ಮಂಗಳವಾರ, ಜನವರಿ 28, 2020
23 °C

ಛಬ್ಬೀಸ್ ಜನವರಿ ನೆನಪು ಥರಾವರಿ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಎಂ.ಜಿ ರಸ್ತೆಯ ಮಣೆಕ್ ಶಾ ಪರೇಡ್ ಮೈದಾನದಲ್ಲಿ  ಶಾಲಾ ಮಕ್ಕಳದ್ದೇ ಕಲರವ. ನೆರಳು ಹುಡುಕುತ್ತಲೇ ಬಿಸಿಲಿನಲ್ಲಿ ಕಸರತ್ತು ಮಾಡುವ ಮಕ್ಕಳು. ಬೆವರ ಸಾಲನ್ನಿಳಿಸುತ್ತ, ಅಲ್ಲಲ್ಲಿ ಜೋಳ ಮೆಲ್ಲುವ ವಿವಿಧ ಶಾಲೆಯ ಮಕ್ಕಳು. ಉಪ್ಪು ಖಾರ ಲೇಪಿಸಿದ ನೆಲ್ಲಿಕಾಯಿ ಸವಿಯುತ್ತಲೇ ನೀರಡಿಕೆ ಮರೆಯುವ, ಮೆಟ್ರೊದತ್ತ ಒಂದು ಕುತೂಹಲದ ದೃಷ್ಟಿ ಬೀರುವ ಮಕ್ಕಳು ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಎತ್ತರೆತ್ತರ ಜೋಡಿಸಿಟ್ಟ ಕುರ್ಚಿಗಳ ಮೇಲೆ ಪೊಲೀಸರ ಕಣ್ತಪ್ಪಿಸಿ ಕೂರಲು ಹೋಗುವ ಪೋರನ ಸರ್ಕಸ್ಸನ್ನು ಕಂಡು ಎಚ್ಚರಿಕೆ ಕೊಡುವ ಗೆಳೆಯರ ದಂಡೂ ಅಲ್ಲುಂಟು. ರಾಷ್ಟ್ರೀಯ ಹಬ್ಬದಾಚರಣೆಯ ನೆನಪು ನುಗ್ಗಿ ಬರಲು ಇವಿಷ್ಟು ಸಂಭ್ರಮ ಸಾಕು.

`ಸಾರೆ ಜಹಾಂ ಸೆ ಅಚ್ಛಾ... ಹಿಂದೂಸ್ತಾನ್ ಹಮಾರಾ ಹಮಾರಾ..~ ಪೊಲೀಸ್ ಬ್ಯಾಂಡ್‌ನಲ್ಲಿ ಈ ಹಾಡು ಮೊಳಗುತ್ತಿದ್ದರೆ ಕೈಗಳು ತಾವಾಗಿಯೇ ಸೂತ್ರದ ಬೊಂಬೆಗಳಂತೆ ಓಲಾಡುತ್ತಿದ್ದವು.

ಈ ಹಾಡು ಮುಗಿದಾಕ್ಷಣ ಲೆಝಿಂನ ಝಣಝಣ ಎಲ್ಲರನ್ನೂ ಬಡಿದೆಬ್ಬಿಸುತ್ತಿತ್ತು. ನಂತರ ಡಂಬಲ್ಸ್, ಕೋಲಾಟದ ಸರದಿ.

ಮೋಡ ಮುಸುಕಿದ ಬಾನಲ್ಲಿ ಸೂರ್ಯ ಸೋಮಾರಿತನದಿಂದ ಎಂಬಂತೆ ಇಣುಕುತ್ತಿದ್ದ. ಧ್ವಜ ಕಟ್ಟೆಯ ಬಳಿ ಪಾರಿವಾಳಗಳು ಬಾನಿನಗಲಕ್ಕೂ ಹಾರಿದಾಗ ಅದೇನೋ ಒಂದು ಬಗೆಯ ರೋಮಾಂಚನ. ತ್ರಿವರ್ಣದ ಬಲೂನುಗಳು ಗಾಳಿಗೆ ತೇಲಿದಾಗಲಂತೂ ಅದುಮಿಟ್ಟ ಶಿಸ್ತು ಹರ್ಷೋದ್ಗಾರದಲ್ಲಿ ಸ್ಥಿತ್ಯಂತರ.

ಇದು ಛಬ್ಬೀಸ್ ಜನವರಿಯ ಸಂಭ್ರಮ. ಈಗಲೂ ಎಲ್ಲ ಪ್ರೌಢಶಾಲಾ ಮಕ್ಕಳಿಗೂ ಇದೇ ಸಂಭ್ರಮ. ಚಳಿಯಲ್ಲೆದ್ದು, ಗರಿಗರಿಯಾದ ಸಮವಸ್ತ್ರ ಧರಿಸಿ, ಕೈಗೆ ತ್ರಿವರ್ಣದ ಬ್ಯಾಂಡುಗಳು, ರಿಬ್ಬನ್‌ಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಹೊರಡುವುದೇ ಒಂದು ಬಗೆಯ ಸಂಭ್ರಮ.

`ಪರ್ಬತ್ ವೋ ಸಬಸೇ ಊಂಚಾ... ಹಮ್ ಸಾಯಾ ಆಸಮಾನ್ ಕಾ..~ ಎಂಬ ಎಲ್ಲ ಹೆಮ್ಮೆಯೂ ಈ ಮಕ್ಕಳಲ್ಲಿ. ಶಾಲೆಯಲ್ಲಿ ಕೊಡುವ ಮಿಠಾಯಿ, ಕ್ರೀಡಾಂಗಣದಲ್ಲಿ ಕೊಡುವ ಜೂಸು ಎಲ್ಲಕ್ಕೂ ವಿಭಿನ್ನ ರುಚಿ.

ಕಳೆದ ಎರಡು ಮೂರು ತರಗತಿಗಳಲ್ಲಿ ಖುಷಿಯಿಂದ ಪಾಲ್ಗೊಂಡ ಮಕ್ಕಳಿಗೆ ಹತ್ತನೇ ತರಗತಿಗಾಗಲೇ ಪರೀಕ್ಷೆಯ ಭೂತ, ಈ ಕವಾಯತ್ತು, ಸಾಮೂಹಿಕ ನೃತ್ಯದಿಂದ ವಿನಾಯಿತಿ. ಕಳೆದ ವರ್ಷದ ನೆನಪಿನಲ್ಲಿ ಈ ವರ್ಷದ ಮಕ್ಕಳಿಗೆ ಹುಮ್ಮಸ್ಸು ನೀಡಲು ಈ ಹಿರಿಯರೆಲ್ಲ ಸಜ್ಜಾಗುತ್ತಾರೆ.

ಒಕ್ಕೊರಲಿನಲ್ಲಿ ಹಾಡಿದ `ಜನ ಗಣ ಮನ~ ಎಲ್ಲವೂ ಅದೇ ಕೊನೆ.

ಆಮೇಲೆ...

ಪದವಿಪೂರ್ವದ ಮೊದಲ ವರ್ಷ ಏನೋ ಕಳೆದುಕೊಂಡ ಭಾವ. ಆಮೇಲೇನಾಗುತ್ತದೆ? ಈ ಛಬ್ಬೀಸ್ ಜನವರಿಯ ಸಂಭ್ರಮವೆಲ್ಲ ಹಳತೆನಿಸುತ್ತದೆ. ಸದ್ಯ ತಪ್ಪಿಸಿಕೊಂಡೆವಲ್ಲ ಎಂಬ ನಿರಾಳ ಭಾವ. ಬಿಸಿಲಿನಲ್ಲಿ ರಿಹರ್ಸಲ್ ಮಾಡಬೇಕಾದಾಗಲೇ ನನ್ನ ಚರ್ಮ ಕಪ್ಪಾಯಿತು ಎಂದು ಹುಡುಗಿಯರು ಅಲವತ್ತುಕೊಳ್ಳುತ್ತವೆ. ಆ ಬಿಡುವಿನ ಸಮಯದಲ್ಲಿ ಸಂಪಾದಿಸಿದ ಗೆಳತಿಯರ ಕುರಿತು ಹುಡುಗರ ನಡುವೆ ಚರ್ಚೆ.

ಪದವಿಗೆ ಬಂದ ನಂತರ ಕೆಲಸಕ್ಕೆ ಸೇರಿದ ಮೇಲಂತೂ ಇವು ಕೇವಲ ಸರ್ಕಾರಿ ರಜೆಗಳಾಗಿ ಬದಲಾಗುತ್ತವೆ.

ಹೊಸ ಜಾಹೀರಾತು ಯಾವುದು? ಹೊಸ ಚಿತ್ರ ಯಾವುದು? ಏನಾದರೂ ರಿಯಾಯಿತಿಗಳಿವೆಯೇ? ವಿಶೇಷ ವಿನಾಯಿತಿಗಳಿವೆಯೇ? ಶುಕ್ರವಾರ ಏನಾದರೂ ರಿಪಬ್ಲಿಕ್ ಡೇ ಬಂದರೆ ಮೂರು ದಿನ ಎಲ್ಲಾದರೂ ಹೋಗಿ ಬರಬಹುದಲ್ಲ? ಇಂಥವೇ ಲೆಕ್ಕಾಚಾರಗಳು.

ಹದಿಹರೆಯದ ಆ ಛಬ್ಬೀಸ್ ಜನವರಿ ರಿಪಬ್ಲಿಕ್ ಡೇ ಆಗಿ ಬದಲಾಗುವುದೇ ನಮ್ಮ ಜೀವನ ಚಕ್ರದ ತಿರುಗಣಿಯ ಸುತ್ತನ್ನು ತೋರಿಸುತ್ತದೆ.

ಆಮೇಲೆ...

ರಿಪಬ್ಲಿಕ್ ಡೇ ಸಹ ಸಾಮಾನ್ಯ ದಿನವಾಗುತ್ತದೆ. ಆದರೆ ನಮ್ಮ ಮಕ್ಕಳು ನಿಧಾನಕ್ಕೆ ಹಿರಿಯ ಪ್ರಾಥಮಿಕ ಹಂತಕ್ಕೆ ಬಂದಾಗ ಮತ್ತೊಂದು ಛಬ್ಬೀಸ್ ಜನವರಿಯ ಸಂಭ್ರಮ ಆರಂಭವಾಗುತ್ತದೆ. ಶಾಲೆಯಲ್ಲಿ ರಿಹರ್ಸಲ್ ಇದೆ ತಡವಾಗುತ್ತದೆ. ಮಗಳನ್ನು ಕರೆತರಬೇಕು. ನೃತ್ಯಕ್ಕೆ ಬೇಕಾಗುವ ಮ್ಯಾಚಿಂಗ್ ರಿಬ್ಬನ್ ಕೊಡಿಸಬೇಕು. ಕ್ರೀಡಾಂಗಣಕ್ಕೆ ಬಿಡಲು, ಕರೆತರಲು ಹೋಗಬೇಕು.

ಮನೆಯಲ್ಲಿಯೇ ಕುಳಿತು ಟೀವಿಯಲ್ಲಿ ಕಂಡಳಾ ಎಂದು ಹುಡುಕಬೇಕು. ಮತ್ತೆ ಮತ್ತೆ ಈ `ಛಬ್ಬೀಸ್ ಜನವರಿ~ಯ ತಿರುಗಣಿ ಇನ್ನೊಂದು ಸುತ್ತು ಸುತ್ತುತ್ತಲೇ ಮತ್ತದೇ ಸಂಭ್ರಮದತ್ತ ಕರೆದೊಯ್ಯುತ್ತದೆ.

ನಡುವೆ ಮಾತ್ರ `ರಿಪಬ್ಲಿಕ್ ಡೇ~ ಎಂಬುದೊಂದು ಬ್ರೇಕ್, ಅಷ್ಟೆ!

ಪ್ರತಿಕ್ರಿಯಿಸಿ (+)