ಶನಿವಾರ, ಜೂನ್ 19, 2021
23 °C

ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಕ್ತಿಯೊಬ್ಬ ಹಣಕಾಸು ವಿಷಯಕ್ಕೆ ಸ್ನೇಹಿತನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.ಬಿಟಿಎಂ ಲೇಔಟ್ 2ನೇ `ಬಿ~ ಅಡ್ಡರಸ್ತೆ ನಿವಾಸಿ ರಾಮು (27) ಕೊಲೆಯಾದವರು. ಅವರ ಸ್ನೇಹಿತ ಆರೋಪಿ ವೆಂಕಟೇಶ್ (25) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಮು ಆಟೊ ಚಾಲಕರಾಗಿದ್ದರು ಮತ್ತು ವೆಂಕಟೇಶ್ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ. ಶನಿವಾರ ಸಂಜೆ ಪಾನಮತ್ತರಾಗಿದ್ದ ಇಬ್ಬರೂ ಸ್ನೇಹಿತರ ಜತೆ ಜೂಜಾಡುವಾಗ ಹಣಕಾಸು ವಿಷಯವಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿತ್ತು. ಈ ವೇಳೆ ವೆಂಕಟೇಶ್, ರಾಮು ಸೊಂಟಕ್ಕೆ ಚಾಕುವಿನಿಂದ ಇರಿದ.ಪರಿಣಾಮ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಮಡಿವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.ಜಿಗುಪ್ಸೆ; ಇಬ್ಬರು ಆತ್ಮಹತ್ಯೆ: ನಗರದ ಬಯ್ಯಪ್ಪನಹಳ್ಳಿ ಮತ್ತು ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಯ್ಯಪ್ಪನಹಳ್ಳಿ ಸಮೀಪದ ಕೃಷ್ಣಯ್ಯನಪಾಳ್ಯ ಎರಡನೇ ಅಡ್ಡರಸ್ತೆ ನಿವಾಸಿ ರಾಜೇಶ್ (27) ಎಂಬುವರು ಸೋಮವಾರ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಳಾಂಗಣ ವಿನ್ಯಾಸಗಾರರಾಗಿ ಕೆಲಸ ಮಾಡುತ್ತಿದ್ದ ರಾಜೇಶ್, ಶರಣ್ಯಾ ಎಂಬುವರನ್ನು ವಿವಾಹವಾಗಿದ್ದರು. ಶರಣ್ಯಾ ಅವರು ಪತಿಯ ಜತೆ ಜಗಳವಾಡಿಕೊಂಡು ತವರು ಮನೆಗೆ ಹೋಗಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.`ಸಹೋದರ ಮತ್ತು ಆತನ ಪತ್ನಿಯ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಶರಣ್ಯಾ ಪೋಷಕರು ಸಹೋದರನಿಗೆ ಕಿರುಕುಳ ನೀಡುತ್ತಿದ್ದರು. ಈ ಎಲ್ಲ ಕಾರಣಗಳಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ~ ಎಂದು ರಾಜೇಶ್ ಅವರ ಅಕ್ಕ ಸೆಲ್ವಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ: ಬೈಕ್ ಮಾರಾಟ ಮಳಿಗೆಯಲ್ಲಿ ಮೇಲ್ವಿಚಾರಕರಾಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಬಳಿಯ ಕೆಂಪೇಗೌಡನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.ಕೆಂಪೇಗೌಡನಗರದ ಗಾರ್ಡನ್ ಸ್ಕೂಲ್ ರಸ್ತೆ ನಿವಾಸಿ ಪ್ರಶಾಂತ್ ಜಾದವ್ (38) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಧಾರವಾಡದ ಅವರು ನಗರದ ಕಸ್ತೂರಬಾ ರಸ್ತೆಯಲ್ಲಿನ ಬೈಕ್ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪವಿತ್ರಾ ಅವರು ಏಳು ತಿಂಗಳ ಗಂಡು ಮಗುವಿನ ಜತೆ ಕೆಲ ತಿಂಗಳುಗಳ ಹಿಂದೆ ತವರು ಮನೆಗೆ ಹೋಗಿದ್ದರು.`ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಜೀವ ವಿಮೆ ಹಣವನ್ನು ಮಗುವಿನ ವಿದ್ಯಾಭ್ಯಾಸದ ವೆಚ್ಚಕ್ಕೆ ಬಳಸಿ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಪೋಷಕರು ಮತ್ತು ಪತ್ನಿ ಹಂಚಿಕೊಳ್ಳಲಿ. ಮಗುವನ್ನು ಚೆನ್ನಾಗಿ ಓದಿಸಿ~ ಎಂದು ಪ್ರಶಾಂತ್ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೀಣ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಸರಗಳವು: ನಗರದ ಮಡಿವಾಳ ಮತ್ತು ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಮಹಿಳೆಯರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ದೋಚಿದ್ದಾರೆ.ಹೊಂಗಸಂದ್ರ ಬಳಿಯ ಕಾಕಪ್ಪ ಲೇಔಟ್‌ನಲ್ಲಿ ಮಂಗಳಾ ಎಂಬುವರ ಸರವನ್ನು ದೋಚಲಾಗಿದೆ. ಸುಬ್ರಹ್ಮಣ್ಯಪುರ ಸಮೀಪದ ನವೋದಯನಗರ ನಿವಾಸಿಯಾದ ಮಂಗಳಾ ಅವರು ಕಾಕಪ್ಪ ಲೇಔಟ್‌ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅವರು ಸಂಬಂಧಿಕರ ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದಾಗ ಕಿಡಿಗೇಡಿಗಳು ಬೈಕ್‌ನಲ್ಲಿ ಹಿಂಬಾಲಿಸಿ ಬಂದು 80 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ: ವಿಲ್ಸನ್‌ಗಾರ್ಡನ್‌ನ ನಾಲ್ಕನೇ ಅಡ್ಡರಸ್ತೆಯ ರಾಣಿ ಉದ್ಯಾನದ ಬಳಿ ದುಷ್ಕರ್ಮಿಗಳು ಜರ್ಸಿ ಝಕಾರಿಯಾರ ಸರವನ್ನು ದೋಚಿದ್ದಾರೆ.ಜರ್ಸಿ ಬೆಳಿಗ್ಗೆ 6.30ಕ್ಕೆ ಮನೆಯ ಸಮೀಪದ ಉದ್ಯಾನದ ಬಳಿ ವಾಯುವಿಹಾರ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ಸುಮಾರು 65 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.