ ತಾರತಮ್ಯ, ನೈರ್ಮಲ್ಯ, ಆರೋಗ್ಯ ಮತ್ತಿತರ ವಿಷಯಗಳ ಬಗ್ಗೆ ಮಹಿಳೆಯರು ಧ್ವನಿ ಎತ್ತಲು ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಮಹಿಳೆಯರ ಆರಿಸುವಿಕೆ, ಮಹಿಳೆಯರ ಮತ್ತು ಮಕ್ಕಳ ಸಾಗಣೆ ಅರಿವು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಿಂಗ ಕಾಳಜಿ ಹೆಚ್ಚಿತು. ಮಹಿಳೆಯರ ಜೊತೆ ಪುರುಷರೂ ಸಮಾನರಾಗಿ, ಸಕ್ರಿಯವಾಗಿ ತರಬೇತಿ ಮತ್ತು ಜಾಗೃತಿ ಸಭೆಗಳಲ್ಲಿ ಭಾಗವಹಿಸಿದರು.ಶೇಕಡಾ 50ರಷ್ಟು ಚುನಾಯಿತ ಮಹಿಳಾ ಜನಪ್ರತಿನಿಧಿಗಳು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಆಂದೋಲನ ನಡೆಸಿ ಮಹಿಳಾ ಸಮುದಾಯದ ಮಧ್ಯೆ ಅಭಿಯಾನ ಕೈಗೊಂಡು ಸಾಮರ್ಥ್ಯ ಪ್ರದರ್ಶಿಸಿದರು. ಮಹಿಳೆಯರ ಅಗತ್ಯಗಳನ್ನು ಸೇರಿಸಿಕೊಂಡು ಗ್ರಾಮಾಭಿವೃದ್ಧಿ ಯೋಜನೆಗಳಿಗೆ ರೂಪು ನೀಡಲಾಯಿತು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಗ್ರಾಮಸಭೆಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಚುನಾಯಿತ ಮಹಿಳಾ ಪ್ರತಿನಿಧಿಗಳ ಮಧ್ಯಪ್ರವೇಶದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಯಿತು. ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಮಧ್ಯಪ್ರವೇಶದಿಂದ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಗಮನೀಯವಾಗಿ ಕಡಿಮೆ ಆಗಿದೆ. ಗ್ರಾಮಸಭೆಗಳಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚಿತು. ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಮತ್ತು ಪುರುಷ ಜನಪ್ರತಿನಿಧಿಗಳ ಮುಖಾಮುಖಿ ಸಭೆಗಳಿಂದ ಆಡಳಿತ– ಅಭಿವೃದ್ಧಿ ವಿಷಯಗಳಲ್ಲಿ ‘ಸಂಬಂಧ’ ಸುಧಾರಿಸಿತು ಎನ್ನುತ್ತಾರೆ ರವಿಂದ್ರ.ಈ ಕಾರ್ಯಕ್ರಮ ಪರಿಕಲ್ಪನೆಯಂತೆ, ಗ್ರಾಮಸಭೆಗಳಿಗೆ ಪುನರ್ ರೂಪ ನೀಡುವುದರಿಂದ ಪರಿಣಾಮಕಾರಿ ಫಲಿತಾಂಶ ಕಾಣಲು ಸಾಧ್ಯ. ವಾಸ್ತವವಾಗಿ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ, ಅನುಷ್ಠಾನವನ್ನು ಕಟ್ಟಕಡೆಯ ವ್ಯಕ್ತಿಗೂ ತಿಳಿಸಿಕೊಡಲು ಮತ್ತು ತಲುಪಿಸಲು ಈ ಮಾದರಿ ಅನುಕೂಲ. ಗ್ರಾಮಸಭೆಗಳ ಕುರಿತು ಪ್ರಚಾರ ಕಡಿಮೆ ಇದೆ. ಗ್ರಾಮಸಭೆಗಳನ್ನು ನಡೆಸುವ ಬದಲು ವಾರದಲ್ಲೊಮ್ಮೆ ವಿಷಯಾಧಾರಿತ ಮಹಿಳಾ ಸಭೆಗಳನ್ನು ನಡೆಸಿದರೆ ಹೆಚ್ಚು ಅನುಕೂಲ. ಮಹಿಳೆಯರು ತಮ್ಮ ಸಮಸ್ಯೆ, ಅಹವಾಲು ಹೇಳಿಕೊಳ್ಳಲು ಮಹಿಳಾ ಸಭೆ ಸೂಕ್ತ ವೇದಿಕೆ.ಜೊತೆಗೆ ಗ್ರಾಮಸಭೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಚುನಾಯಿತ ಮಹಿಳಾ ಜನಪ್ರತಿನಿಧಿಗಳು ಸರ್ಕಾರದ ಅಧಿಕಾರಿಗಳಿಗೆ ಬೇಡಿಕೆ ಇಡಬೇಕು. ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಪ್ರೋತ್ಸಾಹ ಅಗತ್ಯ, ಅವರಿಗೆ ನಾಯಕತ್ವ ವಹಿಸಿಕೊಡುವ ಕೆಲಸ ಆಗಬೇಕು. ಲಿಂಗ ಸೂಕ್ಷ್ನತೆಯನ್ನು ಅರಿತುಕೊಂಡು ಪುರುಷರು ಕಾರ್ಯಪ್ರವೃತ್ತರಾಗಬೇಕು. ನಾಲ್ಕೈದು ಮಂದಿ ಮಹಿಳೆಯರನ್ನು ಒಳಗೊಂಡ ತಂಡ ರಚಿಸಿ ಗ್ರಾಮ ಪಂಚಾಯಿತಿ ಅಥವಾ ಗ್ರಾಮಸ್ಥರ ವಿಷಯಗಳನ್ನು ಪರಿಹರಿಸುವ ಹೊಣೆಗಾರಿಕೆ ನೀಡಬೇಕು. ಸಮುದಾಯದ ಜೊತೆ ಈ ತಂಡ ಕೆಲಸ ಮಾಡಿ ಅವರ ಸಮಸ್ಯೆ, ಬೇಡಿಕೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ನೆರವು ನೀಡಬೇಕು. ಆ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ತಳಮಟ್ಟದಲ್ಲಿ ಪರಿಣಾಮಕಾರಿ ಬದಲಾವಣೆ ಸಾಧ್ಯ. ಇಡೀ ಯೋಜನೆಯ ಕೇವಲ ಆಯ್ದ ಗ್ರಾಮ ಪಂಚಾಯಿತಿಗಳ ಬದಲು ಇಡೀ ಜಿಲ್ಲೆಗೆ ವಿಸ್ತರಿಸಬೇಕು ಎನ್ನುವುದು ರವೀಂದ್ರ ಅವರ ಬಯಕೆ. ಮಹಿಳಾ ಗ್ರಾಮಸಭೆ ಕಡ್ಡಾಯ

2014-– 15ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಮಹಿಳಾ ಗ್ರಾಮಸಭೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌­ರಾಜ್ ಇಲಾಖೆ ಇತ್ತೀಚೆಗೆ ಚಾಲನೆ ನೀಡಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಗ್ರಾಮಸಭೆ ಕಡ್ಡಾಯವಾಗಿ ಆಯೋಜಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ 2014ರ  ಜೂನ್ 12ರಂದು ಆದೇಶ ಹೊರಡಿಸಿದ್ದರು. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸಾಮಾನ್ಯ ಗ್ರಾಮಸಭೆಗೆ ಇರುವ ಅಧಿಕಾರವನ್ನು ಮಹಿಳಾ ಸಭೆಗೂ ನೀಡಲಾಗಿದೆ. ರಾಜಕೀಯ ನಾಯಕತ್ವ, ಲಿಂಗ ಸಮಾನತೆ, ಮಹಿಳಾ ಫಲಾನುಭವಿಗಳ ಆಯ್ಕೆ, ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯ ಹೆಚ್ಚಿಸುವುದು, ಯೋಜನೆಯಲ್ಲಿ ತೊಡಗಿಸಿಕೊಳ್ಳು­ವುದು, ವಿವಿಧ ಇಲಾಖೆಯಲ್ಲಿ ಲಭ್ಯ ಸಹಾಯಧನ ಯೋಜನೆ ಸೇರಿ­ದಂತೆ ಅನೇಕ ಕಾರ್ಯಕ್ರಮಗಳ ಕುರಿತು ಮಹಿಳಾ ಗ್ರಾಮಸಭೆ­ಯಲ್ಲಿನ ಮಹತ್ವದ ಚರ್ಚಾ ವಿಷಯಗಳಾಗಿವೆ. ಮಹಿಳೆಯರು, ಮಕ್ಕಳ ಪೌಷ್ಟಿಕತೆ, ಆರೋಗ್ಯ ಸುಧಾರಣೆ, ಮಹಿಳೆ ಮತ್ತು ಕಾನೂನು, ಕೌಟುಂಬಿಕ ದೌರ್ಜನ್ಯ ತಡೆಗಟ್ಟುವುದು, ಮಹಿಳಾ ಸಬಲೀ­ಕರಣ, ಆರ್ಥಿಕ ಸಬಲೀಕರಣ, ಶೈಕ್ಷಣಿಕ ಮಟ್ಟ ಹೆಚ್ಚಿಸುವ ಕುರಿತು ಗ್ರಾಮಸಭೆಯಲ್ಲಿ ವಿಶೇಷ ಚರ್ಚೆ, ನಿರ್ಣಯ ತೆಗೆದು­ಕೊಳ್ಳುವ ಅವಕಾಶವಿದೆ. ಮಹಿಳೆಯರು ವಿಶೇಷ ಗ್ರಾಮಸಭೆಯ ಅನುಕೂಲ ಪಡೆಯಲು ನಿಯಮ ರೂಪಿಸಲಾಗಿದೆ.‘ಮಹಿಳಾ ಸಬಲೀಕರಣಕ್ಕೆ ತೆರೆದ ಹಾದಿ...’

‘ಯುಎನ್‌ ವಿಮೆನ್‌’ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿ ತಾಲ್ಲೂಕಿನ ಆಯ್ದ 14 ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಏಳು ಪ್ರೇರಕರಲ್ಲಿ ಪೈಕಿ ನಾವಿಬ್ಬರೂ ಇದ್ದೆವು. ಸ್ವಸಹಾಯ ಗುಂಪುಗಳಲ್ಲಿ ಸಕ್ರಿಯರಾಗಿದ್ದ ನಮಗೆ, ಪ್ರೇರಕರಾಗಿ ಸೇರಿಕೊಳ್ಳುವುದಕ್ಕೂ ಮೊದಲು ಗ್ರಾಮ ಪಂಚಾಯಿತಿ ಚಟುವಟಿಕೆಯ ಕುರಿತು ಮಾಹಿತಿ ಇರಲಿಲ್ಲ. ‘ಯುಎನ್‌ ವಿಮೆನ್‌’ ಕಾರ್ಯಕ್ರಮದ ಜಾರಿ ಹಿನ್ನೆಲೆಯಲ್ಲಿ ಸಿಕ್ಕ ತರಬೇತಿಯಿಂದ ಗ್ರಾಮ ಪಂಚಾಯಿತಿ ಆಡಳಿತ ಚಟುವಟಿಕೆ, ಕಾರ್ಯವೈಖರಿ, ಅಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.ಎದ್ದು ನಿಂತು ಮಾತನಾಡುವ ಧೈರ್ಯ ಬಂದಿದ್ದು ಆಗಲೇ. ಆ ಆತ್ಮವಿಶ್ವಾಸದಿಂದಲೇ ನಾವು ಚುನಾಯಿತ ಜನಪ್ರತಿನಿಧಿಗಳು ಮತ್ತು ಪಂಚಾಯಿತಿಯ ಮಹಿಳೆಯರಲ್ಲಿ ಧೈರ್ಯ ತುಂಬಿ ಯುಎನ್‌ ವಿಮೆನ್‌ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಿದೆವು. ಸದಸ್ಯರಾಗಿ ಆಯ್ಕೆಯಾಗಿದ್ದರೂ ಪಂಚಾಯಿತಿ ಕಚೇರಿ ಮುಖವನ್ನೇ ನೋಡದ ಚುನಾಯಿತ ಮಹಿಳಾ ಜನಪ್ರತಿನಿಧಿಗಳು ಗ್ರಾಮಸಭೆ, ಮಹಿಳಾ ಸಭೆ, ವಾರ್ಡ್‌ ಸಭೆ, ಪಂಚಾಯಿತಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಿದೆವು. ನಾಲ್ಕು ಗೋಡೆಗಳ ಮಧ್ಯೆ ಇದ್ದವರು ನಾಲ್ವರ ಮುಂದೆ ನಿಂತು ಮಾತನಾಡುವ ಧೈರ್ಯ ಗಳಿಸಿಕೊಂಡರು.ನೋವು–ನಲಿವುಗಳನ್ನು ಹಂಚಿಕೊಂಡರು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸಲು ಪಂಚಾಯಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ಪ್ರಚಾರ ನೀಡಿದೆವು. ಆದರೆ, ಗ್ರಾಮಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಕೇವಲ ಠರಾವು ಆಗಿಯಷ್ಟೇ ಉಳಿಯದೆ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಜನಸಾಮಾನ್ಯರ, ವಿಶೇಷವಾಗಿ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.

– ಶೋಭಾ ಗಿ. ಮದಭಾವಿ, ಬೀಬಿಜಾನ್‌ ಎಂ. ನದಾಫ್‌, ‘ಯುಎನ್‌ ವಿಮೆನ್‌’ ಕಾರ್ಯಕ್ರಮದ ಪ್ರೇರಕರು‘ಆತ್ಮ ವಿಶ್ವಾಸ ತುಂಬಿದ ‘ಯುಎನ್‌ ವಿಮೆನ್‌’

ಮನೆಯವರ ಬಲವಂತಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆಯಾದೆ, ಆ ಮೂಲಕ, ಮನೆಗಷ್ಟೇ ಸೀಮಿತವಾಗಿದ್ದ ನಾನು ಹೊರಗೆ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಆದರೆ, ಪಂಚಾಯಿತಿಗೆ ಸಂಬಂಧಪಟ್ಟ ಯಾವುದೇ ವಿಷಯ, ಅಲ್ಲಿನ ಕಾರ್ಯ ಚಟುವಟಿಕೆಯಲ್ಲಿ ಭಾಗವ­ಹಿಸುತ್ತಿರಲಿಲ್ಲ. ಎಲ್ಲವನ್ನೂ ಪತಿಯೇ ನಿಭಾಯಿಸು­ತ್ತಿದ್ದರು.‘ಯುಎನ್‌ ವಿಮೆನ್‌’ ಕಾರ್ಯಕ್ರಮದಿಂದ ಮಹಿಳಾ ಸಭೆ, ಮಹಿಳಾ ಗ್ರಾಮಸಭೆ, ಮಹಿಳಾ ವಾರ್ಡ್ ಸಭೆಗಳಲ್ಲಿ ಭಾಗವಹಿಸಲು ಉತ್ತೇಜನ ಸಿಕ್ಕಿತು. ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರನ್ನಷ್ಟೇ ಅಲ್ಲ, ಇತರ ಮಹಿಳೆಯರನ್ನೂ ಒಟ್ಟುಗೂಡಿಸಿ ಚುನಾಯಿತ ಮಹಿಳೆಯರ ಕರ್ತವ್ಯ, ಹಕ್ಕು, ಸೌಲಭ್ಯಗಳು, ಆರ್ಥಿಕ ಚಟುವಟಿಕೆ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯ, ಶಿಕ್ಷಣ, ಬಾಲ್ಯ ವಿವಾಹ, ಕೌಟುಂಬಿಕ ಕಿರುಕುಳ, ವೈಯಕ್ತಿಕ ಸಮಸ್ಯೆ ಮತ್ತಿತರ ವಿಷಯಗಳನ್ನು ಸಭೆಗಳಲ್ಲಿ ಚರ್ಚಿಸುವ ಆತ್ಮಧೈರ್ಯ ಬಂತು.ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ಅಲ್ಲಿನ ಸೌಲಭ್ಯಗಳನ್ನು ಮಹಿಳೆಯರಿಗೆ ತಿಳಿಸಿ ಅವರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಯಿತು.ಹೆಣ್ಣು ಮಕ್ಕಳಿಗೆ ಟೈಲರಿಂಗ್‌, ಕಂಪ್ಯೂಟರ್‌ ಮತ್ತಿತರ ವೃತ್ತಿ ತರಬೇತಿಗಳನ್ನು ಪಂಚಾಯಿತಿ ವತಿಯಿಂದ ಕೊಡುವ ವ್ಯವಸ್ಥೆ  ಮಾಡಿದ್ದೇನೆ.– -ಬಸಮ್ಮಾ ಬ. ಹಳೇಮನಿ, ಇಂಗಳಹಳ್ಳಿ ಗ್ರಾ.ಪಂ. ಸದಸ್ಯೆ‘ಸ್ವ ಉದ್ಯೋಗದಿಂದ ಸ್ವಾವಲಂಬನೆ...’

ಬಡ ಕುಟುಂಬದಲ್ಲಿ ಹುಟ್ಟಿದ ನಾನು  ಅಂಗವಿಕಲೆ. ಕನ್ನಡ ಮಾಧ್ಯಮದಲ್ಲಿ 7ನೇ ತರಗತಿ ಆಗಿದೆ, 15ರ ಹರೆಯದಲ್ಲೇ ತಬ್ಬಲಿಯಾದೆ. ಆರಂಭದ ದಿನಗಳಲ್ಲಿ ಇಟ್ಟಂಗಿ ಫ್ಯಾಕ್ಟರಿಯಲ್ಲಿ ದಿನಗೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡೆ. ಇಬ್ಬರು ಮಕ್ಕಳ ತಾಯಿಯಾಗಿರುವ ನಾನು, ಮೂರನೇ ಹೆರಿಗೆ ಸಂದರ್ಭದಲ್ಲಿ ಪತಿಯನ್ನೂ ಕಳೆದುಕೊಂಡಿದ್ದೆ. ಸಂಪಾದನೆಗಾಗಿ ಟೈಲರಿಂಗ್ ಮಾಡಿದೆ.ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೊದಲು ನನಗೇನೂ ಗೊತ್ತಿರಲಿಲ್ಲ. ಗ್ರಾಮಸ್ಥರು ಮತ್ತು ಸ್ವಸಹಾಯ ಗುಂಪಿನ ಸದಸ್ಯರ ಬೆಂಬಲದಿಂದ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾದೆ. ಸ್ವಸಹಾಯ ಗುಂಪಿನ ಚಟುವಟಿಕೆ ಮತ್ತು ‘ಯುಎನ್‌ ವಿಮೆನ್‌’ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಪರಿಣಾಮ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿತು. ಪಂಚಾಯಿತಿಯ ಸಭೆಗಳಲ್ಲಿ ಭಾಗವಹಿಸಲು ಉತ್ತೇಜನ ಸಿಕ್ಕಿತು.ಸ್ವಸಹಾಯ ಸಂಘಗಳ ಜೊತೆ ಮಾಹಿತಿ ಹಂಚು ಮೂಲಕ ವಾರ್ಡ್‌, ಮಹಿಳಾ ಮತ್ತು ಗ್ರಾಮಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡಲು ಸಾಧ್ಯವಾಯಿತು. ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಯವ್ಯಯ ಸಿದ್ದಪಡಿಸುವುದು. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಮಹಿಳೆಯರಿಗೆ ಸಂಬಂಧಿಸಿ ವಿಷಯಗಳಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಖಾತ್ರಿ, ಶೌಚಾಲಯ ಸಮಸ್ಯೆ, ಒಳಚರಂಡಿ ಸಂಸ್ಯೆ, ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ವಿಷಯಗಳಿಗೆ ಒತ್ತು ನೀಡಿದೆ.ವಿಧವಾ ವೇತನ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮಿ ಯೋಜನೆ, ಆಶ್ರಯ ಯೋಜನೆಯಲ್ಲಿ ಮನೆ ಹಂಚಿಕೆ ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ನನ್ನ ವಾರ್ಡ್‌ನಲ್ಲಿ 25 ಸ್ವಸಹಾಯ ಸಂಘ ಸ್ಥಾಪಿಸಿದೆ. ಉದ್ಯಮಶೀಲತಾ ಕೌಶಲ ಅಭಿವೃದ್ಧಿ ಯೋಜನೆಯಡಿ 40 ಯುವತಿಯರಿಗೆ ಟೈಲರಿಂಗ್‌ ತರಬೇತಿ ನೀಡಿದೆ. ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಸ್ವ ಉದ್ಯೋಗದ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬಹುದು ಎನ್ನುವುದು ನನ್ನ ಅನುಭವ.

– ಪ್ರೇಮಾ ರ. ಪಾಟೀಲ, ಛಬ್ಬಿ ಗ್ರಾ.ಪಂ. ಅಧ್ಯಕ್ಷೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.