ಭಾನುವಾರ, ಜುಲೈ 25, 2021
27 °C

ಚಿಕಿತ್ಸೆಗೆ ಹಣ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಡಾ. ಮಂಜುಳಾ ಚಿಕಿತ್ಸೆಗಾಗಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.’ಅನಾರೋಗ್ಯದಿಂದ ಬಳಲುತ್ತಿದ್ದ ರಘು ಎಂಬ ಯುವಕನನ್ನು ಸೋಮವಾರ ಡಾ.ಮಂಜುಳಾ ತಪಾಸಣೆ ನಡೆಸಿ ಖಾಸಗಿ ಔಷಧಿ ಅಂಗಡಿಯಲ್ಲಿ ಔಷಧಿ ಚೀಟಿ ಬರೆದುಕೊಟ್ಟರು. ಮಂಜುಳಾ ಅವರಿಗೆ ಸೇರಿದ ಆಸ್ಪತ್ರೆಯಲ್ಲಿ ಔಷಧಿ ಖರೀದಿಸಲು ಹೆಚ್ಚು ಹಣ ಕೇಳಿದ್ದರಿಂದ ಯುವಕ ವಾಪಸ್ ಬಂದ. ಇದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಖಾಸಗಿ ಆಸ್ಪತ್ರೆಯಿಂದ ತಂದ ಔಷಧಿಗೆ ರಸೀದಿ ನೀಡುವುದಿಲ್ಲ. ವೈದ್ಯರ ಜತೆ ಇಬ್ಬರು ನರ್ಸ್ ಶಾಮೀಲಾಗಿದ್ದಾರೆ. ಕಳೆದ ತಿಂಗಳು ಪರಶುರಾಮ್ ಎಂಬುವರ ನಾದಿನಿಯ ತಪಾಸಣೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇವರನ್ನು ಪರೀಕ್ಷಿಸಿದ ಡಾ.ಮಂಜುಳಾ ಹೊಟ್ಟೆಯಲ್ಲಿ ಹುಣ್ಣು ಇದ್ದು, ಶಸ್ತ್ರ ಚಿಕಿತ್ಸೆ ಮಾಡಬೇಕು. ಹೊರಗಿನಿಂದ ಔಷಧಿ ತಂದರೆ ಉಚಿತ ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದರು.ನಂತರ ಶಸ್ತ್ರಚಿಕಿತ್ಸೆಯ ನಿಗದಿತ ದಿನಾಂಕ ಬದಲಿಸಿ ರೂ. 4 ಸಾವಿರ ನೀಡಿದರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಪಟ್ಟು ಹಿಡಿದರು. ರೋಗಿ ಕಡೆಯವರು ವಿಧಿ ಇಲ್ಲದೇ ರೂ.3 ಸಾವಿರ ನೀಡಿದರು. ಉಳಿದ 1 ಸಾವಿರ ರೂ. ಶಸ್ತ್ರಚಿಕಿತ್ಸೆ ಮುಗಿದ ಬಳಿಕ ನೀಡಬೇಕೆಂದು ಪಟ್ಟು ಹಿಡಿದರು. ಇದರಿಂದ ನೊಂದ ಪರಶುರಾಮ್ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.ಸ್ಥಳಕ್ಕೆ ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಭೇಟಿ ನೀಡಿದರು. ನಂತರ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಎ.ಆರ್. ಧನಶೇಖರ್, ಆರೋಗ್ಯಾಧಿಕಾರಿ ಡಾಸಿ.ಆರ್. ಹಿರಿಯಣ್ಣಯ್ಯ, ವೈದ್ಯೆ ಮಂಜುಳಾ, ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು. ಜಯಕರ್ನಾಟಕ ಸಂಘದ ಅಧ್ಯಕ್ಷ ಜಗದೀಶ್, ದಿನೇಶ್, ಶಿವಕುಮಾರ್,ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಆರೋಪ ನಿರಾಕರಣೆ:
ಪರಶುರಾಮ್ ಅವರ ಆರೋಪ ಸುಳ್ಳಾಗಿದ್ದು, ತಾವು ಯಾರಿಂದಲೂ ಹಣ ಪಡೆದಿಲ್ಲ ಎಂದು ಡಾ. ಮಂಜುಳಾ ಸ್ಪಷ್ಟನೆ ನೀಡಿದ್ದಾರೆ. ಹಣ ಕೇಳಿದ ದಾಖಲೆ ನೀಡಲಿ. ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುವುದನ್ನು ಕೈ ಬಿಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರಗಡೆಯಿಂದ ಔಷಧಿ ತರಲು ರೋಗಿಗಳಿಗೆ ತಿಳಿಸಲಾಗುತ್ತದೆ. ತಮ್ಮ ವಿರುದ್ಧ ಪ್ರತಿಭಟನೆಗೆ ಪರಶುರಾಮ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.