ಸೋಮವಾರ, ಜನವರಿ 20, 2020
25 °C

ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ: ಸರ್ವಮಂಗಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ:  ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮ ಸಂಸ್ಕೃತಿಯನ್ನು ಎತ್ತಿಹಿಡಿಯಲು ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರ್ವಮಂಗಳಾ ವೆಂಕಟೇಶ್‌ ತಿಳಿಸಿದರು.ತಾಲ್ಲೂಕಿನ ಬೂಕನಕೆರೆಯಲ್ಲಿ ಕಡೆಯ ಕಾರ್ತೀಕ ಸೋಮವಾರದ ಅಂಗವಾಗಿ ನಡೆದ ಗ್ರಾಮದೇವತೆ ಗೋಗಾಲಮ್ಮನ ಜಾತ್ರೆಯಲ್ಲಿ ಆಯೋಜಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಎಲ್ಲೆಡೆ ಆಧುನಿಕ ಸ್ಪರ್ಧೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತಿವೆ. ಈ ಕಾರಣದಿಂದ ಬುಗುರಿ, ಲಗೋರಿ, ಚಿನ್ನಿದಾಂಡು ಮತ್ತಿತರ ಗ್ರಾಮೀಣ ಕ್ರೀಡೆಗಳು ಸೂಕ್ತ ಪ್ರೋತ್ಸಾಹ ಇಲ್ಲದೆ ಸೊರಗುತ್ತಿವೆ. ಕೆಲವು ಕ್ರೀಡೆಗಳಂತೂ ಜನಮಾನಸದಿಂದ ಕಣ್ಮರೆಯಾಗುತ್ತಿವೆ. ಮುಂದಿನ ತಲೆಮಾರಿನ ಮಕ್ಕಳಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಪರಿಚಯಿಸಬೇಕಾದ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕಾಗಿದೆ ಎಂದು ಅವರು ತಿಳಿಸಿದರು.ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಬೋಳೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಹೆಳವೇಗೌಡ, ಮುಖಂಡರಾದ ಬಿ.ಜವರಾಯಿಗೌಡ, ಬೋಳೇಗೌಡ, ಸ್ವಾಮಿಗೌಡ ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)