ಶುಕ್ರವಾರ, ಮೇ 14, 2021
29 °C

ಜಗಜೀವನರಾಂ ಅಧಿಕಾರಕ್ಕೆ ಜೋತು ಬಿದ್ದವರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಾಬು ಜಗಜೀವನರಾಂ ಅಧಿಕಾರಕ್ಕೆ ಜೋತು ಬಿದ್ದವರಲ್ಲ; ದೇಶದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದರ ಫಲವಾಗಿ ಅವರನ್ನು ಎಲ್ಲರೂ ಇಂದು ನೆನೆಯಬೇಕಾಗಿದೆ ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಂ ಅವರ 105ನೇ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಇಂತಹ ವ್ಯಕ್ತಿಗಳ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಜನಸಮುದಾಯದ ಕಾರ್ಯ ಕ್ರಮವನ್ನಾಗಿಸಬೇಕು ಎಂದು ಹೇಳಿದರು.ಕೃಷಿಕರು, ಕಾರ್ಮಿಕರು ಹಾಗೂ ಶೋಷಿತರ ಬದುಕಿಗೆ ಸಂವಿಧಾನ ಬದ್ಧವಾಗಿ ಭದ್ರತೆ ಕಲ್ಪಿಸಿಕೊಡುವ ದಿಸೆಯಲ್ಲಿ ಚಿಂತನೆ ನಡೆಸಿ, ಅವುಗಳ ಅನುಷ್ಠಾನಕ್ಕೆ ಶ್ರಮಿಸಿದರು. ಆದರೆ, ಇಂದು  ಐಟಿ, ಬಿಟಿ ರೂಪದಲ್ಲಿ ಜೀತಪದ್ಧತಿ ಮುಂದುವರಿದಿರುವುದು ವಿಷಾದದ ಸಂಗತಿ ಎಂದರು.ಐಟಿ, ಬಿಟಿ ಕಂಪೆನಿಗಳು ಹೊರನೋಟಕ್ಕೆ ಆಕರ್ಷಕವಾಗಿ ಕಾಣುತ್ತವೆ. ಆದರೆ, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಕಾರ್ಮಿಕ ಕಾಯ್ದೆಯ ಉಲ್ಲಂಘನೆ ಮಾಡಲಾಗುತ್ತಿದೆ. ಸಿಬ್ಬಂದಿಗಳು ಕೆಲಸದ ಅಭದ್ರತೆಯಿದೆ ಬಳಲುತ್ತಿದ್ದಾರೆ. ಪ್ರಶ್ನಿಸುವ ಮನೋಭಾವವನ್ನೇ ಕಳೆದು ಕೊಂಡಿದ್ದಾರೆ ಎಂದು ವಿಷಾದಿಸಿದರು.      

    

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಶೋಷಿತರು, ತುಳಿತಕ್ಕೊಳಗಾದವರು ಆರ್ಥಿಕವಾಗಿ ಸಬಲರಾಗಬೇಕು ಅವರ ಬಹುದೊಡ್ಡ ಆಶಯವಾಗಿತ್ತು. ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಿದ್ದ ಅವರು, ಸಿಕ್ಕಂತಹ ಕೇಂದ್ರ ಸಚಿವ ಸ್ಥಾನವನ್ನು ತ್ಯಜಿಸಿ, ಸಮಾಜವಾದವನ್ನು ಎತ್ತಿಹಿಡಿದ ಮಹಾನ್ ಕ್ರಾಂತಿಕಾರಿ. ಅನ್ಯಾಯದ ಪರ ಯಾವತ್ತೂ ರಾಜಿ ಮಾಡಿಕೊಂಡವರಲ್ಲ ಎಂದರು.ವಿಶೇಷ ಉಪನ್ಯಾಸ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಮಾತನಾಡಿ, ಕಾರ್ಲ್‌ಮಾಕ್ಸ್ ಅವರ ತತ್ವ, ಚಿಂತನೆಗಳನ್ವಯ ಕಾರ್ಮಿಕರಿಗೆ ನ್ಯಾಯಯುತ ಉದ್ಯೋಗ ನೀಡಬೇಕು. ಸಮಯ, ಸವಲತ್ತು ಕಲ್ಪಿಸಿಕೊಡಬೇಕೆಂಬ ಹೋರಾಟದಲ್ಲಿ ಅವರು ಯಶಸ್ವಿಯಾದರು ಎಂದರು.ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಜಿ.ಪಂ. ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್, ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಉಪಾಧ್ಯಕ್ಷ ಎಸ್. ರಾಮು, ನಗರಸಭಾ ಆಯುಕ್ತ ಪಿ.ಜಿ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿ.ಟಿ. ಮಂಜುನಾಥ್, ಉಪ ಕಾರ್ಯದರ್ಶಿ ರಾಜಗೋಪಾಲ್, ಹಿರಿಯ ಉಪವಿಭಾಗಾಧಿಕಾರಿ ಎಂ.ಎಲ್. ವೈಶಾಲಿ, ಯೋಜನಾ ನಿರ್ದೇಶಕ ರವಿ ಮತ್ತಿತರರು ಉಪಸ್ಥಿತರಿದ್ದರು.ಇದಕ್ಕೂ ಮೊದಲು ಸೈನ್ಸ್ ಮೈದಾನದಿಂದ ಡಾ.ಬಾಬು ಜಗಜೀವನರಾಂ ಭಾವಚಿತ್ರದ ಮೆರವಣಿಗೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.