ಸೋಮವಾರ, ಜೂನ್ 14, 2021
26 °C

ಜಲ ಸಂವರ್ಧನೆ ಯೋಜನೆ ಮುಂದುವರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಬಹು ಉಪಯೋಗಿ ಜಲಸಂವರ್ಧನೆ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ವಿಶ್ವಬ್ಯಾಂಕ್ ನೆರವಿನ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಮತ್ತು ಜಲಸಂವರ್ಧನೆ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ 19 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿತ್ತು. ಯೋಜನೆಯ ಅಡಿಯಲ್ಲಿ ಅಂತರ್ಜಲ ವೃದ್ಧಿ, ಮೀನುಗಾರಿಕೆ, ಅರಣ್ಯೀಕರಣ ಮತ್ತಿತರ ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಲಾಗುತ್ತಿತ್ತು.ಜಲ ಸಂವರ್ಧನೆ ಯೋಜನಾ ಸಂಘದ ವತಿಯಿಂದ ಕೆರೆ ಪುನಶ್ಚೇತನ ಕಾರ್ಯಕ್ರಮಗಳಾದ ಏರಿ ದುರಸ್ತಿ, ಗಡಿಕಂದಕ, ಪೋಷಕ ಕಾಲುವೆಗಳ ನಿರ್ಮಾಣ, ಹೂಳು ತೆಗೆಯುವುದು, ತೂಬು ದುರಸ್ತಿ, ಕಾಲುವೆಗಳ ದುರಸ್ತಿ ಮತ್ತಿತರ ಕಾಮಗಾರಿ ನಡೆಸಲಾಗುತ್ತಿತ್ತು. ಇದಲ್ಲದೆ ಯೋಜನೆಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ, ಕೈತೋಟ ನಿರ್ವಹಣೆ ಮತ್ತಿತರ ಸೌಲಭ್ಯಗಳಿದ್ದವು. ಈಗ ಇದ್ದಕ್ಕಿದ್ದಂತೆ ಯೋಜನೆಯನ್ನು ನಿಲ್ಲಿಸಲಾಗಿದ್ದು, ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆಯನ್ನು ಮುಂದುವರಿಸಬೇಕು. ಕೆರೆಗಳಿಂದ ಬರುವ ಸಂಪನ್ಮೂಲಗಳನ್ನು ಕೆರೆ ಬಳಕೆದಾರರ ಸಂಘಗಳೇ ಕ್ರೂಢೀಕರಿಸಬೇಕು ಎಂದು ಒತ್ತಾಯಿಸಿದರು.ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಬಿಗಿಗೊಳಿಸಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೆ ಆದ್ಯತೆಯ ಮೇಲೆ ನೀರು ತುಂಬಿಸಬೇಕು. ಕೆರೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು, ತಹಶೀಲ್ದಾರ್ ಸರೋಜಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ಕೆರೆ ಬಳಕೆದಾರರ ಜಿಲ್ಲಾ ಒಕ್ಕೂಟದ ನಿರ್ದೇಶಕ ಗುಂಡೇರಿ ಚಂದ್ರಶೇಖರ್, ಹುಲೇಮಳಲಿ ಶಿವನಗೌಡ, ತಾಲ್ಲೂಕಿನ ವಿವಿಧ ಕೆರೆಗಳ ಬಳಕೆದಾರರ ಸಂಘದ ಪದಾಧಿಕಾರಿಗಳಾದ ಲಿಂಗರಾಜು, ಉಜ್ಜಿನಿ ಸಿದ್ದಯ್ಯ, ತಿಮ್ಮಪ್ಪ, ರೂಪಾ, ಮಲ್ಲಮ್ಮ, ಮಲ್ಲಿಕಾರ್ಜುನ್, ಹಾಲೇಶ್, ತಿಪ್ಪೇರುದ್ರಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.